ಕ್ರಿಕೆಟ್ ವಿಶ್ವಕಪ್ ಟೂರ್ನಿ ಆಡಬೇಕು, ಪ್ರಶಸ್ತಿ ಗೆಲ್ಲಬೇಕು ಅನ್ನೋದು ಪ್ರತಿಯೊಬ್ಬ ಕ್ರಿಕೆಟಿಗರ ಕನಸು. ಹೀಗೆ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದಿರುವ ಹಲವು ದಿಗ್ಗಜ ಕ್ರಿಕೆಟಿಗರು ಇದೀಗ 2019ರ ವಿಶ್ವಕಪ್ ಬಳಿಕ ವಿದಾಯ ಹೇಳಲು ಸಜ್ಜಾಗಿದ್ದಾರೆ. ಆ ಕ್ರಿಕೆಟಿಗರು ಯಾರು?

ಬೆಂಗಳೂರು(ಜೂ.17): 2019ರ ವಿಶ್ವಕಪ್ ಟೂರ್ನಿ ಬಳಿಕ ಕೆಲ ದಿಜ್ಜಗ ಕ್ರಿಕೆಟಿಗರು ಕ್ರಿಕೆಟ್ ಬದುಕಿಗೆ ವಿದಾಯ ಹೇಳೋ ಸಾಧ್ಯತೆಗಳು ದಟ್ಟವಾಗಿದೆ. ಹೀಗೆ ವಿದಾಯ ಹೇಳಲು ಸಜ್ಜಾಗಿರುವ ಲೆಜೆಂಡ್ ಕ್ರಿಕೆಟಿಗರ ವಿವರ ಇಲ್ಲಿದೆ.

ಎಮ್ ಎಸ್ ಧೋನಿ:


ಟೀಮ್ಇಂಡಿಯಾ ಮಾಜಿ ನಾಯಕ ಎಮ್ ಎಸ್ ಧೋನಿ 2019ರ ವಿಶ್ವಕಪ್ ಆಡಲು ಸಜ್ಜಾಗುತ್ತಿದ್ದಾರೆ. 2011ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ನಾಯಕ ಎಮ್ ಎಸ್ ಧೋನಿ, 2019ರ ವಿಶ್ವಕಪ್ ಟೂರ್ನಿಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. 36 ವರ್ಷದ ಧೋನಿ ಈ ವಿಶ್ವಕಪ್ ಟೂರ್ನಿ ಬಳಿಕ ವಿದಾಯ ಹೇಳೋ ಸಾಧ್ಯತೆಗಳಿವೆ. ಆದರೆ ತಾನು ಫಿಟ್ ಆಗಿದ್ದರೆ, 2019ರ ವಿಶ್ವಕಪ್ ಬಳಿಕವೂ ಆಡೋದಾಗಿ ಧೋನಿ ಹೇಳಿದ್ದಾರೆ.

ಕ್ರಿಸ್ ಗೇಲ್:


ವೆಸ್ಟ್ಇಂಡೀಸ್ ಕ್ರಿಕೆಟ್ ಮಂಡಳಿ ಜೊತೆಗಿನ ಜಟಾಪಟಿಯಿಂದ ಕ್ರಿಸ್ ಗೇಲ್ ಏಕದಿನ ತಂಡದಲ್ಲಿ ಖಾಯಂ ಸ್ಥಾನ ಪಡೆದಿಲ್ಲ. ಇದೀಗ 2019ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಿಗೆ ಕಮ್‌ಬ್ಯಾಕ್ ಮಾಡಿರುವ ಗೇಲ್, ಈ ಬಾರಿಯ ವಿಶ್ವಕಪ್ ಟೂರ್ನಿ ಬಳಿಕ ವಿದಾಯ ಹೇಳೋ ಸಾಧ್ಯತೆ ಹೆಚ್ಚಿದೆ. ವಿಶ್ವದ ಟಿ-ಟ್ವೆಂಟಿ ಲೀಗ್ ಟೂರ್ನಿಗಳಲ್ಲಿ ಗೇಲ್ ಹೆಚ್ಚು ತೊಡಗಿಸಿಕೊಂಡಿದ್ದಾರೆ. 

ಶೋಯಿಬ್ ಮಲ್ಲಿಕ್:


ಪಾಕಿಸ್ತಾ ತಂಡದ ಹಿರಿಯ ಆಲ್‌ರೌಂಡರ್ ಶೋಯಿಬ್ ಮಲ್ಲಿಕ್, ಮುಂದಿನ ವರ್ಷ 37ನೇ ವಸಂತಕ್ಕೆ ಕಾಲಿಡಲಿದ್ದಾರೆ. ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆಯಿಂದ ಪಾಕ್ ತಂಡದಲ್ಲಿ ಖಾಯ ಸ್ಥಾನ ಪಡೆದಿಲ್ಲ. ಹೀಗಾಗಿ 2019ರ ವಿಶ್ವಕಪ್ ಟೂರ್ನಿ ಬಳಿಕ ಶೋಯಿಬ್ ಮಲ್ಲಿಕ್, ಯುವ ಆಟಗಾರರಿಗೆ ಸ್ಥಾನ ಕಲ್ಪಿಸಿಕೊಡಲಿದ್ದಾರೆ.

ರಾಸ್ ಟೇಲರ್:


ನ್ಯೂಜಿಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಏಕದಿನ ಕ್ರಿಕೆಟ್‌ನಲ್ಲಿ ಏಕಾಂಗಿಯಾಗಿ ಪಂದ್ಯವನ್ನ ಗೆಲ್ಲಿಸಿಕೊಡಬಲ್ಲ ಆಟಗಾರ. ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಕಿವೀಸ್ ಟ್ರೋಫಿ ಮಿಸ್ ಮಾಡಿಕೊಂಡಿತು. 35 ವರ್ಷದ ರಾಸ್ ಟೇಲರ್, ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡೋ ವಿಶ್ವಾಸದಲ್ಲಿದ್ದಾರೆ. ಬಳಿಕ ಟೇಲರ್ ಕ್ರಿಕೆಟ್‌ಗೆ ವಿದಾಯ ಹೇಳೋ ಸಾಧ್ಯತೆ ಇದೆ.

ಲಸಿತ್ ಮಲಿಂಗ:


ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಮಾರಕ ಬೌಲರ್ ಆಗಿ ಗುರುತಿಸಿಕೊಂಡಿರುವ ಶ್ರೀಲಂಕಾ ವೇಗಿ ಲಸಿತ್ ಮಲಿಂಗಾ ಸದ್ಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಮಲಿಂಗ, 2019ರ ವಿಶ್ವಕಪ್ ಆಡೋ ಇಂಗಿತ ವ್ಯಕ್ತಪಡಿಸಿದ್ದಾರೆ. 34 ವರ್ಷದ ವೇಗಿ 2019ರ ವಿಶ್ವಕಪ್ ಬಳಿಕ ವಿದಾಯ ಹೇಳೋ ಸಾಧ್ಯತೆ ದಟ್ಟವಾಗಿದೆ.