ಒಡಿಶಾದಲ್ಲಿ ಇಂದಿನಿಂದ ಪುರುಷರ ಹಾಕಿ ವಿಶ್ವಕಪ್‌

ಒಡಿಶಾದ ಭುವನೇಶ್ವರದಲ್ಲಿ ನ.28ರಿಂದ ಡಿ.18ರ ವರೆಗೂ 14ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿ ಆಯೋಜನೆಯಾಗಿದೆ. ಈಗಾಗಲೇ ಹಾಕಿ ವಿಶ್ವಕಪ್ ಟೂರ್ನಿ ಅಧ್ದೂರಿ ಉದ್ಘಾಟನೆ ಕಂಡಿದೆ. 14 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.  ಮೊದಲ ದಿನ ಭಾರತ ಕೂಡ  ಕಣಕ್ಕಿಳಿಯುತ್ತಿದೆ.

After grand Opening Ceremony Mens Hockey World Cup kick start at Kalinga stadium Odisha

ಭುವನೇಶ್ವರ(ನ.28):  ಬಹು ನಿರೀಕ್ಷಿತ ಪುರುಷರ ಹಾಕಿ ವಿಶ್ವಕಪ್‌ಗೆ ಈಗಾಗಲೇ ಚಾಲನೆ ದೊರೆತಿದೆ. ಬುಧವಾರದಿಂದ ಪಂದ್ಯಗಳು ಆರಂಭಗೊಳ್ಳಲಿದ್ದು, ಮುಂದಿನ 20 ದಿನಗಳ ಕಾಲ ಅಭಿಮಾನಿಗಳಿಗೆ ಭಾರೀ ರೋಚಕತೆ ಸಿಗಲಿದೆ. ಇಲ್ಲಿನ ನವೀಕೃತ ಕಳಿಂಗಾ ಕ್ರೀಡಾಂಗಣ 14ನೇ ಆವೃತ್ತಿಯ ವಿಶ್ವಕಪ್‌ ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿದ್ದು, ಆತಿಥೇಯ ಭಾರತ ಸೇರಿ 14 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

2013ರಲ್ಲಿ ಪಂದ್ಯಾವಳಿ ಆತಿಥ್ಯ ಹಕ್ಕು ಪಡೆದ ಭಾರತ, ಕೋಟ್ಯಂತರ ರುಪಾಯಿ ಖರ್ಚು ಮಾಡಿ ಟೂರ್ನಿಗೆ ಸಕಲ ಸಿದ್ಧತೆ ಮಾಡಿದೆ. 1982ರಲ್ಲಿ ಮುಂಬೈ (ಅಂದಿನ ಬಾಂಬೆ)ನಲ್ಲಿ ನಡೆದಿದ್ದ ಪಂದ್ಯಾವಳಿ 2010ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. 3ನೇ ಬಾರಿಗೆ ಭಾರತ ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿದೆ.

ಟೂರ್ನಿಯಲ್ಲಿ ಫೈನಲ್‌ ಸೇರಿ ಒಟ್ಟು 36 ಪಂದ್ಯಗಳು ನಡೆಯಲಿದ್ದು, ಹಾಕಿ ಪ್ರಿಯರ ನಾಡು ಒಡಿಶಾ, ಭಾರೀ ಉತ್ಸುಕಗೊಂಡಿದೆ. ಕಳಿಂಗಾ ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು 15000ಕ್ಕೆ ಏರಿಸಲಾಗಿದೆ. ಜತೆಗೆ 2 ಹೊಸ ಪಿಚ್‌ಗಳನ್ನು ಸಿದ್ಧಪಡಿಸಲಾಗಿದ್ದು ಪಂದ್ಯಕ್ಕೊಂದು, ಅಭ್ಯಾಸಕ್ಕೊಂದನ್ನು ಬಳಸಲಾಗುತ್ತದೆ. ನೂತನ ಫ್ಲಡ್‌ಲೈಟ್ಸ್‌ ಹಾಗೂ ಭದ್ರತಾ ದೃಷ್ಟಿಯಿಂದ ಕ್ರೀಡಾಂಗಣದ ಪ್ರತಿ ಮೂಲೆಯಲ್ಲೂ ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಅರ್ಹತೆ ಹೇಗೆ?: 2015ರಲ್ಲಿ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌, ಪಂದ್ಯಾವಳಿಗೆ ಅರ್ಹತೆ ಪಡೆದುಕೊಳ್ಳಲು ನೂತನ ಮಾದರಿ ಪ್ರಕಟಿಸಿತು. 5 ಖಂಡಗಳ ಚಾಂಪಿಯನ್ನರು ಹಾಗೂ ಆತಿಥೇಯ ರಾಷ್ಟ್ರಕ್ಕೆ ನೇರವಾಗಿ ಅರ್ಹತೆ ನೀಡಲಾಯಿತು. 2016-17ರ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್ಸ್‌ನಲ್ಲಿ ಅಗ್ರ 10 ಸ್ಥಾನ ಪಡೆದ ತಂಡಗಳು ವಿಶ್ವಕಪ್‌ಗೆ ಅರ್ಹತೆ ಪಡೆದವು. ಆತಿಥೇಯ ಭಾರತವೇ ಏಷ್ಯಾ ಚಾಂಪಿಯನ್‌ ಆಗಿದ್ದರಿಂದ, ಭಾರತದ ನಂತರ ಗರಿಷ್ಠ ರಾರ‍ಯಂಕಿಂಗ್‌ ಹೊಂದಿದ್ದ ಚೀನಾಕ್ಕೆ ನೇರವಾಗಿ ಅರ್ಹತೆ ನೀಡಲಾಯಿತು.

ಪಂದ್ಯಾವಳಿ ಮಾದರಿ ಹೇಗೆ?: ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, ತಲಾ 4 ತಂಡಗಳಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡ ಗುಂಪು ಹಂತದಲ್ಲಿ 3 ಪಂದ್ಯಗಳನ್ನು ಆಡಲಿದ್ದು, ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ 4 ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆಯಲಿವೆ. ಗುಂಪಿನಲ್ಲಿ 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು, ಕ್ರಾಸ್‌ ಓವರ್‌ ಪಂದ್ಯಗಳನ್ನು ಆಡಲಿದ್ದು (ಎ2 ವರ್ಸಸ್‌ ಬಿ3, ಬಿ2 ವರ್ಸಸ್‌ ಎ3, ಸಿ2 ವರ್ಸಸ್‌ ಡಿ3, ಡಿ2 ವರ್ಸಸ್‌ ಸಿ3), ಇದರಲ್ಲಿ ಗೆಲ್ಲುವ 4 ತಂಡಗಳು ಕ್ವಾರ್ಟರ್‌ ಫೈನಲ್‌ಗೇರಲಿವೆ. ಡಿ.15ರಂದು ಸೆಮಿಫೈನಲ್‌ ಹಾಗೂ ಡಿ.16ಕ್ಕೆ ಫೈನಲ್‌ ಹಾಗೂ 3ನೇ ಸ್ಥಾನವನ್ನು ನಿರ್ಧರಿಸುವ ಪಂದ್ಯಗಳು ನಡೆಯಲಿವೆ.

‘ಎ’ ಗುಂಪು
ಅರ್ಜಿಂಟೀನಾ, ನ್ಯೂಜಿಲೆಂಡ್‌, ಸ್ಪೇನ್‌, ಫ್ರಾನ್ಸ್‌

‘ಬಿ’ ಗುಂಪು
ಆಸ್ಪ್ರೇಲಿಯಾ, ಇಂಗ್ಲೆಂಡ್‌, ಐರ್ಲೆಂಡ್‌, ಚೀನಾ

‘ಸಿ’ ಗುಂಪು
ಭಾರತ, ಬೆಲ್ಜಿಯಂ, ದ.ಆಫ್ರಿಕಾ, ಕೆನಡಾ

‘ಡಿ’ ಗುಂಪು
ನೆದರ್‌ಲೆಂಡ್ಸ್‌, ಮಲೇಷ್ಯಾ, ಜರ್ಮನಿ, ಪಾಕಿಸ್ತಾನ

ಹಿಂದಿನ ಚಾಂಪಿಯನ್ಸ್‌
ವರ್ಷ    ಚಾಂಪಿಯನ್‌
1971    ಪಾಕಿಸ್ತಾನ
1973    ನೆದರ್‌ಲೆಂಡ್ಸ್‌
1975    ಭಾರತ
1978    ಪಾಕಿಸ್ತಾನ
1982    ಪಾಕಿಸ್ತಾನ
1986    ಆಸ್ಪ್ರೇಲಿಯಾ
1990    ನೆದರ್‌ಲೆಂಡ್ಸ್‌
1994    ಪಾಕಿಸ್ತಾನ
1998    ನೆದರ್‌ಲೆಂಡ್ಸ್‌
2002    ಜರ್ಮನಿ
2006    ಜರ್ಮನಿ
2010    ಆಸ್ಪ್ರೇಲಿಯಾ
2014    ಆಸ್ಪ್ರೇಲಿಯಾ

ಭಾರತಕ್ಕೆ ಇಂದು ದ.ಆಫ್ರಿಕಾ ಸವಾಲು

43 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಕನಸು ಕಾಣುತ್ತಿರುವ ಭಾರತ, ಬುಧವಾರ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. 1975ರಲ್ಲಿ ಅಜಿತ್‌ ಪಾಲ್‌ ಸಿಂಗ್‌ ಪಡೆ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿತ್ತು. ಅದೇ ಕೊನೆ ಆ ಬಳಿಕ, ವಿಶ್ವಕಪ್‌ನಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಂತದ್ದಲ್ಲ. 1982ರ ವಿಶ್ವಕಪ್‌ನಲ್ಲಿ 5ನೇ ಸ್ಥಾನ ಪಡೆದಿದ್ದೇ ಕಳೆದ 3 ದಶಕಗಳಲ್ಲಿ ತಂಡದ ಶ್ರೇಷ್ಠ ಪ್ರದರ್ಶನ ಎನಿಸಿದೆ. ಸದ್ಯ ವಿಶ್ವ ರಾರ‍ಯಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಭಾರತ, ತವರಿನಲ್ಲಿ 1975ರ ಫಲಿತಾಂಶವನ್ನು ಮರುಕಳಿಸುವಂತೆ ಮಾಡುವ ಗುರಿ ಹೊಂದಿದೆ. ಆದರೆ ವಿಶ್ವಕಪ್‌ ಇತಿಹಾಸದಲ್ಲಿ ಆತಿಥ್ಯ ವಹಿಸಿದ ರಾಷ್ಟ್ರ ಉತ್ತಮ ಪ್ರದರ್ಶನ ತೋರಿದ ಉದಾಹರಣೆ ಕಡಿಮೆ. ಹೀಗಾಗಿ, ಭಾರತ ಇತಿಹಾಸದ ವಿರುದ್ಧ ಈಜಬೇಕಿದೆ.

ತಂಡ ಈ ಬಾರಿ ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿದೆ. 2016ರಲ್ಲಿ ಕಿರಿಯರ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ 7 ಆಟಗಾರರು ಈ ಬಾರಿ ತಂಡದಲ್ಲಿದ್ದಾರೆ. ಮನ್‌ಪ್ರೀತ್‌ ಸಿಂಗ್‌ ಭಾರತ ತಂಡವನ್ನು ಮುನ್ನಡೆಸಲಿದ್ದು ಗೋಲ್‌ ಕೀಪರ್‌ ಪಿ.ಆರ್‌.ಶ್ರೀಜೇಶ್‌ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ಗಾಯಾಳು ಕರ್ನಾಟಕದ ಎಸ್‌.ವಿ.ಸುನಿಲ್‌ ಅನುಪಸ್ಥಿತಿ ತಂಡಕ್ಕೆ ಬಲವಾಗಿ ಕಾಡಲಿದೆ. ಜತೆಗೆ ಪೆನಾಲ್ಟಿಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತ ಉತ್ತಮ ದಾಖಲೆ ಹೊಂದಿಲ್ಲ. ಇದು ಸಹ ಆತಂಕಕ್ಕೆ ಕಾರಣವಾಗಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ಹಾಗೂ ಅಂತಿಮ ಪಂದ್ಯದಲ್ಲಿ ಕೆನಡಾ ವಿರುದ್ಧ ಭಾರತವೇ ಗೆಲ್ಲುವ ನೆಚ್ಚಿನ ತಂಡ. ಆದರೆ ವಿಶ್ವ ನಂ.3 ಬೆಲ್ಜಿಯಂ, 2ನೇ ಪಂದ್ಯದಲ್ಲಿ ಎದುರಾಗಲಿದ್ದು ಭಾರತ ಕಠಿಣ ಸ್ಪರ್ಧೆ ಎದುರಿಸಲಿದೆ.

ಆಸ್ಪ್ರೇಲಿಯಾ, ಜರ್ಮನಿ ಹಾಗೂ ನೆದರ್‌ಲೆಂಡ್ಸ್‌ ಕಳೆದ 20 ವರ್ಷಗಳಲ್ಲಿ ಹಾಕಿ ಲೋಕವನ್ನು ಆಳಿದ್ದು, ಈ ಮೂರು ತಂಡಗಳೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳು ಎನಿಸಿವೆ. ಬುಧವಾರದ ಉದ್ಘಾಟನಾ ಪಂದ್ಯದಲ್ಲಿ ಕೆನಡಾ ಹಾಗೂ ಬೆಲ್ಜಿಯಂ ಸೆಣಸಲಿವೆ.

ಭಾರತದ ವೇಳಾಪಟ್ಟಿ
ದಿನಾಂಕ    ಎದುರಾಳಿ
ನ.28    ದ.ಆಫ್ರಿಕಾ
ಡಿ.2    ಬೆಲ್ಜಿಯಂ
ಡಿ.8    ಕೆನಡಾ
ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ ಸೆಲೆಕ್ಟ್ 1

  • ವಿಶ್ವಕಪ್‌ ಟೂರ್ನಿಗೆ ಭಾರತ 3ನೇ ಬಾರಿ ಆತಿಥ್ಯ ವಹಿಸುತ್ತಿದೆ.
  • ಫೈನಲ್‌ ಸೇರಿ ಟೂರ್ನಿಯಲ್ಲಿ ಒಟ್ಟು 36 ಪಂದ್ಯಗಳು ನಡೆಯಲಿವೆ.
  • 4 ಬಾರಿ ವಿಶ್ವಕಪ್‌ ಗೆದ್ದಿರುವ ಪಾಕಿಸ್ತಾನ ಟೂರ್ನಿಯ ಅತ್ಯಂತ ಯಶಸ್ವಿ ತಂಡ.
  • ಭಾರತ ಒಮ್ಮೆ ಚಾಂಪಿಯನ್‌, ಒಮ್ಮೆ ರನ್ನರ್‌-ಅಪ್‌, ಒಮ್ಮೆ 3ನೇ ಸ್ಥಾನ ಪಡೆದಿದೆ.
Latest Videos
Follow Us:
Download App:
  • android
  • ios