ಡಿ.ಕೆ.ಶಿಕುಮಾರ ಬಿಡುಗಡೆ : ಬಿಜೆಪಿ ನಾಯಕರ ಲೆಕ್ಕಾಚಾರ ಉಲ್ಟಾ!
ಅಕ್ರಮ ಹಣ ಸಂಗ್ರಹಣೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೀಗ ಡಿಕೆಶಿ ಹೊರಬಂದಿರುವುದು ಕಾಂಗ್ರೆಸಿಗೆ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ.
ಎಂ.ಅಫ್ರೋಜ್ ಖಾನ್
ರಾಮನಗರ [ಅ.24]: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲು ಪಾಲಾಗಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ಕಾಂಗ್ರೆಸ್ಸಿಗರಲ್ಲಿ ಸಂತಸದ ಜತೆಗೆ ಹೊಸ ಚೈತನ್ಯ ತುಂಬಿದಂತಾಗಿದೆ.
ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆಂದು ಕರೆಸಿಕೊಂಡಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕಳೆದ ಸೆಪ್ಟೆಂಬರ್ 3 ರಂದು ಬಂಧಿಸಿತ್ತು. ಐವತ್ತು ದಿನಗಳ ಕಾಲ ಬಂಧನದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಬುಧವಾರ ಜಾಮೀನು ದೊರಕಿರುವುದರಿಂದ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.
ದೆಹಲಿಯಿಂದ ಆಗಮಿಸುವ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ವಿಮಾನ ನಿಲ್ದಾಣ ಮತ್ತು ರಾಮನಗರದಲ್ಲಿ ಅದ್ಧೂರಿಯಾಗಿ ಸ್ವಾಗತಕೋರಿ ಬರಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ. ಈ ಕ್ಷಣಕ್ಕಾಗಿ ಮುಖಂಡರು ಹಾತೊರೆಯುತ್ತಿದ್ದಾರೆ. ಕೆಲ ನಾಯಕರು ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ದೂರವಾದ ಅನಾಥ ಪ್ರಜ್ಞೆ: ರಾಜಕೀಯ ಕ್ಷೇತ್ರಕ್ಕೆ ಘಟನಾಘಟಿ ನಾಯಕರನ್ನು ಕೊಡುಗೆಯಾಗಿ ನೀಡಿದ ರಾಮನಗರ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಬಂಧನದ ತರುವಾಯ ರಾಜಕೀಯ ಅನಾಥ ಪ್ರಜ್ಞೆ ಕಾಡಲು ಆರಂಭಿಸಿತ್ತು. ಕಳೆದ ಮೂರು ದಶಕಗಳಿಂದಲೂ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕತ್ವವನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದಾರೆ.
ಯಾವುದೇ ಚುನಾವಣೆಗಳಾಗಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದರೂ ಡಿ.ಕೆ.ಶಿವಕುಮಾರ್ ನಿರ್ಧಾರವೇ ಅಂತಿಮವಾಗಿರುತ್ತಿತ್ತು. ಹೀಗಿರುವಾಗ ಡಿಕೆಶಿ ಜೈಲು ಪಾಲದ ನಂತರ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ದಿಕ್ಕು ತೋಚದಂತೆ ಆಗಿತ್ತು.
ಕೇವಲ ಮೂರು ತಿಂಗಳ ಹಿಂದಷ್ಟೇ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಎನಿಸಿದ್ದ ರಾಮನಗರವು ಸಮ್ಮಿಶ್ರ ಸರ್ಕಾರ ಪತನವಾಗುತ್ತಲೇ ನಿರ್ವಾತ ಆವರಿಸಿತ್ತು. ಅದರ ಬೆನ್ನಲ್ಲೇ ಶಿವಕುಮಾರ್ ತಿಹಾರ್ ಜೈಲು ಪಾಲಾಗಿದ್ದರೆ, ಸಹೋದರನನ್ನು ಬಿಡಿಸಿಕೊಂಡು ಬರಲು ಸಂಸದ ಡಿ.ಕೆ.ಸುರೇಶ್ ದೆಹಲಿಯಲ್ಲಿ ಠಿಕಾಣಿ ಹೂಡಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಅನರ್ಹ ಶಾಸಕರ ಉಪಚುನಾವಣೆ ಎದುರಿಸಲು ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಇದರಿಂದಾಗಿ ಇಲ್ಲಿನ ರಾಜಕಾರಣಕ್ಕೆ ಮಂಕು ಬಡಿದಂತೆ ಆಗಿತ್ತು.
ಇನ್ನು ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರು ಜಿಲ್ಲೆಯ ಬಗ್ಗೆ ಅಷ್ಟಾಗಿ ಕಾಳಜಿ ವಹಿಸಿರಲಿಲ್ಲ. ಒತ್ತಡಕ್ಕೆ ಕಟ್ಟುಬಿದ್ದು ಒಂದೇ ದಿನ (ಅ.21)ದಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಅಲ್ಲದೆ ಬಿಜೆಪಿ ಮುಖಂಡರ ಸಭೆ ನಡೆಸಿ ಪಕ್ಷ ಸಂಘಟನೆಗೆ ಶಕ್ತಿ ತುಂಬಿದ್ದರು.
ಅಲ್ಲದೆ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಡಿಕೆ ಸಹೋದರರ ಅನುಪಸ್ಥಿತಿಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದರು. ಆದರೀಗ ಕಾಂಗ್ರೆಸ್ ಟ್ರಬಲ್ ಶೂಟರ್ ವಾಪಸ್ಸಾಗುತ್ತಿರುವುದರಿಂದ ಕಮಲ ಪಡೆ ನಾಯಕರು ಕೊಂಚ ವಿಚಲಿತರಾಗಿದ್ದಾರೆ.
ಅಶ್ವತ್ಥ್ ಗೆ ಡಿಕೆ ಸಹೋದರರ ಟಕ್ಕರ್:
ಜೆಡಿಎಸ್ ವರಿಷ್ಠ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಡಿಕೆ ಸಹೋದರರಿಗೆ ಪರ್ಯಾಯವಾಗಿ ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಮತ್ತೊಂದು ಶಕ್ತಿಯ ಅವಶ್ಯಕತೆ ಇರುವ ಕಾರಣದಿಂದಲೇ ಬಿಜೆಪಿ ವರಿಷ್ಠರು ಅಶ್ವತ್‌್ಥ ನಾರಾಯಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಾರೆ. ಇದರ ಹಿಂದೆ ಒಕ್ಕಲಿಗ ಜಾತಿ ರಾಜಕೀಯವೂ ಅಡಗಿದೆ.
ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕವೇ ಉಪಮುಖ್ಯಮಂತ್ರಿ ಅಶ್ವತ್‌್ಥ ನಾರಾಯಣ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಟಕ್ಕರ್ ನೀಡಲಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಕಾದಾಟಕ್ಕೆ ವೇದಿಕೆಯಾಗಲಿರುವ ಮಿನಿ ಸಮರದಲ್ಲಿ ಕಮಲ ಪಡೆಗೆ ಮುಖಭಂಗ ಮಾಡಲು ಡಿಕೆ ಸಹೋದರರು ದಳಪತಿಗಳೊಂದಿಗೆ ಕೈ ಜೋಡಿಸಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಉಪ ಚುನಾವಣೆ ರಂಗು: ಅನರ್ಹ ಶಾಸಕರ ಕ್ಷೇತ್ರಗಳ ಉಪಚುನಾವಣೆ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರ ಆಗಮನದಿಂದ ರಂಗು ಪಡೆಯಲಿದೆ. ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಶಿವಕುಮಾರ್, ಸಾಕಷ್ಟುಪ್ರಯತ್ನಪಟ್ಟಿದ್ದರು. ಆದಾಗ್ಯೂ ಸರ್ಕಾರ ಪತನಗೊಂಡ ಸಂದರ್ಭ ಅತೃಪ್ತ ಶಾಸಕರಿಗೆ ಡಿಕೆಶಿ ಬಹಿರಂಗವಾಗಿಯೇ ಸವಾಲು ಹಾಕಿದ್ದರೆ. ಅದರಲ್ಲೂ ಎಂಟಿಬಿ ನಾಗರಾಜು ವಿರುದ್ಧ ಕಿಡಿಕಾರಿದ್ದ ಶಿವಕುಮಾರ್, ಇನ್ನು ನನ್ನ ನಿನ್ನ ಭೇಟಿ ಏನಿದ್ದರೂ ಚುನಾವಣಾ ರಣಾಂಗಣದಲ್ಲಿ ಎಂದು ತೊಡೆ ತಟ್ಟಿದ್ದರು. ಇದೀಗ ಶಿವಕುಮಾರ್ ರಾಜ್ಯ ರಾಜಕಾರಣಕ್ಕೆ ವಾಪಸ್ ಆಗುತ್ತಿರುವುದು ಅನರ್ಹ ಶಾಸಕರ ಕ್ಷೇತ್ರಗಳಲ್ಲಿನ ಉಪಚುನಾವಣೆಯ ರಂಗು ಹೆಚ್ಚಲಿದೆ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.
ಬಿಜೆಪಿ ನಾಯಕರ ಸಂಚಿನಿಂದಾಗಿ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಒಳಗಾಗಿದ್ದರು. ಅವರಿಗೆ ಜಾಮೀನು ಸಿಕ್ಕಿರುವುದು ಎಲ್ಲರಿಗೂ ನಿರಾಳತೆ ತಂದಿದೆ. ಮುಂದಿನ ಕಾನೂನು ಹೋರಾಟದಲ್ಲೂ ಅವರು ಗೆದ್ದು ಬರಲಿದ್ದಾರೆ. ಡಿ.ಕೆ.ಶಿವಕುಮಾರ್ ಆಗಮನದಿಂದ ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತಷ್ಟುಹೆಚ್ಚಿದಂತಾಗಿದೆ.
-ಎ.ಬಿ. ಚೇತನ್‌ಕುಮಾರ್ ಅಧ್ಯಕ್ಷ, ಕಾಂಗ್ರೆಸ್ ನಗರ ಘಟಕ, ರಾಮನಗರ.
ದೆಹಲಿ ಹೈಕೋರ್ಟ್ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡಿರುವುದು ನಮ್ಮೆಲ್ಲರಿಗೂ ಸಮಾಧಾನ ತಂದಿದೆ. ಅವರ ಮೇಲಿನ ಆರೋಪಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಮಾನಸಿಕ ಸ್ಥೈರ್ಯ ತುಂಬಿದೆ. ಸದ್ಯ ನಾನೂ ದೆಹಲಿಯಲ್ಲಿಯೇ ಇದ್ದೇನೆ. ಶಿವಕುಮಾರ್ ಕಾನೂನು ಪ್ರಕ್ರಿಯೆ ಮುಗಿಸಿ ಗುರುವಾರ ಬೆಂಗಳೂರಿಗೆ ಮರಳಲಿದ್ದಾರೆ.
-ಎಸ್.ರವಿ ವಿಧಾನ ಪರಿಷತ್ ಸದಸ್ಯರು.