ಅಡಿಲೇಡ್[ಡಿ.09]: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ದ್ವಿತಿಯ ಇನ್ನಿಂಗ್ಸ್’ನಲ್ಲಿ 307 ರನ್ ಬಾರಿಸಿ ಸರ್ವಪತನ ಕಂಡಿದ್ದು, ಆಸ್ಟ್ರೇಲಿಯಾಗೆ ಗೆಲ್ಲಲು 323 ರನ್’ಗಳ ಸವಾಲಿನ ಗುರಿ ನೀಡಿದೆ.

ಇನ್ನು ಸವಾಲಿನ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ 7 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೇ 15 ರನ್ ಬಾರಿಸಿದೆ.

ಮೂರನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 151 ರನ್ ಬಾರಿಸಿದ್ದ ಭಾರತ ನಾಲ್ಕನೇ ದಿನವೂ ಭರ್ಜರಿ ಆರಂಭವನ್ನೇ ಪಡೆಯಿತು. ನಾಲ್ಕನೇ ವಿಕೆಟ್’ಗೆ ಪೂಜಾರ-ರಹಾನೆ ಜೋಡಿ 87 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಪೂಜಾರ 204 ಎಸೆತಗಳನ್ನೆದುರಿಸಿ 9 ಬೌಂಡರಿ ಸಹಿತ 71 ರನ್ ಬಾರಿಸಿ ಲಯನ್’ಗೆ ವಿಕೆಟ್ ಒಪ್ಪಿಸಿದರು. ಅಜಿಂಕ್ಯ ರಹಾನೆ 70 ರನ್ ಸಿಡಿಸಿ ಲಯನ್’ಗೆ ಬಲಿಯಾದರು. ಪಂತ್ 28 ರನ್ ಸಿಡಿಸುವ ಮೂಲಕ ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು.

ಮತ್ತೊಮ್ಮೆ ಅಡಿಲೇಡ್ ಪಿಚ್’ನಲ್ಲಿ ಮಿಂಚಿದ ನೇಥನ್ ಲಯನ್ 6 ವಿಕೆಟ್ ಕಬಳಿಸಿ ಭಾರತವನ್ನು ಕಟ್ಟಿಹಾಕುವಲ್ಲಿ ಸಫಲವಾದರು. ಮಿಚೆಲ್ ಸ್ಟಾರ್ಕ್ 3 ಹಾಗೂ ಜೋಸ್ ಹ್ಯಾಜಲ್’ವುಡ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ಭಾರತ: 
250& 307
ಆಸ್ಟ್ರೇಲಿಯಾ: 
235 & 15*