ಸೇಂಟ್‌ಪೀಟ​ರ್‍ಸ್ರ್‍ಬರ್ಗ್‌[ಜೂ.26]: ಐಸ್‌ಲ್ಯಾಂಡ್‌ ವಿರುದ್ಧ ಡ್ರಾ, ಕ್ರೊವೇಷಿಯಾ ವಿರುದ್ಧ ಮುಖಭಂಗ ಅನುಭವಿಸಿದ ಅರ್ಜೆಂಟೀನಾ, ವಿಶ್ವಕಪ್‌ನಲ್ಲಿ ಉಳಿದುಕೊಳ್ಳಬೇಕಿದ್ದರೆ ಇಂದು ನೈಜೀರಿಯಾ ವಿರುದ್ಧ ಗೆಲ್ಲಲೇಬೇಕಿದೆ. ‘ಡಿ’ ಗುಂಪಿನ ಅಂತಿಮ ಪಂದ್ಯ ಇದಾಗಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಅರ್ಜೆಂಟೀನಾ ನಾಕೌಟ್‌ ಕನಸು ಕಾಣುತ್ತಿದೆ.

ಅರ್ಜೆಂಟೀನಾ ಗೆಲ್ಲಬೇಕಿದ್ದರೆ ತಂಡದ ಗೋಲ್‌ ಮಷಿನ್‌ ಲಿಯೋನೆಲ್‌ ಮೆಸ್ಸಿ ಸಿಡಿಯಬೇಕಿದೆ. ಐಸ್‌ಲ್ಯಾಂಡ್‌ ವಿರುದ್ಧ ಪೆನಾಲ್ಟಿ ಅವಕಾಶ ಕೈಚೆಲ್ಲಿದ ಮೆಸ್ಸಿ, ಟೂರ್ನಿಯಲ್ಲಿ ಈ ವರೆಗೂ ಒಂದೇ ಒಂದು ಗೋಲು ಸಹ ಗಳಿಸಿಲ್ಲ. ಮಾಡು ಇಲ್ಲವೇ ಮಡಿ ಸ್ಥಿತಿ ಎದುರಾಗಿರುವ ಸಮಯದಲ್ಲಿ ಅರ್ಜೆಂಟೀನಾ, ತನ್ನ ನಾಯಕ ಮೆಸ್ಸಿ ಮೇಲೆಯೇ ಅವಲಂಬಿತಗೊಂಡಿದೆ.

‘ಡಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಐಸ್‌ಲ್ಯಾಂಡ್‌, ಕ್ರೊವೇಷಿಯಾ ವಿರುದ್ಧ ಸೆಣಸಲಿದೆ. ಕ್ರೊವೇಷಿಯಾ ಈಗಾಗಲೇ ನಾಕೌಟ್‌ಗೇರಿದ್ದು, ಐಸ್‌ಲ್ಯಾಂಡ್‌ ವಿಶ್ವಕಪ್‌ನಲ್ಲಿ ಚೊಚ್ಚಲ ಜಯಕ್ಕಾಗಿ ಕಾತರಿಸುತ್ತಿದೆ.

ಅರ್ಜೆಂಟೀನಾ ನಾಕೌಟ್‌ ಹಾದಿ ಹೇಗೆ?

* ನೈಜೀರಿಯಾ ವಿರುದ್ಧ ಶತಾಯಗತಾಯ ಗೆಲ್ಲಲೇಬೇಕು

* ಕ್ರೊವೇಷಿಯಾ ವಿರುದ್ಧ ಐಸ್‌ಲ್ಯಾಂಡ್‌ ಸೋಲಬೇಕು

* ಐಸ್‌ಲ್ಯಾಂಡ್‌ ಗೆದ್ದರೆ, ಅರ್ಜೆಂಟೀನಾ ಗೋಲು ವ್ಯತ್ಯಾಸದಲ್ಲಿ ಮುನ್ನಡೆ ಸಾಧಿಸಬೇಕು