ನಾರ್ಥ್ ಸೌಂಡ್(ಆ್ಯಂಟಿಗಾ):  ವೇಗದ ಬೌಲರ್ ಇಶಾಂತ್ ಶರ್ಮಾ (5-43) ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ, ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 222 ರನ್ ಗಳಿಗೆ ಆಲೌಟ್ ಆಗಿದೆ.

 

ಈ ಮೂಲಕ 75 ರನ್ ಗಳ ಹಿನ್ನಡೆ ಅನುಭವಿಸಿದಂತಾಗಿದೆ. 2 ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 3 ನೇ ದಿನದ ಅಂತ್ಯಕ್ಕೆ  3 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಇದರೊಂದಿಗೆ ಭಾರತ 260 ರನ್ ಗಳ ಮುನ್ನಡೆ ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ 51 ರನ್ ಬಾರಿಸಿದರೆ ಉಪನಾಯಕ ರಹಾನೆ 53 ರನ್ ಬಾರಿಸಿ 4 ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  

3 ನೇ ದಿನವಾದ ಶನಿವಾರ 8 ವಿಕೆಟ್‌ಗೆ 189 ರನ್ ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರೆಸಿದ ವಿಂಡೀಸ್ 33 ರನ್ ಗಳಿಸುಷ್ಟರಲ್ಲಿ ಉಳಿದ 2 ವಿಕೆಟ್ ಕಳೆದುಕೊಂಡಿತು. ವೇಗಿ ಮೊಹಮದ್ ಶಮಿ (2-48) ಹಾಗೂ ರವೀಂದ್ರ ಜಡೇಜಾ (2-64) ವಿಕೆಟ್ ಕಬಳಿಸುವ ಮೂಲಕ ವಿಂಡೀಸ್ ಪತನಕ್ಕೆ ಕಾರಣರಾದರು. ವಿಂಡೀಸ್ ಪರ ಸ್ಪಿನ್ನರ್ ರೋಸ್ಟನ್ ಚೇಸ್ (48) ಗರಿಷ್ಠ ರನ್ ದಾಖಲಿಸಿದ ಆಟಗಾರ ಎನಿಸಿದರು. ನಾಯಕ ಜೇಸನ್ ಹೋಲ್ಡರ್ (39) ರನ್ ಗಳಿಸಿ ತಂಡವನ್ನು 200ರ  ಗಡಿ ದಾಟಿಸಿದರು.

ಟೆಸ್ಟ್ ಪಂದ್ಯದಲ್ಲೂ ವಿಂಡೀಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕ ಬ್ರಾಥ್‌ವೇಟ್ (14), ಕ್ಯಾಂಪ್‌ಬೆಲ್ (23), ಬ್ರೂಕ್ಸ್ (11), ಬ್ರಾವೋ (18) ಬೇಗನೆ ನಿರ್ಗಮಿಸಿದರು. ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ಗಳು ನಿರೀಕ್ಷೆ ಹುಸಿ ಮಾಡಿದ್ದರಿಂದ ವಿಂಡೀಸ್ 88 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಹೆಟ್ಮೇಯರ್ ಹಾಗೂ ಹೋಲ್ಡರ್ ಭಾರತದ ಬೌಲರ್‌ಗಳನ್ನು ಸ್ವಲ್ಪ ಹೊತ್ತು ಎದುರಿಸುವಲ್ಲಿ ಯಶಸ್ವಿಯಾದರು.

ಸ್ಕೋರ್ ವಿವರ: ಭಾರತ 297 ಹಾಗೂ  185/3, ವಿಂಡೀಸ್ 222/10 

(3ನೇ ದಿನದಾಟದ ಮುಕ್ತಾಯಕ್ಕೆ )