ಮೊದಲ ಟೆಸ್ಟ್‌'ನಲ್ಲಿ ಹೀನಾಯ ಸೋಲು ಅನುಭವಿಸಿದ್ದ ಬಾಂಗ್ಲಾದೇಶ, ತನ್ನ 100ನೇ ಟೆಸ್ಟ್‌'ನಲ್ಲಿ 6 ವಿಕೆಟ್‌'ಗಳ ಜಯ ಸಾಧಿಸಿ ಇತಿಹಾಸ ರಚಿಸಿತ್ತು.
ಕೊಲಂಬೊ(ಮಾ.21): ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್'ನಲ್ಲಿ ಸೋಲು ಅನುಭವಿಸಿದ್ದ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡ ನಿಧನ ಹೊಂದಿದೆ ಎಂದು ವರದಿ ಮಾಡಿರುವ ‘ದಿ ಐಲೆಂಡ್’ ದಿನಪತ್ರಿಕೆ ತನ್ನ ದೇಶದ ಕ್ರಿಕೆಟ್ ತಂಡಕ್ಕೆ ಶ್ರದ್ಧಾಂಜಲಿ ಅರ್ಪಿಸಿದೆ.
‘ಆರ್'ಐಪಿ ಶ್ರೀಲಂಕಾ’ ಎಂಬ ಮುಖ್ಯ ಶೀರ್ಷಿಕೆಯಡಿಯಲ್ಲಿ ಸುದ್ದಿ ಪ್ರಕಟಿಸಿರುವ ಪತ್ರಿಕೆ ‘19 ಮಾರ್ಚ್, 2017ರಂದು ನಿಧನ ಹೊಂದಿದ ಶ್ರೀಲಂಕಾ ಕ್ರಿಕೆಟ್'ನ ಅಕ್ಕರೆಯ ನೆನಪಿನಲ್ಲಿ. ದೇಹ ದಹನದ ಬಳಿಕ ಬೂದಿಯನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯಲಾಗುತ್ತದೆ’ ಎಂದು ಬರೆದಿದೆ. ಮೊದಲ ಟೆಸ್ಟ್'ನಲ್ಲಿ ಹೀನಾಯ ಸೋಲು ಅನುಭವಿಸಿದ್ದ ಬಾಂಗ್ಲಾದೇಶ, ತನ್ನ 100ನೇ ಟೆಸ್ಟ್'ನಲ್ಲಿ 6 ವಿಕೆಟ್'ಗಳ ಜಯ ಸಾಧಿಸಿ ಇತಿಹಾಸ ರಚಿಸಿತ್ತು. ಈ ಸೋಲು ಆತಿಥೇಯ ಶ್ರೀಲಂಕಾಗೆ ಭಾರೀ ಮುಖಭಂಗ ಉಂಟು ಮಾಡಿತ್ತು.

1882ರಲ್ಲಿ ಇಂಗ್ಲೆಂಡ್'ನ ‘ದಿ ಸ್ಪೋರ್ಟಿಂಗ್ ಟೈಮ್ಸ್’ ದಿನ ಪತ್ರಿಕೆ ಇಂಗ್ಲೀಷ್ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ತನ್ನ ನೆಲದಲ್ಲೇ ಸೋಲು ಅನುಭವಿಸಿದ್ದನ್ನು ಟೀಕಿಸಿ, ‘29 ಆಗಸ್ಟ್ 1882ರಂದು ದಿ ಓವಲ್ ಮೈದಾನದಲ್ಲಿ ಇಂಗ್ಲಿಷ್ ಕ್ರಿಕೆಟ್ ಸತ್ತು ಹೋಯಿತು. ದೇಹದಹನದ ಬಳಿಕ ಬೂದಿಯನ್ನು ಆಸ್ಟ್ರೇಲಿಯಾಗೆ ಕೊಂಡೊಯ್ಯಲಾಗುತ್ತದೆ’ ಎಂದು ಸುದ್ದಿ ಪ್ರಕಟಿಸಿತ್ತು. ಇದೇ ಘಟನೆ ಆಷ್ಯಸ್ ಸರಣಿ ಆರಂಭಕ್ಕೆ ದಾರಿ ಮಾಡಿಕೊಟ್ಟಿತ್ತು.
