2019ರ ವಿಶ್ವಕಪ್ ತಂಡಕ್ಕೆ ಟೀಂ ಇಂಡಿಯಾ ಆಯ್ಕೆ ಸಮಿತಿ ಸಂಭಾವ್ಯ ತಂಡದದ ಕಸರತ್ತು ನಡೆಸುತ್ತಿದೆ. ಸದ್ಯದ ಫಾರ್ಮ್ ಹಾಗೂ ಫಿಟ್ನೆಸ್ ಗಮನದಲ್ಲಿಟ್ಟು ತಂಡವನ್ನ ಆಯ್ಕೆ ಮಾಡಿದರೆ ಭಾರತದ ಸ್ಟಾರ್ ಐವರು ಕ್ರಿಕೆಟಿಗರಿಗೆ ಸ್ಥಾನ ಸಿಗೋದು ಅನುಮಾನ. ಹಾಗಾದರೆ ಆ ಐವರು ಕ್ರಿಕೆಟಿಗರು ಯಾರು.

ಬೆಂಗಳೂರು(ಜೂನ್.9): 2019ರ ವಿಶ್ವಕಪ್ ಟೂರ್ನಿ ಗೆಲ್ಲೋ ನೆಚ್ಚಿನ ತಂಡಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಸದ್ಯ ಏಕದಿನದಲ್ಲಿ 2ನೇ ಸ್ಥಾನದಲ್ಲಿರುವ ಭಾರತ, ವಿಶ್ವಕಪ್‌ಗಾಗಿ ತಯಾರಿ ನಡೆಸುತ್ತಿದೆ. 

ವಿಶ್ವಕಪ್ ಸಂಭಾವ್ಯ ತಂಡಕ್ಕಾಗಿ ಟೀಂ ಇಂಡಿಯಾ ಆಯ್ಕೆ ಸಮಿತಿ ಕಸರತ್ತು ಆರಂಭಿಸಿದೆ. ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆಯಿಂದ ಕೆಲ ಕ್ರಿಕೆಟಿಗರು 2019ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯೋದು ಅನುಮಾನವಾಗಿದೆ. ಇಂತಹ ಸ್ಟಾರ್ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ.

ಆರ್ ಅಶ್ವಿನ್:


ನಿಗಧಿತ ಓವರ್ ಕ್ರಿಕೆಟ್‌ನ ಸ್ಪೆಷಲಿಸ್ಟ್ ಆಗಿದ್ದ ರವಿಚಂದ್ರನ್ ಅಶ್ವಿನ್ ಇದೀಗ ಟೆಸ್ಟ್ ತಂಡಕ್ಕೆ ಸೀಮಿತವಾಗಿದ್ದಾರೆ. 2015ರ ವಿಶ್ವಕಪ್ ಬಳಿಕ ಆರ್ ಅಶ್ವಿನ್ ಏಕದಿನ ಫಾರ್ಮ್ಯಾಟ್‌ನಲ್ಲಿ ಉತ್ತಮ ಪರ್ದರ್ಶನ ನೀಡಿಲ್ಲ. ಅದರಲ್ಲೂ ಮಿಡ್ಲ್ ಓವರ್‌ಗಳಲ್ಲಿ ಅಶ್ವಿನ್ ದುಬಾರಿಯಾಗಿದ್ದಾರೆ. ಹೀಗಾಗಿಯೇ ಅಶ್ವಿನ್ ಸಂಪೂರ್ಣವಾಗಿ ಏಕದಿನ ಹಾಗೂ ಟಿ-ಟ್ವೆಂಟಿ ತಂಡದಿಂದ ಹೊರಗುಳಿದಿದ್ದಾರೆ. 

ವಿಶ್ವಕಪ್ ತಂಡಕ್ಕೆ ಮೂವರು ಸ್ಪಿನ್ನರ್‌ಗಳಿಗೆ ಅವಕಾಶವಿದೆ. ಯಜುವೇಂದ್ರ ಚೆಹಾಲ್ ಹಾಗೂ ಕುಲದೀಪ್ ಬಹುತೇಕ ಅಂತಿಮವಾಗಿದ್ದಾರೆ. ಇನ್ನುಳಿದ ಒಂದು ಸ್ಥಾನಕ್ಕೆ ರವೀಂದ್ರ ಜಡೇಜಾ ಹಾಗು ವಾಶಿಂಗ್ಟನ್ ಸುಂದರ್ ಕೂಡ ರೇಸ್‌ನಲ್ಲಿದ್ದಾರೆ. ಹೀಗಾಗಿ ಅಶ್ವಿನ್ ಸ್ಥಾನ ಪಡೆಯೋದು ಅನುಮಾನ

ಮನೀಶ್ ಪಾಂಡೆ:


ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 11ಕೋಟಿ ಮೊತ್ತಕ್ಕೆ ಹರಾಜಾದ ಕನ್ನಡಿಗ ಮನೀಶ್ ಪಾಂಡೆ, 15 ಪಂದ್ಯಗಳಲ್ಲಿ 284 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಪಾಂಡೆ ಸಿಡಿಯಲಿಲ್ಲ. ಸದ್ಯ ಏಕದಿನ ತಂಡದಿಂದ ಮನೀಶ್ ಪಾಂಡೆ ಹೊರಗುಳಿದಿದ್ದಾರೆ. ಇನ್ನು ಟಿ-ಟ್ವೆಂಟಿ ತಂಡದಲ್ಲಿ ಅಬ್ಬರಿಸಿ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡೋದು ಕಷ್ಟ. ಜೊತೆಗೆ ಇನ್ನಿರೋ ಅಲ್ಪ ಅವಧಿಯಲ್ಲಿ ಪಾಂಡೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡಬೇಕಿದೆ.

ಅಜಿಂಕ್ಯ ರಹಾನೆ:


ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಗೆ ತಂಡದ ಆಯ್ಕೆಯಾದಾಗ ಕೆಲ ಅಚ್ಚರಿಗಳು ಕಾದಿತ್ತು. ಟೀಮ್ಇಂಡಿಯಾ ಕ್ಲಾಸ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆಗೆ ಸ್ಥಾನ ನೀಡಿರಲಿಲ್ಲ. ಟೆಸ್ಟ್‌ನಲ್ಲಿ ಖಾಯಂ ಸ್ಥಾನ ಪಡೆದಿರುವ ರಹಾನೆ, ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ವಿಶ್ವಕಪ್ ಸಂಭಾವ್ಯ ತಂಡದಲ್ಲಿ, ಕೆಎಲ್ ರಾಹುಲ್, ಅಂಬಾಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್ ಇರೋದರಿಂದ ರಹಾನೆಗೆ ಸ್ಥಾನ ಸಿಗೋದು ಅನುಮಾನ.

ಯುವರಾಜ್ ಸಿಂಗ್:


ಕಳೆದ 5-6 ವರ್ಷಗಳಿಂದ ಹಲವು ಬಾರಿ ಟೀಮ್ಇಂಡಿಯಾಗೆ ಕಮ್‌ಬ್ಯಾಕ್ ಮಾಡಿರುವ ಯುವರಾಜ್ ಸಿಂಗ್, ಖಾಯಂ ಸ್ಥಾನ ಸಂಪಾದಿಸಲು ವಿಫಲರಾಗಿದ್ದಾರೆ. 2011ರ ವಿಶ್ವಕಪ್ ಟೂರ್ನಿ ಗೆಲ್ಲಿಸಿಕೊಟ್ಟಿದ ಯುವರಾಜ್ ಸಿಂಗ್, ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯೋದು ಅನುಮಾನ. ಸದ್ಯ ಟೀಮ್ಇಂಡಿಯಾದಿಂದ ದೂರ ಉಳಿದಿರುವ ಯುವಿ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ. ಫಾರ್ಮ್ ಜೊತೆಗೆ ಫಿಟ್ನೆಸ್‌ನಲ್ಲೂ ಹಿನ್ನಡೆ ಅನುಭವಿಸಿರುವ ಯುವಿ, 2019ರ ವಿಶ್ವಕಪ್ ಆಡೋದು ಡೌಟ್.

ಮೊಹಮ್ಮದ್ ಶಮಿ:


ಪ್ರಸಕ್ತ ವರ್ಷದ ಆರಂಭದಲ್ಲಿ ಸೌತ್ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 15 ವಿಕೆಟ್ ಕಬಳಸಿದ ವೇಗಿ ಮೊಹಮ್ಮದ್ ಶಮಿ, ಸದ್ಯ ವೈಯುಕ್ತಿಕ ಕಾರಣಗಳಿಂದ ಬ್ಯಾಲೆನ್ಸ್ ತಪ್ಪಿದ್ದಾರೆ. ಬಿಸಿಸಿಐ ಒಪ್ಪಂದಿಂದಲೂ ಹಿನ್ನಡೆ ಅನುಭವಿಸಿರುವ ಶಮಿ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮಾರಕ ದಾಳಿ ನಡೆಸಲು ವಿಫಲರಾಗಿದ್ದಾರೆ. ಐಪಿಎಲ್‌ನ 4 ಪಂದ್ಯಗಳಲ್ಲಿ 3 ವಿಕೆಟ್ ಕಬಳಿಸಿರುವ ಶಮಿ, ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡೋದು ಕಷ್ಟ.