ಒಂದುವೇಳೆ ಕೊಹ್ಲಿ ಕೆಲ ಪಂದ್ಯಗಳಿಂದ ಹೊರಗುಳಿಸಿದರೆ ಎಬಿ ಡಿವಿಲಿಯರ್ಸ್ ಆರ್'ಸಿಬಿ ತಂಡವನ್ನು ಮುನ್ನೆಡೆಸಲಿದ್ದಾರೆ ಎಂದು ಡೇನಿಯಲ್ ವಿಟೋರಿ ಹೇಳಿದ್ದಾರೆ.

ಬೆಂಗಳೂರು(ಮಾ.30): ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ ಎಂದು ಕೋಚ್ ಡೇನಿಯಲ್ ವಿಟೋರಿ ಹೇಳಿದ್ದಾರೆ.

ಐಪಿಎಲ್ 10 ಆವೃತ್ತಿಯಲ್ಲಿ ಆರ್'ಸಿಬಿ ತಂಡದ ಮೊದಲ ಪತ್ರಿಕಾಗೋಷ್ಠಿಯಲ್ಲಿ ವಿಟೋರಿ ಈ ಸುಳಿವನ್ನು ನೀಡಿದ್ದಾರೆ. "ಕೊಹ್ಲಿ ಏಪ್ರಿಲ್ 2ರಂದು ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದ್ದು, ಬಿಸಿಸಿಐ ವೈದ್ಯರು ಹಾಗೂ ಫಿಸಿಯೋ ನಮ್ಮ ವೈದ್ಯಕೀಯ ಸಿಬ್ಬಂಧಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ನಮಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಸದ್ಯಕ್ಕೆ ಕೊಹ್ಲಿ ಯಾವಾಗ ಲಭ್ಯವಾಗುತ್ತಾರೆ ಎನ್ನುವ ಕುರಿತಂತೆ ಸರಿಯಾದ ಮಾಹಿತಿಯಿಲ್ಲ. ಒಂದುವೇಳೆ ಕೊಹ್ಲಿ ಕೆಲ ಪಂದ್ಯಗಳಿಂದ ಹೊರಗುಳಿಸಿದರೆ ಎಬಿ ಡಿವಿಲಿಯರ್ಸ್ ಆರ್'ಸಿಬಿ ತಂಡವನ್ನು ಮುನ್ನೆಡೆಸಲಿದ್ದಾರೆ ಎಂದು ಡೇನಿಯಲ್ ವಿಟೋರಿ ಹೇಳಿದ್ದಾರೆ.

ಆರ್'ಸಿಬಿ ತಂಡವು ಏಪ್ರಿಲ್ 05 ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್'ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಆಸ್ಟ್ರೇಲಿಯಾ ವಿರುದ್ಧದ ರಾಂಚಿ ಟೆಸ್ಟ್ ವೇಳೆ ಭುಜದ ನೋವಿಗೆ ತುತ್ತಾಗಿದ್ದ ವಿರಾಟ್ ಕೊಹ್ಲಿ, ಆನಂತರ ಧರ್ಮಶಾಲಾ ಟೆಸ್ಟ್'ನಿಂದಲೂ ಹೊರಗುಳಿದಿದ್ದರು. ಟೀಂ ಇಂಡಿಯಾ ಸರಣಿ ಗೆಲುವಿನ ಬಳಿಕ ತಮ್ಮ ಗಾಯದ ಬಗ್ಗೆ ಮಾತನಾಡಿದ ಕೊಹ್ಲಿ, ಐಪಿಎಲ್ ಆರಂಭದ ಕೆಲ ಪಂದ್ಯಗಳಲ್ಲಿ ಅಲಭ್ಯರಾಗುವ ಬಗ್ಗೆ ಮುನ್ಸೂಚನೆ ನೀಡಿದ್ದರು.