ಪಾಳುಬಾವಿಯೊಂದರಲ್ಲಿ ಅತೀ ಹೆಚ್ಚಿನ ಪ್ರಮಾಣದ ಕೂಲ್ ಡ್ರಿಂಕ್ಸ್ ಬಾಟಲಿಗಳನ್ನು ಡಂಪ್ ಮಾಡಲಾಗಿದೆ. ಈ ಸಂಬಂಧ ಇಲ್ಲಿನ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿಜಯಪುರ [ಅ.22]:  ಪಟ್ಟಣದ ಮಂಡಿಬೆಲೆ ರಸ್ತೆ ಬದಿಯಲ್ಲಿ ಅರಣ್ಯ ಪ್ರದೇಶದಲ್ಲಿರುವ ಪಾಳುಬಾವಿಗೆ ತ್ಯಾಜ್ಯ ಕ್ಯಾಂಪಾ ಆರೆಂಜ್‌ ಫ್ಲೇವರ್‌ ಕೂಲ್‌ಡ್ರಿಂಕ್ಸ್‌ನ ನೂರಾರು ಬಾಟಲ್‌ಗಳನ್ನು ತಂದು ಸುರಿಯಲಾಗಿದೆ. ಕೂಲ್‌ಡ್ರಿಂಕ್ಸ್‌ ಬಾಟಲ್‌ ಮೇಲೆ ಮಾರ್ಚ್ -2019 ಎಂದು ಅವಧಿ ಮುಗಿದ ಅನ್‌ ಬ್ರಾಂಡೆಡ್‌ ಎಂದು ಹೇಳಲಾಗಿದೆ.

ಸುರಿಯಲು ತಂದ ನೂರಾರು ಬಾಟಲ್‌ಗಳು ವಾಹನದಿಂದ ಮಿಲಿಟರಿ ರಸ್ತೆಯುದ್ದಕ್ಕೂ ಬಿದ್ದಿದ್ದು ಬೇರೆ ಕಡೆಯಿಂದ ತಂದು ಇಲ್ಲಿ ಹಾಕಲಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಟಲ್‌ನಲ್ಲಿರುವ ಅವಧಿ ಮುಗಿದ ದ್ರವವನ್ನು ಸೂಕ್ತ ರೀತಿಯಲ್ಲಿ ಮಾಲಿನ್ಯವಾಗದಂತೆ ಚೆಲ್ಲಬೇಕು. ಪ್ಲಾಸ್ಟಿಕ್‌ ಬಾಟಲ್‌ಗಳು ಕೊಳೆಯದೇ ಇರುವುದರಿಂದ ಅವುಗಳನ್ನೂ ಸೂಕ್ತರೀತಿಯಲ್ಲಿ ಮರುಬಳಕೆಗೆ ಅನುಕೂಲ ಕಲ್ಪಿಸಿಕೊಳ್ಳಬೇಕಿತ್ತು. ಎಲ್ಲಿಂದಲೋ ತಂದು ಇಲ್ಲಿನ ಪಾಳುಬಾವಿಗೆ ತಂದು ಸುರಿಯುತ್ತಿರುವುದರಿಂದ ಕಾಲಕಳೆದಂತೆ ಕೆಟ್ಟವಾಸನೆ ಬರುತ್ತದೆ. ರಸ್ತೆಯಲ್ಲಿ ಓಡಾಡಲೂ ಕಷ್ಟವಾಗುತ್ತದೆ. ಇತ್ತೀಚೆಗಷ್ಟೇ ಆಸ್ಪತ್ರೆಯ ಬಳಸಿದ ತ್ಯಾಜ್ಯ ಇಂಜೆಕ್ಷನ್‌ ಸಿರಿಂಜ್‌ಗಳು ಎಲ್ಲೆಂದರಲ್ಲಿ ಅದೇ ರಸ್ತೆಯಲ್ಲಿ ಬಿದ್ದಿದ್ದು ಕೂಡಲೇ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಪಟ್ಟಣ ನಿವಾಸಿ ಲೋಕೇಶ್‌.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅವಧಿ ಮುಗಿದಿರುವ ಕೂಲ್‌ ಡ್ರಿಂಕ್ಸ್‌ನ್ನು ಮಕ್ಕಳು, ಅಪರಿಚಿತರು ಆಕಸ್ಮಿಕವಾಗಿ ಕುಡಿದರೆ ಸಾವು ಖಚಿತವೆಂಬುದು ತಿಳಿದಿದ್ದರೂ ವಿಲೇವಾರಿ ಮಾಡುವಲ್ಲಿ ಸಂಬಂಧಿಸಿದವರು ನಿರ್ಲಕ್ಷಿಸಿದ್ದಾರೆ. ರಸ್ತೆಯಲ್ಲೆಲ್ಲಾ ಕೇಸುಗಟ್ಟಲೇ ಬೀಳಿಸಿಕೊಂಡು ಹೋಗಲಾಗಿದೆ. ಸಂಬಂಧಪಟ್ಟವರು ಕೂಡಲೇ ಪರಿಶೀಲಿಸಿ, ಸಂಬಂಧಿಸಿದ ಕಾರ್ಖಾನೆಯವರ ಮೇಲೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಪಟ್ಟಣ ನಿವಾಸಿಗಳು.

ಕ್ಯಾಂಪಾ ಕೂಲ್‌ ಡ್ರಿಂಕ್ಸ್‌ ಪಟ್ಟಣದಲ್ಲಿ ಮಾರಾಟವಾಗುವುದು ತಿಳಿದಿಲ್ಲ. ಅದೊಂದು ಬ್ರಾಂಡೆಡ್‌ ಕೂಲ್‌ ಡ್ರಿಂಕ್ಸ್‌ ಇರಲಾರದು. ಅನ್‌ ಬ್ರಾಂಡೆಂಡ್‌ ಕೂಲ್‌ಡ್ರಿಂಕ್ಸ್‌ಗಳ ಮಾರಾಟವನ್ನು ನಿಷೇಧಿಸಬೇಕು. ಈ ರೀತಿ ಅವೈಜ್ಞಾನಿಕ ಮತ್ತು ನಿರ್ಲಕ್ಷ್ಯತನದಿಂದ ವಿಲೇವಾರಿ ಮಾಡುವವವರ ವಿರುದ್ಧ ಕ್ರಮ ಅಗತ್ಯ ಎನ್ನುತ್ತಾರೆ ವ್ಯಾಪಾರಸ್ಥ ವಿ.ಪಿ.ಚಂದ್ರು.