ಜನ ಮತ ಕೊಟ್ಟರೆ ಅಧಿಕಾರಕ್ಕೆ ಬರಲು ಸಾಧ್ಯ. ನಾವು, ನೀವು ಯಾರೂ ತೀರ್ಮಾನ ಮಾಡಕ್ಕಾಗಲ್ಲ. ಡಿ.ಕೆ.ಶಿವಕುಮಾರ ಸಹ ಮಾಡಕ್ಕಾಗಲ್ಲ: ಶಾಸಕ ಜಮೀರ್
ಬೆಳಗಾವಿ(ಜು.24): ಮುಂದಿನ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾವು ಯಾರೂ ತೀರ್ಮಾನ ಮಾಡಕ್ಕಾಗಲ್ಲ. ರಾಜ್ಯಕ್ಕೆ ಒಳ್ಳೆಯದಾಗಬೇಕೆಂದರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾ ಬಯಸುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ನನ್ನ ಅಭಿಪ್ರಾಯ ಹೇಳಿದ್ದೇನೆ. ನನ್ನ ಅಭಿಪ್ರಾಯ ಹೇಳೋದು ತಪ್ಪೇನಿಲ್ಲ. ಮೊನ್ನೆ ನಾನು ಹೇಳಿದೀನಿ ಮುಸ್ಲಿಮರಿಗೂ ಅವಕಾಶ ಸಿಗಬೇಕು ಎಂದು. ನಾವು ಜನಸಂಖ್ಯೆಯನುಸಾರ ಶೇ.15ರಷ್ಟು ಇದ್ದೇವೆ. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ, ನಮ್ಮ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಯಾರು ಸಿಎಂ ಆಗಬೇಕೆಂದು ತೀರ್ಮಾನ ಮಾಡಲಿದ್ದಾರೆ ಎಂದರು.
ಎಲ್ಲರಿಗೂ ಆಸೆ ಇರುತ್ತದೆ. ಬಹಳ ಜನರಿಗೆ ಆಸೆ ಇದೆ. ಆಸೆ ಇರುವುದರಲ್ಲಿ ತಪ್ಪೇನಿಲ್ಲ. ಒಂದೇ ಸಮಾಜ ಮತ ಕೊಟ್ಟರೇ ಸಿಎಂ ಆಗಲು ಸಾಧ್ಯವಾಗಲ್ಲ. ಎಲ್ಲ ಸಮಾಜದವರನ್ನು ನಾವು ಜತೆಗೆ ತೆಗೆದುಕೊಂಡು ಹೋಗಬೇಕು. ಎಲ್ಲ ಸಮಾಜ ಸೇರಿ ಆಶೀರ್ವಾದ ಮಾಡಿದರೆ ಸರ್ಕಾರ ಬರಲು ಸಾಧ್ಯವಾಗಲಿದೆ. ಬರೀ ಒಂದು ಸಮಾಜ ಬೆಂಬಲ ಕೊಟ್ಟರೆ, ಯಾರೂ ಸಿಎಂ ಆಗಲು ಸಾಧ್ಯವಾಗಲ್ಲ ಎಂದೂ ಅಭಿಪ್ರಾಯ ಪಟ್ಟರು.
ಆ ಜಮೀರ್‌ಗೆಲ್ಲ ಉತ್ತರಿಸಲು ನಾನು ತಯಾರಿಲ್ಲ: ಡಿಕೆಶಿ ಕಿಡಿ
ಅಲ್ಲದೇ, ವ್ಯಕ್ತಿ ಪೂಜೆ ಮಾಡಬಾರದು ಪಕ್ಷ ಪೂಜೆ ಮಾಡಬೇಕೆಂಬ ಡಿ.ಕೆ.ಶಿವಕುಮಾರ ಹೇಳಿಕೆ ವಿಚಾರಕ್ಕೆ, ಪಕ್ಷ ಪೂಜೆ ಮಾಡುತ್ತೇವೆ ಎಂದರು. ಜನ ಮತ ಕೊಟ್ಟರೆ ಅಧಿಕಾರಕ್ಕೆ ಬರಲು ಸಾಧ್ಯ. ನಾವು, ನೀವು ಯಾರೂ ತೀರ್ಮಾನ ಮಾಡಕ್ಕಾಗಲ್ಲ. ಡಿ.ಕೆ.ಶಿವಕುಮಾರ ಸಹ ಮಾಡಕ್ಕಾಗಲ್ಲ. ನಾನು ಸಹ ಮಾಡಕ್ಕಾಗಲ್ಲ. ಪಕ್ಷದಲ್ಲಿ ಅಲ್ಪಸಂಖ್ಯಾತರ ಕಡೆಗಣಿಸುತ್ತಿಲ್ಲ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಜಮೀರ್ ಅಹ್ಮದ ಅವರು, ಇಬ್ರಾಹಿಂ ಸಾಹೇಬ್ರು ಸೋತು ಸುಣ್ಣವಾಗಿದ್ದಾರೆ. ಅದೇ ರೀತಿ ಎಲ್ಲವನ್ನೂ ತಿಳಿದುಕೊಂಡಿದ್ದಾರೆ ಎಂದು ದೂರಿದರು.
2013ರ ಚುನಾವಣೆಯಲ್ಲಿ ಅವರ ತವರು ಕ್ಷೇತ್ರ ಭದ್ರಾವತಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದಾರೆ. ಸಿದ್ದರಾಮಯ್ಯ ನಿಯಮ ಉಲ್ಲಂಘಿಸಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ ಇಬ್ರಾಹಿಂಗೆ ಟಿಕೆಟ್ ಕೊಡಿಸಿದ್ದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಹೇಳಿ ಸಿದ್ದರಾಮಯ್ಯ ಟಿಕೆಟ್ ಕೊಡಿಸಿದ್ದರು. ಮೂರನೇ ಸ್ಥಾನಕ್ಕೆ ಕುಸಿದು ಸೋಲುಂಡರು. ಸಿದ್ದರಾಮಯ್ಯಗೆ ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡಿ ಅಂತ ನಾನೇ ಒತ್ತಡ ಹಾಕುತ್ತಿದ್ದೇನೆ. ಅವರನ್ನು ಎಂದಿಗೂ ಸ್ಪರ್ಧೆ ಮಾಡುವ ಬಗ್ಗೆ ಒತ್ತಡ ಹೇರಿಲ್ಲ. ಸಿದ್ದರಾಮಯ್ಯ ಸ್ಪರ್ಧೆಗೆ ಎಲ್ಲ ಕಡೆಯಿಂದ ಒತ್ತಡ ಬರುತ್ತಿದೆ. ಹರಿಹರ, ಕೊಲಾರ, ಚಿಕ್ಕಪೇಟೆ ಸೇರಿ ರಾಜ್ಯದ ಎಲ್ಲ ಮೂಲೆಗಳಿಂದ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಈಶ್ವರಪ್ಪ ಮುಸ್ಲಿಮರ ಮತಗಳು ಬೇಡ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಗಲು ಹೊತ್ತಿನಲ್ಲಿ ಬೇಡ ಎನ್ನುತ್ತಾರೆ. ರಾತ್ರಿ ಮುಸ್ಲಿಂ ಮತಗಳನ್ನು ಕೇಳುತ್ತಾರೆ. ಈ ಬಗ್ಗೆ ನೀವೇ ಈಶ್ವರಪ್ಪ ಅವರನ್ನು ಕೇಳಿ ಎಂದರು.
