ಜಿಎಸ್‌ಎಸ್ ಮೊಮ್ಮಗಳು ಅನನ್ಯಾ ಪ್ರಸಾದ್‌ರಿಂದ ಮಹಾ ಸಮುದ್ರಯಾನ
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯಾ ಪ್ರಸಾದ್, ಅಟ್ಲಾಂಟಿಕ್ ಮಹಾಸಾಗರದಲ್ಲಿ ಏಕಾಂಗಿಯಾಗಿ 3000 ಮೈಲುಗಳ ರೋಯಿಂಗ್ ಸಾಹಸ ಮಾಡಲಿದ್ದಾರೆ. ಡಿಸೆಂಬರ್ 12 ರಿಂದ ಆರಂಭವಾಗುವ ಈ ಸಾಹಸದಲ್ಲಿ, ಅವರು ದಿನಕ್ಕೆ 50 ಮೈಲುಗಳಷ್ಟು ರೋಯಿಂಗ್ ಮಾಡಬೇಕಾಗುತ್ತದೆ ಮತ್ತು ಈ ಮೂಲಕ ಸಾಮಾಜಿಕ ಕಾರ್ಯಗಳಿಗೆ ಹಣ ಸಂಗ್ರಹಿಸುವ ಗುರಿಯನ್ನೂ ಹೊಂದಿದ್ದಾರೆ.
ರಾಜೇಶ್ ಶೆಟ್ಟಿ
ಒಂದು ಆಸೆ, ಒಂದು ಕನಸು ಮತ್ತು ಹುಮ್ಮಸ್ಸು ಎಲ್ಲಿಂದ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಬಹುದು. ಅದಕ್ಕೆ ಸಾಕ್ಷಿ ಅನನ್ಯಾ ಪ್ರಸಾದ್.
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ಪುತ್ರ ಜಿಎಸ್ ಶಿವಪ್ರಸಾದ್ ಅವರ ಪುತ್ರಿ. ಪ್ರಸ್ತುತ ಇಂಗ್ಲೆಂಡ್‌ನಲ್ಲಿ ವಾಸ. ಓದಿದ್ದು ಅರ್ಥಶಾಸ್ತ್ರ. ಮಾಡಲು ಹೊರಟಿರುವುದು ಅಸಾಧಾರಣ ಸಾಹಸ.
ಅಟ್ಲಾಂಟಿಕ್ ಮಹಾಸಾಗರ ಅತ್ಯಂತ ಪ್ರಕ್ಷುಬ್ಧತೆಯುಳ್ಳ ಸಾಗರ ಎಂದೇ ಕರೆಯಲ್ಪಡುತ್ತದೆ. ಈ ಮಹಾಸಾಗರದಲ್ಲಿ ಪ್ರತೀ ವರ್ಷ ವರ್ಲ್ಡ್ ಟಫೆಸ್ಟ್ ರೋ ಎಂಬ ರೋಯಿಂಗ್ ಕಾರ್ಯಕ್ರಮ ನಡೆಯುತ್ತದೆ. ಅದಕ್ಕೆ ರೇಸ್ ಅಂತಲೂ ಕರೆಯುತ್ತಾರೆ. 3000 ಮೈಲುಗಳನ್ನು ಅಂದ್ರೆ 4800 ಕಿಮೀ ದೂರವನ್ನು ರೋಯಿಂಗ್ ಮಾಡಿಕೊಂಡು ಹೋಗಬೇಕು. ಒಬ್ಬರೇ ಹೋಗಬಹುದು. ತಂಡದ ಜೊತೆ ಹೋಗಬಹುದು. ಎಷ್ಟು ವೇಗವಾಗಿ ಬೇಕಾದರೂ ಹೋಗಬಹುದು. ಅವರವರ ಸಾಮರ್ಥ್ಯಕ್ಕೆ ಬಿಟ್ಟಿದ್ದು. ಹೇಗೇ ಹೋದರೂ ಸುಲಭವಲ್ಲ. ಅದರಲ್ಲೂ ಒಬ್ಬರೇ ಹೋಗುವುದಕ್ಕಂತೂ ಭಾರಿ ಶಕ್ತಿ ಬೇಕು. ಮಾನಸಿಕವಾಗಿ ದೃಢತೆ ಇರಬೇಕು. ಯಾಕೆಂದರೆ ಒಂದು ಸಲ ರೋಯಿಂಗ್ ಬೋಟ್ ಹತ್ತಿದ ಮೇಲೆ 3000 ಮೈಲುಗಳು ದಾಟಿದ ಮೇಲೆಯೇ ಕೆಳಗೆ ಇಳಿಯುವುದು. ಅಲ್ಲಿಯವರೆಗೆ 200 ದಿನಗಳು ಅದೇ ರೋಯಿಂಗ್ ಬೋಟೇ ಮನೆ. ಮೇಲೆ ಆಕಾಶ, ಕೆಳಗೆ ನೀರು. ಅಷ್ಟೇ ಜಗತ್ತು.
ಹೀಗೆ ಹೋಗುವವರು ದಿನಕ್ಕೆ 5000 ಕ್ಯಾಲರಿ ಕಳೆದುಕೊಳ್ಳುವುದಿದೆ. ಕೆಲವು ಕಡೆ ಸಮುದ್ರದ ಆಳ ಎಂಟೂವರೆ ಕಿಮೀ ಇದೆ ಎಂದು ಲೆಕ್ಕಾಚಾರ ಹೇಳುತ್ತದೆ. ಬಹುತೇಕರು ಈ ಪ್ರಯಾಣ ಮುಗಿಸುವ ಹೊತ್ತಿಗೆ 8 ಕೆಜಿ ತೂಕ ಕಳೆದುಕೊಳ್ಳುತ್ತಾರೆ. ವಿಶೇಷ ಎಂದರೆ 2018ರಲ್ಲಿ ಹೀಗೆ ರೋಯಿಂಗ್ ರೇಸ್ ಹೋಗಿದ್ದ ಕೆಲ್ಡಾ ವುಡ್ ಎಂಬವರ ರೋಯಿಂಗ್ ಬೋಟ್ ಜೊತೆಗೆ ಒಂದು ವೇಲ್ ಏಳು ದಿನಗಳ ಕಾಲ ಜೊತೆಗಿತ್ತು.
ಇಂಥದ್ದೊಂದು ಅಪರೂಪದ ಸಾಹಸ ಮಾಡಬೇಕು ಅಂತ ಹೊರಟಿದ್ದಾರೆ ಅನನ್ಯಾ. ಇದೆಲ್ಲಾ ಶುರುವಾಗಿದ್ದು ಹೇಗೆ ಎಂದರೆ, ‘2018ರಿಂದ ನಾನು ವರ್ಲ್ಡ್ ಟಫೆಸ್ಟ್ ರೋ’ ಗಮನಿಸುತ್ತಿದ್ದೇನೆ. ರೋಯಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಈ ಸಾಹಸಮಯ ರೋಯಿಂಗ್‌ನಲ್ಲಿ ಬಿಳಿಯರಲ್ಲದವರು ಭಾಗವಹಿಸುವುದು ತುಂಬಾ ಕಡಿಮೆ. ಈ ರೋಯಿಂಗ್‌ಗೆ ಹೋಗುತ್ತಿರುವವರಲ್ಲಿ ಬಿಳಿಯರಲ್ಲದ ವರ್ಗದಲ್ಲದ ಮೊದಲ ಹುಡುಗಿ ನಾನು. ನನಗೆ ಮೊದಲಿನಿಂದಲೂ ಭಿನ್ನ ದಾರಿಯಲ್ಲಿ ನಡೆಯುವ ಆಸೆ. ಅದಕ್ಕಾಗಿ ಈ ಹೊಸ ಹಾದಿಯಲ್ಲಿ ನಡೆಯುತ್ತಿದ್ದೇನೆ. ನನಗೆ ಅಡ್ವೆಂಚರ್ ಹಿನ್ನೆಲೆ ಇಲ್ಲ. ಕುಟುಂಬದ ಯಾರೊಬ್ಬರೂ ಇಂಥಾ ಸಾಹಸ ಮಾಡಿದ ಉದಾಹರಣೆ ಇಲ್ಲ. ಅಂಥದ್ದರಲ್ಲಿ ನಾನೇ ಇಂತಹ ಸಾಹಸ ಮಾಡಬಹುದು ಅಂತಾದರೆ ಯಾರು ಬೇಕಾದರೂ ಏನು ಬೇಕಾದರೂ ಮಾಡಬಹುದು ಅಂತ ತಿಳಿಸುವುದೇ ನನ್ನ ಉದ್ದೇಶ. ಅದರಿಂದ ಯಾರಾದರೂ ಸ್ಫೂರ್ತಿ ಪಡೆದರೆ ಪ್ರಯತ್ನ ಸಾರ್ಥಕ’ ಎನ್ನುತ್ತಾರೆ ಅನನ್ಯಾ.
ಒಬ್ಬಳೇ ಹುಡುಗಿ ಪ್ರತೀ ದಿನ ಕನಿಷ್ಠ 50 ಮೈಲು ರೋಯಿಂಗ್ ಮಾಡುವುದು ಸುಲಭವಲ್ಲ. ಅದಕ್ಕಾಗಿ ಅನನ್ಯಾ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ತರಬೇತಿ ಪಡೆದುಕೊಂಡಿದ್ದಾರೆ. ಜೊತೆಗೆ ನ್ಯಾವಿಗೇಷನ್, ಆಹಾರ ತಯಾರಿ ಕಲಿಕೆಯನ್ನೂ ಪಡೆದಿದ್ದಾರೆ. ಅವರ ರೋಯಿಂಗ್ ಬೋಟ್‌ನಲ್ಲಿ ಮೇಲೆ ಕುಳಿತು ರೋಯಿಂಗ್ ಮಾಡುತ್ತಾರೆ. ಕೆಳಗೊಂದು ಕ್ಯಾಬಿನ್ ಇದೆ. ಅಲ್ಲಿ ಆಹಾರ, ವಿಶ್ರಾಂತಿ ಇತ್ಯಾದಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಒಂದು ಸಲ ಈ ಬೋಟ್ ಹತ್ತಿದ ಮೇಲೆ ಇಳಿಯುವ ಹಾಗಿಲ್ಲವಾದ್ದರಿಂದ ಎಲ್ಲಾ ವ್ಯವಸ್ಥೆಯೂ ಬೋಟ್‌ನಲ್ಲಿಯೇ ಇರುವುದು ಅವಶ್ಯ ಮತ್ತು ಅನಿವಾರ್ಯ. ಈ ಸಂಪೂರ್ಣ ಯಾನದಲ್ಲಿ ಇವರನ್ನು ಗಮನಿಸುವುದಕ್ಕೊಂದು ಸ್ವಲ್ಪ ದೂರದಲ್ಲಿ ಯಾಚ್ ಬರುತ್ತಿರುತ್ತದೆ. ಆ ದೊಡ್ಡ ಯಾಚ್‌ಗೂ ಇವರಿಗೂ ಒಂದು ದಾರ ಕಟ್ಟಿರುತ್ತಾರೆ. ಅಷ್ಟರ ಮಟ್ಟಿಗೆ ಸುರಕ್ಷತೆ ಇದೆ.
ಡಿಸೆಂಬರ್ 12ರಂದು ಸ್ಪೇನ್ ಸಮೀಪದ ಲಾ ಗೊಮೆರಾ ಎಂಬ ದ್ವೀಪದಿಂದ ಅನನ್ಯಾ ಈ ಮಹಾಯಾನ ಶುರು ಮಾಡುತ್ತಾರೆ. ರಾತ್ರಿ ಹಗಲು, ಬಿಸಿಲು ಚಳಿ ಎನ್ನದೆ ಮುಂದೆ ಸಾಗುತ್ತಾರೆ. 3000 ಮೈಲು ದೂರ ಇರುವ ಆಂಟಿಗುವಾದ ದ್ವೀಪದಲ್ಲಿ ಮಹಾಯಾನ ಪೂರ್ತಿ ಗೊಳಿಸುತ್ತಾರೆ. ಮಾಹಿತಿ ಕೇಳುವುದಕ್ಕೆ ಸುಲಭ ಇದೆ. ಆದರೆ ಸಮುದ್ರ ಯಾವ ಹೊತ್ತಲ್ಲಿ ಹೇಗೆ ವರ್ತಿಸುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಒಮ್ಮೆ ಶಾಂತ, ಮತ್ತೊಮ್ಮೆ ಭೋರ್ಗರೆತ. ಅವೆಲ್ಲಕ್ಕೂ ರೆಡಿಯಾಗಿದ್ದೇನೆ ಎನ್ನುತ್ತಾರೆ ಅನನ್ಯಾ.
‘ನಾನು ಈ ಪ್ರಯಾಣದಲ್ಲಿ ನಿದ್ದೆ ಬಿಡಬೇಕಾಗಿ ಬರಬಹುದು. 20 ಅಡಿ ಎತ್ತರದ ಅಲೆಗಳು ಎದುರಾದರೂ ಅದನ್ನು ಎದುರಿಸಬೇಕು. ಎಲ್ಲವನ್ನೂ ದಾಟಿ ಗುರಿ ತಲುಪಬೇಕು. ಆತಂಕ, ಧೈರ್ಯ, ವಿಶ್ವಾಸ, ಭಯ ಎಲ್ಲವೂ ಇದೆ. ನಾನು ಇದಕ್ಕಾಗಿ ಹಲವು ಸಮಯದಿಂದ ಕಾಯುತ್ತಿದ್ದೇನೆ’ ಎಂದು ಹೇಳುತ್ತಾರೆ.
ಅನನ್ಯಾ ಅವರ ಆಸೆ ಮತ್ತು ಉದ್ದೇಶ ತುಂಬಾ ಸ್ಪಷ್ಟವಾಗಿದೆ. ಅವರು ಈ ಯಾನಕ್ಕಾಗಿ ಬಹಳಷ್ಟು ಖರ್ಚು ಮಾಡಬೇಕು. ಅದಕ್ಕಾಗಿ ಅವರು ಪ್ರಾಯೋಜಕರ ನೆರವು ಕೇಳುತ್ತಿದ್ದಾರೆ. ಇದಕ್ಕಾಗಿ ಖರ್ಚಾಗಿ ಉಳಿದ ಹಣವನ್ನು ಅವರು ಮುಖ್ಯವಾಗಿ ಎರಡು ಸಂಸ್ಥೆಗಳಿಗೆ ದಾನ ಮಾಡುತ್ತಿದ್ದಾರೆ.
ಅದರಲ್ಲಿ ಒಂದು ತನ್ನ ಚಿಕ್ಕಪ್ಪ ಜಿಎಸ್ ಜಯದೇವ್ ಅವರು ಚಾಮನಗರದಲ್ಲಿ ನಡೆಸುತ್ತಿರುವ ‘ದೀನಬಂಧು’ ಶಾಲೆ. ಇನ್ನೊಂದು ಇಂಗ್ಲೆಂಡಿನಲ್ಲಿ ಮಾನಸಿಕ ಆರೋಗ್ಯಕ್ಕಾಗಿ ದುಡಿಯುತ್ತಿರುವ ಮೆಂಟಲ್ ಹೆಲ್ತ್ ಫೌಂಡೇಷನ್. ಈ ಎರಡೂ ಸಂಸ್ಥೆಗಳಿಗೆ ಅವರು ನೆರವು ನೀಡಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಒಂದು ಜನ್ಮಭೂಮಿ, ಇನ್ನೊಂದು ಕರ್ಮಭೂಮಿ ಎರಡೂ ದೇಶಗಳಿಗೂ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾಗೆ ಕಂಟಕ.! ಕೆಂಪೇಗೌಡರ ಬಗ್ಗೆ ಸಿನಿಮಾ ಮಾಡಂಗಿಲ್ಲ ಎಂದ ನಾಗಾಭರಣ!
ಅನನ್ಯಾ ಪ್ರಸಾದ್ ಅವರು ಈ ಮಹಾಯಾನದಲ್ಲಿ ಒಬ್ಬರೇ ಹೋಗುತ್ತಿಲ್ಲ. ಅವರ ಆಸೆ, ಕನಸುಗಳ ಜೊತೆ ಕನ್ನಡ ಇದೆ. ಕನ್ನಡ ನಾಡಿದೆ. ಕರ್ನಾಟಕ ಜನರ ಬದುಕಿನಲ್ಲಿ, ಭಾಷೆಯಲ್ಲಿ ಬೆರೆತು ಹೋಗಿರುವ ಜಿಎಸ್ ಶಿವರುದ್ರಪ್ಪನವರ ಕುಟುಂಬದ ಕಿಡಿಯ ಸಾಧನೆ ಕನ್ನಡ ನಾಡಿಗೂ ಹಿರಿಮೆ ತರಲಿದೆ. ಆಕೆ ಸುರಕ್ಷಿತವಾಗಿ ಈ ಸಾಧನೆ ಮಾಡಿ ಕನ್ನಡದ ಹಿರಿಮೆಯನ್ನು ಹೆಚ್ಚಿಸಲಿ ಎಂಬ ಆಶಯ ನಮ್ಮದು. ನಿಮ್ಮ ಹಾರೈಕೆ ಇರಲಿ.
ಬುದ್ಧನ ಕಾರುಣ್ಯ, ಬಸವಣ್ಣನ ಕಾಳಜಿಯೇ ಮೈವೆತ್ತ ರೂಪ!
ನೆರವು ಮತ್ತು ಹಾರೈಕೆ: ಅನನ್ಯಾ ಅವರು ಈ ಯಾನಕ್ಕೆಂದೇ ಒಂದು ವೆಬ್‌ಸೈಟ್ ಮಾಡಿದ್ದಾರೆ. ಅದರಲ್ಲಿ ಅವರ ಉದ್ದೇಶ, ಈ ಪ್ರಯಾಣದ ಹಾದಿ ಇತ್ಯಾದಿ ಎಲ್ಲಾ ಮಾಹಿತಿಗಳೂ ಇವೆ. ಜೊತೆಗೆ ಯಾರಾದರೂ ಪ್ರಾಯೋಜಕರಾಗಿ ಆಸಕ್ತಿ ಇದ್ದವರು ಅವರನ್ನು ಸಂಪರ್ಕಿಸಲೂಬಹುದು. ಆ ಮೂಲಕ ಅವರಿಗೆ ನೆರವು, ಹಾರೈಕೆ ನೀಡಬಹುದು. ಅದಲ್ಲದೇ ಅವರಿಗೊಂದು ಶುಭಾಶಯ ಸಲ್ಲಿಸುವವರು ಇನ್‌ಸ್ಟಾಗ್ರಾಮ್‌ನಲ್ಲಿನ ಅವರ ಪುಟದಲ್ಲಿ ಅಭಿನಂದನೆ ಸಲ್ಲಿಸಬಹುದು. ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಿರುವ ಕನ್ನಡದ ಹುಡುಗಿಗೆ ಬೆನ್ನು ತಟ್ಟಬಹುದು.
ಇನ್‌ಸ್ಟಾ ಪ್ರೊಫೈಲ್: atlantic_odyssey I ವೆಬ್‌ಸೈಟ್: https://atlanticodyssey.net/