ಎಂ. ಅಫ್ರೋಜ್ ಖಾನ್

ರಾಮನಗರ [ನ.06] :  ಜಿಲ್ಲೆಯಲ್ಲಿ ಪ್ರತಿಯೊಂದು ಚುನಾವಣೆಗಳಲ್ಲಿ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ಕನಕಪುರ ನಗರಸಭೆ ಚುನಾವಣೆ ಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರೆ, ಮಾಗಡಿ ಪುರಸಭೆ ಚುನಾವಣೆಯಲ್ಲಿ ನೇರ ಹಣಾಹಣಿ ನಡೆಸುತ್ತಿದೆ. ಇನ್ನು ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನು ವಂತಾಗಿದೆ.

ಕನಕಪುರ ನಗರಸಭೆಯ 31 ವಾರ್ಡುಗಳ ಪೈಕಿ ಕಾಂಗ್ರೆಸ್  07 ಮತ್ತು ಜೆಡಿಎಸ್ 01  ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಾಕಿ ಉಳಿದಿರುವ 23 ವಾರ್ಡುಗಳಲ್ಲಿ ಕಾಂಗ್ರೆಸ್ 15, ಬಿಜೆಪಿ 23, ಜೆಡಿಎಸ್ 04, ಬಿಎಸ್ಪಿ  06, ಎಸ್ ಡಿಪಿಐ 01 ಹಾಗೂ 14 ಮಂದಿ ಪಕ್ಷೇತರರು ಸ್ಪರ್ಧೆ ಮಾಡಿದ್ದಾರೆ.

ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಸಮಬಲದ ಹೋರಾಟ ನೀಡಿ ಪ್ರತಿಸ್ಪರ್ಧಿಯಾಗುತ್ತಿದ್ದ ಜೆಡಿಎಸ್ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಕೇವಲ ಐದು ವಾರ್ಡುಗಳಿಗೆ ಸೀಮಿತಗೊಂಡಿದೆ. ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಪಕ್ಷಕ್ಕಿಂತಲೂ ಕಡಿಮೆ ವಾರ್ಡುಗಳಲ್ಲಿ ಜೆಡಿಎಸ್ ಸ್ಪರ್ಧಿಸಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುತ್ತಿರುವಂತೆ ಕಾಣುತ್ತಿದೆ. ಆದರೆ, ಸ್ಥಳೀಯ  ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಸ್ಥಾನ ಹೊಂದಾಣಿಕೆಗೆ ವಿರೋಧವಿದ್ದರೂ, ಅದನ್ನು ಬಹಿರಂಗ ಪಡಿಸುತ್ತಿಲ್ಲ. ಇದು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿ ಕಮಲ ಅರಳಿದರು ಅಚ್ಚರಿಯಿಲ್ಲ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಜೆಡಿಎಸ್‌ನಿಂದಮಾಜಿ ಸಿಎಂ ಕುಮಾರಸ್ವಾಮಿ ಅವರಾಗಲಿ ಇನ್ನು ಯಾರೂ ಚುನಾವಣಾ ಅಖಾಡಕ್ಕೆ ಪ್ರವೇಶಿಸಿಲ್ಲ.

ಡಿಕೆ ಸಹೋದರರಿಗೆ ಹೆದರಿ ಊರು ತೊರೆದಿದ್ದ ಬಿಜೆಪಿ ಅಭ್ಯರ್ಥಿಗಳು ಮರಳಿದ್ದಾರೆ. ಕನಿಷ್ಠ ಪಕ್ಷ ಬಿಜೆಪಿ ನಾಯಕರು ಕನಕಪುರಕ್ಕೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಆತಂಕ ದೂರ ಮಾಡಿ ಅಭ್ಯರ್ಥಿಗಳಲ್ಲಿ, ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳಿರುವ18 ಮತ್ತು ಜೆಡಿಎಸ್ ಅಭ್ಯರ್ಥಿಗಳಿರುವ 4 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಪ್ರತಿಸ್ಪರ್ಧಿಗಳು ಎಂದು ಹೇಳುವ
ವಾತಾವರಣ ಇಲ್ಲ. ಬಿಎಸ್ಪಿ , ಎಸ್ ಡಿಪಿಐ ಹಾಗೂ ಪಕ್ಷೇತರ ಅಭ್ಯರ್ತಿಗಳು ಕೂಡ ಬಹುತೇಕ ವಾರ್ಡುಗಳಲ್ಲಿ ಪ್ರಬಲರಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಗಡಿಯಲ್ಲಿ ತ್ರಿಕೋನ ಸ್ಪರ್ಧೆ: ಇನ್ನು ಮಾಗಡಿ ಪುರಸಭೆ 23 ವಾರ್ಡಿನ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ  ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ. ಆದರೆ, ಇಲ್ಲಿಯು ಪಕ್ಷೇತರರು ಕೆಲವು ವಾರ್ಡುಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಕಾಂಗ್ರೆಸ್ ನಾಯಕರಾದ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ಜೆಡಿಎಸ್ ಶಾಸಕ ಎ.ಮಂಜುನಾಥ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರೆ, ಬಿಜೆಪಿಯಲ್ಲಿ ಮುಖಂಡರಾದ ರಂಗ ಧಾಮಯ್ಯ, ಎ.ಎಚ್. ಬಸವರಾಜು ಅವರು ಟೊಂಕಕಟ್ಟಿ ಅಭ್ಯರ್ಥಿಗಳ ಗೆಲವಿಗಾಗಿ ಶ್ರಮಿಸುತ್ತಿ ದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳು, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಎಚ್.ಎಂ. ರೇವಣ್ಣ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಚಿತ್ರ ನಟಿ ಶೃತಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಕನಕಪುರ ನಗರಸಭೆ ಮತ್ತು ಮಾಗಡಿ ಪುರಸಭೆಗಳಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇದನ್ನೇ ಲಾಭ ಮಾಡಿಕೊಂಡು ಬಿಜೆಪಿ ಹಿರಿಯ ನಾಯಕರು ಚುನಾವಣೆಯಲ್ಲಿ ಮತದಾರರ ಮನವೊಲಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನ ಮಾಡುವ ಲಕ್ಷಣಗಳು ಕಾಣುತ್ತಿಲ್ಲ.

ಹೀಗಾಗಿಯೇ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಿದೆ. ಚುನಾವಣೆಯನ್ನು ಆಯಾಯ ಪಕ್ಷಗಳ ಸ್ಥಳೀಯ ನಾಯಕರುಗಳೇ ಪ್ರತಿಷ್ಠೆ ಯಾಗಿ ತೆಗೆದುಕೊಂಡು ಹೋರಾಟ ನಡೆಸುತ್ತಿದ್ದು, ಹಿರಿಯ ನಾಯಕರ ಪ್ರವೇಶದ ಬಳಿಕ ಚುನಾವಣೆ ಕಾವು ರಂಗೇರಲಿದೆ. ಅಂತಿಮವಾಗಿ ಚುನಾವಣೆಯಲ್ಲಿಯಾವ ಪಕ್ಷ ಮೇಲುಗೈ ಸಾಧಿಸಲಿದೆ. ಸ್ಪಷ್ಟ ಬಹುಮತ ಬರಲಿದೆಯೇ ಎಂಬ ಪ್ರಶ್ನೆ ಇದ್ದೆ ಇದೆ.