ಲಖನೌ(ಸೆ.13): ರಿಯೊ ಪ್ಯಾರಾಲಿಂಪಿಕ್‌ ಕೂಟದಲ್ಲಿ ಕಂಚಿನ ಪದಕ ಗೆದ್ದ ಉ.ಪ್ರದೇಶದ ವರುಣ್‌ ಭಾಟಿ ಸಾಧನೆಯಿಂದ ಸಂಪ್ರೀತಗೊಂಡಿರುವ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸಾಧಕನಿಗೆ 1 ಕೋಟಿ ಬಹುಮಾನ ಘೋಷಿಸಿದ್ದಾರೆ.

 ‘‘ಕಠಿಣ ಪರಿಶ್ರಮ ಹಾಗೂ ಅಪಾರ ಬದ್ಧತೆಯಿಂದ ವರುಣ್‌ ಭಾಟಿ ಪ್ಯಾರಾಲಿಂಪಿಕ್ಸ್‌ನಂಥ ಮಹತ್ವದ ಕೂಟದಲ್ಲಿ ಮಹತ್ಸಾಧನೆ ಮೆರೆದಿದ್ದು ಇದರಿಂದ ರಾಷ್ಟ್ರ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿತ್ತಿದ್ದಾರೆ’’ ಎಂದು ಅಖಿಲೇಶ್‌ ಕೊಂಡಾಡಿದ್ದಾರೆ.

ಗ್ರೇಟರ್‌ ನೋಯ್ಡಾದ ಜಮಲ್‌ಪುರ್‌ ಹಳ್ಳಿಯ ಮೂಲದ ಭಾಟಿ ಹೈಜಂಪ್‌ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದರೆ, ತಮಿಳುನಾಡಿನ ಮರಿಯಪ್ಪನ್‌ ತಂಗವೇಲು ಇದೇ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.