ಚಟ್ಟೋಗ್ರಾಂ(ಸೆ.04): ವಿಶ್ವ ಕ್ರಿಕೆಟಿಗರ ಪೈಕಿ ಅತ್ಯಂತ ಪ್ರತಿಭಾನ್ವಿತ ಹಾಗೂ ಬೆಸ್ಟ್ ಸ್ಪಿನ್ನರ್ ಎಂದೇ ಗುರುತಿಸಿಕೊಂಡಿರುವ ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಇದೀಗ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ 15 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯಲು ರಶೀದ್ ಸಜ್ಜಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕೈಕ ಪಂದ್ಯದ ಟೆಸ್ಟ್ ಸರಣಿಯಲ್ಲಿ ರಶೀದ್ ವಿಶೇಷ ದಾಖಲೆ ಬರೆಯಲಿದ್ದಾರೆ.

ಇದನ್ನೂ ಓದಿ: ರಶೀದ್ ಖಾನ್ ಬಳಿ ಕ್ಷಮೆ ಕೇಳಿದ ಐಸ್‌ಲೆಂಡ್ ಕ್ರಿಕೆಟ್ ಮಂಡಳಿ!

ವಿಶ್ವಕಪ್ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿದ ಆಫ್ಘಾನಿಸ್ತಾನ ಮೂರು ಮಾದರಿಯ ನಾಯಕತ್ವವನ್ನು ಬದಲಿಸಿತು. ಬಳಿಕ ಯುವ ಸ್ಪಿನ್ನರ್ ರಶೀದ್ ಖಾನ್‌ಗೆ ನಾಯಕತ್ವ ನೀಡಲಾಗಿದೆ. ಇದೀಗ ಬಾಂಗ್ಲಾದೇಶ ತಲುಪಿರುವ ಆಫ್ಘಾನಿಸ್ತಾನ ರಶೀದ್ ಖಾನ್ ನಾಯಕತ್ವದಲ್ಲಿ ಸೆಪ್ಟೆಂಬರ್ 5 ರಿಂದ ಟೆಸ್ಟ್ ಪಂದ್ಯ ಆಡಲಿದೆ. ಈ ಮೂಲಕ ರಶೀದ್ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ ಅತ್ಯಂತ ಕಿರಿಯ ನಾಯಕ ಅನ್ನೋ ದಾಖಲೆ ಬರೆಯಲಿದ್ದಾರೆ. 15 ವರ್ಷಗಳ ಹಿಂದೆ ಜಿಂಬಾಬ್ವೆಯ ಟಾಟೆಂಡ ಟೈಬು ಟೆಸ್ಟ್ ತಂಡವನ್ನು ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಅನ್ನೋ ದಾಖಲೆ ಬರೆದಿದ್ದರು.

ಇದನ್ನೂ ಓದಿ: ರಶೀದ್ ಖಾನ್ ದಾಳಿಗೆ ಐರ್ಲೆಂಡ್ ಧೂಳಿಪಟ: ಟಿ20 ಸರಣಿ ಕ್ಲೀನ್’ಸ್ವೀಪ್

ಟೈಬು 20 ವರ್ಷ 358 ದಿನಕ್ಕೆ ಟೆಸ್ಟ್ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ ರಶೀದ್ ಖಾನ್ 20 ವರ್ಷ 350 ದಿನಕ್ಕೆ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ರಶೀದ್ ಕಾನ್ ಈ ದಾಖಲೆ ಬರೆಯಲಿದ್ದಾರೆ. 

ಟೆಸ್ಟ್ ತಂಡ ಮುನ್ನಡೆಸಿದ ವಿಶ್ವದ ಕಿರಿಯ ನಾಯಕರು:
ಟಾಟೆಂಡ ಟೈಬು(ಜಿಂಬಾಬ್ವೆ) 20ವರ್ಷ,  358ದಿನ
ಮನ್ಸೂರ್ ಆಲಿ ಪೌಟೌಡಿ(ಭಾರತ) 21 ವರ್ಷ, 77 ದಿನ 
ವಕಾರ್ ಯೂನಿಸ್(ಪಾಕಿಸ್ತಾನ) 22 ವರ್ಷ, 15 ದಿನ
ಗ್ರೇಮ್ ಸ್ಮಿತ್(ಸೌತ್ ಆಫ್ರಿಕಾ) 22 ವರ್ಷ, 82 ದಿನ
ಶಕೀಬ್ ಅಲ್ ಹಸನ್(ಬಾಂಗ್ಲಾದೇಶ) 22 ವರ್ಷ, 115 ದಿನ