ಕನಕಪುರ (ನ.07) : ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್‌ಬಿ ಸಬ್ ಇನ್ಸ್ ಪೆಕ್ಟರ್ ಬಿ.ನಟರಾಜು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಕೇಂದ್ರ ವಲಯದ ಆರಕ್ಷಕ ಮಹಾನಿರೀಕ್ಷಕ ಕೆ.ವಿ. ಶರತ್ ಚಂದ್ರ ಆದೇಶ ಹೊರಡಿಸಿದ್ದಾರೆ. 

ಕರ್ತವ್ಯದಲ್ಲಿ ಅತೀವ ಉದಾಸೀನತೆ, ಉದ್ಧಟತನ, ದುರ್ನಡತೆ ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸಿ ಕರ್ತವ್ಯ ಲೋಪ ಎಸಗಿರುವುದರಿಂದ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿಕೆ) ನಿಯಮಗಳು 1965/89ರ ನಿಯಮ 5ರಡಿ ತಕ್ಷಣ ದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತಿನಲ್ಲಿರಿಸಲಾಗಿದೆ. 

ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಜಿಲ್ಲಾ ಪೊಲೀಸ್ ಕಚೇರಿಯೇ ಡಿಸಿಆರ್‌ಬಿಗೆ ವರ್ಗಾವಣೆ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕರು ನಿಮ್ಮನ್ನು ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಆದರೂ ಸಹ ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಮೇಲಾಧಿಕಾರಿಗಳ ಆದೇಶಗಳನ್ನು ಧಿಕ್ಕರಿಸಿ ಮೇಲಾಧಿಕಾರಿಗಳ ಆದೇಶಕ್ಕೆ ಅಗೌರವವನ್ನು ತೋರಿಸುವ ಮೂಲಕ ಕರ್ತವ್ಯದಲ್ಲಿ ಅತೀವ ಉದಾಸೀನತೆ, ಉದ್ಧಟತನ, ದುರ್ನಡತೆ ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸಿ ಕರ್ತವ್ಯ ಲೋಪ ಎಸಗಿರುವುದರಿಂದ ಅಮಾನತುಪಡಿಸಲಾಗಿದೆ. 

ಅಮಾನತಿನ ಅವಧಿಯಲ್ಲಿ ನಟರಾಜು ಅವರು ಕರ್ನಾಟಕ ನಾಗರಿಕ ಸೇವಾ ನಿಯಮ 98 (2)ರಡಿಯಲ್ಲಿ ಸೂಚಿಸಿರುವ ಸಂದಾಯಗಳಿಗೆ ಹಕ್ಕುಳ್ಳವರಾಗಿದ್ದಾರೆ. ಅಮಾನತು ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮ 104ರಲ್ಲಿ ಸೂಚಿಸಿರುವ ಪ್ರಕಾರ ನಡೆದುಕೊಳ್ಳುವುದು ಹಾಗೂ ಒಂದು ವೇಳೆ ಕೇಂದ್ರ ಸ್ಥಾನವನ್ನು ಬಿಡಬೇಕಾದರೆ ಅಧಿಕೃತ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆದು ವಿಳಾಸವನ್ನು ನೀಡಿ ನಂತರ ಕೇಂದ್ರ ಸ್ಥಾನವನ್ನು ಬಿಡಬೇಕು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಮಾನತಿನ ಅವಧಿಯಲ್ಲಿ ಯಾರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದಿರೋ ಅವರ ಅಧೀನದಲ್ಲಿಯೇ ಮುಂದು ವರೆಯುವುದು ಮತ್ತು ಅಮಾನತಿನ ಅವಧಿಯಲ್ಲಿ ಯಾವುದೇ ಖಾಸಗಿ ವ್ಯವಹಾರದಲ್ಲಿ ಭಾಗಿಯಾಗಬಾರದು. 

ಯಾವುದೇ ಇತರೆ ಕೆಲಸಗಳನ್ನು ನಿರ್ವಹಿಸಬಾರದು. ಪ್ರತಿ ತಿಂಗಳು ಜೀವನಾಧಾರ ಭತ್ಯೆಯನ್ನು ಪಡೆಯುವ ಮೊದಲು ಯಾವುದೇ ಕೆಲಸ ನಿರ್ವಹಿಸುತ್ತಿಲ್ಲವೆಂದು ದೃಢೀಕೃತ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಘಟಕಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಕೇಂದ್ರ ವಲಯ ಆರಕ್ಷಕ ಮಹಾ ನಿರೀಕ್ಷಕ ಕೆ.ವಿ. ಶರತ್‌ಚಂದ್ರ ಆದೇಶದಲ್ಲಿ ತಿಳಿಸಿದ್ದಾರೆ.