ಸಹೃದಯ ರಾಜಕಾರಣಿಗಳಲ್ಲಿ ರೇವಣ್ಣಗೆ ಅಗ್ರಸ್ಥಾನ : ಡಿ.ಕೆ. ಸುರೇಶ್
ಸಹೃದಯಿ ರಾಜಕಾರಣಿಗಳಲ್ಲಿ ರೇವಣ್ಣಗೆ ಮುಖ್ಯ ಸ್ಥಾನ ಎಂದು ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಕುದೂರು [ನ.09]: ಮಾಗಡಿ ಎಂದ ಕೂಡಲೆ ಕೆಂಪೇಗೌಡರು ನೆನಪಾಗುವ ಹಾಗೆ ಮಾಜಿ ಸಚಿವ ಎಚ್.ಎಂ. ರೇವಣ್ಣ ಕೂಡಾ ರಾಜಕೀಯ ವಲಯದಲ್ಲಿ ಮಾಗಡಿ ರೇವಣ್ಣರವರೆಂದೇ ಖ್ಯಾತಿ ಪಡೆದಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಮಾಗಡಿ ತಾಲೂಕು ವೀರಾಪುರ ಗ್ರಾಮದಲ್ಲಿ ಸಿದ್ದಗಂಗಾ ಶ್ರೀಗಳ ಪ್ರತಿಮೆ ಶಂಕುಸ್ಥಾಪನೆ ಸಮಾರಂಭದ ನಂತರ ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣರವರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಸಹೃದಯ ರಾಜಕಾರಣಿಗಳ ಹತ್ತು ಜನಗಳ ಪಟ್ಟಿತಯಾರು ಮಾಡಿದರೆ ಆ ಹತ್ತು ಜನರಲ್ಲಿ ರೇವಣ್ಣರವರ ಹೆಸರು ಇರುತ್ತದೆ. ಕೇವಲ ಐದೇ ಜನರ ಪಟ್ಟಿತಯಾರು ಮಾಡಿದರೆ ಅದರಲ್ಲೂ ಅವರ ಹೆಸರಿರುತ್ತದೆ. ಅಷ್ಟರ ಮಟ್ಟಿಗೆ ಅವರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಇವರ ಹುಟ್ಟುಹಬ್ಬದಲ್ಲಿ ಭಾಗವಹಿಸಿರುವುದು ನನಗೆ ಸಂತಸ ಮೂಡಿಸಿದೆ ಎಂದು ಹೇಳಿದರು.
ಶಾಸಕ ಎ. ಮಂಜುನಾಥ್ ಮಾತನಾಡಿ, ರಾಜಕಾರಣಕ್ಕೆ ನಾನು ಪರಿಚಯವಾದಾಗ ಎಚ್.ಎಂ. ರೇವಣ್ಣರವರ ಮಾರ್ಗದರ್ಶನ ನನಗೆ ಹೆಚ್ಚು ಸಿಕ್ಕಿದೆ. ನನ್ನ ಗೆಲವಿಗೆ ಅವರ ಮತ್ತು ನನ್ನ ನಡುವಿನ ವಿಶ್ವಾಸದ ನಡವಳಿಕೆಯೂ ಪರೋಕ್ಷವಾಗಿ ಜನರ ಮನಸಿನ ಮೇಲೆ ಪ್ರಭಾವ ಬೀರಿದೆ. ಇವರ ಸೇವೆ ಈ ನಾಡಿಗೆ ವಿವಿಧ ಅಧಿಕಾರಗಳನ್ನು ಅವರು ಪಡೆಯುವುದರ ಮೂಲಕ ಒಳ್ಳೆಯದಾಗಬೇಕು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕುದೂರು ಗ್ರಾಮಪಂಚಾಯ್ತಿ ಸದಸ್ಯ ಕೆ.ಎಚ್. ಯತೀಶ್ ಮಾತನಾಡಿ ಮಾಗಡಿ ತಾಲೂಕಿಗೆ ಒಂದು ಸಾಂಸ್ಕೃತಿಕ ವಾತಾವರಣವನ್ನು ಪರಿಚಯಿಸಿದ ಕೀರ್ತಿ ಎಚ್.ಎಂ. ರೇವಣ್ಣರವರಿಗೆ ಸಲ್ಲುತ್ತದೆ. ಅವರ ಜೊತೆಯಲ್ಲಿ ಇದ್ದಷ್ಟುಹೊತ್ತು ನಮಗೆ ಅವರ ವಿದ್ವತ್ತಿನ ಪರಿಚಯವಾಗುತ್ತದೆ. ಆ ಮೂಲಕ ನಮ್ಮಲ್ಲೊಂದು ಚೈತನ್ಯವನ್ನು ತುಂಬುತ್ತಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಮಾತನಾಡಿ, ಜನರ ಪ್ರೀತಿಯ ಮುಂದೆ ನಾವು ಶರಣಾಗಲೇಬೇಕು. ಮಾಡಿದ ಕಾರ್ಯಗಳು ನಮ್ಮನ್ನು ಅಭಿಮಾನದ ಹೆಸರಿನಲ್ಲಿ ಗೌರವಿಸುತ್ತವೆ. ಜನರ ಕುರಿತ ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಹೋಗಬೇಕು. ಅದು ನಮ್ಮ ತಲೆ ಕಾಯುತ್ತದೆ ಎಂಬ ನಂಬಿಕೆಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಇಂತಹ ಪವಿತ್ರ ಸ್ಥಳದಲ್ಲಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿರುವುದು ನನಗೆ ಮತ್ತಷ್ಟುಶಕ್ತಿ ತುಂಬಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ತಾಲೂಕು ಪಂಚಾಯ್ತಿ ಸದಸ್ಯೆ ದಿವ್ಯಾ ಚಂದ್ರಶೇಖರ್ , ಕುತ್ತಿನಗೆರೆ ಗಂಗರಾಜ್, ಹಿರಿಯ ಸಾಹಿತಿ ಮಾರಣ್ಣ, ಶ್ರೀನಿವಾಸ್, ಮಂಜುನಾಥ್, ಗಿರೀಶ್, ಮುನಿಯಪ್ಪ ಮತ್ತಿತರರು ಹಾಜರಿದ್ದರು.