ಅಭಿಮನ್ಯು ಇದೇ ವೇಳೆ ತಾನು ಗೆಲುವಿನ ಓಟವನ್ನು ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಯೂರೋಪ್'ನಲ್ಲಿ ನನ್ನ ಮೊದಲ ಅಟ. ಈ ಗೆಲುವು ಬಹಳ ಮಹತ್ತರವಾದುದು. ಸಾಗಬೇಕಾದ ದಾರಿ ತುಂಬಾ ಇದೆ. ಶಕ್ತಿಮೀರಿ ಆಡಲು ಯತ್ನಿಸುತ್ತೇನೆ ಎಂದು ಬೆಂಗಳೂರು ಬಾಯ್ ಹೇಳಿದ್ದಾರೆ.

ಪ್ಯಾರಿಸ್: ಬೆಂಗಳೂರಿನ ಅಭಿಮನ್ಯು ವನ್ನೆಮ್‌'ರೆಡ್ಡಿ ಜೂನಿಯರ್‌ ಫ್ರೆಂಚ್‌ ಓಪನ್‌'ಗೆ ವೈಲ್ಡ್‌'ಕಾರ್ಡ್‌ ಪ್ರವೇಶ ಗಿಟ್ಟಿಸಿದ್ದಾರೆ. ಇಲ್ಲಿನ ನಡೆದ ರೆಂಡೆಝ್‌ ವ್ಯೂಸ್‌ ಸ್ಪರ್ಧೆಯ ಫೈನಲ್‌ನಲ್ಲಿ ಅಭಿಮನ್ಯು ಜಪಾನ್‌ನ ಹಿಕಾರು ಶಿರಾಶಿ ವಿರುದ್ಧ 6-1, 4-6, 6-1 ಸೆಟ್‌'ಗಳ ಅಂತರದಲ್ಲಿ ಗೆಲುವು ಸಾಧಿಸಿದರು.

ರೋಲೆಂಡ್‌ ಗಾರಸ್‌ನ 6ನೇ ಕೋರ್ಟ್‌'ನಲ್ಲಿ 2 ಗಂಟೆ 15 ನಿಮಿಷ ನಡೆದ ಪಂದ್ಯದಲ್ಲಿ 17 ವರ್ಷದ ಅಭಿಮನ್ಯು ಮನಮೋಹಕ ಪ್ರದರ್ಶನ ತೋರಿದರು. ಆದರೆ ಜಪಾನ್‌'ನ ಆಟಗಾರನ ಹೋರಾಟ ಎಲ್ಲರ ಮನಸೆಳೆಯಿತು. ಸುಡುಬಿಸಿಲಿನಿಂದಾಗಿ ಮೂಗಿನಲ್ಲಿ ರಕ್ತ ಸೋರುತ್ತಿದ್ದರೂ ಶಿರಾಶಿ ಎದೆಗುಂದದೆ ಪಂದ್ಯದಿಂದ ಹಿಂದೆ ಸರಿಯಲಿಲ್ಲ.

ಅಭಿಮನ್ಯು ರೆಂಡೆಝ್‌'ವ್ಯೂಸ್‌ ಪಂದ್ಯಾವಳಿಯ ಪ್ರಾದೇಶಿಕ ಸುತ್ತಿನ ಫೈನಲ್‌'ನಲ್ಲಿ ಸಿದ್ಧಾಂತ್ ಬಂತಿಯಾ ವಿರುದ್ಧ ಸೋಲು ಅನುಭವಿಸಿದ್ದರು. ಆದರೆ ಸಿದ್ಧಾಂತ ಗಾಯಗೊಂಡಿದ್ದರಿಂದ, ಅಭಿಮನ್ಯುಗೆ ಜೂನಿಯರ್‌ ಫ್ರೆಂಚ್‌ ಓಪನ್‌ ಅರ್ಹತಾ ಸುತ್ತಿನಲ್ಲಿ ಆಡುವ ಅವಕಾಶ ದೊರೆಯಿತು. ಈ ಅವಕಾಶವನ್ನು ಬೆಂಗಳೂರಿನ ಹುಡುಗ ಎರಡೂ ಕೈಗಳಿಂದ ಬಾಚಿಕೊಂಡರು. ಈ ಹಿಂದಿನ 2 ಆವೃತ್ತಿಗಳಲ್ಲಿ ಸ್ಪರ್ಧಿಸಿದ್ದ ಭಾರತದ ನಾಲ್ವರು ಆಟಗಾರರು ಪ್ರಧಾನ ಅರ್ಹತಾ ಸುತ್ತಿಗೇರಲು ವಿಫಲರಾಗಿದ್ದರು.

ಅಭಿಮನ್ಯು ಇದೇ ವೇಳೆ ತಾನು ಗೆಲುವಿನ ಓಟವನ್ನು ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಯೂರೋಪ್'ನಲ್ಲಿ ನನ್ನ ಮೊದಲ ಅಟ. ಈ ಗೆಲುವು ಬಹಳ ಮಹತ್ತರವಾದುದು. ಸಾಗಬೇಕಾದ ದಾರಿ ತುಂಬಾ ಇದೆ. ಶಕ್ತಿಮೀರಿ ಆಡಲು ಯತ್ನಿಸುತ್ತೇನೆ ಎಂದು ಬೆಂಗಳೂರು ಬಾಯ್ ಹೇಳಿದ್ದಾರೆ.

ಅಭಿಮನ್ಯುವಿನ ಮಾಜಿ ಕೋಚ್ ಹಾಗೂ ಅಂತಾರಾಷ್ಟ್ರೀಯ ಟೆನಿಸ್ ಆಟಗಾರ ವಿಶಾಲ್ ಉಪ್ಪಾಲ್ ತಮ್ಮ ಶಿಷ್ಯನ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ. ಭಾರತದ ಟೆನಿಸ್ ಜಗತ್ತಿಗೆ ಉತ್ತೇಜನ ಸಿಗುವಂತಹ ಸಾಧನೆಯನ್ನು ಅಭಿಮನ್ಯು ಮಾಡುತ್ತಾನೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಜೂನಿಯರ್ ಫ್ರೆಂಚ್ ಓಪನ್ ಟೂರ್ನಿಯು ಜೂನ್ 4ರಿಂದ 10ರವರೆಗೆ ನಡೆಯಲಿದೆ. ಅಭಿಮನ್ಯು ವನ್ನೆಮ್'ರೆಡ್ಡಿಯವರು ಮೊದಲ ಸುತ್ತಿನಲ್ಲಿ ಯಾರನ್ನ ಎದುರಿಸಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. 1979ರಲ್ಲಿ ರಮೇಶ್ ಕೃಷ್ಣನ್ ಅವರು ಚಾಂಪಿಯನ್ ಆಗಿದ್ದು ಬಿಟ್ಟರೆ ಬೇರಾವ ಭಾರತೀಯನೂ ಜೂನಿಯರ್ ಫ್ರೆಂಚ್ ಓಪನ್ ಗೆದ್ದಿಲ್ಲ. ಅಭಿಮನ್ಯು ಈ ಸಾಧನೆ ಮಾಡುತ್ತಾರೆಂದು ಹಾರೈಸೋಣ.

epaper.kannadaprabha.in