ಚನ್ನಪಟ್ಟಣ (ನ.11) : ಮನೆಗೆ ನುಗ್ಗಿದ ಕಳ್ಳನನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಲು ಬಂದ ವ್ಯಕ್ತಿ ಠಾಣೆಯಲ್ಲೇ ಹೃದಯಾಘಾತ ದಿಂದ ಸಾವಿಗೀಡಾಗಿರುವ ಘಟನೆ ತಾಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಸಂಭವಿಸಿದೆ. ಶಿವಣ್ಣ(50) ಸಾವಿಗೀಡಾದ ದುರ್ದೈವಿ. 

ತಾಲೂಕಿನ ಮಾದಾಪುರ ಗ್ರಾಮದ ಇವರ ಮನೆಗೆ ಶನಿವಾರ ರಾತ್ರಿ ಕಳ್ಳ ನುಗ್ಗಿದ್ದಾನೆ. ಮನೆಯವರು ಮತ್ತು ಗ್ರಾಮಸ್ಥರಸಹಕಾರದೊಂದಿಗೆ ಕಳ್ಳನನ್ನು ಹಿಡಿದು ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಠಾಣೆಯಲ್ಲಿ ದೂರು ನೀಡಬೇಕಾದರೆ ಇವರಿಗೆ ಎದೆ ಯಲ್ಲಿ ನೋವು ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡು ಕುಸಿದು ಬಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಇವರು ಸಾವನ್ನಪ್ಪಿದ್ದಾರೆ. ಈ ಘಟನೆ ಯಿಂದಾಗಿ ಕುಟುಂಬದವರು ಆತಂಕಗೊಂಡಿದ್ದಾರೆ. ಆರೋಪಿ ಬಂಧನ: ಕಳ್ಳತನ ಮಾಡಲು ಮನೆಗೆ ನುಗ್ಗಿದ್ದ ವ್ಯಕ್ತಿ ಮಂಜುನಾಥ್ ಎಂದು ತಿಳಿದು ಬಂದಿದ್ದು, ಈತನನ್ನು ವಶಕ್ಕೆ ಪಡೆದಿರುವ ಅಕ್ಕೂರು ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಗ್ರಾಮಸ್ಥರ ಆಕ್ರೋಶ: ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಅಕ್ಕೂರು ಪೊಲೀಸರು ವಿಫಲಗೊಂಡಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗಸ್ತು ತಿರುಗುವುದನ್ನು ನಿಲ್ಲಿಸಿದ್ದು ಇದರಿಂದಾಗಿ ಜನತೆ ಭಯ ದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.