ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್ ಅತಿವೇಗವಾಗಿ 9 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎನ್ನುವ ಗೌರವಕ್ಕೆ ಪಾತ್ರರಾದರು.

ವೆಲ್ಲಿಂಗ್ಟನ್(ಫೆ.25): ದಕ್ಷಿಣ ಆಫ್ರಿಕಾ ವೇಗಿಗಳ ಶಿಸ್ತುಬದ್ಧ ದಾಳಿಗೆ ಕಂಗೆಟ್ಟ ನ್ಯೂಜಿಲ್ಯಾಂಡ್ 159 ರನ್'ಗಳ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಸರಣಿಯಲ್ಲಿ ಎಬಿ ಡಿವಿಲಿಯರ್ಸ್ ನೇತೃತ್ವದ ಆಫ್ರಿಕಾ ಪಡೆ 2-1 ಅಂತರದ ಮುನ್ನೆಡೆ ಸಾಧಿಸಿದೆ.

ಇಲ್ಲಿನ ವೆಸ್ಟ್'ಪಾಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್ ಹಾಗೂ ಕ್ವಿಂಟಾನ್ ಡಿಕಾಕ್ ಅವರ ಅರ್ಧಶತಕಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 271 ರನ್'ಗಳ ಸವಾಲಿನ ಮೊತ್ತ ಪೇರಿಸಿತು.

ಹರಿಣಗಳು ನೀಡಿದ ಗುರಿ ಬೆನ್ನತ್ತಿದ ಕೇನ್ ವಿಲಿಯಮ್ಸ್ ನೇತೃತ್ವದ ನ್ಯೂಜಿಲ್ಯಾಂಡ್ ಪಡೆ ಬ್ಯಾಟಿಂಗ್'ನಲ್ಲಿ ದಯಾನೀಯ ವೈಫಲ್ಯ ಅನುಭವಿಸುವ ಮೂಲಕ 112 ರನ್'ಗಳಿಗೆ ಸರ್ವಪತನ ಕಂಡಿತು. ಕೇನ್ ವಿಲಿಯಮ್ಸ್, ರಾಸ್ ಟೇಲರ್, ಜೇಮ್ಸ್ ನೀಶಮ್ ಮತ್ತು ಕಾಲಿನ್ ಡಿ ಗ್ರ್ಯಾಂಡ್ ಹೋಂ ಹೊರತುಪಡಿಸಿ ಮತ್ಯಾವ ಆಟಗಾರರು ಎರಡಂಕಿ ಮೊತ್ತ ದಾಖಲಿಸಲಿಲ್ಲ.

ಆಫ್ರಿಕಾ ಪರ 85 ರನ್ ಬಾರಿಸಿದ ನಾಯಕ ಎಬಿ ಡಿವಿಲಿಯರ್ಸ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಎಬಿಡಿ ಹೆಸರಿಗೆ ಮತ್ತೊಂದು ಗರಿಮೆ:

ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್ ಅತಿವೇಗವಾಗಿ 9 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎನ್ನುವ ಗೌರವಕ್ಕೆ ಪಾತ್ರರಾದರು. ಈ ಮೂಲಕ 9 ಸಾವಿರ ರನ್ ಬಾರಿಸಿದ ವಿಶ್ವದ 18ನೇ ಹಾಗೂ ದಕ್ಷಿಣ ಆಫ್ರಿಕಾದ ಎರಡನೇ ಆಟಗಾರ ಎಂಬ ಶ್ರೇಯವೂ ಎಬಿಡಿ ಪಾಲಾಯಿತು.

ಎಬಿಡಿ ಕೇವಲ 205 ಇನಿಂಗ್ಸ್'ನಲ್ಲಿ 9 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ 13 ವರ್ಷಗಳವರೆಗೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಈ ಮೊದಲು ಸೌರವ್ ಗಂಗೂಲಿ 228 ಪಂದ್ಯಗಳಲ್ಲಿ 9 ಸಾವಿರ ರನ್ ಪೂರೈಸಿದ್ದರು.

ಏಕದಿನ ಕ್ರಿಕೆಟ್'ನಲ್ಲಿ ಅತಿವೇಗದ ಶತಕದ ಸಾಧನೆಯೂ ಎಬಿಡಿ ಹೆಸರಿನಲ್ಲಿದೆ. 2015ರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 31 ಎಸೆತದಲ್ಲಿ ಎಬಿಡಿ ಶತಕ ಸಿಡಿಸಿದ್ದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ : 271/8

ಎಬಿ ಡಿವಿಲಿಯರ್ಸ್ :85

ಕ್ವಿಂಟಾನ್ ಡಿಕಾಕ್ : 68

ಕಾಲಿನ್ ಡಿ ಗ್ರಾಂಡ್'ಹೋಮ್ ; 40/2

ನ್ಯೂಜಿಲ್ಯಾಂಡ್ : 112/10

ಕಾಲಿನ್ ಡಿ ಗ್ರಾಂಡ್'ಹೋಮ್ 34

ಕೇನ್ ವಿಲಿಯಮ್ಸ್ : 23

ಡ್ವೇನ್ ಪ್ರಿಟೋರಿಸ್: 5/3