ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸುವುದು ಸೇರಿದಂತೆ ಏಳು ವಿಧೇಯಕಗಳನ್ನು ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು. ಆದರೆ ಈಗ ಸಿಎಂ ಉದ್ಯೋಗ ಮೀಸಲಾತಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಬೆಂಗಳೂರು (ಜು.17): ರಾಜ್ಯದಲ್ಲಿನ ಎಲ್ಲಾ ಕೈಗಾರಿಕೆಗಳಲ್ಲೂ ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸುವುದು ಸೇರಿದಂತೆ ಏಳು ವಿಧೇಯಕಗಳನ್ನು ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಇದರಲ್ಲಿ ಒಂದು ವಿಧೇಯಕ ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ನೇಮಕಾತಿ ಬಗ್ಗೆ ಇತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಕೂಡ ನೀಡಿದ್ದರು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ತಮ್ಮ ಪೋಸ್ಟ್ ಅನ್ನು ಡಿಲೀಟ್‌ ಮಾಡಿದ್ದಾರೆ.

ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸಬೇಕು ಎಂಬ ಯೋಚನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಸೇರಿದಂತೆ ಕೈಗಾರಿಕೋದ್ಯಮಿಗಳ ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರಿಗೆ ಖಾಸಗಿ ಉದ್ಯಮದಲ್ಲಿ ಶೇ.100 ಉದ್ಯೋಗ ಖಾತ್ರಿ, ಶೀಘ್ರ ಗೊಂದಲಗಳಿಗೆ ತೆರೆ: ಎಂ ಬಿ ಪಾಟೀಲ

ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಖಾಸಗಿ ವಲಯಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆ ಹುದೆಗಳಲ್ಲಿ ಶೇ. 100 ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಇತರೆ ಗ್ರೂಪ್‌ಗಳಲ್ಲಿ ಶೇ.80 ರಷ್ಟು ಮೀಸಲಾತಿ ನೀಡುವಂತೆ ಒತ್ತಾಯ ಕೇಳಿಬಂದಿತ್ತು.

ಆದರೆ ಇದೀಗ ಟ್ವೀಟ್ ಡಿಲೀಟ್‌ ಆಗಲು ಮುಖ್ಯ ಕಾರಣ ಮುಖ್ಯಮಂತ್ರಿಗಳು ಖಚಿತ ಮಾಹಿತಿ ನೀಡದೇ ಇರುವುದು ಎನ್ನಲಾಗಿದೆ. ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಶೇ. 100 ರಷ್ಟು ಅನ್ನುವುದು ಇತ್ತು. ಆದರೆ ಬಿಲ್‌ ನಲ್ಲಿ ಆ ರೀತಿ ಇಲ್ಲ. ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ 50% ನಾನ್‌ ಮ್ಯಾನೇಜ್‌ಮೆಂಟ್‌ ಕೋಟಾ 70% ಎಂಬ ನಿಯಮ ಬಿಲ್‌ ನಲ್ಲಿ ಇದೆ. ಹೀಗಾಗಿ ಸಿಎಂ ನೂರಕ್ಕೆ ನೂರರಷ್ಟು ಅನ್ನುವ ಪದ ಬಳಕೆ ಟ್ವೀಟ್‌ ನಲ್ಲಿ ಮಾಡಿದ್ದಕ್ಕೆ ಡಿಲೀಟ್‌ ಆಗಿದೆ ಎನ್ನುವ ಪ್ರಶ್ನೆ ಎದ್ದಿದೆ.

ರಾಜ್ಯದ ಖಾಸಗಿ ಕಂಪನಿಗಳಲ್ಲೂ ಕನ್ನಡಿಗರಿಗೆ ಮೀಸಲಾತಿ: ಸಂಪುಟ ಒಪ್ಪಿಗೆ

ಮತ್ತೊಂದೆಡೆ ಕೈಗಾರಿಕೋದ್ಯಮಿಗಳ ತೀವ್ರ ವಿರೋಧದ ಹಿನ್ನೆಲೆ ಅವರನ್ನು ವಿಶ್ವಾಸಕ್ಕೆ ಪಡೆದು ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡುವ ಸಲುವಾಗಿ ಕೂಡ ಡಿಲೀಟ್‌ ಮಾಡಿರಬಹುದು ಎನ್ನಲಾಗಿದೆ. ನೂರಕ್ಕೆ ನೂರು ಮೀಸಲಾತಿ ಎಂದರೆ ಸಹಜವಾಗಿ ಕೈಗಾರಿಕೋದ್ಯಮಿಗಳಿಂದ ವಿರೊಧ ಬಂದೇ ಬರುತ್ತದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಈ ವಿಚಾರದಲ್ಲಿ ಸರಿಯಾದ ಕಮ್ಯೂನಿಕೇಟ್‌ ಆಗಿಲ್ಲ ಎನ್ನುವುದಂತೂ ಸ್ಪಷ್ಟವಾಗಿದೆ. ಆದರೆ ತಪ್ಪು ಮಾಹಿತಿ ಹೋಗಬಾರದು ಎನ್ನುವ ಕಾರಣಕ್ಕೆ ತಮ್ಮ ಪೋಸ್ಟ್ ಡಿಲೀಟ್‌ ಮಾಡಿದ್ರು ಎನ್ನುವ ಮಾಹಿತಿ ಸಿಎಂ ಆಫೀಸ್‌ ನಿಂದ ಸುವರ್ಣನ್ಯೂಸ್ ಗೆ ಮಾಹಿತಿ ಲಭ್ಯವಾಗಿದೆ. 

ಇನ್ನು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಬಗ್ಗೆ ಮಾಹಿತಿ ನೀಡಿದ ಡಿ ಕೆ ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಸ್ವಾಭಿಮಾನ ಎತ್ತಿಹಿಡಿಯಬೇಕು ಅಂತ ಬಂದಿದೆ. ಕನ್ನಡ ಬೋರ್ಡ್, ಭಾಷೆ, ಧ್ವಜ ಬಳಕೆ, ನಮ್ಮ ಸಂಸ್ಕೃತಿ, ಕಡತಗಳಲ್ಲಿ ಕನ್ನಡ ಬಳಕೆ ಇದೆ. ಮುಂದೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಇರಬಹುದು. ಕಡ್ಡಾಯವಾಗಿ ಕನ್ನಡಿಗರಿಗೆ ಇಷ್ಟು ಪರ್ಸೆಂಟ್ ಇರಬೇಕು. ಇದರ ಬಗ್ಗೆ ತೀರ್ಮಾನ ನಾವು ಮಾಡಿದ್ದೇವೆ. ಬಿಲ್ ತರ್ತಾ ಇದ್ದೇವೆ ಎಂದಿದ್ದಾರೆ.

ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ವಿರೋಧದ ಬಗ್ಗೆ ಮಾತನಾಡಿದ ಡಿಕೆಶಿ, ಟಕ್ನಿಕಲ್ ಇದ್ದ ಕಡೆ (ತಾಂತ್ರಿಕ ಹುದ್ದೆಗಳು ಇದ್ದ ಕಡೆ) ಏನು ಮಾಡಲು ಆಗಲ್ಲ. ನಾವು ಕೂಡ ಅರ್ಥ ಮಾಡಿಕೊಳ್ಳುತ್ತೇವೆ. ಅವರು ಕೂಡ ನಮ್ಮ ರಾಜ್ಯದಿಂದಲೇ ಬೆಳದಿರುವವರು. ಟೆಕ್ನಿಕಲ್ ಬೇಕಾಗುವ ಕಡೆ ರಿಯಾಯಿತಿ ಕೋಡುತ್ತೇವೆ. ಸರ್ಕಾರದ ಗಮನಕ್ಕೆ ಅವರು ಇದನ್ನು ತರಬೇಕು. ಸದನ ಇರುವುದರಿಂದ ಸಂಪೂರ್ಣ ಮಾಹಿತಿ ಹೇಳಲು ಆಗಲ್ಲ ಎಂದಿದ್ದಾರೆ.