ಗಂಡನ ಮೇಲೆ ಸದಾ ಅನುಮಾನ ಪಡುವ ಪ್ರೇಮಾಳಿಗೆ ಆತನ ಮೊದಲ ಪ್ರೀತಿಯ ಬಗ್ಗೆ ತಿಳಿಯುವ ಕುತೂಹಲ. ಗಂಡನ ಹಳೆಯ ಪ್ರೇಮಕಥೆ ಕೇಳಿ ಅಸೂಯೆಗೊಂಡ ಆಕೆಗೆ ಕೊನೆಯಲ್ಲಿ ಸಿಕ್ಕ ಉತ್ತರ ಅಚ್ಚರಿ ಮೂಡಿಸುತ್ತದೆ.
ಡಾ.ಬಿ.ಎಲ್ ವೇಣು
ಇವಳು ವಿಪರೀತ ಅನುಮಾನದಾಕೆ. ಎಂದಾದರೊಂದು ದಿನ ತಡವಾಗಿ ಮನೆಗೆ ಬಂದರೆ ಮುನಿಸಿಕೊಳ್ಳುತ್ತಾಳೆ. ಹಸಿವಾಗಿಲ್ಲವೆಂದರೆ, ಎಲ್ಲಿ ಊಟ ಮಾಡಿ ಬಂದಿರಿ ಅಂತ ಚಿಕಿತ್ಸಕ ನೋಟ ಬೀರುತ್ತಾಳೆ. ಫ್ರೆಂಡ್ ಬಲವಂತ ಮಾಡ್ದ ಕಣೆ ಅಂದ್ರೆ ಬಾಯ್ ಫ್ರೆಂಡಾ? ಗರ್ಲ್ ಫ್ರೆಂಡಾ ಅಂತ ಗರಮ್ ಆಗಿ ಗಲಿಬಿಲಿಗೊಳ್ಳುತ್ತಾಳೆ. ಬರ್ತ್ಡೇ ದಿನ ಯಾರಾದರೂ ‘ಎಸ್ಎಂಎಸ್’ ಕಳುಹಿಸಬಹುದೆ ಅಂತ ‘ಚೆಕ್’ ಮಾಡುತ್ತಾಳಷ್ಟೇ ಅಲ್ಲ ಬೇರೆ ದಿನಗಳಲ್ಲೂ ನನಗೆ ಬರುವ ಎಲ್ಲಾ ಎಸ್ಎಂಎಸ್, ಇ-ಮೇಲ್ಗಳ ಮೇಲೂ ನಿಗಾ ಇಟ್ಟಿರುತ್ತಾಳೆ. “ಈ ರಮಾ ಯಾರ್ರೀ?” ಅಂತ ಗುರಾಯಿಸುತ್ತಾಳೆ.
“ರಮಾ ಅಲ್ವೆ..... ರಾಮ’ ಅಂದ್ರೆ, ಈ ಹಾಳು ಇಂಗ್ಲೀಷ್ ಯಾವನನ್ಮಗ ಕಂಡುಹಿಡಿದ್ನೋ? ಅಂತ ಕೊತ ಕೊತ ಕುದಿಯುತ್ತಾಳೆ. ‘ಅದು ಬಿಡಿ...... ಈ ವಸಂತ? ಮೊಬೈಲ್ ಎತ್ತಿ ಮೋರೆಗೇ ಹಿಡಿಯುತ್ತಾಳೆ. “ಅಯ್ಯೋ ವಸಂತಕುಮಾರ್ ಕಣೆ ಶಾರ್ಟ್ ಆಗಿ ವಸಂತ ಅಂತ ಫೀಡ್ ಮಾಡಿದ್ದೀನಿ ಎಂದು ಕನ್ವಿನ್ಸ್ ಮಾಡೋದ್ರಲ್ಲಿ ಸೋತು ಸುಣ್ಣವಾಗುತ್ತೇನೆ. ‘ಏನ್ರಿ ಇದು!? ಈ ಅಪ್ಪ ಅಮ್ಮಂದಿರಿಗೆ ಮಕ್ಕಳಿಗೆ ಸರಿಯಾಗಿ ಹೆಸರಿಡೋಕು ಬರೋಲ್ವಲ್ಲಾರೀ! ಅವು ಗಂಡೋ ಹೆಣ್ಣೋ ತಿಳಿಯೋದು ಬ್ಯಾಡ್ವೆ? ಎಂದು ಕಸಿವಿಸಿಪಡುತ್ತಾಳೆ. ಒಮ್ಮೆ ಇವಳು ಬಜಾರ್ನಿಂದ ಬರೋವಾಗ ನನ್ನ ಬೈಕ್ ಹಿಂದೆ ಶೀಲಾ ಕೂತಿದ್ದನ್ನು ನನ್ನ ಗ್ರಹಚಾರಕ್ಕೆ ನೋಡಿಬಿಡುತ್ತಾಳೆ. ಮನೆಗೆ ಬಂದೊಡನೆ ಎನ್ಕ್ವೈರಿ ಶುರು. ‘ನೋಡು ಪ್ರೇಮಾ, ನಾನಂತೂ ನೇರ ದಿಟ್ಟ ನಿರಂತರ. ಸುಳ್ಳು ಪೊಳ್ಳು ಹೇಳೋನಲ್ಲ...... ಅದೂ ನಿಂಗೂ ಗೊತ್ತು. ಆಕೆಯ ಲಾಸ್ಟ್ ಸಿಟಿ ಬಸ್ ಮಿಸ್ ಆಯ್ತು....... ಪಾಪ.... ಅದಕ್ಕೆ’ ನನ್ನ ಸಮಜಾಯಿಷಿ. ‘ಮಿಸ್ ಆದ್ರೇನ್, ಆಟೋದಲ್ಲಿ ಹೋಗ್ತಿದ್ಳು...... ನಿಮ್ಮದೇನ್ರಿ ಮೆಹರ್ಬಾನಿ’ ಹರಿಹಾಯ್ದಳು.
“ಹಾಗಲ್ವೆ ಅವಳ ಪರ್ಸಲ್ಲಿ ದುಡ್ಡಿರಬೇಕಲ್ವೆ, ಅದೂ ರಾತ್ರಿ ಹೊತ್ತು. ಜಯನಗರಕ್ಕೆ ಆಟೋದವರು ಬಾಯಿಗೆ ಬಂದಂಗೆ ಕೇಳ್ತಾರಲ್ವೆ.... ಮೀಟರ್ರೂ ಹಾಕೋದಿಲ್ಲ’ ನಾನೂ ಬೇಕೆಂದೇ ಸಿಡುಕಿದೆ. ‘ನಿಮ್ಮ ಹತ್ತಿರ ದುಡ್ಡಿರಲಿಲ್ವೇನ್ರೀ..... ಕೊಟ್ಟು ಆಟೋದಲ್ಲಿ ಕಳಿಸಬೇಕಿತ್ತು. ನೋಡಿದವರು ಏನಂದ್ಕೊತಾರೆ?’ ದುರುಗುಟ್ಟಿದಳು. ‘ರಾತ್ರಿ ಕಣೆ..... ಮ್ಯಾರೀಡ್ ಹೆಂಗಸು..... ಅದೂ ಆಟೋದಲ್ಲಿ....’ ರಾಗ ಎಳೆಯುವಾಗಲೇ ಪ್ರೇಮ ಒಮ್ಮೆಲೆ ಗುಡುಗಿದಳು. ‘ಆ ಕಾಳಜಿ ಅವರ ಮನೆಯವನಿಗೆ ಇರ್ಬೇಕೂರೀ’ ‘ಅಲ್ವೆ ಅಷ್ಟಕ್ಕೂ ಶೀಲಾ ಏನ್ ಹುಡ್ಗಿನಾ? ಎರಡು ಮಕ್ಕಳು ತಾಯಿನಪ್ಪಾ. ಅಂಥವಳ ಮೇಲೆ ಅನುಮಾನವೇನೇ?’ ಪೇಚಿಗೆ ಬಿದ್ದೆ. ‘ಹುಡುಗಿಯರಿಗಿಂತ ಆಂಟಿಯರೇ ಡೇಂಜರ್ ಕಣ್ರೀ. ಅದಕ್ಕೇನೆ ಆಟೋಗಳ ಮೇಲೆಲ್ಲಾ ಅಂಕಲ್ ಅಂಕಲ್ ಆಫೀಸ್ಗೆ ಆಂಟಿ ಪಿಕ್ಚರ್ಗೆ ಅಂತೆಲ್ಲಾ ಬರೆದಿರೋದು. ಕೊಕ್ಕೊಕ್ಕನೆ ನಕ್ಕಳು. ‘ನೋಡು ಕಂಡವರ ಮನೆ ಹೆಣ್ಣುಮಕ್ಕಳ ಮೇಲೆ ಹೀಗೆಲ್ಲಾ ಕೀಳಾಗಿ ಮಾತ್ನಾಡಬಾರ್ದು ಕಣೆ...... ಪಾಪ’ ಲೋಚಗುಟ್ಟಿದೆ.
‘ನಾನೆಲ್ಲಿ ಮಾತಾಡ್ದೆ? ಆಟೋ ಮೇಲಿರೋದನ್ನ ಹೇಳ್ದೆ. ನೀವು ಯಾಕೆ ಅವಳ ಪರವಹಿಸಿಕೊಂಡು ಬರ್ತಿದೀರಾ? ಜಗಳಕ್ಕೆ ನಿಂತಳು. ಇವಳನ್ನು ನಂಬಿಸೋದು ಸುಲಭ ಸಾಧ್ಯವಲ್ಲವೆನ್ನಿಸಿ ಮೌನಕ್ಕೆ ಶರಣಾದೆನಾದರೂ ಗೊಣಗುತ್ತಲೇ ಇದ್ದಳು. ಮಹಾ ಕಿರಕ್ ಪಾರ್ಟಿ ಈ ಹೆಂಗಸು ಕಣ್ರಿ. ಮನೆಗೆ ಬಂದು ಬಟ್ಟೆ ಬಿಚ್ಚಿ ನೇತು ಹಾಕಿದರೆ ಶರಟು ಪ್ಯಾಂಟು ಎಲ್ಲವನ್ನೂ ಸೂಕ್ಷ್ಮವಾಗಿ ಪರೀಕ್ಷಿಸುತ್ತಾಳೆ. ಹೂವೋ, ಹೂದಾರದ ಸಣ್ಣ ತುಂಡೋ ಸಿಕ್ಕರೆ ಸಾಕು ಮುಖದ ಮುಂದೆ ಹಿಡಿದು ನೇತಾಡಿಸುತ್ತಾಳೆ. ‘ಅಯ್ಯೋ ನಿನ್ನ ಈವತ್ತು ಬರೋವಾಗ ದೇವಸ್ಥಾನಕ್ಕೆ ಹೋಗಿದ್ದೆ ಕಣೆ. ಪೂಜಾರಿ ಪ್ರಸಾದ ಕೊಟ್ನೆ ಕಣ್ಣಿಗೊತ್ತಿಕೊಂಡು ಜೇಬಲ್ಲಿ ಇಟ್ಕೊಂಡೆ. ನಾನೇ ನಿನಗಿದನ್ನ ಮುಡಿಸೋಣ ಅಂದ್ಕೊಂಡೆ, ಅಷ್ಟರಲ್ಲಿ ನೀನೇ ತಗೊಂಡೆ...... ಹೋಗ್ಲಿ ಮುಡ್ಕೋ’ ಎಂದು ಸೂಕ್ತ ವಿವರಣೆ ನೀಡಿದೆ. ‘ಯಾವಳೋ ಮುಡಿದ ಹೂವಲ್ಲ ತಾನೇ?’ ಕೆಣಕು ನೋಟ ಬೀರುತ್ತಲೇ ಕಣ್ಣಿಗೊತ್ತಿಕೊಂಡು ಮುಡಿಯುತ್ತಾಳೆ.
ಎಷ್ಟೇ ಹುಷಾರಾಗಿದ್ದರೂ ಅವಳ ಕೈಗೆ ಸಿಕ್ಕಿಬೀಳೋದು ನನ್ನ ದಡ್ಡತನವೋ ಮುಗ್ಧತೆಯೋ ಒಮ್ಮೊಮ್ಮೆ ನನಗೇ ಕನ್ಫ್ಯೂಸ್. ಒಂದು ಮಳೆ ರಾತ್ರಿ ಸುಸ್ತಾಗಿ ಮನೆಗೆ ಬಂದೆ. ಸುಸ್ತಾಗಿದೆ ಕಣೆ ಮಲಗಬೇಕು ಅಂದೆ ಸಹಜವಾಗಿ. ‘ಆಫೀಸಲ್ಲಿ ತುಂಬಾ ಕೆಲಸವೇನ್ರೀ? ತುಂಬಾ ಕಕ್ಕುಲಾತಿ ತೋರಿದಳು. ‘ಹೌದು ಕಣೆ. ಈವತ್ತು ಶೀಲಾ ಹೆಲ್ಪ ಮಾಡ್ದೆ ಹೋಗಿದ್ದಿದ್ದರೆ ಬರಲಿಕ್ಕೆ ಮಧ್ಯರಾತ್ರಿಯೇ ಆಗೋದೇನೋ’ ಎಂದು ನಾಲಿಗೆ ಕಚ್ಚಿಕೊಂಡೆ. ‘ಯಾವಾಗ್ಲೂ ಅವಳದ್ದೇ ಧ್ಯಾನವಾಗೋಯ್ತಲ್ರೀ ನಿಮ್ದು. ಅವಳೊಬ್ಬಳೇನೋ? ಇನ್ನೂ ಯಾರ್ಯಾರು ನಿಮಗೆ ಹೆಲ್ಪ ಮಾಡೋರಿದ್ದಾರಪಾ?’ ಎಂದು ತನಿಖೆಗೆ ನಿಂತಳು. ‘ನೋಡು ಡಿಯರ್, ನಾನೊಬ್ಬ ಹೆಸರು ಮಾಡಿರೋ ಕವಿ. ಒಂತರಾ ಸೆಲಿಬ್ರಿಟಿ. ಪದೇ ಪದೇ ಪೇಪರ್ನಲ್ಲಿ ಹೆಸರು ನೋಡ್ತಿರ್ತಾರೆ. ಕವನಗಳನ್ನು ಓದ್ತಾ ಇರ್ತಾರೆ...... ಇಂಪ್ರೆಸ್ ಕೂಡ ಆಗಿರ್ತಾರೆ.
ಹೀಗಾಗಿ ಅಭಿಮಾನ ಹೆಚ್ಚಾಗಿ ಒಂದಿಷ್ಟು ಸಲಿಗೆಯಿಂದ ಇರ್ತಾರಪ್ಪಾ. ಹೆಲ್ಪ್ ಕೂಡ ಮಾಡ್ತಾರಪಾ ಅಷ್ಟೆ ಅಷ್ಟೆ ಕಣೆ’ ತಿಳಿಸಿ ಹೇಳಲು ತವಕಿಸಿದೆ. ‘ಹೂಂ.... ಅಭಿಮಾನ ಹೆಚ್ಚಾಗಿ ಸಲಿಗೆ. ಸಲಿಗೆ ಹೆಚ್ಚಾಗಿ.....?’ ಸಂಶಯದ ಕಣ್ಣುಗಳು ಚೂರಿಯಂತಾದವು. ‘ಏನೂ ಆಗೋಲ್ಲ...... ತೆಪ್ಪಗೆ ಬಿದ್ಕೋ. ಸರ್ಪ ಇರೋ ಮನೇಲಿ ಸಂಶಯ ಇರೋರ ಜೊತೇಲಿ ವಾಸ ಮಾಡೋರ್ಗೆ ನೆಮ್ಮದಿ ಕನಸಿನ ಮಾತು ಅಂದಿದಾರೆ ಹಿರಿಯರು’ ತಾಳ್ಮೆ ಕಳೆದುಕೊಂಡು ಗದರಿಸುತ್ತೇನೆ. ‘ಆಫ್ ಕೋರ್ಸ್...... ಗಂಡಸರು ನೀವಾದ್ರು ಯಾಕ್ರಿ ಸಂಶಯ ಬರೋತರಾ ನಡ್ಕೋಬೇಕು?’ ದಬಾಯಿಸುತ್ತಾಳೆ. ‘ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದೀನೆ’ ಅಲಕ್ಷ್ಯವಾಗಿ ಅಂದು ಸ್ಟಡಿ ರೂಮ್ ಸೇರುತ್ತೇನೆ. ಬುಳುಬುಳು ಅಳುವ ಸದ್ದು ಕೇಳುವಾಗ ಓದಲಾಗದೆ ಮತ್ತವಳ ಬಳಿ ಬಂದು ಶರಣಾಗಿ ಮಸ್ಕಾ ಹೊಡೆಯುತ್ತೇನೆ.
ನನ್ನ ಅವಳ ಮಧ್ಯೆ ಹೀಗೇ ಸಣ್ಣಪುಟ್ಟ ಕದನಗಳು ನಡೆದರೂ ಮಾತು ಬಿಡುವಷ್ಟು ಅವಳೂ ಹಠಮಾರಿಯಲ್ಲ. ನಾನೇ ಮಾತು ಬಿಟ್ಟಾಗಲೂ ತಾನಾಗಿಯೇ ಮಾತನಾಡಿಸಿ, ‘ಸಾರಿ ಕಣ್ರೀ ರೀ....... ನೀವೇನೋ ಒಳ್ಳೆಯವರಪ್ಪಾ, ಆದರೆ ಹೊರಗಡೆ ದುಡಿಯೋಕೆ ಬರ್ತಾರಲ್ಲ ಹೆಂಗಸರು, ಅವರಿಗೆ ಲಂಗು ಲಗಾಮು ಇರೋದಿಲ್ಲ. ಸರ್ವೀಸ್ ಆಗ್ತಾ ಆಗ್ತಾ ಗಂಡಸರ ಜೊತೆ ಕೂತು ಕೆಲಸ ಮಾಡೋ ಇರುವವರು ತಾವು ಹೆಣ್ಣು ಅನ್ನೋದನ್ನೇ ಮರೆತು ಒಂತರಾ ಗಂಡು ಬೀರಿಯರಾಗಿ ಬಿಡ್ತಾರೆ. ಮಾತು ಕಥೆ ನಗು ನಡಿಗೆ ವೆಹಿಕಲ್ ಓಡ್ಸೋದು ಎಲ್ಲ ಫಾಸ್ಟ, ನಾಚಿಕೆಯೆಲ್ಲಾ ಊರಿಂದಾಚ್ಗೆ. ನಾನೂ ಅಂದ್ರೆ ನಿಮಗೆ ಪಂಚಪ್ರಾಣ ಅಂತ ಗೊತ್ತೂರೀ..... ನಿಮ್ಮ ಮೇಲೆ ನನಗೆ ನಂಬಿಕೆ ಇದೆ... ಬಟ್ ಬಟ್..., ಅತ್ತೇ ಬಿಡುತ್ತಾಳೆ.
ಮದುವೆಯಾದ ಹೊಸತರಲ್ಲಿ ಅವಳು ವ್ಯಕ್ತಪಡಿಸೋ ಅನುಮಾನ, ಅಸೂಯೆ, ಮತ್ಸರ, ಮುನಿಸು, ಮಾತಿನಲ್ಲಿನ ಕೊಂಕು ಕದನ ಕೂಗಾಟ ಎಲ್ಲಾ ಒಂತರಾ ಮಜಾ ಕೊಡ್ತಾ ಇದ್ದದು ನಿಜ. ಯಾರು ಗಂಡನನ್ನು ಹೆಚ್ಚು ಪ್ರೀತಿಸ್ತಾರೋ ಅವರಿಗೆ ಅನುಮಾನ ಜಾಸ್ತಿ ಅನ್ನೋ ನಾಣ್ಣುಡಿ ಕೇಳಿದ್ದೆನಲ್ಲ. ಅವಳ ಪೊಸೆಸಿವ್ನೆಸ್ನ ನಾನು ಎಂಜಾಯ್ ಮಾಡಿದ್ದುಂಟು. ಈಗೀಗ ಅದು ಅತಿಯಾಯಿತೇನೋ ಅನ್ನಿಸಿ ಮುಜಗರಕ್ಕೊಳಗಾಗುತ್ತೇನೆ. ಒಮ್ಮೆ ಹೀಗಾಯಿತು, ನನ್ನ ಸಹೋದ್ಯೋಗಿ ಶರ್ವಾಣಿ ದಿಢೀರನೆ ಮನಗೆ ಬಂದಾಗ ಅದು ಭಾನುವಾರ ಸಂಜೆ. ಅವಳೋ ಮೊದಲೇ ಬಿಂದಾಸ್ ಹುಡ್ಗಿ. ನಾನೋ ನನ್ನವಳೊಂದಿಗೆ ಸಿನಿಮಾಕ್ಕೆ ರೆಡಿಯಾಗಿದ್ದೆ. ‘ಬನ್ನಿ ಬನ್ನಿ’ ಅನ್ನುತಲೇ ಇವಳು ಬರಮಾಡಿಕೊಂಡರೂ ‘ನಾವು ಸಿನಿಮಾಕ್ಕೆ ಹೊರಟಿದ್ದೇವೆ’ ಅಂತಲೇ ಸೂಚ್ಯವಾಗಿ ಹೇಳಿದ್ದಳು.
ಅವಳ ಸ್ವಾಗತದಲ್ಲಿ ನೀವು ಇನ್ನು ಯಾವತ್ತಾದರೂ ಬನ್ನಿ’ ಎಂಬ ಸೂಕ್ಷ್ಮವಿತ್ತು. ‘ಅಯ್ಯೋ ಈಗ ಯಾರ್ರಿ ಥಿಯೇಟರ್ಗೆ ಹೋಗಿ ಸಿನಿಮಾ ನೋಡ್ತಾರೀ? ದುಡ್ಡು ದಂಡ. ಒಟಿಟಿಯಲ್ಲಿ ಬರುತ್ತಲ್ಲಾ ನೋಡಿದ್ರಾಯ್ತು ಬಿಡಿ. ನಾನೋ ಅಪರೂಕ್ಕೆ ಬಿಡುವು ಮಾಡಿಕೊಂಡು ಬಂದಿದ್ದೀನ್ರೀ ಪ್ರೇಮ’ ಅಂದವಳೆ ಸೋಫಾದಲ್ಲಿ ಆರಾಮವಾಗಿ ವಿರಮಿಸಿದಳು ಶರ್ವಾಣಿ. ‘ಅವೆ ಕುಳಿತುಕೋ ಯಾರ್’ ಅಂತ ನನ್ನ ಕೈ ಹಿಡಿದೆಳೆದು ತನ್ನ ಪಕ್ಕವೇ ಕೂರಿಸಿಕೊಂಡಳು. ಇವಳ ಮುಖವೋ ವಿವರ್ಣವಾಯಿತು. ದುಮುದುಮುಗುಟ್ಟುತ್ತಲೇ ಎದುರು ಸೋಫಾದಲ್ಲಿ ದಸಕ್ಕನೆ ಕೂತಳು. ‘ನೀವು.... ನೀವ್ ಇಲ್ಲಿ ಬನ್ನಿ ಶರ್ವಾಣಿ..... ನನ್ನ ಪಕ್ಕಕ್ಕೆ’ ಎನ್ನುತ್ತಾ ಸೀಳು ನೋಟದೊಂದಿಗೆ ನಗೆಯನ್ನು ಮಿಕ್ಸ್ ಮಾಡಿದಳು. ‘ಇಲ್ಲೇ ಕಂಫರ್ಟ್ ಆಗಿದೀನಿ ಬಿಡಿ’ ಶರ್ವಾಣಿಯ ಕುಲುಕುಲು ನಗೆ ಬೇರೆ.
ಇವಳೇ ಶರ್ವಾಣಿ ಬಳಿ ಬಂದು ಕೂತು ಇವಳು, ‘ನೀವು ಎದುರು ಎದುರು ಸೋಫಾಕ್ಕೆ ಹೋಗಿ’ ಅನ್ನುವಂತೆ ಕಣ್ಣಲ್ಲೇ ತಿವಿದಳು. ಅವಳ ಕಣ್ಣಿನ ಭಾಷೆ ನಂಗೊತ್ತು. ಹೋಗಿ ಕೂತೆ. ಶರ್ವಾಣಿಯು ನಾನು ಊಹಿಸಿದಂತೆಯೇ ಆಫೀಸ್ನ ಅಕೌಂಟ್ಸ್ ಮ್ಯಾಟರ್ ಬಗ್ಗೆ ತಲೆ ತಿಂದಳು. ಬಾಸ್ನ ಪೋಲಿತನ ಬಣ್ಣಿಸುವಾಗ ಅವಳ ಪದಗಳ ಬಳಕೆ ನನಗೇ ಅಸಹ್ಯವೆನ್ನಿಸಿತು. ನನ್ನವಳ ಕಣ್ಣು ಕೆಂಡದುಂಡೆಗಳಾದವು. ಶರ್ವಾಣಿಯ ಮಾತಿನ ಶರವೇಗಕ್ಕೆ ಬ್ರೇಕ್ ಹಾಕಿ ಪ್ರಶ್ನಿಸಿದಳು. ‘ನಿಮ್ಮ ಬಾಸ್ ಕಥೆ ಇರ್ಲಿ. ನೀವು ಆಫೀಸ್ಗೆ ಹೀಗೇನಾ ಡ್ರೆಸ್ ಮಾಡಿಕೊಂಡು ಹೋಗೋದು?’ ಶರ್ವಾಣಿಯ ತುಂಡು ಸ್ಕರ್ಟ್ನಲ್ಲಿ ಕಾಣುವ ಬೆಳ್ಳನೆ ತೆಳ್ಳನೆ ತೊಡೆಗಳು. ಲೋ ನೆಕ್ ಟೀ ಶರ್ಟ್ನಲ್ಲಿ ಇಣುಕುವ ಎದೆಯ ಸೀಳು ಇವಳನ್ನು ಕೆಣಕಿರಬೇಕು. ಅಪಮಾನಿಸಲೆಂದೂ ಕೇಳಿದ್ದಾಳು. ‘ವಾಟ್ ಈಸ್ ದೇರ್? ಇಟ್ ಈಸ್ ಮೈ ಟೇಸ್ಟ್..... ಯಾವ ಕಾಲದಲ್ಲಿದೀರಾ ನೀವು?’ ಭುಜ ಕುಣಿಸಿದಳು ಶರ್ವಾಣಿ.
‘ಅಲ್ಲಾರೀ... ಫ್ಯಾಷನ್ ಪರೇಡ್ಗೆ ಹೋಗೋ ತರಾ ಮಾಡರ್ನ್ ಆಗಿ ಹೋದ್ರೆ ಗಂಡಸರ ತಲೆ ಕೆಟ್ಟು ಮ್ಯಾಡ್ ಆಗೋದಿಲ್ವೆ? ಸ್ವಲ್ಪನಾದ್ರೂ ಡ್ರೆಸ್ ಮ್ಯಾನರ್ಸ್ ಬ್ಯಾಡ್ವಾ?’ ಇವಳು ಹಂಗಿಸಿದಳು. ‘ಓಹ್! ಯು ಆರ್ ಸೋ ಇನೋಸೆಂಟ್. ಹೊರಗಿನ ಪ್ರಪಂಚ ನಿಮ್ಗೆ ಪರಿಚಯವಿಲ್ಲ ಬಿಡಿ. ಯು ಆರ್ ಸಿಂಪ್ಲಿ ಕಿಚನ್ ಬಾಸ್’ ಇವಳ ಮಾತನ್ನು ತನ್ನ ಅಬ್ಬರದ ನಗೆಯಿಂದಲೇ ಜಾಡಿಸಿಬಿಟ್ಟಳು ಶರ್ವಾಣಿ. ‘ತಪ್ಪು ನಿಮ್ಮದಲ್ಲ ಪ್ರೇಮ, ನಿಮ್ಮನ್ನು ಮನೆಯಲ್ಲೇ ಕೂಡಿ ಹಾಕಿದ್ದಾನಲ್ಲ ಈ ಮಾರಾಯಂದು’ ಚುಡಾಯಿಸಿದಳು. ‘ನೊ ನೊ ಹಾಗೇನಿಲ್ಲ ಆಗಾಗ ದೇವಸ್ಥಾನಕ್ಕೆ ಕರ್ಕೊಂಡು ಹೋಗ್ತಾರೆ ಕಣ್ರಿ’ ಇವಳು ಸಿಡುಕಿದಳು. ‘ಡ್ಯಾಮ್ ಇಟ್. ಎಂ.ಜಿ. ರಸ್ತೆಯಲ್ಲಿ ಬೈಕಲ್ಲಿ ಕೂತು ಜಾಲಿ ರೈಡ್ ಮಾಡ್ಬೇಕು, ಐಸ್ಕ್ರೀಂ ತಿನ್ನಬೇಕು, ರೆಕ್ಸನಲ್ಲಿ ಹಾಕೋ ಹಾಟ್ ಇಂಗ್ಲಿಷ್ ಫಿಲ್ಮ್ಸ್ ನೋಡಬೇಕು ಕಣ್ರಿ. ಅದು ಬಿಟ್ಟು ಬೋಳಮ್ಮನಂಗೆ’ ಕುಲುಕುಲು ನಕ್ಕ ಶರ್ವಾಣಿ ಕಣ್ಣು ಮಿಟುಕಿಸಿದಳು.
‘ಈ ಗಂಡಸರೇ ಇಷ್ಟೂ ರೀ ಹೆಂಡ್ತಿ ಗರತಿ ಗೌರಮ್ಮನ ಹಂಗಿರಬೇಕು. ಉಳೀದವರು ಬಿಚ್ಚಾಲೇ.....?’ ಮತ್ತೆ ತುಟಿ ಕೊಂಕಿಸಿ ನಕ್ಕಳು. ಎದ್ದು ಹೋದರೆ ಸಾಕೆಂದು ನನಗೇ ಅನ್ನಿಸುವಾಗ ಇವಳಿಗೆ ಹೇಗಾಗಿರಬೇಡ. ‘ಒಂದ್ನಿಮಿಷ ಕಾಫಿ ಮಾಡಿ ತಂದು ಬಿಟ್ಟೆ’ ಬೇಗ ಸಾಗು ಹಾಕೋಣವೆಂದು ಇವಳು ಕಿಚನ್ಗೆ ಎದ್ದು ಹೋದಳು. ‘ಯು ಆರ್ ಲಕ್ಕಿ ಮೋಹನ್. ನಿಮ್ಮ ವೈಫು ಸ್ಮಾರ್ಟ್ ಅಂಡ್ ಸೆನ್ಸಿಟಿವ್’ ಅಂದವಳೇ ಶರ್ವಾಣಿಯೂ ಕಿಚನ್ಗೆ ಹೋಗುವಾಗ ನಾನು ಉಗುಳು ನುಂಗಿದೆ. ಬೆಳಗ್ಗೆ ಮಾಡಿದ ದೋಸೆ ಹಿಟ್ಟು ಉಳಿದಿದ್ದನ್ನು ನೋಡಿದ ಇವಳು, ಮನೆಗೆ ಬಂದ [ಅಸ್ಪಷ್ಟ ಪದ: Cwy] ಎಂದು ಮನಸ್ಸಿಲ್ಲದಿದ್ದರೂ ದಾಕ್ಷಿಣ್ಯಕ್ಕೆ ದೋಸೆಗೆ ಅಂಚು ಇಟ್ಟಂತೆ ನನಗೆ ತೋರಿತು. ಶರ್ವಾಣಿ ಅಡುಗೆ ಮನೆಗೇ ನುಗ್ಗಿದ್ದು ಇವಳಿಗೆ ಹಿಡಿಸಲಿಲ್ಲವೆಂಬುದಾಗಲೇ ಅವಳ ಮೋರೆಯಲ್ಲಿ ದಾಖಲಾಗಿತ್ತು. ಚಿಕ್ಕ ಮನೆ ಎಲ್ಲಾ ಖುಲಂ ಖುಲ್ಲಾ. ದೋಸೆ ಅಷ್ಟು ದಪ್ಪ ಹಾಕ್ಬೇಡಿ, ಮೋಹನ್ಗೆ ದೋಸೆ ತೆಳ್ಳಗೆ ರೋಸ್ಟ ಆಗಿದ್ದರೆ ಇಷ್ಟ ಅನ್ನಬೇಕೆ ಶರ್ವಿ. ಫ್ರಿಜ್ನಲ್ಲಿಟ್ಟ ಚಟ್ನಿ ತೆಗೆದಿಟ್ಟಳು ಪ್ರೇಮ.
ಬೆರಳಿನಿಂದ ಚಟ್ನಿ ಎತ್ತಿ ರುಚಿ ನೋಡಿದ ಶರ್ವಿ, ‘ತುಂಬಾ ಖಾರವಾಗಿದೆಯೆಲ್ಲಾ ರೀ. ಹೀಗಿದ್ದಾಗ ಅವರು ತಿನ್ನೋದೇ ಇಲ್ಲ. ನಾನು ತಂದಿರ್ತೀನಿಲ್ಲ ಅದರಲ್ಲೇ ಶೇರ್ ಮಾಡ್ಕೋತಾರೆ’ ಅನ್ನೋದೂ ಕೇಳಿತು. ‘ಓಹೋ! ಅದಕ್ಕೇನೇನೋ ಲಂಚ್ ಬಾಕ್ಸ್ನಲ್ಲಿ ಕಳುಹಿಸಿರೋದೆಲ್ಲಾ ನಾರ್ತಾ ಇರುತ್ತೇ! ಕೇಳಿದರೆ ಆಫೀಸಲ್ಲಿ ಪಾರ್ಟಿಯಿತ್ತು ಅಂತಾರಲ್ರೀ?’ ಇವಳ ಈಗೋ ಆಗಲೇ ಹೆಡೆ ಎತ್ತಿತ್ತು. ನಾನು ಕೂತಿರಲಾಗದೆ ಎದ್ದು ಮಧ್ಯೆ ಹೋಗಲಾಗದೆ ಚಡಪಡಿಸಿದೆ. ‘ಅರೆರೆರೆ.....’ ಕಾಫಿಗೆ ಹೆಚ್ಚು ಶುಗರ್ ಹಾಕೋದನ್ನು ತಡೆದಳು ಶರ್ವಾಣಿ. ‘ಐಸೀ...... ಇವರ ಬಗ್ಗೆ ಇನ್ನೂ ಏನೇನು ಗೊತ್ತೋ!?’ ಅಣಕು ನೋಟ ಬೀರಿದಳು ಇವಳು. ಶರ್ವಿ ಕಿಸಕ್ಕನೆ ನಕ್ಕಳು. ‘ಪ್ರೇಮಾ ಗಂಡಸರ ಬುದ್ಧಿ ಗೊತ್ತಿಲವೇನ್ರಿ? ಗಂಡು ದೇವರಗಳನ್ನು ನೋಡಿ, ಎಲ್ಲರಿಗೂ ಇಬ್ಬರಿಬ್ಬರು ಹೆಂಡರು. ತಲೆಯ ಮೇಲೊಬ್ಬಳು, ತೊಡೆಯ ಮೇಲೊಬ್ಬಳು. ಅಕ್ಕ ಪಕ್ಕನೂ ಇಬ್ಬರು. ಇಂತಹ ದೇವರುಗಳ ದೊಡ್ಡ ಲಿಸ್ಟ್ವೇ ಇದೇ ಬಿಡಿ.
ನಿಮ್ಮ ಯಜಮಾನರೇನೂ ಕಡಿಮೆಯಿಲ್ಲ ಬಿಡಿ ನಾನು ನಿಮ್ಮವರ ಬಾಲ್ಯ ಸ್ನೇಹಿತೆ. ಹಳ್ಳೀಲಿ ಓದೋವಾಗ ನನ್ನನ್ನ ಹೆಗಲ ಮೇಲೆ ಕೂರಿಸಿಕೊಂಡು ಹೊಳೆ ದಾಟಿಸೋರು. ಮರಕೋತಿ, ಈಜು ಎಲ್ಲಾ ಕಲಿಸಿದ್ದು ಇದೇ ಪುಣ್ಯಾತ್ಮ. ಅದೆ ಸಲಿಗೆ ಈಗ್ಲೂ. ‘ಆಗಂತೂ ನಾನು ಅಂದ್ರೆ ಸಾಯೋನು. ಗಂಡ ಹೆಂಡ್ತಿ ಆಟದಲ್ಲಿ ನಾವಿಬ್ಬರೇ ಯಾವಾಗ್ಲೂ ಗಂಡ-ಹೆಂಡ್ತಿ’ ಏನೇನೋ ಅಸಂಬದ್ಧವಾಗಿ ಮಾತಾಡುತ್ತಾ ನನ್ನಲ್ಲಿ ಭಯ ಹುಟ್ಟಿಸಿದಳು. ‘ಆಗ ನಾವಿಬ್ಬರೂ ಪ್ರೈಮರಿಯಲ್ಲಿ ಓದುತ್ತಾ ಇದ್ವಿ ಕಣೆ’ ಎಂದು ಕೂಗಿ ಹೇಳಿದೆ. ‘ಹೌದು ನೀವೇ ಯಾಕೆ ಇವರನ್ನು ನಿಜವಾಗ್ಲೂ ಮದುವೆಯಾಗಲಿಲ್ಲ ಶರ್ವಾಣಿ?’ ಪ್ರೇಮ ಬುಲೆಟ್ ಹಾರಿಸಿದಳು. ‘ಅಯ್ಯೋ ಹಾಳಾದ್ದು ಜಾತಿ ಅಡ್ಡ ಬಂತೂರೀ. ಮೋರ್ ಓವರ್ ಈ ಆಸಾಮಿ ನನ್ನ ಲೈಫ್ ಸ್ಟೈಲ್ಗೆ ಸೂಟ್ ಆಗೋದಿಲ್ಲಾಂತ ತಿಳಿದ್ಮೇಲೆ ನಾನೇ ಅವಾಯ್ಡ್ ಮಾಡಿದೆ.’
ಶರ್ವಿಯದೂ ಬುಲೆಟ್ಟೇ....... ‘ಹಂಗೇನ್ರೀ! ಹೋಗ್ಲಿ ಈಗ್ಲಾದ್ರೂ ನಿಮ್ಮ ಲೈಫ್ ಸ್ಟೈಲ್ಗೆ ಮ್ಯಾಚ್ ಆಗೋರು ಸಿಕ್ಕಿದಾರೇನ್ರೀ?’ ಇವಳದ್ದು ಕೂತುಹಲ. ‘ಯು ನೊ...... ಐ ಆಮ್ ಅನ್ ಮ್ಯಾರೀಡ್’ ಮತ್ತೆ ಕುಲುಕುಲು ಶರ್ವಿಯದ್ದು. ದೋಸೆ ಕಾಫಿ ಬಂದವು ನನಗೇ ಬೇಗ ತೊಲಗಿದರೆ ಸಾಕಪ್ಪಾ ಅನ್ನಿಸುವಾಗ ಇವಳಿಗೆ ಹೇಗಾಗಿರಬೇಡ. ಇಷ್ಟಾದರೂ ಶರ್ವಾಣಿ ಹೊರಟಿದ್ದು ಎಂಟು ಗಂಟೆಗೆ. ‘ಪ್ರೇಮನ್ನ ಒಂದ್ಸಲನಾರ ಕರ್ಕೊಂಡು ಬಾರೋ ಮನೆಗೆ. ಸಖತ್ ಪಾರ್ಟಿ ಕೊಡ್ತೀನಿ’ ಕಣ್ಣು ಹೊಡೆದು ನನ್ನ ಕೆನ್ನೆ ಗಿಲ್ಲಿ ಹೊರಟು ಹೋದಾಗ ನಿಡುಸುಯ್ದೆ. ಅವಳ ಹೊಂಡಾ ಬೈಕ್ ಶಬ್ದ ಕೇಳಿದ ಮೇಲೆ ಇವಳು ಕೇಳಿದಳು. ‘ಶರ್ವಾಣಿನಾ ಯಾಕೆ ಮದುವೆ ಆಗ್ಲಿಲ್ಲ ನೀವು?’ ನನಗೆ ರೇಗಿತು. ‘ಚಿಕ್ಕಂದಿನಲ್ಲಿ ಗಂಡ ಹೆಂಡ್ತಿ ಆಟೋ ಆಡ್ದೋರೆಲ್ಲಾ ಮದುವೆ ಆಗೋಕೆ ಸಾಧ್ಯವೇನೆ ಹುಚ್ಚಿ?’ ಗರಮ್ಮಾದ್ರೂ ಮುಚ್ಚಿಟ್ಟು ಕೂಲ್ ಆಗಿಯೇ ಹೇಳಿದೆ.
‘ಅಯ್ಯೋ ಗಂಡ ಹೆಂಡ್ತಿ ಆಟ ಆಡೋಕೆ ಮದುವೇನೇ ಆಗಬೇಕೆ?’ ಸುಟ್ಟುಬಿಡುವ ಪರಿ ನೋಡುತ್ತಾ ಅಸಹ್ಯವಾಗಿ ನಕ್ಕಳು. ‘ಶಟ್ಅಪ್ ಹೀಗೆಲ್ಲಾ ಚೀಟ್ ಆಗಿ ಮಾತಾಡಿದರೆ ನನ್ನ ಕೋಪ ನೆತ್ತಿಗೇರುತ್ತೇ’ ಹೆಚ್ಚೇ ಸಿಡುಕಿದೆನೇನೋ. ‘ ಈ ದರಿದ್ರದೋಳು ಬಂದು ನನ್ನ ಮೂಡ್ನ್ನೇ ಕೆಡಿಸಿಬಿಟ್ಳು’ ಅಂತ ಅಂಡುಸುಟ್ಟ ಬೆಕ್ಕಿನಂತೆ ಶತಪಥ ಹಾಕಿದೆ. ‘ನಿಮ್ಮ ಮೂಡ್ ಕೆಡಿಸಿದ್ಳೋ ಬಿಟ್ಳೋ, ನನ್ನ ಮನಸ್ಸನೇ ಕೆಡಿಸಿಬಿಟ್ಳು ಬಿಚ್’ ಬುಳುಬುಳು ಅಳುತ್ತಾ ಬೆಡ್ರೂಮ್ ಸೇರಿಕೊಂಡಳು. ನನಗೇನು ಮಾಡಬೇಕೋ ತೋಚದಂತಾಯಿತು. ಇವಳ ಪ್ರೀತಿ ಕೂಡ ಹಿಂಸೆಯ ಸ್ವರೂಪ ತಾಳುತ್ತಿದೆಯಲ್ಲಾ ಅನ್ನಿಸಿ ಖೇದವಾಯಿತು.
ಒಂದು ದಿನ ಬೆಳಗ್ಗೆ ಎದ್ದವಳೇ ಕೇದಾರೇಶ್ವರಿವ್ರತ ಮಾಡ್ತೀನಿ ಅಂದಳು. ‘ನಿಮ್ಮ ಆಫೀಸ್ನವರನ್ನು ಕರೀರಿ. ಹೆಣ್ಣು ಮಕ್ಕಳು ಬಂದ್ರೂ ಸಾಕು. ನಾನು ಅಕ್ಕಪಕ್ಕದವರನ್ನೂ ಕರಿತೀನಿರೀ. ವ್ರತ ಮಾಡಿದ್ರೆ ಒಳ್ಳೇದಾಗುತ್ತಂತೆ’ ಅಂತ ವರಾತ ಮಾಡಿದಳು. ಇವಳೇನಂತಹ ಆಸ್ತಿಕಳೂ ಅಲ್ಲ. ಸ್ನಾನ ಮಾಡಿ ನಂತರ ದೇವರ ಕೋಣೆಗೆ ಹೋಗಿ ನಾನಾಗಲೇ ಪೂಜೆ ಮಾಡಿಟ್ಟ ದೇವರುಗಳಿಗೆ ಕೈ ಮುಗಿದರೆ ಅಲ್ಲಿಗವಳ ಪೂಜೆ ಫಿನಿಶ್. ‘ಇದೇನೆ ದಿಢೀರನೆ ದೈವಭಕ್ತಿ ಹೆಚ್ಚಿದೆ?’ ಗೇಲಿ ಮಾಡಿದೆ. ‘ಪಕ್ಕದ ಮನೆ ಆಂಟಿಗೆ ಕೇದಾರೇಶ್ವರಿ ವ್ರತ ಮಾಡಿದ್ಮೇಲೆ ಮಕ್ಕಳಾಗಿದ್ದಂತೆ’ ಅಂದು ನಾಚಿ ನೀರಾದಳು, ನನ್ನಮ್ಮ ಕೂಡ ಈ ವ್ರತ ಮಾಡುತ್ತಿದ್ದ ನೆನಪು ಅಂದವಳೆ ಫೋನ್ ಮಾಡಿ ಅವರಿವರನ್ನು ಆಮಂತ್ರಿಸಿದಳು. ಹಲವರನ್ನು ಮನೆಗೂ ಹೋಗಿ ಕರೆವ ಉತ್ಸಾಹ ತೋರಿದಳು ಅಡಿಗೆಯವರನ್ನು ಕರೆಸಿ ಸಿಹಿ ಅಡಿಗೆ, ಪ್ರಸಾದ ಮಾಡಿಸಲಾಯಿತು. ನಮ್ಮ ಆಫೀಸ್ನ ಗಂಡಸರು ಹೆಂಗಸರೂ, ನೆರೆಯವರೂ ಖುಷಿ ಖುಷಿಯಾಗೇ ಬಂದರು.
ಪುರೋಹಿತರು ಬಂದು ಪೂಜಾ ಕಾರ್ಯಕಲಾಪ ಪೂರೈಸಿ ಇವಳ ಬಲ ಮುಂಗೈಗೆ ಕೆಂಪು ರೇಷ್ಮೆ ದಾರ ಬಿಗಿದರು. ನನಗೆ ತಟ್ಟೆಯಲ್ಲಿ ಬಣ್ಣಬಣ್ಣದ ರಾಶಿ ರಾಶಿ ರಾಖಿಗಳು ಕಂಡವು. ನಂಬಲಾಗದೆ ಕನ್ನಡಕ ಸರಿಸಿ ನೋಡಿದೆ- ಅಚ್ಚರಿಯಾಯಿತು. ಇವಳ ವ್ರತವನ್ನಾಗಲೆ ಮರೆತು ‘ಊಟಕ್ಕೆ ಮೊದಲು ರಾಖಿ ಕಟ್ಟೋಣ ಕಣ್ರಿ. ಈವತ್ತು ರಾಖಿ ಹಬ್ಬ ಅಲ್ವೆ’ ಎಂದು ಸಡಗರಪಡುತ್ತಾ ಹಬ್ಬಕ್ಕೆ ಹೊಸ ಮೆರಗು ತಂದಳು. ಕೆಲವರು ಮುಜುಗರ ಪಟ್ಟರೂ ಇವಳಂತೂ ಎಲ್ಲರ ಮುಂಗೈಗೂ ರಾಖಿ ಬಿಗಿಯುತ್ತಾ ಇನಾಮು ಪಡೆದಳು. ನನಗೆ ರಾಖಿ ಕಟ್ಟುವಂತೆ ಬಂದ ಹೆಂಗಳೆಯರಿಗೆಲ್ಲಾ ಆರ್ಡರ್ ಮಾಡಿದಳು. ಖುದ್ದು ನಿಂತು ರಾಖಿ ಕಟ್ಟಿಸಿದಳು. ಹಿರಿಹಿರಿ ಹಿಗ್ಗಿದಳು. ನನ್ನ ಪರ್ಸ್ ಖಾಲಿ ಮಾಡಿದಳು. ಅದೊಂತರಾ ಫ್ಯಾನ್ಸಿ ಸಮಾರಂಭದಂತಿತ್ತು. ಅದಕ್ಕೀಗ ಗಂಭೀರ ಸ್ವರೂಪ ಕೊಟ್ಟವಳು ಶರ್ವಾಣಿ. ‘ನನಗಿದರಲೆಲ್ಲಾ ನಂಬಿಕೆಯಿಲ್ಲ, ಎದುರಿಗೆ ರಾಖಿ ಕಟ್ಟಿ ಮರೆಯಲ್ಲಿ ರಾಸಲೀಲೆ ಆಡೋ ಹೆಂಗಸರ ತರಾ ನಾನಲ್ಲ’ ವ್ಯಂಗ್ಯವಾಗಿ ಅಂದು ಹೊರಟೇ ಹೋದಳು. ಈಗ ಕಕ್ಕಾಬಿಕ್ಕಿಯಾಗುವ ಸದರಿ ಇವಳದ್ದು. ಮಂಕಾದ ಇವಳನ್ನು ಸಂತೈಸಿ ಎಲ್ಲರನ್ನೂ ಊಟಕ್ಕೆ ಏಳಿಸಿದೆ.
ರಾತ್ರಿ ಮಗ್ಗಲಾಗಿ ಮಲಗಿದ್ದ ಪ್ರೇಮ ನನ್ನತ್ತ ತಿರುಗಿದಳು. ನಾನು ಓದುತ್ತಿದ್ದ ಕವನ ಸಂಕಲನವನ್ನು ಕಿತ್ತೆಸೆದು ಎದೆಯ ಗೂಡಿನಲ್ಲಿ ಕೈ ಆಡಿಸುತ್ತಾ ಮಾದಕ ನಗೆ ಚೆಲ್ಲಿದಳು. ನಾನು ಕನ್ನಡಕ ತೆಗೆದಿರಿಸಿ ಯುದ್ಧಕ್ಕೆ ಅಣಿಯಾದೆ. ‘ಅಯ್ಯೋ ಅದಕ್ಕಲ್ಲಾರೀ..... ಸ್ವಲ್ಪ ತಡೀರಿ ಎಂದು ತಡೆಯೊಡ್ಡಿದಳು. ‘ಈವತ್ತು ಶರ್ವಾಣಿ ನಿಮಗೇಕೆ ರಾಖಿ ಕಟ್ಟಲಿಲ್ಲ?’ ಗಟ್ಟಿಸಿ ಕೇಳಿದಳು. ‘ಅಯ್ಯೋ ನನಗಲ್ಲ... ಅವಳು ಯಾರಿಗೂ ಕಟ್ಟೋಲ್ಲ ಕಣೆ. ಅವಳೊಂತರಾ ಎಕ್ಸೆಂಟ್ರಿಕ್’ ಅಂದು ಇವಳನ್ನು ಆವರಿಸಿಕೊಳ್ಳಲು ಯತ್ನಿಸಿದೆ. ‘ಬಿಡ್ರಿ’ ಎಂದು ಒರಟಾಗಿ ತಳ್ಳಿದಳು. ‘ನಾನು ಒಂದು ಮಾತು ಕೇಳಿದರೆ ನೇರಾನೇರ ಉತ್ತರ ಕೊಡ್ತಿರಾ ತಾನೇ? ಸುಳ್ಳು ಹೇಳಬಾರ್ದು..... ನನ್ನಾಣೆ’ ರಮಿಸಿದಳು, ತಬ್ಬಿಬ್ಬಾದೆ. ‘ಶ್ಯೂರ್ ಕೇಳು’ ಎಂದು ಸ್ವಾಗತಿಸಿದೆ. ‘ಕೋಪಗೀಪ ಮಾಡ್ಕೋಳೋಲ್ಲ ತಾನೆ..... ಸುಮ್ಮನೆ ಮಾತಿಗೆ ಕೇಳ್ತಿನಪ್ಪಾ..... ನಮ್ಮ ಮದುವೆಗೆ ಮೊದಲು ನೀವು ಬೇರೆ ಯಾರನ್ನಾದರೂ ಪ್ರೀತಿಸಿದ್ದುಂಟಾ ಅಂತ? ಎಂದು ಹುಸಿನಗೆ ಬೀರಿದಳು.
ದಿಗ್ಗನೆ ಎದ್ದು ಕೂತೆ. ಗದರಿಬಿಡುವಷ್ಟು ಕೋಪೋದ್ರಿಕ್ತನಾದರೂ ಮುಂದಾಗುವ ಪರಿಣಾಮವನ್ನು ಊಹಿಸಿ ತಾಳ್ಮೆ ವಹಿಸಿ ನಕ್ಕೆ. ಇವಳ ಮುಖವಾಗಲೇ ರಸ ಹೀರಿದ ಕಬ್ಬಿನಂತಾಗಿತ್ತು. ‘ಅಷ್ಟೊಂದು ಪ್ರೀತಿಸ್ತಿದ್ಳಾ ಅವ್ಳು? ನನಗಿಂತಲೂ?’ ಇವಳ ಕಣ್ಣು ತುಂಬಾ ಅಸೂಯೆಯ ಹೊಗೆ. ‘ಹೌದು ಅನ್ನಲೇಬೇಕು ಪ್ರೇಮ ನಾನು. ಆಕೆ ನನ್ನ ಯೌವನದ ದಿನಗಳಲ್ಲಿ ನೀಡಿದ ಕಂಪನಿ, ತುಂಬಿದ ಹುರುಪು ಉತ್ಸಾಹ. ಜೊತೆ ಜೊತೆಯಲ್ಲೇ ಹಾಕಿದ ಹೆಜ್ಜೆ ಮರೆಯಲಾಗದಂತದ್ದು. ನಾನಿವತ್ತು ಏನಾದರೂ ಆಗಿದ್ದರೆ ಅದಕ್ಕೆ ಅವಳೇ ಪ್ರೇರಣೆ. ಮೊದ ಮೊದಲು ನಾನು ಕವನ ಬರೆದದ್ದು ಅವಳ ಅಂದ ಚೆಂದ ಅಂತಃಕರಣ ನಿರ್ವಾಜ್ಯ ಪ್ರೇಮದ ಕುರಿತು ಅಂದರೆ ನಿನ್ಗೆ ಬೇಜಾರಾಗುತ್ತೇನೋ. ಬಟ್ ಇಟ್ ಈಸ್ ಟ್ರೂಥ್. ನನ್ನ ಮುಖದಲ್ಲಿನ ಒಂದು ಸುಕ್ಕು ಬದಲಾದಲೂ ಅವಳಿಗೆ ತಿಳಿಯೋದು. ಯಾಕೋ ಹೀಗಿದ್ದೀ?
ಕಾಲೇಜಲ್ಲಿ ಏನಾದ್ರೂ ನಡೆತೀನೋ? ಯಾರ ಜೊತೆಗಾದ್ರೂ ಜಗಳ ಮಾಡ್ಕೊಂಡ್ಯಾ ಎಂದೆಲ್ಲಾ ಅಲವತ್ತುಕೊಳ್ಳೋಳು. ಮೈ ಹುಷಾರಿಲ್ವಾ? ತಲೆನೋವಾ? ಕಣ್ಣು ಟೆಸ್ಟ್ ಮಾಡಿಸಿ ಐದು ವರ್ಷವಾಯ್ತುಲ್ಲೋ, ಪವರ್ ಜಾಸ್ತಿ ಆಯೋ ಏನೋ, ಒಮ್ಮೆ ಟೆಸ್ಟ್ ಮಾಡಿಸೋ ಅನ್ನುತ್ತಲೇ ಮೈಕೈ ಮುಟ್ಟಿ, ಯಾಕೋ ಮೈ ಸುಡ್ತಾ ಇದೆಯಲ್ಲೋ ಅಂತ ಗಾಬರಿಯಾಗೋಳು. ಹಠಮಾಡಿ ಮಾತ್ರೆ ನುಂಗ್ಸೋಳು. ಅವಳ ಕಾಳಜಿ ಕೂಡ ಅನೇಕ ಸಲ ಕಿರಿಕಿರಿ ಅನ್ನಿಸುತ್ತಿದ್ದುದುಂಟು. ತಲೆಗೆ ಬಟ್ಟಲು ಗಟ್ಟಲೆ ಎಣ್ಣೆ ಸುರಿದು ತಪತಪನೆ ತಟ್ಟಿ ಗಂಟೆಗಟ್ಟಲೆ ಕೂರಿಸಿಬಿಡುತ್ತಿದ್ದಳು. ನಾನೆಲ್ಲಾ ತಲೆ ಸ್ನಾನ ಮಾಡ್ತೀನಿ ಬಿಡೆ ಅಂತ ದಮ್ಮಯ್ಯ ಗುಡ್ಡೆ ಹಾಕಿದರೂ ಹಬೆಯಾಡುವ ಬಿಸಿಬಿಸಿ ನೀರು ದಬದಬನೆ ಸುರಿದು ಸೀಗೆ ಪುಡಿಯನ್ನು ತಲೆ, ಮುಸಡಿಗೆ ತೀಡಿ ತಿಕ್ಕುತ್ತಿದ್ದರೆ ಕಣ್ಣೆಲ್ಲ ಬಗಬಗನೆ ಉರಿಯುತ್ತಿದ್ದವು. ‘ಅಯ್ಯೋ ಸಾಕು ತಾಯಿ ನಿನ್ನ ಅಭ್ಯಂಜನ’ ಎಂದು ಬೊಬ್ಬೆ ಹೊಡೆಯತ್ತಿದ್ದೆ. ಬಟ್ಟೆಗಳನ್ನು ತೊಡಲು ಕೋಣೆಗೆ ಹೋದರೂ ಹಿಂಬಾಲಿಸುವ ಅವಳನ್ನು ತಡೆದು ಬಾಗಿಲು ಹಾಕಿಕೊಳ್ಳುತ್ತಿದ್ದೆ. ‘ಮಹಾ ದೊಡ್ಡ ಗಂಡ್ಸು ಇವ್ನು ನಾನು ಕಾಣದ್ದಾ’ ಎಂದಾಕೆ ಚುಡಾಯಿಸುವಾಗ ನಾಚಿಕೆಯಾಗೋದಪಾ.
ಹೀಗೆ ಡಿಗ್ರಿ ಪರೀಕ್ಷೆಯ ಹತ್ತಿರದ ದಿನಗಳು. ಮೈ ಕಾದ ಬಾಣಲೆಯಂತಾಗಿತ್ತು. ಡಾಕ್ಟರ್ ಟೆಸ್ಟ್ ಮಾಡಿ ಟಾಯ್ಫೈಡ್ ಅಂದರು. ಟೈಮ್ ಟು ಟೈಮ್ ಮಾತ್ರೆ ತಗೋಬೇಕಂತಲೂ ತಾಕೀತು ಮಾಡಿದರು. ಆಗ ಅವಳೇ ರಾತ್ರಿಯೆಲ್ಲಾ ನನ್ನ ಬಳಿ ಕಾವಲು ಕೂತು ನಿದ್ದೆಯನ್ನು ಮಾಡದೆ ಹಣೆಯ ಮೇಲೆ ಒದ್ದೆಬಟ್ಟೆ ಹಾಕೋದೇನು! ಸಣ್ಣಗೆ ಅಳೋದೇನು. ನನ್ನ ತಂದೆ ನನ್ನನ್ನು ಅವಳಿಗೊಪ್ಪಿಸಿ ಮಲಗಿಬಿಡೋರು. ನಾನು ಡಿಗ್ರಿ ಪಾಸಾದಾಗ ಸಂತೋಷ ತಾಳಲಾರದಾದ ಅವಳು ತಬ್ಬಿ ಮುದ್ದಾಡಿ ಕಣ್ಣೀರು ಸುರಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದ ಆಕೆಗೊಂದಿಷ್ಟು ಮೂಢನಂಬಿಕೆ. ನನಗೆ ಯಾರಾದ್ದಾದರೂ ದೃಷ್ಟಿ ತಾಕಿದೆಯೇನೋ ಎಂದಂಜಿ ಪೊರಕೆಯಿಂದ ನಿವಾಳಿಸುತ್ತಿದ್ದಳಲ್ಲದೆ, ಚಪ್ಪಲಿಯಿಂದಲೂ ನಿವಾಳಿಸಿ ಒಲೆಗೆ ಉಪ್ಪು ಮೆಣಸಿನಕಾಯಿ ಎಸೆದು ಅವು ಚಟಪಟಗುಟ್ಟುವಾಗ ‘ಥುತ್’ ಅಂತ ಉಗಿದಿದ್ದೇ ಉಗಿದ್ದಿದ್ದು.
ಇದೆಲ್ಲಾ ಸುಲಭಕ್ಕೆ ಮರೆಯೋದಲ್ಲ ಪ್ರೇಮ. ‘ನನಗೆ ಹೋಳಿಗೆ ಇಷ್ಟ’ ಅಂತ ಹೇಳಿದ್ದೇ ತಪ್ಪಾಯಿತು ನೋಡು. ತನಗೆ ಹೋಳಿಗೆ ಮಾಡಲು ನೆಟ್ಟಗೆ ಬಾರದಿದ್ದರೂ ಬಿಡದೆ ಎದುರು ಮನೆಯಾಕೆಗೆ ದುಂಬಾಲು ಬಿದ್ದು ಕಲಿತು ಮಾಡಿ ಬಡಿಸುವವರೆಗೂ ಅವಳ ಜೀವಕ್ಕೆಲ್ಲಿಯ ಸಮಾಧಾನ. ನಾನು ಕೆಎಎಸ್ ಪರೀಕ್ಷೆ ತೆಗೆದುಕೊಂಡಾಗ ಆಕೆ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ ಮೈ ಕೈ ಗಾಯ ಮಾಡಿಕೊಂಡ ಅವಳ ಮುಗ್ಧತೆಗೆ ನಾನಂತೂ ರೋಸಿ ಹೋಗಿದ್ದೆ. ವಾರಗಟ್ಟಲೆ ಮಾತು ಬಿಟ್ಟಿದ್ದೆ. ಆಕೆ ಮಾತ್ರ ಮಾತು ಬಿಡದೆ ನನ್ನ ಬೇಕು ಬೇಡಗಳನ್ನು ನೋಡಿಕೊಳ್ಳುವಾಗ ಅವಳ ನಿಸ್ವಾರ್ಥ ಪ್ರೀತಿಗೆ ಸೋತು ಅವಳ ಮಡಿಲಲ್ಲಿ ಶರಣಾಗಿದ್ದೆ. ನನ್ನ ದೃಷ್ಟಿಯಲ್ಲಿ ಈ ಹುಡುಗಿಯರು ಪುಸ್ತಕಗಳಿದ್ದ ಹಾಗೆ. ಕೆಲವು ಪುಸ್ತಕಗಳನ್ನು ರ್ಯಾಪರ್ ನೋಡಿ
ಎತ್ತಿಕೊಳ್ಳುತ್ತೇವೆ. ರ್ಯಾಪರ್ ಮೇಲಿನ ಆಕರ್ಷಣೆ ಒಳಗಿರೋದಿಲ್ಲ. ಕೆಲವು ಹುಡುಗಿಯರು ಹೀಗೆ, ರ್ಯಾಪರ್ವೇ ಅಸಹ್ಯ ಟಚ್ ಮಾಡಲೂ ಹಿಂಜರಿಕೆ. ಕೆಲವು ಪುಸ್ತಕಗಳು ಓದುವಾಗ ರಂಜನೀಯ ನಂತರ ಮರತೇ ಬಿಡುತ್ತೇವೆ. ಕೆಲವು ಹುಡುಗಿಯರು ಆರಂಭದಲ್ಲಷ್ಟೆ ಆಕರ್ಷಣೆ, ನಂತರ ಆಸಕ್ತಿ ಕಡಿಮೆಯಾಗ್ತದೆ. ಕೆಲವು ಓದಿದ ನಂತರವೂ ಮೆಲಕು ಹಾಕುವಂತಿರುತ್ತವೆ. ಬೇಸರವಾದಾಗಲೆಲ್ಲಾ ಓದಿ ಪುಳಕಿತರಾಗುತ್ತೇವೆ. ಎನರ್ಜಿ ತುಂಬಿಕೊಳ್ಳುತ್ತೇವೆ. ಹೊಸ ಅರ್ಥ ಕಾಣುತ್ತೇವೆ. ಕೆಲವರು ಹೀಗೆ ಸಂಜೀವಿನಿಗಳಾಗೋದುಂಟು. ಇಂಥವರು ಬಾಳ ಸಂಗಾತಿಗಳಾದರೆ ಬಾಳು ಚೈತ್ರದ ಚಿಗುರು. ಕೆಲವು ಪುಸ್ತಕ ಓದಿದರೂ ಅರ್ಥವಾಗೋದೇ ಕಷ್ಟ. ಅರ್ಥ ಮಾಡಿಕೊಂಡರವು ಗ್ರಂಥಗಳು. ದೇವರಗೂಡಲ್ಲಿ ಇಟ್ಟು ಪೂಜಿಸುವಂಥವು. ನನ್ನ ಪಾಲಿಗವಳು ಅಂತಹ ಗ್ರಂಥವಾಗಿದ್ದಳು. ಅವಳ ತೊಡೆಯ ಮೇಲೆ ಮಲಗಿದರೆ ಜಗತ್ತನ್ನೇ ಮರೆತುಬಿಡುತ್ತಿದ್ದೆ. ನಾನವಳ ಬಾಳಿನಲ್ಲಿ ಪ್ರವೇಶಿಸಿದ ಮೇಲೆ ಅವಳು ತನ್ನ ಗಂಡನನ್ನೇ ಮೊದಲಿನಂತೆ ಟ್ರೀಟ್ ಮಾಡುತ್ತಿಲ್ಲ.
ಕೇರ್ ತಗೋತಿಲ್ಲ ಎಂದವಳ ಗಂಡನೇ ಕೂಗಾಡಿದ್ದನ್ನು ಚಿಕ್ಕಂದಿನಿಂದಲೂ ಕೇಳಿಸಿಕೊಂಡೇ ಬಂದಿದ್ದೇನೆ. ಆದರೂ ದೂರ ಸರಿಯುವ ತ್ರಾಣ ನನಗಿಲ್ಲವೆನಿಸಿತ್ತು. ನಾನು ನಿನ್ನನ್ನು ಮದುವೆಯಾಗಲು ಒಪ್ಪಿದ ದಿನ, ನನ್ನನ್ನು ತಬ್ಬಿ, ‘ಇನ್ನು ಮುಂದೆ ನಿನ್ನ ಮೇಲಿನ ಅಧಿಕಾರ ಹೊರಟು ಹೋಯ್ತು ಕಣೋ ಚಿನ್ನ’ ಎಂದಾಕೆ ಬಿಕ್ಕುವಾಗ ನನ್ನ ತೆಕ್ಕೆಯಿಂದಾಕೆಯನ್ನು ಬಿಡಿಸಿ ಸಂತೈಸಿದ್ದು ಆಕೆಯ ಗಂಡನೆ. ನನಗೆ ಉಸಿರು ಕೊಟ್ಟವಳನ್ನು ನಾನಾದರೂ ನಾನಾದರೂ ಮರೆಯಲು ಸಾಧ್ಯವೆ ಎಂದು ನಿಡುಸುಯ್ದೆ. ‘ಸಾಕು ನಿಲ್ಲಿಸಿ ನಿಮ್ಮ ಅನೈತಿಕ ಪ್ರೇಮ ಪುರಾಣಾನಾ’ ಎಂದು ಪ್ರೇಮ ಕಿರುಚಿಕೊಂಡಳು, ಗಲಿಬಿಲಿಗೊಂಡೆ. ನಿಮ್ಮ ಕವನ ಸಂಕಲನವನ್ನು “ಮೊದಲು ಮುತ್ತಿಟ್ಟವಳಿಗೆ” ಅಂತೇನೋ ಅರ್ಪಣೆ ಮಾಡಿದ್ದೀರಲ್ಲಾ ಅವಳೇನಾ ಇವಳು? ನಾಚಿಕೆಯಾಗಬೇಕು ನಿಮ್ಗೆ. ಯಾರ್ರೀ ಅವಳು? ಎಲ್ಲಿದ್ದಾಳೀಗ? ಬದುಕಿದ್ದಾಳೋ ಸತ್ತಿದ್ದಾಳೋ
ಅದನ್ನಾದ್ರೂ ಹೇಳಿ. ಕೇಳಿ ಹೊಟ್ಟೆಗೆ ಹಾಲು ಹೊಯ್ದುಕೊಳ್ಳುತ್ತೇನೆ. ಚಿಕ್ಕ ವಯಸ್ಸಿನಲ್ಲೇ ನಿಮ್ಮೊಡನೆ ರಾಸಲೀಲೆ! ಅದೂ ಇನ್ನೊಬ್ಬನ ಹೆಂಡತಿ ಜೊತೆ. ಥೂ.... ಅಸಹ್ಯ. ಆ ಸುಂದ್ರಿನಾ ತೋರ್ಸಿ ತಕ್ಕ ಶಾಸ್ತಿ ಮಾಡ್ತೀನವಳಿಗೆ’ ಎಂದೆಲ್ಲಾ ಇವಳ ಕಥಕ್ಕಳಿ ಶುರು. ‘ನಿಜ ಕಣೆ ಅವಳು ನಿನಗಿಂತ್ಲೂ ಸುಂದ್ರಿನೇ ಕಣೆ, ನೀನವಳನ್ನು ನೋಡಿದ್ರೆ ಹೊಟ್ಟೆ ಉರ್ಕೊಂಡು ಸಾಯ್ತಿ. ಫೋಟೋ ತೋರಿಸ್ಲಾ?’ ಅಂಜದೆ ಕೇಳಿದೆ. ‘ತೋರಿಸ್ರೀ....... ಹುಡುಕ್ಕೊಂಡು ಹೋಗಿ ಅವಳನ್ನಾ......’ ಎಂದು ಹಲ್ಲು ಮಸೆದಳು. ನನ್ನ ಕಾಲರ್ ಹಿಡಿದು ಗುಂಜಾಡಿದಳು ಹುಚ್ಚಿಯಂತೆ. ನಾನು ರೇಗದೆ ನಿಧಾನವಾಗಿ ಬಿಡಿಸಿಕೊಂಡು ಹಾಲಿನತ್ತ ಹೆಜ್ಜೆ ಹಾಕಿದೆ. ‘ಎಲ್ಲಿ ಬಚ್ಚಿಟ್ಟಿದ್ದೀರಾ ಆ ಸುರಸುಂದರಿ ಫೋಟೋನಾ!’ ಅನ್ನುತ್ತಲೇ ದುಡುದುಡು ಹಿಂಬಾಲಿಸಿದಳು. “ಅಲ್ಲಿದ್ದಾಳೆ ನೋಡು” ತೋರಿಸಿದೆ.
ಗಂಧದ ಹಾರದೊಂದಿಗೆ ಶೋಭಿಸುತ್ತಿರುವ ಗೋಡೆಯ ಮೇಲಿನ ಫೋಟೋ ನೋಡಿ ಬೆರಗಾದಳು, ಬೆಚ್ಚಿಬಿದ್ದಳು. ಇವಳ ದೇಹದಾದ್ಯಂತ ಕಂಪನ. ‘ನೋಡೇ ಅವಳೇ.... ಅವಳೇ ಕಣೇ ನನ್ನಮ್ಮ’ ಅಂದರೆ ಬೇಸರದಿಂದ... ಇವಳು ಕರಡಿಯಂತೆ ತಬ್ಬಿ ಬುಳುಬುಳು ಅಳುತ್ತಾ ‘ಸಾರಿ ಕಣ್ರಿ..... ರಿಯಲಿ ಸಾರಿ’ ಇವಳು ಬಡಬಡಿಸುತ್ತಲೇ ಇದ್ದಳು. ‘ಇವಳು ತಾಯಿ ಕಣೆ ಜೀವನದಲ್ಲಿ ಮೊದಲು ಬರ್ತಾಳೆ. ಜೀವ ಕೊಡ್ತಾಳೆ. ಎಣೆಯಿಲ್ಲದ ಪ್ರೀತಿ ಕೊಡ್ತಾಳೆ. ಮಧ್ಯದಲ್ಲಿ ಹೊರಟು ಹೋಗ್ತಾಳೆ. ಹೆಂಡತಿ ಜೀವನದ ಮಧ್ಯೆ ಬರ್ತಾಳೆ ಜೀವನ ಅಂದ್ರೇನು ಅನ್ನೋ ಪಾಠ ಕಲಿಸ್ತಾಳೆ. ಕೊನೆವರೆಗೂ ಜೊತೆಯಾಗಿರ್ತಾಳೆ. ಕಷ್ಟ ಸುಖ ಎರಡರಲ್ಲೂ ಭಾಗಿಯಾಗ್ತಾಳೆ. ನಮ್ಮ ಪಾಲಿನ ಎರಡನೇ ತಾಯಿಯಿದ್ದ ಹಾಗೆ’ ತಿಳಿಸಿ ಹೇಳಿದೆ. ಅಳುತ್ತಲೇ ಇದ್ದಳು. ನಾನು ಸಂತೈಸುವ ಗೊಡವೆಗೆ ಹೋಗಲಿಲ್ಲ.


