ಡಿಕೆಶಿ ಬಿಡುಗಡೆ : ದರ್ಗಾದಲ್ಲಿ ವಿಶೇಷ ಪೂಜೆ
ಅಕ್ರಮ ಹಣ ಸಂಗ್ರಹಣೆ ಪ್ರಕರಣದಿಂದ ಜೈಲು ಸೇರಿದ್ದ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಜೈಲಿನಿಂದ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಎಲ್ಲೆಡೆ ಪೂಜೆ ನಡೆಯುತ್ತಿದೆ.
ರಾಮನಗರ [ಅ.26]: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ನಗರದ ಪೀರನ್ ಷಾ ವಲಿ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದರ್ಗಾದಲ್ಲಿ ವಿಸೇಷ ಪೂಜೆ ಸಲ್ಲಿಸಿದ ತರುವಾಯ ರಾಜಕೀಯ ದ್ವೇಷದಿಂದ ನಮ್ಮ ನಾಯಕರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಆದರೆ, ನ್ಯಾಯಾಲಯದಲ್ಲಿ ನಮಗೆ ಜಯ ಸಿಕ್ಕಿದೆ ಎಂದು ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಪರಸ್ಪರ ಸಿಹಿ ತಿನಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕ ಜಿಲ್ಲಾಧ್ಯಕ್ಷ ನಿಜಾಂ ಮುದ್ದೀನ್ ಷರೀಫ್, ಡಿ.ಕೆ. ಶಿವಕುಮಾರ್, ದೆಹಲಿಯಿಂದ ಅ. 26 ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ನಿರ್ಧರಿಸಲಾಗಿದೆ. ರಾಮನಗರದಿಂದಲೂ 200ಕ್ಕೂ ಹೆಚ್ಚು ವಾಹನಗಳಲ್ಲಿ ತೆರಳಲಿದ್ದೇವೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆರೋಪ ಮುಕ್ತರು : ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದಾರೆ. ಹಾಗಾಗಿ ಅವರನ್ನು ರಾಜಕೀಯವಾಗಿ ಹಿನ್ನಡೆ ಉಂಟು ಮಾಡಬೇಕೆಂಬ ಉದ್ದೇಶದಿಂದಲೇ ಬಿಜೆಪಿ ಇಡಿ ಮತ್ತು ಐಟಿ ದಾಳಿಯಂತಹ ಷಡ್ಯಂತ್ರ ನಡೆಸಿದ್ದರು. ಅದೆಲ್ಲವನ್ನು ಧೈರ್ಯವಾಗಿ ಎದುರಿಸಿ ಶಿವಕುಮಾರ್ ಹೊರ ಬಂದಿದ್ದಾರೆ. ಅವರು ಎಲ್ಲಾ ಆರೋಪಗಳಿಂದಲೂ ಮುಕ್ತರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟರು, ಆರ್ಥಿಕ ಅಪರಾಧ ಮಾಡಿರುವವರು ಕೇವಲ ಕಾಂಗ್ರೆಸ್‌ನವರು ಮಾತ್ರ ಎಂಬ ರೀತಿಯಲ್ಲಿ ಬಿಜೆಪಿ ನಾಯಕರು ವರ್ತಿಸುತ್ತಿರುವುದು ಸರಿಯಲ್ಲ. ಬಿಜೆಪಿ ಧೋರಣೆ ಸಹಿಸಲು ಸಾಧ್ಯವೇ ಇಲ್ಲ. ಇಂತಹ ದ್ವೇಷದ ರಾಜಕಾರಣವನ್ನು ಬಿಜೆಪಿ ಬಿಡದಿದ್ದರೆ ಭವಿಷ್ಯದಲ್ಲಿ ಇದು ಅವರಿಗೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಅಲ್ಪಸಂಖ್ಯಾತ ಮುಖಂಡ ಸಮದ್ ಮಾತನಾಡಿ, ಬಿಜೆಪಿಯವರು ಎಷ್ಟೇ ಷಡ್ಯಂತ್ರ ರೂಪಿಸಿದರೂ, ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹಣಿಯಲು ಸಾಧ್ಯವಿಲ್ಲ. ಶಿವಕುಮಾರ್ ಕಾಂಗ್ರೆಸ್ ನಾಯಕರಾಗಿದ್ದರೂ, ಅವರನ್ನು ಎಲ್ಲಾ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಎಲ್ಲಾ ಸಮುದಾಯದ ಜನರು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಎಂಬುದನ್ನು ಮರೆಯಬಾರದು ಎಂದರು.
ದ್ವೇಷ ಸಾಧನೆ: ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದ್ವೇಷ ಸಾಧಿಸುತ್ತಿದೆ. ತಮ್ಮ ಮೇಲಿನ ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತಾರೆ ಎಂಬ ವಿಶ್ವಾಸವಿದೆ. ಈ ಘಟನೆಗಳು ಶಿವಕುಮಾರ್ ಶಕ್ತಿಯನ್ನು ಮತ್ತಷ್ಟುಹೆಚ್ಚಿಸಿದ್ದು, ಕಾಂಗ್ರೆಸ್‌ನಲ್ಲಿ ಅವರು ಭವಿಷ್ಯದ ಮುಖ್ಯಮಂತ್ರಿ ಆಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಮುತ್ತುರಾಜ್, ಮಾಜಿ ಸದಸ್ಯ ಬಾಸಿದ್, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಉನ್ನು ಷರೀಫ್, ಮುಖಂಡರಾದ ನವೀನ್, ಕನ್ನಡ ರಾಜು, ಷಫೀಕ್ ಅಹಮದ್, ತಂಜ್ಹಿಲ್, ಔರನ್ ಮತ್ತಿತರರು ಹಾಜರಿದ್ದರು.