ಕನ್ನಡ ಚಿತ್ರರಂಗ ಸೋಲುತ್ತಿರುವುದು ಯಾಕೆ?

ಸಿನಿಮಾ ಚಿತ್ರೀಕರಣಕ್ಕೆ ನೆಗೆಟಿವ್ (ರೀಲ್) ಬಳಸುತ್ತಿದ್ದ ಕಾಲದಲ್ಲಿ ಖರ್ಚುಗಳಿಗೆ ಕಡಿವಾಣ ಇದ್ದದ್ದರಿಂದಲೇ ಅಂದಿನ ಸಿನಿಮಾಗಳು ದೊಡ್ಡ ನಷ್ಟ ಅನುಭವಿಸುತ್ತಿರಲಿಲ್ಲ. ಆದರೆ ಈಗ ಎಲ್ಲಾ ರೀತಿಯ ವ್ಯವಸ್ಥೆಯಿದ್ದರೂ ಕನ್ನಡ ಚಿತ್ರರಂಗ ಸೋಲುತ್ತಿರುವುದು ಯಾಕೆ?

Why is the Kannada film industry failing, article about kannada cinema industry Vin

ಉದ್ಯಮ, ವ್ಯವಹಾರ ಮತ್ತು ವ್ಯಾಪಾರಗಳಲ್ಲಿ ಖರ್ಚುಗಳನ್ನು ನಿಯಂತ್ರಿಸಿ ಮಾಡುವ ಉಳಿತಾಯವೇ ಮೊದಲ ಲಾಭ ಎನ್ನುತ್ತಾರೆ. ಹಾಗೆ ಸಿನಿಮಾ ಉದ್ಯಮದಲ್ಲಿ ಉಳಿತಾಯದ ಬಗ್ಗೆ ಯೋಚಿಸಿದರೆ ನಷ್ಟದ ಪ್ರಮಾಣ ಕಡಿಮೆ ಆಗಬಹುದು. ಸಿನಿಮಾ ಚಿತ್ರೀಕರಣಕ್ಕೆ ನೆಗೆಟಿವ್ (ರೀಲ್) ಬಳಸುತ್ತಿದ್ದ ಕಾಲದಲ್ಲಿ ಖರ್ಚುಗಳಿಗೆ ಕಡಿವಾಣ ಇದ್ದದ್ದರಿಂದಲೇ ಅಂದಿನ ಸಿನಿಮಾಗಳು ದೊಡ್ಡ ನಷ್ಟ ಅನುಭವಿಸುತ್ತಿರಲಿಲ್ಲ.

ಕನ್ನಡ ಸಿನಿಮಾ ಉದ್ಯಮದಲ್ಲಿ ನೆಗೆಟಿವ್ ಕಡೆಯದಾಗಿ ಬಳಸಿದ್ದು ಸುಮಾರು 2012-13ನೇ ಇಸವಿಯ ಹೊತ್ತಿನಲ್ಲಿ. ಆಗ ಒಂದು ನೆಗೆಟಿವ್ ಕ್ಯಾನ್ ಬೆಲೆ 11,700 ರೂಪಾಯಿಗಳಿತ್ತು. ಒಂದು ಕ್ಯಾನ್ ಒಳಗೆ 400 ಅಡಿಗಳ ನೆಗೆಟಿವ್ ರೀಲ್ ಇರುತ್ತಿದ್ದು, ಅದು ಸುಮಾರು ನಾಲ್ಕು ನಿಮಿಷಗಳ ಚಿತ್ರೀಕರಣ ಮಾಡಲು ಸಾಲುತ್ತಿತ್ತು. ವೃತ್ತಿಪರ ನಿರ್ಮಾಪಕರು ತಮ್ಮ ಬಳಿ ಸಿನಿಮಾ ಮಾಡಲು ಬರುತ್ತಿದ್ದ ಹೊಸ ನಿರ್ದೇಶಕರಿಗೆ ಕೇಳುತ್ತಿದ್ದ ಮೊದಲ ಪ್ರಶ್ನೆ, ‘ಎಷ್ಟು ಕ್ಯಾನ್‌ಗಳಲ್ಲಿ ಶೂಟಿಂಗ್ ಮುಗಿಸುತ್ತೀರ?’ ಒಬ್ಬ ನಿರ್ದೇಶಕನಾಗುವವನಿಗೆ ತಾನು ಇಷ್ಟೇ ಕ್ಯಾನ್ ಬಳಸಿ ತನ್ನ ಕತೆಯನ್ನು ಚಿತ್ರೀಕರಣ ಮಾಡುತ್ತೇನೆ ಎಂಬ ಸ್ಪಷ್ಟತೆ ಇರಬೇಕಿತ್ತು. ಕಡಿಮೆ ಸಂಖ್ಯೆ ಹೇಳಲು ಆತನಿಗೆ ಬಹಳ ಧೈರ್ಯ, ಸ್ಪಷ್ಟತೆ ಮತ್ತು ಮುಖ್ಯವಾಗಿ ಸಿನಿಮಾ ಕೆಲಸದ ಅನುಭವ ಇರಬೇಕಿತ್ತು. ಸಂಖ್ಯೆ ಜಾಸ್ತಿ ಹೇಳಿದರೆ ನಿರ್ಮಾಪಕರು ಬಂಡವಾಳ ಹಾಕುತ್ತಿರಲಿಲ್ಲ.

ಬಿಬಿಎಂಪಿಯಲ್ಲಿ ಕೈ-ಕೈ ಹಿಡಿದುಕೊಂಡು ಕುಣಿದಾಡಿದ ಮಾಲಾಶ್ರೀ-ರವಿಚಂದ್ರನ್ ಜೋಡಿ!

ಆ ಸಮಯದಲ್ಲಿ ಒಂದು ಸಿನಿಮಾಗೆ ಅಂದಾಜು 150 ಕ್ಯಾನ್ ಬಳಸಿ ಚಿತ್ರೀಕರಿಸಿದರೆ 17,55,000 ರುಪಾಯಿ ನೆಗೆಟಿವ್‌ಗೆ ಖರ್ಚಾಗುತ್ತಿತ್ತು. ಅದು ಬಹಳ ದೊಡ್ಡ ಮೊತ್ತವೇ ಆದರೂ 150 ಕ್ಯಾನ್ ಬಳಸಿ ಚಿತ್ರೀಕರಿಸಿದಾಗ ಕಚ್ಚಾ ಸಿನಿಮಾ 600 ನಿಮಿಷಗಳದ್ದಾಗಿರುತ್ತಿತ್ತು. ಎರಡೂವರೆ ಗಂಟೆಯ ಸಿನಿಮಾ ಅಂದರೆ ಮೂರು ಪಟ್ಟು ಹೆಚ್ಚು ಚಿತ್ರೀಕರಣವಾಗುತ್ತಿತ್ತು. ಹತ್ತು ಗಂಟೆಗಳ ಅವಧಿಯ ಕಚ್ಚಾ ಚಿತ್ರೀಕರಣದಿಂದ ಎಡಿಟಿಂಗ್ ಮುಗಿದು ಅಂತಿಮವಾಗಿ ಸಿನಿಮಾ ಎರಡೂವರೆ ಗಂಟೆ ಬಂದರೆ, ಏಳೂವರೆ ಗಂಟೆಯ ಕಚ್ಚಾ ಸಿನಿಮಾದ ನೆಗೆಟಿವ್ ಮಾತ್ರ ವ್ಯರ್ಥ ಆಗುತ್ತಿತ್ತು. ಇನ್ನೂ ಕಡಿಮೆ ಕ್ಯಾನ್ ಬಳಸಿ ಚಿತ್ರೀಕರಿಸಿದಾಗ ವೇಸ್ಟೇಜ್ ಇನ್ನೂ ಕಡಿಮೆ ಇರುತ್ತಿತ್ತು.

ಅಂದಿನ ಅನೇಕ ದೊಡ್ಡ ಹಿಟ್ ಸಿನಿಮಾಗಳು ನೂರೈವತ್ತಕ್ಕಿಂತ ಕಡಿಮೆ ಕ್ಯಾನ್ ಬಳಸಿ ಚಿತ್ರೀಕರಿಸಲ್ಪಟ್ಟವು. ವೇಸ್ಟೇಜ್ ಕಡಿಮೆ ಇದ್ದಂಥವು. ವೇಸ್ಟೇಜ್ ಎಂದರೆ ಬರೀ ನೆಗೆಟಿವ್ ಮಾತ್ರವಲ್ಲ, ಚಿತ್ರೀಕರಣದ ಸಮಯ ಹಾಗೂ ಸಮಯಕ್ಕೆ ತಕ್ಕಂತೆ ಆಗುವ ಖರ್ಚುಗಳು. ನೆಗೆಟಿವ್‌ನಲ್ಲಿ ಚಿತ್ರೀಕರಣ ನಡೆಯುವಾಗ ಚಲನಚಿತ್ರದ ಸ್ಕ್ರಿಪ್ಟ್‌ನಿಂದಲೂ ಸ್ಪಷ್ಟತೆ ಇರುತ್ತಿತ್ತು. ಪ್ರತಿಯೊಂದು ದೃಶ್ಯ, ಚಿತ್ರಿಕೆ (ಶಾಟ್) ಎಲ್ಲವನ್ನೂ ಸರಿಯಾಗಿ ಯೋಚಿಸಿ, ಸಂಯೋಜಿಸಿ ಚಿತ್ರೀಕರಣ ಮಾಡಲಾಗುತ್ತಿತ್ತು. ಅದೂ ಇರಲಿ, ಇದು ಇರಲಿ ಎಂಬ ಬಹು ಆಯ್ಕೆಗಳ (optional shots) ಚಿತ್ರೀಕರಣ ನಡೆಯುತ್ತಿರಲಿಲ್ಲ. ಆ ಕಾರಣದಿಂದ ನಿಗದಿತ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಮುಗಿಯುತ್ತಿತ್ತು. ಖರ್ಚುಗಳು ಹಿಡಿತದಲ್ಲಿ ಇರುತ್ತಿತ್ತು.

ಅಂದು ಸೀರಿಯಲ್ ನಟಿಯರಾಗಿದ್ದ ಇವ್ರು ಈಗ ಟಾಪ್ ಸ್ಯಾಂಡಲ್ ವುಡ್ ಹೀರೋಯಿನ್ಸ್

ನೆಗೆಟಿವ್ ನಂತರದ ಡಿಜಿಟಲ್ ಯುಗ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ತೆರೆದುಕೊಟ್ಟಿತ್ತಾದರೂ ಶಿಸ್ತು ಇಳಿಮುಖವಾಯಿತು. ಉದ್ಯಮದ ಪಟ್ಟಭದ್ರ ಹಿತಾಸಕ್ತಿಗಳನ್ನು ಮೀರಿ ಯಾರು ಬೇಕಾದರೂ ಸಿನಿಮಾ ನಿರ್ಮಾಣ ಮಾಡಬಹುದು ಮತ್ತು ಸಿನಿಮಾ ನಿರ್ದೇಶನ ಮಾಡಬಹುದು ಎಂಬುದು ಹೆಚ್ಚು ಪ್ರಜಾಸತ್ತಾತ್ಮಕವಾದರೂ, ಉದ್ಯಮದ ಒಟ್ಟಾರೆ ಬೆಳವಣಿಗೆಯ ದೃಷ್ಟಿಯಲ್ಲಿ ಸಿನಿಮಾ ಮಾಡುವವರಿಗೆ ಉದ್ಯಮದ ಕುರಿತಾದ ಸಾಮಾನ್ಯ ಅರಿವು ಮತ್ತು ಶಿಸ್ತು ಅತ್ಯಗತ್ಯ. ಉದಾಹರಣೆಗೆ ಈಗ ಎರಡೂವರೆ ಗಂಟೆಗಳ ಅವಧಿಯ ಒಂದು ಸಿನಿಮಾಗಾಗಿ ಸುಮಾರು 110 ಗಂಟೆಗಳ ಕಚ್ಚಾ ಸಿನಿಮಾ ಚಿತ್ರೀಕರಣವಾಗುತ್ತದೆ. ಅದನ್ನು ತುಂಬಿಸಲು ಇಪ್ಪತ್ತು ಹಾರ್ಡ್ ಡಿಸ್ಕ್‌ಗಳ ಬೆಲೆ ನಾಲ್ಕು ಲಕ್ಷಗಳು ಮಾತ್ರ. ನೆಗೆಟಿವ್ ಕ್ಯಾನ್ ಬೆಲೆಗೆ ಹೋಲಿಸಿದರೆ ಹಾರ್ಡ್‌ ಡಿಸ್ಕ್‌ ಖರ್ಚು ಕಮ್ಮಿ. ಆದರೆ ಎರಡೂವರೆ ಗಂಟೆಯ ಒಂದು ಸಿನಿಮಾಗಾಗಿ ನಲವತ್ತನಾಲ್ಕು ಪಟ್ಟು ಕಚ್ಚಾ ಸಿನಿಮಾ ಚಿತ್ರೀಕರಣ ಆಗಿರುತ್ತದೆ.

ನೆಗೆಟಿವ್ ಬಳಕೆಯಲ್ಲಿ ಮೂರು ಪಟ್ಟು ಇದ್ದದ್ದು ಈಗ ನಲವತ್ತನಾಲ್ಕು ಪಟ್ಟು ಹೆಚ್ಚಾಗಿದೆ. ಆ ನಲವತ್ತನಾಲ್ಕು ಪಟ್ಟು ಹೆಚ್ಚಿನ ಶ್ರಮ, ಚಿತ್ರೀಕರಣದ ಖರ್ಚುಗಳು ಹಾಗೂ ಸಮಯದ ಬಗ್ಗೆ ನಿರ್ಮಾಪಕರು ಮತ್ತು ನಿರ್ದೇಶಕರು ಯೋಚಿಸಬೇಕು. ಸಿನಿಮಾದ ಪ್ರಕ್ರಿಯೆಗಳ ಬಗ್ಗೆ ಮುಖ್ಯವಾಗಿ ನಿರ್ಮಾಪಕರಿಗೆ ಹೆಚ್ಚಿನ ಅರಿವಿದ್ದಾಗ ಅವರು ಆಯ್ದುಕೊಳ್ಳುವ ಕತೆ ಹಾಗೂ ನಿರ್ದೇಶಕರ ವಿಚಾರದಲ್ಲಿ ಗಮನವಹಿಸುತ್ತಾರೆ. ಹಾಗಾಗದಿದ್ದಲ್ಲಿ ವರ್ಷವೊಂದಕ್ಕೆ ಬರುವ ಸಿನಿಮಾಗಳ ಸಂಖ್ಯೆ, ಸೋಲುಗಳ ಸಂಖ್ಯೆ, ನಷ್ಟದ ಪ್ರಮಾಣ ಕಡಿಮೆ ಆಗುವುದಿಲ್ಲ. ಲಾಭ ಮಾಡುವುದಕ್ಕಾಗಿಯೇ ಸಿನಿಮಾ ಮಾಡಲು ಬರುವ ನಿರ್ಮಾಪಕರಿಗಿಂತ ಸಿನಿಮಾ ಉದ್ಯಮವನ್ನು ಅರಿತು, ವೃತ್ತಿಪರವಾಗಿ ಸಿನಿಮಾ ಮಾಡುವ ಮತ್ತು ಉದ್ಯಮದಲ್ಲಿ ನೆಲೆ ನಿಲ್ಲುವ ನಿರ್ಮಾಪಕರ ಅಗತ್ಯವಿದೆ. ಹೂಡಿಕೆದಾರ ವೃತ್ತಿಪರನಾದರೆ ವೃತ್ತಿಪರ ತಂಡವನ್ನು ಕಟ್ಟಿಕೊಂಡು ಸಿನಿಮಾ ಮಾಡುತ್ತಾನೆ. ವೃತ್ತಿಪರತೆ ಇಲ್ಲದೆ ಕತೆಯೇ ಸಿನಿಮಾದ ಜೀವಾಳ ಎಂದು ಅನಗತ್ಯ ಖರ್ಚುಗಳಿಂದ ನಿರ್ಮಾಪಕ ತನ್ನ ಜೇಬು ಬರಿದು ಮಾಡಿಕೊಳ್ಳಬಾರದು.

ಅಕಸ್ಮಾತ್ ಇಂದಿಗೂ ನೆಗೆಟಿವ್ ಬಳಕೆಯಲ್ಲಿದ್ದಿದ್ದರೆ, ಒಂದು ಕ್ಯಾನ್ ಬೆಲೆ ಈಗ ಸುಮಾರು 16,000 ರು. ಆಗಿರುತ್ತಿತ್ತು ಎಂದುಕೊಳ್ಳೋಣ. 110 ಗಂಟೆಗಳ ಕಚ್ಚಾ ಸಿನಿಮಾಗೆ 1650 ಕ್ಯಾನ್ ಬಳಕೆ ಆಗುತ್ತಿತ್ತು. ಒಟ್ಟು ನೆಗೆಟಿವ್ ಖರ್ಚು ಎರಡು ಕೋಟಿ ಅರವತ್ತ ನಾಲ್ಕು ಲಕ್ಷ ಆಗುತ್ತಿತ್ತು. ಸಿನಿಮಾದ ಸೋಲಿಗೆ, ನಷ್ಟಕ್ಕೆ ಯಾರನ್ನೋ ದೂರುತ್ತಾ ಕೂರುವ ಬದಲು ಇಂತಹ ಹಲವಾರು ಅಂಶಗಳನ್ನು ಅವಲೋಕಿಸಿ, ಅರಿತು, ಚರ್ಚಿಸಿ ಸಿನಿಮಾ ಮಾಡುವ ನಿರ್ಮಾಪಕರು ಹಾಗೂ ನಿರ್ದೇಶಕರ ಸಂಖ್ಯೆ ಹೆಚ್ಚಾಗಲಿ. ಹಾಗಾಗದಿದ್ದಲ್ಲಿ ಹೊರಗಿನಿಂದ ಬಂದವರು ಹಣ ಕಳೆದುಕೊಳ್ಳುತ್ತಲೇ ಹೋಗುತ್ತಾರೆ, ಮೊದಲಿನಂತೆ ಉದ್ಯಮದೊಳಗಿನ ಪಟ್ಟಭದ್ರ ಹಿತಾಸಕ್ತಿಗಳೇ ಉಳಿಯುತ್ತಾರೆ. ಅವರು ಹೊಸತನಕ್ಕೆ, ಪ್ರಯೋಗಗಳಿಗೆ ಕೈ ಹಾಕದೆ, ಸಿನಿಮಾ ಸೋತರೂ ಲಾಭ ತಂದುಕೊಡುವ ಸ್ಟಾರ್ ನಟರ ಕಾಲ್‌ಶೀಟ್‌ಗಾಗಿ ಕಾಯುತ್ತಾರೆ.

Latest Videos
Follow Us:
Download App:
  • android
  • ios