Asianet Suvarna News Asianet Suvarna News

ಗೋಕರ್ಣದಲ್ಲಿ ಲಿಂಗ ದೀಕ್ಷೆ ಪಡೆದ ರಷ್ಯನ್ನರು

ರಷ್ಯಾ ದೇಶದಿಂದ ಆಗಮಿಸಿದ ಶಿವ ಭಕ್ತರು ಅಪ್ಪಟ ಹಿಂದು ಧರ್ಮದ ಧಾರ್ಮಿಕ ಕಾರ್ಯಕ್ರಮದ ಉಡುಗೆ ತೊಡುಗೆ ತೊಟ್ಟು ಓಂ ನಮಃ ಶಿವಾಯ ಎಂದು ಮಂತ್ರ ಪಠಿಸುತ್ತ, ಕೈಯಲ್ಲಿ ಲಿಂಗ ಹಿಡಿದು ಲಿಂಗ ದೀಕ್ಷೆ ಪಡೆದರು.

50 Russian Nationals get Linga Deekshe at Gokarna
Author
Dakshina Kannada, First Published Mar 26, 2019, 8:55 PM IST

ಬೆಂಗಳೂರು[ಮಾ.26] ವಿದೇಶಿ ಸಂಸ್ಕೃತಿಗೆ ನಾವು ಮಾರುಹೋಗುತ್ತಿದ್ದೇವೆ. ಆದರೆ ವಿದೇಶಿಗರು ನಮ್ಮ ಸಂಸ್ಕೃತಿ, ಧರ್ಮದತ್ತ ಒಲವು ತೋರುತ್ತಿದ್ದಾರೆ. ಗೋಕರ್ಣದಲ್ಲಿ ಸುಮಾರು 50ರಷ್ಟು ರಷ್ಯನ್ನರು ಲಿಂಗ ದೀಕ್ಷೆ ಪಡೆದರು. ಕಾಶಿ ಜಂಗಮ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದೀಕ್ಷೆ ನೀಡಿದರು.

ರಷ್ಯಾ ದೇಶದಿಂದ ಆಗಮಿಸಿದ ಶಿವ ಭಕ್ತರು ಅಪ್ಪಟ ಹಿಂದು ಧರ್ಮದ ಧಾರ್ಮಿಕ ಕಾರ್ಯಕ್ರಮದ ಉಡುಗೆ ತೊಡುಗೆ ತೊಟ್ಟು ಓಂ ನಮಃ ಶಿವಾಯ ಎಂದು ಮಂತ್ರ ಪಠಿಸುತ್ತ, ಕೈಯಲ್ಲಿ ಲಿಂಗ ಹಿಡಿದು ಲಿಂಗ ದೀಕ್ಷೆ ಪಡೆದರು. ಇದಕ್ಕೂ ಮುನ್ನ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿದ ಇವರನ್ನು ದೇವಾಲಯದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಹಾರ ಹಾಕಿ ಸ್ವಾಗತಿಸಿದರು. ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ತರುವಾಯ ದೇವಾಲಯದ ಹೊರಗಡೆ ದೀಕ್ಷೆ ನೀಡಲಾಯಿತು.

ಕಾಶಿ ಮಠದ ಶ್ರೀಗಳು ಕಳೆದ 17 ವರ್ಷಗಳಿಂದ ತಮ್ಮ ಬಳಿ ಬಂದ ವಿದೇಶಿಗರಿಗೆ ನಮ್ಮ ಆಚಾರ, ವಿಚಾರಗಳನ್ನು ತಿಳಿಸುತ್ತಿದ್ದಾರೆ. ಜತೆಗೆ ಅವರಿಗೆ ಲಿಂಗ ದೀಕ್ಷೆ ನೀಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಶ್ರೀಗಳು ಗೋವಾದಲ್ಲಿ ಲಿಂಗ ದೀಕ್ಷೆ ನೆರವೇರಿಸಿದ್ದರು. ಕಳೆದ ಎರಡು ವರ್ಷಗಳಿಂದ ಗೋಕರ್ಣದಲ್ಲಿ ಲಿಂಗ ದೀಕ್ಷೆ ನೀಡುತ್ತಿದ್ದಾರೆ. ಶ್ರೀಗಳು ಆಂಗ್ಲ ಭಾಷೆಯಲ್ಲಿ ರಚಿಸಿದ ಚಂದ್ರಜ್ಞಾನ ಆಗಮ ಗ್ರಂಥವನ್ನು ರಷ್ಯಾದ ಯೋಗ ಉಪನ್ಯಾಸಕರಾದ ಡ್ಯಾನಿಶ್ ಓದಿದರು. ಇದರಿಂದ ಪ್ರೇರೇಪಿತರಾದ ಡ್ಯಾನಿಶ್ ಶಿವಯೋಗದ ಬಗ್ಗೆ ತಿಳಿಯುವ ಹಂಬಲದಿಂದ 2002ರಲ್ಲಿ ಕಾಶಿ ಜಂಗಮ ಮಠಕ್ಕೆ ಬಂದು ಶ್ರೀಗಳ ಜೊತೆ ಮಾತನಾಡಿ ಲಿಂಗ ಪೂಜೆ, ದೀಕ್ಷೆ ಪಡೆಯವ ಇಂಗಿತ ವ್ಯಕ್ತಪಡಿಸಿದರು.

ಅದರಂತೆ ದೀಕ್ಷೆ ಪಡೆದು ಹೆಸರನ್ನು ಸಹ ದಿನೇಶ ಎಂದು ಬದಲಿಸಿಕೊಂಡಿದ್ದು, ಜೊತೆಯಲ್ಲಿ ಪತ್ನಿ ತಾಯಿ ಸಹ ಇವರ ಮಾರ್ಗದಲ್ಲಿ ನಡೆದಿದ್ದಾರೆ. ಇವರ ಕೋರಿಕೆ ಮೇರೆಗೆ ಶ್ರೀಗಳು 2010ರಲ್ಲಿ ರಷ್ಯಾಕ್ಕೆ ಭೇಟಿ ನೀಡಿ ಶಿವಯೋಗ, ಶಿವ ಸಿದ್ಧಾಂತ ಕುರಿತು ಉಪನ್ಯಾಸ ನೀಡಿದ್ದಾರೆ. ಈಗಲೂ ಅಲ್ಲಿ ಸಾಮೂಹಿಕ ಲಿಂಗ ಪೂಜೆ, ಶಿವಯೋಗ ಕುರಿತು ಕಾರ್ಯಕ್ರಮಗಳು ನಡೆಯುತ್ತಿವೆ. 17 ವರ್ಷಗಳಿಂದ ನಿರಂತರವಾಗಿ ಈ ಲಿಂಗ ದೀಕ್ಷೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ.

ಕಾಶಿ, ಪಾಟ್ನಾ ಸೇರಿದಂತೆ ವಿವಿಧ ಕಡೆಗಳಲ್ಲಿ 3000ಕ್ಕೂ ಹೆಚ್ಚು ವಿದೇಶಿಗರು ಕಾಶಿ ಶ್ರೀಗಳಿಂದ ಲಿಂಗ ದೀಕ್ಷೆ ಪಡೆದಿದ್ದಾರೆ. ದೀಕ್ಷಾ ವಿಧಿಯನ್ನು ದಿನೇಶ (ಡ್ಯಾನಿಶ್) ಭಾಷಾಂತರಿಸುತ್ತಾರೆ. ದೀಕ್ಷೆ ಪಡೆದ ರಷ್ಯನ್ನರಿಗೆ ದೇವಾಲಯದಿಂದ ಪೂಜಾ ಕೈಂಕರ್ಯದ ವ್ಯವಸ್ಥೆ ಮಾಡಲಾಗಿತ್ತು. ಅವರ ಶಿಷ್ಯ ವರ್ಗದವರಿಗೂ ಅಮೃತಾನ್ನ ಪ್ರಸಾದ ಭೋಜನ ವಿಭಾಗದಲ್ಲಿ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. 

Follow Us:
Download App:
  • android
  • ios