Asianet Suvarna News Asianet Suvarna News

ರಂಗಶಂಕರ ನನ್ನ ಬದುಕಿಗೆ ಒಂದು ಉದ್ದೇಶ ಕೊಟ್ಟಿತು: ಅರುಂಧತಿ ನಾಗ್‌

ಶಂಕರ್‌ನಾಗ್ ಕನಸಿನ ಕೂಸು ರಂಗಶಂಕರದ ಬಗ್ಗೆ ನಟಿ ಅರುಂಧತಿ ನಾಗ್ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ.

Arundhati Nag Ranga Shankar gave my life a purpose
Author
First Published Oct 21, 2024, 10:16 AM IST

ಸಂದರ್ಶಕರು: ಜೋಗಿ, ರಾಜೇಶ್ ಶೆಟ್ಟಿ

ನೀವು ನಾಡಿಗೆ ರಂಗಶಂಕರ ಕೊಟ್ಟಿರಿ. ನಿಮಗೆ ರಂಗಶಂಕರ ಏನು ಕೊಟ್ಟಿದೆ?

ರಂಗಶಂಕರ ಇಲ್ಲದಿದ್ದರೆ ಏನಾಗಬಹುದಿತ್ತು? ನಾನು ನಟಿಯಾಗಿರುತ್ತಿದ್ದೆ. ರಂಗಶಂಕರದಿಂದ ನನ್ನ ಬದುಕಿಗೆ ಒಂದು ಉದ್ದೇಶ ಸಿಕ್ಕಿತು. ಏನೋ ದೊಡ್ಡದು ಮಾಡುವ ಅವಕಾಶ. ಇದು ಶಂಕರನ ಕನಸು. ಹವ್ಯಾಸಿ ರಂಗಭೂಮಿಗೆ ಶಾಶ್ವತ ವೇದಿಕೆ ಇರಬೇಕು ಅನ್ನುವುದು ಅವನ ಆಸೆಯಾಗಿತ್ತು. ಅವನು ಚಿತ್ರಕಲಾ ಪರಿಷತ್‌ನಲ್ಲಿ ರಂಗವೇದಿಕೆ ಒದಗಿಸಲು ಕೇಳಿಯೂ ಇದ್ದ. ಆದರೆ ಅವನ ಕೋರಿಕೆ ನೆರವೇರಲಿಲ್ಲ. ಅವನ ಕನಸನ್ನು ನನಸು ಮಾಡಲು ಇಲ್ಲಿ ಜಾಗ ಪಡೆದುಕೊಂಡು ಏಳು ವರ್ಷ ಹಣ ಸಂಗ್ರಹದಲ್ಲಿ ತೊಡಗಿದ್ದೆ. ಮೂರು ವರ್ಷ ನಿರ್ಮಾಣ ಹಂತದಲ್ಲಿತ್ತು. ಆಗ ಪ್ರತೀ ದಿನ ನಾನು ರಂಗಶಂಕರದಲ್ಲೇ ಇರುತ್ತಿದ್ದೆ. 2001ರ ಅಕ್ಟೋಬರ್‌ 27ರಂದು ಅಡಿಗಲ್ಲು ಹಾಕಿದ್ದು. ಸರಿಯಾಗಿ ಮೂರು ವರ್ಷಗಳ ನಂತರ 2004ರ ಅಕ್ಟೋಬರ್‌ 27ರಂದು ಮೊದಲ ಪ್ರದರ್ಶನ ಆಗಿದ್ದು. ಅಲ್ಲಿಂದ 20 ವರ್ಷ ಕಳೆದಿವೆ. ರಂಗಶಂಕರ ನನಗೆ ಬದುಕನ್ನೇ ಕೊಟ್ಟಿದೆ.

ಆರಂಭದ ಪ್ರಯಾಣ ಹೇಗಿತ್ತು?

ರಂಗಶಂಕರ ಕಟ್ಟುತ್ತಿದ್ದ ಸಂದರ್ಭದಲ್ಲಿ ಪ್ರತೀ ದಿನ, ರಾತ್ರಿ ಯಾರು ದುಡ್ಡು ಕೊಡುತ್ತಾರೆ ಎಂಬ ಆಲೋಚನೆಯೇ ಇತ್ತು. ಹಣ ಸಂಗ್ರಹದಲ್ಲಿಯೇ ಪ್ರತೀ ಕ್ಷಣ ಕಳೆಯುತ್ತಿದ್ದೆ. ನನಗೆ ಆಗ ಮಣ್ಣಿನ ಮನೆಯಲ್ಲಿ ಇದ್ದು ಗೊತ್ತಿತ್ತೇ ವಿನಃ ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಮಾಡುತ್ತೇನೆ ಎಂಬ ಅಂದಾಜೂ ಇರಲಿಲ್ಲ. ಆ ಮೂರು ವರ್ಷ ಪ್ರತೀ ಕ್ಷಣ ನಾನು ಇಲ್ಲೇ ಇದ್ದೆ. ಜೆಸಿಬಿ ಅಡಿಪಾಯಕ್ಕೆ ಗುಂಡಿ ತೋಡಲು ಆರಂಭಿಸಿದ ಕ್ಷಣದಿಂದ ಇಲ್ಲಿಯವರೆಗೂ ನಾನು ಇದರ ಜೊತೆ ಇದ್ದೇನೆ. ರಂಗಶಂಕರ ನನ್ನ ಶಾಲೆ. ರಂಗಶಂಕರ ನನ್ನ ಕಲಿಕೆ. ರಂಗಶಂಕರ ನನ್ನ ಗಳಿಕೆ. ಆರಂಭದ ದಿನ ನಾವು ಪೂಜೆ ಮಾಡಲಿಲ್ಲ. ರಂಗಶಂಕರದ ವೇದಿಕೆಯಲ್ಲಿ ಸುಭದ್ರಮ್ಮ ಮನ್ಸೂರ್‌, ಬಿ. ಜಯಶ್ರೀ ಮುಂತಾದವರು ಏಕವ್ಯಕ್ತಿ ಪ್ರದರ್ಶನ ನೀಡಿದ್ದರು. ಅದೇ ನಮಗೆ ಪೂಜೆ. ನಾವು ಮಗು ಚಿಕ್ಕದಿರುವಾಗಲೇ ಇರುವಾಗಲೇ ಸೂಕ್ತವಾದ ಪಾಠವನ್ನು ಕಲಿಸಿದ್ದೇವೆ. ಇಲ್ಲಿ ತಡವಾಗಿ ಬಂದವರಿಗೆ ಪ್ರವೇಶವಿಲ್ಲ. ಇಂಟರ್ವಲ್‌ನಲ್ಲಿ ಪಾಪ್‌ಕಾರ್ನ್‌ ಒಳಗೆ ತಂದು ತಿನ್ನುವ ಸಂಸ್ಕೃತಿ ಇಲ್ಲ. ನಾವು ಕೆಫೆಯಲ್ಲಿ ಕೋಕಾ ಕೋಲ ಮಾರುವುದಿಲ್ಲ. ಇವೆಲ್ಲಾ ನಮ್ಮ ನಿಯಮಗಳಲ್ಲ, ಇದು ನಮ್ಮ ಫಿಲಾಸಫಿ.

ಬೆಳಕಿಲ್ಲದ ದಾರಿಯಲ್ಲಿ ಬೆಳಕು ಹೆಕ್ಕಿದ ಅರುಂಧತಿ ನಾಗ್‌!

ತಡವಾಗಿ ಬಂದರೆ ಪ್ರವೇಶವಿಲ್ಲ ಎಂಬುದರ ಕುರಿತು ತಕರಾರಿದೆ..

ನಾನು ನಾಟಕ ಪ್ರದರ್ಶನಕ್ಕೆ ನೀಡುವಾಗ ವೇದಿಕೆಗೆ ಯೋಧಳ ಥರ ಬರುತ್ತೇನೆ. ನನ್ನ ಬದುಕನ್ನೇ ಇಲ್ಲಿಗೆ ಸಮರ್ಪಿಸುತ್ತೇನೆ. ನನಗೆ ಇದು ಎಂಟರ್‌ಟೇನ್‌ಮೆಂಟ್ ಅಲ್ಲ. ಅರ್ಧ ನಾಟಕ ಆಗುವಾಗ ಯಾರೋ ಬರುತ್ತಾರೆ, ಸದ್ದಾಗುತ್ತದೆ, ಸಂಚಲನ ಉಂಟಾಗುತ್ತದೆ. ನಾನು ವಿಚಲಿತಳಾಗುತ್ತೇನೆ. ನಾನು ವೇದಿಕೆಗೆ ಕೊಡುವ ಗೌರವ ಪ್ರೇಕ್ಷಕರೂ ಕೊಡಬೇಕು. ಅದಕ್ಕೆ ಸಮಯಕ್ಕೆ ಸರಿಯಾಗಿ ಬರಬೇಕು. ಎಲ್ಲರೂ ವಿಮಾನ ನಿಲ್ದಾಣಕ್ಕೆ ಸಮಯಕ್ಕೆ ಸರಿಯಾಗಿ ಹೋಗುತ್ತಾರೆ ಅಲ್ಲವೇ. ವಿಮಾನವನ್ನು ವಾಪಸ್ ಕರೆಸುವುದಿಲ್ಲ ಅಲ್ಲವೇ. ನಾಟಕದ ಅನುಭವ ತಮ್ಮದಾಗಿಸಿಕೊಳ್ಳಲು ಸಿದ್ಧತೆ ಬೇಕು. ಶಿಸ್ತು ಇರಬೇಕು. ಶಿಸ್ತು ಇಲ್ಲದೇ ಇದ್ದರೆ ಕಲಾಕ್ಷೇತ್ರ ಆಗುತ್ತದೆ.

ರಂಗಶಂಕರಕ್ಕೆ ನಿಷ್ಠೆಯ ಪ್ರೇಕ್ಷಕರಿದ್ದಾರೆ. ಅದು ಹೇಗೆ?

ರಂಗಶಂಕರದಲ್ಲಿ ಒಂದು ಸಲ ನಾಟಕ ನೋಡಿದರೆ ಅದು ಮತ್ತೆ ಸೆಳೆಯುತ್ತದೆ. ಅದಕ್ಕೊಂದು ಅಡಿಕ್ಟಿವ್‌ ಗುಣ ಇದೆ.

ರಂಗಭೂಮಿ ಬೆಳೆಯುತ್ತಲೇ ಇದೆ. ಪ್ರೇಕ್ಷಕರಲ್ಲಿ ಸ್ವೀಕಾರ ಗುಣ ಜಾಸ್ತಿಯಾಗಿದೆ. ಹೇಗೆ?

ಟೆಲಿವಿಷನ್ ಮೀಡಿಯೋಕರ್ ಆಗಿದೆ. ಅಲ್ಲಿ ಹಳ್ಳಿಯ ಒಂದು ಪಾತ್ರ ಕೂಡ ಮೇಕಪ್ ಹಾಕಿಕೊಂಡೇ ಕಾಣಿಸಿಕೊಳ್ಳುತ್ತದೆ. ಕಲೆ ಒಳ್ಳೆಯ ಅಭಿರುಚಿ ಬೆಳೆಸಬೇಕು. ಸಮಾಜವನ್ನು ಬೆಳೆಸುವ ಹೊಣೆ ಕಲೆಗೆ ಇದೆ. ಅದನ್ನು ಅರ್ಥ ಮಾಡಿಕೊಂಡವರು, ಆ ಅನುಭವವನ್ನು ಅರ್ಥ ಮಾಡಿಕೊಂಡವರು ಮತ್ತೆ ಮತ್ತೆ ನಾಟಕ ನೋಡಲು ಬರುತ್ತಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಎಷ್ಟೇ ಚಳುವಳಿಗಳು ನಡೆದರೂ ಭಾರಿ ಬದಲಾವಣೆ ಕಾಣಿಸುವುದಿಲ್ಲ. ರಂಗಭೂಮಿ ನಿರಂತರವಾಗಿ ಬದಲಾಗುತ್ತಿದೆ. ಏನು ಕಾರಣ?

ನಾವು ಪ್ರತೀ ನಾಟಕ ಪ್ರದರ್ಶನವನ್ನೂ ರಂಗ ಪ್ರಯೋಗ ಎಂದೇ ಕರೆಯುತ್ತೇವೆ. ಇದೊಂದು ಪ್ರಯೋಗ. ಪ್ರತೀ ದಿನದ ಪ್ರಯೋಗ. ಒಬ್ಬ ಪಾತ್ರಧಾರಿಗೆ ಹುಷಾರಿಲ್ಲದೆ ಹೋದಾಗ ಮತ್ತೊಬ್ಬ ಪಾತ್ರಧಾರಿ ಸರಿದೂಗಿಸಿಕೊಂಡು ಹೋಗಬೇಕು. ಇಲ್ಲವೇ ನಾಟಕ ಸೋಲುತ್ತದೆ. ನಾಟಕ ಸೋಲಲು ಪಾತ್ರಧಾರಿ ಬಿಡಬಾರದು. ನಿಜವಾದ ಕಲೆ ರಂಗಭೂಮಿಯಲ್ಲಿದೆ. ಇಲ್ಲಿ ಬೆವರಿದೆ. ರಕ್ತ ಇದೆ. ಕಣ್ಣೀರಿದೆ. ಜೀವ ಇದೆ.

ಅದಕ್ಕಾಗಿಯೇ ನೀವು ಧಾರಾವಾಹಿಯಲ್ಲಿ ನಟಿಸದೇ ಇರುವ ತೀರ್ಮಾನ ತೆಗೆದುಕೊಂಡಿದ್ದಾ?

ಅದು ಬೇರೆ ಮಾಧ್ಯಮ. ನನಗೆ ಒಗ್ಗುವುದಿಲ್ಲ. ಧಾರಾವಾಹಿಯನ್ನು ಬಾತ್‌ರೂಮಿನಲ್ಲಿಯೂ ನೋಡುತ್ತಾರೆ. ಆದರೆ ನಾನು ನಟಿಯಾಗಿ ಸ್ವಲ್ಪವಾದರೂ ಗಾಂಭೀರ್ಯ ಬಯಸುತ್ತೇನೆ. ನಾನು ನಟನೆಗೆ ಕೊಂಚ ಗೌರವ ನಿರೀಕ್ಷೆ ಮಾಡುತ್ತೇನೆ.

ಹೊಸ ಹುಡುಗರ ಮೇಲೆ ಭರವಸೆ ಇದೆಯೇ?

ಭರವಸೆ ಇದೆ. ಆದರೆ ಅವರು ರಂಗಭೂಮಿಯಲ್ಲಿಯೇ ಇರುವುದು ಕಷ್ಟವಿದೆ. ಇಲ್ಲೇ ಇದ್ದು ಜೀವನ ನಡೆಸುವುದು ಕಷ್ಟವಾಗುತ್ತದೆ. ಅನೇಕರು ಶಾಲೆಗಳಲ್ಲಿ ರಂಗಭೂಮಿ ತರಗತಿ ತೆಗೆದುಕೊಳ್ಳುತ್ತಾ, ಕಾರ್ಪೋರೇಟ್‌ ವರ್ಕ್‌ಶಾಪ್‌ ನಡೆಸುತ್ತಾ ಹಠದಿಂದ ರಂಗಭೂಮಿಯಲ್ಲಿಯೇ ಇರುವುದಾಗಿ ಹಠದಿಂದ ಹೇಳುತ್ತಿದ್ದಾರೆ.

ನನ್ನ ನಂತರವೂ ರಂಗಶಂಕರ ಯಶಸ್ವಿಯಾಗಿ ಮುಂದುವರಿಯಬೇಕು: ಅರುಂಧತಿ ನಾಗ್!

ರಂಗಭೂಮಿಗೆ ಏನು ಬೇಕು?

ತರಬೇತಿ ಬೇಕು. ರಂಗಭೂಮಿ ಪರಂಪರೆ ತಿಳಿದುಕೊಂಡಿರಬೇಕು. ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿರಬೇಕು. ಅಭ್ಯಾಸ ಮಾಡಬೇಕು. ನೃತ್ಯ ಪ್ರಕಾರವನ್ನು ಕಲಿಯಲು ಹಲವು ವರ್ಷಗಳೇ ತೆಗೆದುಕೊಳ್ಳುತ್ತಾರೆ. ಹಲವಾರು ವರ್ಷ ಸಂಗೀತಾಭ್ಯಾಸ ಮಾಡುತ್ತಾರೆ. ಆದರೆ ರಂಗಭೂಮಿಗೆ ಯಾವುದೇ ತಯಾರಿ ಇಲ್ಲದೆ ಬರುತ್ತಾರೆ. ಹಾಗಾಗಬಾರದು. ಗುಣಮಟ್ಟ ಜಾಸ್ತಿ ಆಗಬೇಕು. ಧ್ವನಿ, ದೈಹಿಕ ಭಾಷೆಯನ್ನು ದುಡಿಸಿಕೊಳ್ಳಬೇಕು. ಒಳ್ಳೆಯ ನಟರು, ನಿರ್ದೇಶಕರು ಬೇಕು ಎಂದಾದರೆ ತರಬೇತಿಯೂ ಬೇಕು.

ರಂಗಶಂಕರದಲ್ಲಿ ಪ್ರದರ್ಶನವಾಗುವ ನಾಟಕಗಳಿಗೆ ಆಯ್ಕೆ ಸಮಿತಿ ಇದೆಯೇ?

ಇಲ್ಲ. ಸಾಮಾನ್ಯವಾಗಿ ಎಲ್ಲಾ ನಾಟಕಗಳಿಗೆ ಅವಕಾಶ ಕೊಡುತ್ತೇವೆ. ಕೆಲವು ತಂಡಗಳನ್ನು ಖುದ್ದಾಗಿ ಆಹ್ವಾನಿಸುತ್ತೇವೆ. ನಾನು, ಸೂರಿ, ಮುದ್ದಣ್ಣ ನಾಟಕ ನೋಡುತ್ತೇವೆ. ತೀರಾ ನಾಟಕ ಕೆಟ್ಟದಾಗಿದ್ದರೆ ಎರಡನೇ ಬಾರಿ ಅವಕಾಶ ಕೊಡುವುದಿಲ್ಲ. ನಾವು ಇಷ್ಟು ವರ್ಷಗಳಲ್ಲಿ ಬಹಳ ಎಚ್ಚರಿಕೆಯಿಂದ, ನಿಷ್ಠೆಯಿಂದ ರಂಗಶಂಕರ ಕಟ್ಟಿದ್ದೇವೆ. ನಡೆಸುತ್ತಿದ್ದೇವೆ. ಅಷ್ಟೇ ನಿಷ್ಠೆ ಎಲ್ಲಾ ರಂಗತಂಡಗಳಿಗೂ ಇರಬೇಕು ಅಂತ ಬಯಸುತ್ತೇವೆ.

25ನೇ ವರ್ಷಕ್ಕೆ ಸಂಭ್ರಮಿಸುವುದು ವಾಡಿಕೆ. ರಂಗಶಂಕರಕ್ಕೆ 20 ಸಂಭ್ರಮಾಚರಣೆ ಉದ್ದೇಶವೇನು?

ಮುಂದಿನ ಐದು ವರ್ಷದಲ್ಲಿ ಮುಂದಿನ ಪೀಳಿಗೆಯನ್ನು ಸಿದ್ಧವಾಗಿಸುವ ಪ್ರಯತ್ನ ನಡೆಯುತ್ತಿದೆ. 20 ವರ್ಷದಿಂದ ಇಲ್ಲೇ ಬೆಳೆದು ಬಂದಿರುವ ಒಂದು ತಂಡವಿದೆ. ಅವರು ಮುಂದಿನ ದಾರಿಗೆ ಆಧಾರವಾಗುವ ಭರವಸೆ ಇದೆ.

ಇನ್ನೊಂದು ರಂಗಶಂಕರ ಕಟ್ಚುವ ಉತ್ಸಾಹ ಇದೆಯೇ?

ಮೊದಲು ಇತ್ತು. ಈಗ ಸ್ವಲ್ಪ ಸುಸ್ತಾಗಿದೆ. ಮೊದಲು ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ರಂಗಶಂಕರ ಕಟ್ಟುವ ಆಲೋಚನೆ ಇತ್ತು. ಒಂದು ನಾಟಕಕ್ಕೆ, ಮತ್ತೊಂದು ಸಂಗೀತಕ್ಕೆ, ಇನ್ನೊಂದು ನೃತ್ಯಕ್ಕೆ, ಮಗದೊಂದು ಫ್ಯೂಷನ್‌ಗೆ. ಆದರೆ ಇಂಥಾ ಸಂಸ್ಥೆಯನ್ನು ನಡೆಸುವುದಕ್ಕೆ ಯಾರಿದ್ದಾರೆ. ಬಹಳ ಶ್ರಮ ಬೇಡುವ ಕೆಲಸ.

ಕನಸುಗಳು ಈಡೇರಿವೆಯೇ?

ಹವ್ಯಾಸಿ ರಂಗಭೂಮಿಗೆ ಒಂದು ಶಾಶ್ವತ ವೇದಿಕೆ ಕಲ್ಪಿಸುವ ಆಸೆ ಇತ್ತು. ಹವ್ಯಾಸಿ ರಂಗಭೂಮಿಯವರೆಲ್ಲಾ ಖುಷಿಯಾಗಿದ್ದಾರೆ. ಹಾಗಾಗಿ ನಾನೂ ಖುಷಿಯಾಗಿದ್ದೇನೆ.

ಗಿರೀಶ್‌ ಕಾರ್ನಾಡ್‌ರನ್ನು ರಂಗಶಂಕರ ಎಷ್ಟು ಮಿಸ್‌ ಮಾಡಿಕೊಳ್ಳುತ್ತಿದೆ?

ಅಂಥಾ ದೊಡ್ಡ ವ್ಯಕ್ತಿ ಎಲ್ಲಿದ್ದಾರೆ ಈಗ.. ಹಾಗೆ ಬೈಯುವವರೂ ಯಾರು ಇಲ್ಲ. ತಪ್ಪಾದಾಗ ಗಟ್ಟಿಯಾಗಿ ಬೈದು ಬಿಡುತ್ತಿದ್ದರು. ಅವರ ನಾಟಕದಲ್ಲಿ ತಪ್ಪು ಮಾಡಿದಾಗ ಈ ನಾಟಕ ನಾನು ಬರೆದಿದ್ದಾ ಎಂದು ಕೇಳುತ್ತಿದ್ದರು. ಅವರನ್ನು ರಂಗಶಂಕರ, ನಾವು ಬೇರೆ ಬೇರೆ ಕಾರಣಕ್ಕೆ ಮಿಸ್‌ ಮಾಡಿಕೊಳ್ಳುತ್ತೇವೆ. ನಾನು ಒಂದು ವರ್ಷ ನಾಟಕದಲ್ಲಿ ಅಭಿನಯಿಸಿರಲಿಲ್ಲ. ಆಗ ಅವರೇ ಬಂದು ಒಡಕಲು ಬಿಂಬ ನಾಟಕ ಬರೆದಿದ್ದೇನೆ, ಅದರಲ್ಲಿ ನೀನೇ ಅಭಿನಯಿಸಬೇಕು ಒಂದು ಒತ್ತಾಯಿಸಿದರು. ಆಮೇಲೆ ಆ ನಾಟಕ ಇಂಗ್ಲಿಷ್‌ಗೆ ಭಾಷಾಂತರಗೊಂಡು ಅಲಿಕ್‌ ಪದಮ್‌ಸಿ ನಿರ್ದೇಶನ ಮಾಡಿದರು. ಶಬಾನಾ ಆಜ್ಮಿ ಪ್ರಧಾನ ಪಾತ್ರದಲ್ಲಿ ನಟಿಸಿದಳು. ಶಬಾನಾಗೂ ರಂಗಶಂಕರ ಅಂದ್ರೆ ಇಷ್ಟ. ರಂಗಶಂಕರ ನಿರ್ಮಾಣವಾಗುತ್ತಿದ್ದಾಗ ಅವಳ ರಾಜ್ಯಸಭಾ ಫಂಡ್‌ನಿಂದ ಹಣ ಕೊಡಿಸಿದ್ದಳು. ನನ್ನ ಕನಸನ್ನು ಮೆಚ್ಚಿಕೊಳ್ಳುತ್ತಿದ್ದ ಮತ್ತೊಂದು ಜೀವ ಅವಳು. ಈಗಲೂ ರಂಗಶಂಕರಕ್ಕೆ ಬಂದರೆ ಅವಳು ಅವಳ ಎಂದಿನ ಚಾರ್ಜ್‌ ಮಾಡುವುದಿಲ್ಲ. ಅವಳಿಗೂ ರಂಗಶಂಕರ ಅಂದ್ರೆ ಆಸೆ.

ಹೊಸ ಕಾಲದ ನಿರ್ದೇಶಕಿಯರು ನಿಮ್ಮಲ್ಲಿ ಭರವಸೆ ಮೂಡಿಸಿದ್ದಾರೆಯೇ?

ಮಂಗಳಾ, ದಾಕ್ಷಾಯಣಿ, ಚಂಪಾ ಶೆಟ್ಟಿ, ಶರಣ್ಯಾ ರಾಮ್‌ಪ್ರಕಾಶ್‌, ಶ್ವೇತಾ, ಅಕ್ಷತಾ ಹೀಗೆ ಬಹಳಷ್ಟು ಮಂದಿ ಇದ್ದಾರೆ.

ಆತ್ಮಚರಿತ್ರೆ ಬರೆಯುವ ಮನಸ್ಸಿದೆಯೇ?

ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿ ಕನಸು ಕಂಡರೆ ರಂಗಶಂಕರದಂತಹ ದೊಡ್ಡ ಕನಸನ್ನು ಹೇಗೆ ನನಸು ಮಾಡಿಕೊಳ್ಳಬಹುದು ಎಂಬುದನ್ನು ಬೇಕಾದರೆ ಬರೆಯಬಹುದು. ರಂಗಶಂಕರ ಅನ್ನುವುದು ಬಹಳ ದೊಡ್ಡ ಜವಾಬ್ದಾರಿ. ಯಾವಾಗ ಜೆಸಿಬಿ ಬಂದು ಕೆಲಸ ಆರಂಭಿಸಿತೋ ಅಂದು ನಾನು ಹಿಂದೆ ಹೆಜ್ಜೆ ಇಡುವ ಅವಕಾಶ ಕಳೆದುಕೊಂಡೆ. ಇಲ್ಲಿಯವರೆಗೆ ದಾರಿ ಸಾಗಿದೆ. ಒಳ್ಳೆಯ ಕೈಗಳಲ್ಲಿ ರಂಗಶಂಕರ ಕೊಟ್ಟು ಹೋಗಬೇಕಷ್ಟೇ.

Follow Us:
Download App:
  • android
  • ios