ಸೇಂಟ್ ಪೀಟರ್ಸ್‌ಬರ್ಗ್[ಜೂ.27]: ಫಿಫಾ ವಿಶ್ವಕಪ್ 2018ರ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಅರ್ಜೆಂಟೀನಾಗೆ ಅದೃಷ್ಟ ಕೈಹಿಡಿದಿದೆ. ‘ಡಿ’ ಗುಂಪಿನ ಅಂತಿಮ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಪಡೆ, ನೈಜೀರಿಯಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವನ್ನು 2-1 ಗೋಲುಗಳಲ್ಲಿ ಗೆದ್ದುಕೊಂಡಿತು.

3 ಪಂದ್ಯಗಳಲ್ಲಿ ತಲಾ 1 ಜಯ, 1 ಸೋಲು, 1 ಡ್ರಾದೊಂದಿಗೆ 4 ಅಂಕಗಳಿಸಿದ ಅರ್ಜೆಂಟೀನಾ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿತು. ಅಗ್ರ ಸ್ಥಾನ ಪಡೆದ ಕ್ರೊವೇಷಿಯಾದೊಂದಿಗೆ ಅಂತಿಮ 16ರ ಸುತ್ತಿಗೆ ಪ್ರವೇಶ ಪಡೆದ ಅರ್ಜೆಂಟೀನಾ, ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಬಲಿಷ್ಠ ಫ್ರಾನ್ಸ್ ವಿರುದ್ಧ ಸೆಣಸಲಿದೆ.

ಪಂದ್ಯದ 14ನೇ ನಿಮಿಷದಲ್ಲೇ ಅರ್ಜೆಂಟೀನಾ ಗೋಲಿನ ಖಾತೆ ತೆರೆಯಿತು. ಚೆಂಡನ್ನು ಅತ್ಯಮೋಘವಾಗಿ ನಿಯಂತ್ರಣಕ್ಕೆ ಪಡೆದ ಮೆಸ್ಸಿ ಗೋಲು ಬಾರಿಸಿದರು. ಮೊದಲಾರ್ಧದ ಅಂತ್ಯಕ್ಕೆ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಅರ್ಜೆಂಟೀನಾಗೆ ಆಘಾತ ಎದುರಾಯಿತು. ಸಿಕ್ಕ ಪೆನಾಲ್ಟಿ ಅವಕಾಶವನ್ನು ವ್ಯರ್ಥ ಮಾಡದ ನೈಜೀರಿಯಾ ಗೋಲು ಗಳಿಸಿ ಸಮಬಲ ಸಾಧಿಸಿತು. 51ನೇ ನಿಮಿಷದಲ್ಲಿ ವಿಕ್ಟರ್ ಮೋಸೆಸ್ ಗೋಲು ಬಾರಿಸಿದರು. 86ನೇ ನಿಮಿಷದಲ್ಲಿ ಮಾರ್ಕೋಸ್ ರೊಜೊ ಬಾರಿಸಿದ ಗೋಲು, ಅರ್ಜೆಂಟೀನಾ ರೋಚಕ ಗೆಲುವು ಸಾಧಿಸಲು ಕಾರಣವಾಯಿತು. 

ಕೊನೆ ಕ್ಷಣದ ಹೀರೋ ರೋಜೋ
ಅರ್ಜೆಂಟೀನಾ ಸೂಪರ್ ಹೀರೋ ಮೆಸ್ಸಿ ಶ್ರಮ ವ್ಯರ್ಥವಾಗದಂತೆ ಮಾಡಿದ್ದು ರೋಜೋ. ವಿಶ್ವಕಪ್‌ನಲ್ಲಿ ಕೇವಲ 3ನೇ ಗೋಲು ಬಾರಿಸಿದ ರೋಜೋ, 2014ರ ವಿಶ್ವಕಪ್‌ನಲ್ಲೂ ನೈಜೀರಿಯಾ ವಿರುದ್ಧ ಗೋಲು ಬಾರಿಸಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುವ ರೋಜೋ 86ನೇ ನಿ.ದಲ್ಲಿ ಬಾರಿಸಿದ ಗೋಲು, ಅರ್ಜೆಂಟೀನಾ ಮಾನ ಕಾಪಾಡಿತು.