ಕೊಡಗು: ಸಿಂಥೆಟಿಕ್ ಟರ್ಫ್ ಅಳವಡಿಸಿ 3 ವರ್ಷ ಕಳೆದರೂ ಬಳಕೆಗೆ ಸಿಗದ ಹಾಕಿ ಮೈದಾನ
ತಾಲ್ಲೂಕು ಕೇಂದ್ರವಾದ ಸೋಮವಾರಪೇಟೆಯಲ್ಲಿ 2013 ರಲ್ಲಿ 3 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನ ಮಾಡಲು ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದಾದ ಬಳಿಕ ಕಾಮಗಾರಿ ಆರಂಭವಾಗಿದ್ದು ಮಾತ್ರ 2019 ರಲ್ಲಿ. ಜೊತೆಗೆ ಕಾಮಗಾರಿ ವೆಚ್ಚ ಕೂಡ ಜಾಸ್ತಿಯಾಗಿದ್ದು 4 ಕೋಟಿಗೆ ತಲುಪಿದೆ. ಇದೀಗ ಕಾಮಗಾರಿ ಆರಂಭವಾಗಿ ಐದು ವರ್ಷಗಳಾದರೂ ಇಂದಿಗೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಆದರೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮಾತ್ರ ಫಿಟ್ನೆಸ್ ವರದಿ ನೀಡಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಆ.17): ಕೊಡಗು ಜಿಲ್ಲೆಯನ್ನು ಕ್ರೀಡೆಗಳ ತವರೂರು ಎಂದು ಕರೆಯಲಾಗುತ್ತದೆ. ಸಾಕಷ್ಟು ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿರುವ ಜಿಲ್ಲೆ ಇದು. ಆದರೆ ಇಲ್ಲಿನ ಮೈದಾನಗಳನ್ನು ನೋಡಿದರೆ ಕ್ರೀಡೆಯನ್ನು ಸರ್ಕಾರ, ಅಧಿಕಾರಿಗಳು ಎಷ್ಟು ಕಡೆಗಣಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಪ್ರೋತ್ಸಾಹ ಇಲ್ಲದಿರುವುದು ಒಂದೆಡೆಯಾದರೆ ಕೋಟಿ ಕೋಟಿ ವ್ಯಯಿಸಿ ಮಾಡಿದ್ದ ಮೈದಾನದ ಕಾಮಗಾರಿ ಪೂರ್ಣಗೊಳಿಸದೆ ಕ್ರೀಡಾಪಟುಗಳು ಸಮಸ್ಯೆ ಎದುರಿಸುವಂತೆ ಆಗಿದೆ. ಕೊಡಗಿನಲ್ಲಿ ಹಾಕಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಅದರಲ್ಲೂ ಸೋಮವಾರಪೇಟೆ ನಗರದಲ್ಲಿ ವಿಕ್ರಂ ಕಾಂತ್, ಆಭರಣ್ ಸುದೇವ್, ಬಿ.ಪಿ. ಗೋವಿಂದ್, ಅರ್ಜುನ್ ಹಾಲಪ್ಪರಂತಹ ಖ್ಯಾತ ಹಾಕಿಪಟುಗಳು ಆಡಿ ಬೆಳೆದಿದ್ದಾರೆ. ಎಸ್. ವಿ. ಸುನಿಲ್, ಹರಿಪ್ರಸಾದ್ ರಂತಹ ಒಲಿಂಪಿಯನ್ ಗಳು ಬೆಳೆದಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ: ಸಚಿವ ಭೋಸರಾಜು
ಹೀಗಾಗಿ ತಾಲ್ಲೂಕು ಕೇಂದ್ರವಾದ ಸೋಮವಾರಪೇಟೆಯಲ್ಲಿ 2013 ರಲ್ಲಿ 3 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನ ಮಾಡಲು ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದಾದ ಬಳಿಕ ಕಾಮಗಾರಿ ಆರಂಭವಾಗಿದ್ದು ಮಾತ್ರ 2019 ರಲ್ಲಿ. ಜೊತೆಗೆ ಕಾಮಗಾರಿ ವೆಚ್ಚ ಕೂಡ ಜಾಸ್ತಿಯಾಗಿದ್ದು 4 ಕೋಟಿಗೆ ತಲುಪಿದೆ. ಇದೀಗ ಕಾಮಗಾರಿ ಆರಂಭವಾಗಿ ಐದು ವರ್ಷಗಳಾದರೂ ಇಂದಿಗೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಆದರೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮಾತ್ರ ಫಿಟ್ನೆಸ್ ವರದಿ ನೀಡಿದೆ. ಪೂರ್ಣ ಪ್ರಮಾಣದ ಕಾಮಗಾರಿ ಮುಗಿದಿದೆ ಎಂದು ವರದಿ ದೊರೆತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಎಲ್ಲಾ ಹಣವನ್ನು ಬಿಡುಗಡೆ ಮಾಡಲಾಗಿದೆ.
ಮೈದಾನಕ್ಕೆ ಸಿಂಥೆಟಿಕ್ ಹಾಸು ಅಳವಡಿಸಿ ಮೂರು ವರ್ಷ ಕಳೆದಿದ್ದರೂ ಅದಕ್ಕೆ ನೀರಿನ ವ್ಯವಸ್ಥೆ ಇಲ್ಲ. ನೀರು ಹಾಯಿಸುವುದಕ್ಕೆ ಮೋಟರ್ ಅಳವಡಿಸಲಾಗಿದೆ ಆದರೂ ಮುಖ್ಯವಾಗಿ ವಿದ್ಯುತ್ ಸಂಪರ್ಕವೇ ಇಲ್ಲ. ಗ್ರೇಟ್ ಸ್ಪೋರ್ಟ್ಸ್ ಆಫ್ ಇನ್ಫಾ ಎನ್ನುವ ಹೈದರಾಬಾದ್ ಕಂಪೆನಿಯೊಂದು ಹಾಕಿ ಮೈದಾನ ನಿರ್ಮಾಣದ ಕಾಮಗಾರಿಯ ಟೆಂಡರ್ ಪಡೆದಿತ್ತು. ಆದರೆ ವಿದ್ಯುತ್ ಸಂಪರ್ಕದ ಕಾಮಗಾರಿ ಕೆಲಸವನ್ನು ಸೋಮವಾರಪೇಟೆಯ ಸ್ಥಳೀಯರೊಬ್ಬರಿಗೆ ಒಳಗುತ್ತಿಗೆ ನೀಡಲಾಗಿದೆ. ಅವರು ಟ್ರಾನ್ಸ್ಫಾರ್ಮರ್ ಅಳವಡಿಸಿದ್ದು, ವಿದ್ಯುತ್ ಕಾಮಗಾರಿಯ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಇಂದಿಗೂ ತಾನು ಮಾಡಿರುವ ಕಾಮಗಾರಿಯ ಹಣ ಬಂದಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವನ್ನೇ ನೀಡಿಲ್ಲ. ಹೀಗಾಗಿ ಸಿಂಥೆಟಿಕ್ ಟರ್ಫ್ ಅಳವಡಿಸಿ ಮೂರು ವರ್ಷಗಳಾದರೂ ಇಂದಿಗೂ ನೀರಿನ ವ್ಯವಸ್ಥೆ ಇಲ್ಲ. ಬ್ಲೂ ಸ್ಟಾರ್ ಹಾಕಿ ಕ್ಲಬ್ ಸದಸ್ಯ ಅಭಿಷೇಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಒಳಗುತ್ತಿಗೆ ಪಡೆದಿದ್ದ ವ್ಯಕ್ತಿ 20 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದಾರೆ ಎನ್ನಲಾಗಿದ್ದು, ಆ ವ್ಯಕ್ತಿಗೆ ಕೇವಲ 2 ಲಕ್ಷ ರೂಪಾಯಿ ಮಾತ್ರ ಕೊಡಲಾಗಿದೆ. ಹೀಗಾಗಿ ಆ ವ್ಯಕ್ತಿ ವಿದ್ಯುತ್ ಸಂಪರ್ಕ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದಿರುವುದಿರಿಂದ ಹಾಕಿ ಟರ್ಫ್ ಗೆ ನೀರಿನ ವ್ಯವಸ್ಥೆ ಇಲ್ಲ. ಸಿಂಥೆಟಿಕ್ ಹಾಕಿ ಟರ್ಫ್ ನೀರಿಲ್ಲದೆ ಒಣಗಿದರೆ, ಅದು ಹಾಳಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಸಿಂಥೆಟಿಕ್ ಟರ್ಫ್ ಹಾಕಿ ಮೂರು ವರ್ಷಗಳಿಂದ ನೀರಿಲ್ಲದೆ ಸಂಪೂರ್ಣ ಹಾಳುತ್ತಿದೆ. ಹಿಂದಿನ ಶಾಸಕರಾದ ಅಪ್ಪಚ್ಚು ರಂಜನ್ ಅವರು ಇನ್ನೊಂದು ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆ, ಎರಡು ತಿಂಗಳಲ್ಲಿ ಮುಗಿಸುತ್ತೇವೆ ಎಂದು ಸಮಯ ದೂಡಿಕೊಂಡೇ ಬಂದಿದ್ದಾರೆ.
ಕಾಮಗಾರಿ ಮುಗಿಸುವಂತೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮುಖ್ಯ ಇಂಜಿನಿಯರ್ ಹರೀಶ್ ಅವರನ್ನ ಕೇಳಿದರೆ, ಅವರು ಕೂಡ ಇದೇ ಸಬೂಬು ಹೇಳುತ್ತಿದ್ದಾರೆ ಎಂದು ಬ್ಲೂಸ್ಟಾರ್ ಹಾಕಿ ಕ್ಲಬ್ ಮಾಜಿ ಅಧ್ಯಕ್ಷ ಸುರೇಶ್ ಅವರ ಅಸಮಾಧಾನ. ಕ್ರೀಡಾ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕಾಮಗಾರಿಯ ಉಸ್ತುವಾರಿಯೆಲ್ಲಾ ರಾಜ್ಯಮಟ್ಟದ ಅಧಿಕಾರಿಗಳಿಂದಲೇ ನಡೆಯುತ್ತಿದೆ.
ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲು ಸಚಿವ ಬೋಸರಾಜು ಸೂಚನೆ
ನಮಗೆ ಇದರ ಬಗ್ಗೆ ಏನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಒಮ್ಮೆ ಸಿಂಥೆಟಿಕ್ ಅಳವಡಿಸಿದರೆಂದರೆ ಅದು ಬಳಕೆಯಾಗುವುದೇ 10 ವರ್ಷ. ಆದರೆ ಈಗ ಅದನ್ನು ಅಳವಡಿಸಿ ಈಗಾಗಲೇ 3 ವರ್ಷ ಕಳೆದಿರುವುದರಿಂದ ಈಗ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ನೀಡಿದರೂ ಇನ್ನು 7 ವರ್ಷಗಳ ಕಾಲ ಮಾತ್ರ ಅದನ್ನು ಬಳಸಬಹುದು.
ಮತ್ತೊಂದೆಡೆ ಇಡೀ ಸಿಂಥೆಟಿಕ್ ಮೈದಾನದಲ್ಲಿ ಗರಿಕೆ ಹುಲ್ಲು ಮತ್ತು ಇತರೆ ಗಿಡಗಳು ಬೆಳೆಯುತ್ತಿವೆ. ಮಗದೊಂದೆಡೆ ಗ್ರೌಂಡ್ ಸುತ್ತ ಅಳವಡಿಸಿರುವ ಗ್ರಿಲ್ಸ್ ಕಾಮಗಾರಿಯೂ ಪರಿಪೂರ್ಣವಾಗಿಲ್ಲ. ಒಟ್ಟಿನಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಮಾಡಿರುವ ಹಾಕಿ ಮೈದಾನ ಬಳಕೆಗೆ ಸಿಗದಿರುವುದು ಎಲ್ಲರನ್ನು ಅಸಮಾಧಾನಗೊಳ್ಳುವಂತೆ ಮಾಡಿದೆ.