ಸ್ವ ಕ್ಷೇತ್ರದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಆಕ್ರೋಶ
ಸ್ವ ಕ್ಷೇತ್ರ ರಾಮನಗರದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ರಾಮನಗರ [ನ.12]: ತಾಲೂಕಿನ ಕೋಟಹಳ್ಳಿ - ಹುಲಿಕೆರೆ ನಡುವೆ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣದ ವಿಚಾರವಾಗಿ ಗ್ರಾಮಸ್ಥರು ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ತಾಲೂಕಿನ ಹುಲಿಕೆರೆ ಮರುಳಸಿದ್ದೇಶ್ವರ ದೇವಾಲಯ ಉದ್ಘಾಟನಾ ಕಾರ್ಯಕ್ರಮ ಮತ್ತು ಮೊಟ್ಟೆದೊಡ್ಡಿ ಗ್ರಾಮದ ಶ್ರೀನಿವಾಸ ದೇವಾಲಯಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹುಲಿಕೆರೆ ದೇವಾಲಯದ ಆವರಣದಲ್ಲಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿದರು.
ಸೇತುವೆ ಸಮಸ್ಯೆ: ಈ ವೇಳೆ ಗ್ರಾಮಸ್ಥರು ಸೇತುವೆ ಸಮಸ್ಯೆ ಹೇಳಿಕೊಂಡು ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಂದ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಕೋಟಹಳ್ಳಿ ಹುಲಿಕೆರೆ ಮಧ್ಯೆ ಅರ್ಕಾವತಿ ನದಿಗೆ ಅಡ್ಡಲಾಗಿ ಯಾವುದೇ ಸೇತುವೆ ಇಲ್ಲ. ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದೇವೆ ನದಿ ದಾಟಲು ಹೋಗಿ ಹಲವಾರು ವರ್ಷಗಳಿಂದ ಶಾಲಾ ಮಕ್ಕಳು ಸೇರಿದಂತೆ ಸುಮಾರು 20 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಬಂದು ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಒಂದೂವರೆ ವರ್ಷದಿಂದ ಇಲ್ಲಿಯವರೆಗೂ ಸೇತುವೆ ಕಾಮಗಾರಿ ಪ್ರಾರಂಭವಾಗಿಲ್ಲ. ಹಲವಾರು ಬಾರಿ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ನಾವು ಕೇಳಿದಾಗ ಮಾಡಿಸುತ್ತೇನೆ ಹೇಳುತ್ತೀರಿ ಅಷ್ಟೇ, ಹೀಗಾದರೆ ಮುಂದೆ ನಮ್ಮ ಗ್ರಾಮಕ್ಕೆ ಓಟು ಕೇಳಲು ಬರಬೇಡಿ ಎಂದು ಖಾರವಾಗಿಯೇ ಏರುಧ್ವನಿಯಲ್ಲಿ ಮಾತನಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಕೆಲವೇ ದಿನಗಳಲ್ಲಿ ಬ್ರಿಡ್ಜ್ ಕಾಮಗಾರಿಗೆ ಚಾಲನೆ ಕೊಡಿಸಲಾಗುವುದು, ಸ್ವಲ್ಪ ತಾಳ್ಮೆವಹಿಸಿ ಎಂದು ಗ್ರಾಮಸ್ಥರನ್ನು ಸಮಾಧಾನಿಸಲು ಮುಂದಾದರು.
ಪೋಲೀಸರ ವಿರುದ್ಧ ಧಿಕ್ಕಾರ: ಗುಂಪು ಗುಂಪಾಗಿ ಗ್ರಾಮಸ್ಥರು ಗ್ರಾಮದ ಯುವಕರು ಒಮ್ಮೆಲೆ ಶಾಸಕರನ್ನು ಅಡ್ಡಗಟ್ಟಿಕೊಂಡು ಬ್ರಿಡ್ಜ್ ಕಾಮಗಾರಿ ವಿಷಯವಾಗಿಯೇ ಕೇಳಲು ಮುಂದಾದಾಗ ರಾಮನಗರ ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಣಗೌಡ ಅವರನ್ನು ತಡೆಯುವ ಪ್ರಯತ್ನ ಮಾಡಿ ಚದುರಿಸಿ ಶಾಸಕರಿಗೆ ಕಾರಿನತ್ತ ಹೋಗಲು ಅನುವು ಮಾಡಿಕೊಟ್ಟರು. ಇದರಿಂದ ಕೋಪಗೊಂಡ ಗ್ರಾಮದ ಕೆಲವರು, ಪೊಲೀಸರ ವಿರುದ್ಧವೇ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದ ಪ್ರಸಂಗವೂ ನಡೆಯಿತು.