ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದದಿಂದ ಬಿಜೆಪಿ ಮಣಿಸಲು ಅಸಾಧ್ಯ: ಎಸ್.ಟಿ.ಸೋಮಶೇಖರ್
ಜೆಡಿಎಸ್ ನಾಯಕರು 2019ರ ಯಶವಂತಪುರ ಕ್ಷೇತ್ರದ ಉಪಚುನಾವಣೆಯಲ್ಲೂ ಕಾಂಗ್ರೆಸ್ ಜತೆಗೆ ಮೈತ್ರಿ ಸಾಧಿಸಿದ್ದರು. ಇದೀಗ ಮತ್ತೆ ಅದೇ ತಂತ್ರ ಹೂಡಿದ್ದಾರೆ. ಈ ಅಪಮೈತ್ರಿಯಿಂದ ಯಾವುದೇ ಪ್ರಯೋಜವಿಲ್ಲ ಎಂದ ಎಸ್.ಟಿ.ಸೋಮಶೇಖರ್.
ಬೆಂಗಳೂರು(ಏ.26): ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದದಿಂದ ಬಿಜೆಪಿ ಮಣಿಸಲು ಸಾಧ್ಯವಿಲ್ಲ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಬಿಜೆಪಿ ಮಹಾಪ್ರಚಾರ ಅಭಿಯಾನದ ಪ್ರಯುಕ್ತ ಮಂಗಳವಾರ ಕೆಂಗೇರಿ ಉಪನಗರದ ಅಂತ್ಯೋದಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ನಾಯಕರು 2019ರ ಯಶವಂತಪುರ ಕ್ಷೇತ್ರದ ಉಪಚುನಾವಣೆಯಲ್ಲೂ ಕಾಂಗ್ರೆಸ್ ಜತೆಗೆ ಮೈತ್ರಿ ಸಾಧಿಸಿದ್ದರು. ಇದೀಗ ಮತ್ತೆ ಅದೇ ತಂತ್ರ ಹೂಡಿದ್ದಾರೆ. ಈ ಅಪಮೈತ್ರಿಯಿಂದ ಯಾವುದೇ ಪ್ರಯೋಜವಿಲ್ಲ ಎಂದರು.
ಈ ಬಾರಿಯೂ ಯಶವಂತಪುರ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಮಲ ಅರಳಲಿದೆ. ಸ್ಥಳೀಯ ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರ ಬೆಂಬಲವಿದೆ. ಅವರ ಪರಿಶ್ರಮದಿಂದ ಯಶವಂತಪುರದಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸುವುದಾಗಿ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಲಾ 10 ಕೇಜಿ ಅಕ್ಕಿ, 2000 ಹಣ: ಬೈರತಿ
ಕಳೆದ 10 ವರ್ಷಗಳಿಂದಲೂ ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿದ್ದೇನೆ. ನೀರು, ಹತ್ತಾರು ಜನಪರ ಕಾರ್ಯಕ್ರಮ ರೂಪಿಸಿದ್ದೇನೆ. ಕೊರೊನಾ ಸಂದರ್ಭದಲ್ಲಿ ಕಾರ್ಯಕರ್ತರ ಸಹಕಾರದಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಫುಡ್ ಕಿಟ್, ಲಸಿಕೆ ವಿತರಿಸಲಾಗಿದೆ. ಮೃತ ಸೋಂಕಿತರ ಕುಟುಂಬಗಳಿಗೆ ವೈಯಕ್ತಿಕ ಒಂದು ಲಕ್ಷ ರು. ಪರಿಹಾರ ಧನ ನೀಡಲಾಗಿದೆ. ಹೀಗಾಗಿ ಕ್ಷೇತ್ರದ ಮತದಾರರ ಸಹಾನುಭೂತಿ, ಪ್ರೀತಿ, ಅನುಕಂಪ ನನ್ನ ಮೇಲಿದೆ. ಜೆಡಿಎಸ್ ಅಭ್ಯರ್ಥಿ ಮೇಲಲ್ಲ. ಕಣ್ಣೀರು ಹಾಕುವ ಕಾರ್ಯಕ್ರಮ ಬಿಜೆಪಿ ಕಾರ್ಯಸೂಚಿಯಲ್ಲಿಲ್ಲ. ಈಗಾಗಲೇ ಕ್ಷೇತ್ರದ 493 ಬೂತ್‌ಗಳಿಗೆ ಭೇಟಿ ನೀಡಿದ್ದೇನೆ ಎಂದು ಸೋಮಶೇಖರ್ ವಿವರಿಸಿದರು.
ಎದುರಾಳಿಗಳನ್ನು ಬಿಜೆಪಿಗೆ ಕರೆತಂದು ಹೊರನಡೆದ ಶೆಟ್ಟರ್!
ಯಶವಂತಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ, ರಾಜಸ್ಥಾನದ ಶಾಸಕ ಅವಿನಾಶ್ ಗೆಹ್ಲೋಟ್, ಜಾರ್ಖಂಡ್ ಶಾಸಕ ಮನೀಶ್ ಜೈಸ್ವಾಲ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಯಶವಂತಪುರ ಕ್ಷೇತ್ರ ನಗರ ಮಂಡಲ ಅಧ್ಯಕ್ಷ ಅನಿಲ್ ಚಳಗೇರಿ, ಗ್ರಾಮಾಂತರ ಮಂಡಲ ಅಧ್ಯಕ್ಷ ರಂಗರಾಜು ಮತ್ತಿತರರಿದ್ದರು.
ಮೋದಿ ರೋಡ್ ಶೋಗೆ 50 ಸಾವಿರ ಜನ ಆಗಮನ
ಈ ತಿಂಗಳ 29ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ನೈಸ್ ರಸ್ತೆಯ ಜಂಕ್ಷನ್ ಮೂಲಕ ಯಶವಂತಪುರ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ನೈಸ್ ರಸ್ತೆಯ ಜಂಕ್ಷನ್‌ನಿಂದ ಸುಂಕದಕಟ್ಟೆವರೆಗೆ ರೋಡ್ ಷೋ ನಡೆಯಲಿದ್ದು, ಇದರಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಸೋಮಶೇಖರ್ ತಿಳಿಸಿದರು.