ವಿಜಯವಾಡ(ನ.19): ಎಫ್‌1ಎಚ್‌2ಓ ಪವರ್‌ಬೋಟ್ ವಿಶ್ವ ಚಾಂಪಿಯನ್ ಶಿಪ್‌ನ ಇಂಡಿಯಾ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಅಬುಧಾಬಿ ತಂಡದ ಅಮೆರಿಕ ಚಾಲಕ ಶಾನ್ ಟಾರೆಂಟೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ಇಲ್ಲಿನ ಕೃಷ್ಣಾ ನದಿ ದಂಡೆಯಲ್ಲಿರುವ ಪುನ್ನಮಿ ಘಾಟ್‌ನಲ್ಲಿ ನಡೆದ ಫೈನಲ್‌ನಲ್ಲಿ ಶಾನ್ ಆಕರ್ಷಕ ಪ್ರದರ್ಶನ ತೋರಿದರು. 

2.125 ಕಿ.ಮೀ ಟ್ರ್ಯಾಕ್‌ನಲ್ಲಿ ನಡೆದ 44 ಲ್ಯಾಪ್‌ಗಳನ್ನು (93.5 ಕಿ.ಮೀ) ಅಮೆರಿಕದ ಚಾಲಕ 47 ನಿಮಿಷ 37 ಸೆಕೆಂಡ್‌ಗಳಲ್ಲಿ ಮುಕ್ತಾಯಗೊಳಿಸಿದರು. ಶಾನ್‌ಗಿಂತ 2.17 ಸೆಕೆಂಡ್ ಹೆಚ್ಚು ಸಮಯ ತೆಗೆದುಕೊಂಡ ಟೀಂ ಎಮಿರೇಟ್ಸ್‌ನ, ನಾರ್ವೆ ದೇಶದ ಮಹಿಳಾ ಚಾಲಕಿ ಮರಿಟ್ ಸ್ಟ್ರೊಮೊಯ್ 2ನೇ ಸ್ಥಾನ ಗಳಿಸಿದರೆ, ಟೀಂ ಅಬುಧಾಬಿಯ ಸ್ವೀಡನ್ ಚಾಲಕ ಎರಿಕ್ ಸ್ಟಾರ್ಕ್, ಟಾರೆಂಟೆಗಿಂತ 3.53 ಸೆಕೆಂಡ್ ನಿಧಾನವಾಗಿ ರೇಸ್ ಮುಕ್ತಾಯಗೊಳಿಸಿ 3ನೇ ಸ್ಥಾನ ಪಡೆದರು.

ವಿಜೇತರಿಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಶಸ್ತಿ ವಿತರಿಸಿದರು. ಆಂಧ್ರದ ಪ್ರವಾಸೋದ್ಯಮ ಸಚಿವೆ ಭೂಮ ಅಖಿಲ ಪ್ರಿಯ ಸಹ ಉಪಸ್ಥಿತರಿದ್ದರು. ಈ ಗೆಲುವಿನೊಂದಿಗೆ ಟಾರೆಂಟೆ ಚಾಲಕರ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಈ ವರ್ಷ ಇನ್ನೆರಡು ರೇಸ್‌ಗಳು ಬಾಕಿ ಇದ್ದು, ಟಾರೆಂಟೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವ ಗುರಿ ಹೊಂದಿದ್ದಾರೆ.

ಅಮರಾವತಿ ತಂಡಕ್ಕೆ ನಿರಾಸೆ: ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದ ಟೀಂ ಅಮರಾವತಿಯ ಸ್ವೀಡನ್ ಚಾಲಕ ಜೊನಾಸ್ ಆ್ಯಂಡರ್‌ಸನ್, 37ನೇ ಲ್ಯಾಪ್ ವರೆಗೂ 4ನೇ ಸ್ಥಾನದಲ್ಲಿದ್ದರು. ಆದರೆ 33ನೇ ಲ್ಯಾಪ್ ಮುಕ್ತಾಯಗೊಳಿಸಿದ ಬಳಿಕ ತಾಂತ್ರಿಕ ಸಮಸ್ಯೆಯಿಂದಾಗಿ ರೇಸ್‌ನಿಂದ ಹೊರಬೀಳ ಬೇಕಾಯಿತು. ಅರ್ಹತಾ ಸುತ್ತಿನಲ್ಲಿ ಕೊನೆ (19ನೇ) ಸ್ಥಾನ ಪಡೆದಿದ್ದ ಅಮರಾವತಿಯ ಮತ್ತೊಬ್ಬ ಚಾಲಕ, ಸ್ವೀಡನ್‌ನ ಎರಿಕ್ ಎಡಿನ್ 6ನೇ ಸ್ಥಾನ ಪಡೆದು ಸ್ಥಳೀಯ ಅಭಿಮಾನಿಗಳನ್ನು ಸಂತಸ ಪಡಿಸಿದರು.

ಮರಿಟ್ ವೇಗದ ಲ್ಯಾಪ್: ಮಹಿಳಾ ಚಾಲಕಿ ಮರಿಟ್ ಸ್ಟ್ರೊಮೊಯ್ ರೇಸ್‌ನ ವೇಗದ ಲ್ಯಾಪ್ ಹಿರಿಮೆ ಪಡೆದರು. 2.125 ಕಿ.ಮೀ ದೂರವನ್ನು 47 ಸೆಕೆಂಡ್‌ಗಳಲ್ಲಿ ಕ್ರಮಿಸಿ ವೇಗವಾಗಿ ಲ್ಯಾಪ್ ಒಂದನ್ನು ಮುಗಿಸಿದ ದಾಖಲೆಗೆ ಪಾತ್ರರಾದರು. 

 ಸ್ಪಂದನ್ ಕಣಿಯಾರ್