ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಗುರುವಾರ ‘ನಿಜನಾಯಕ ಅಪ್ಪ’ ಕನ್ನಡ ಭಾವಚಿತ್ರಗೀತೆಯನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ರಾಜ್ಯಸಭಾ ಸದಸ್ಯ ಜಗ್ಗೇಶ್‌, ನಟ ಗಣೇಶ್‌, ಪ್ರಜ್ವಲ್‌ ದೇವರಾಜ್‌ ಲೋಕಾರ್ಪಣೆ ಮಾಡಿದರು.

ಬೆಂಗಳೂರು : ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಗುರುವಾರ ‘ನಿಜನಾಯಕ ಅಪ್ಪ’ ಕನ್ನಡ ಭಾವಚಿತ್ರಗೀತೆಯನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ರಾಜ್ಯಸಭಾ ಸದಸ್ಯ ಜಗ್ಗೇಶ್‌, ನಟ ಗಣೇಶ್‌, ಪ್ರಜ್ವಲ್‌ ದೇವರಾಜ್‌ ಲೋಕಾರ್ಪಣೆ ಮಾಡಿದರು.

ಡಾ.ವಿ.ನಾಗೇಂದ್ರ ಪ್ರಸಾದ್‌ ಈ ಗೀತೆಯ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಗಾಯಕ ರಾಜೇಶ್‌ ಕೃಷ್ಣನ್‌ ಹಾಡಿದ್ದಾರೆ.

ಈ ವೇಳೆ ಮಾತನಾಡಿದ ಆರ್‌.ಅಶೋಕ್‌, ತಂದೆ-ತಾಯಿ ನಮ್ಮೊಡನೆ ಇರುವಾಗಲೇ ಅವರನ್ನು ಆರಾಧಿಸಬೇಕು. ಅಪ್ಪನಿಂದ ಅಂತರ ಕಾಯ್ದುಕೊಳ್ಳದೆ ಅವರ ಮೇಲಿನ ಪ್ರೀತಿ ವ್ಯಕ್ತಪಡಿಸಬೇಕು. ತಂದೆ ಎಂದರೆ ಮನೆಯ ಆಧಾರ ಸ್ತಂಭ.‌ ಸಂಸಾರದ ಗಾಡಿ ಎಳೆಯುವ ಯೋಗಿ ಎಂದು ಬಣ್ಣಿಸಿದರು.

ಮಕ್ಕಳು ಅಮ್ಮನ ಬಳಿ ಬೇಗ ಬೆರೆಯುತ್ತಾರೆ. ಆದರೆ, ತಂದೆಯ ಬಳಿ ಆ ಆಪ್ತತೆ ಬೆಳೆಯುವುದು ಕಷ್ಟ. ಹೆಣ್ಣುಮಕ್ಕಳು ತಂದೆಗೆ ಹತ್ತಿರವಾಗುತ್ತಾರೆ. ಆದರೆ ಗಂಡುಮಕ್ಕಳಿಗೆ ಒಂದಿಷ್ಟು ಅಂತರ ಇರುತ್ತದೆ. ಆದರೆ, ತಂದೆ ಗಾಣದ ಎತ್ತಿನಂತೆ ದುಡಿವ ಮನೆಯ ಕಾವಲುಗಾರನಾಗಿರುತ್ತಾನೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ತಂದೆಗೆ ನಾನು ಗ್ರಾಪಂ ಅಧ್ಯಕ್ಷ ಆಗಬೇಕು, ಎಂಜಿನಿಯರ್ ಆಗಬೇಕು, ಎಚ್‌ಎಂಟಿಯಲ್ಲಿ ಕೆಲಸ ಮಾಡಬೇಕು ಎಂಬ ಬಯಕೆ ಇತ್ತು. ಆದರೆ ಅದು ಈಡೇರಲಿಲ್ಲ. ಕಲ್ಲಲ್ಲಿ ಕಾಣುವ ದೇವರಿಗೆ ಪೂಜಿಸುವ ನಾವು ನಮ್ಮೊಡನಿರುವ ನಿಜದೈವ ತಂದೆ ತಾಯಿಯನ್ನು ಪೂಜೆ ಮಾಡುವುದಿಲ್ಲ. ತಂದೆ ತಾಯಿ ಬಿಟ್ಟು ಹೋದ ಬಳಿಕ ಪೂಜಿಸುವ ಬದಲು ಇರುವಾಗಲೇ ಪೂಜಿಸಬೇಕು ಎಂದರು.

ನಟ ಜಗ್ಗೇಶ್ ಮಾತನಾಡಿ, ತಾಯಂದಿರು ಮಕ್ಕಳಲ್ಲಿ ತಂದೆ ಬಗ್ಗೆ ಉನ್ನತ ಭಾವನೆ ಮೂಡುವಂತೆ ಮಾಡಬೇಕು. ಅವರ ಶ್ರಮ ವಿವರಿಸಿ ಹೇಳಿ ಪ್ರೀತಿ ಮೂಡಿಸಬೇಕು. ಅದನ್ನು ಬಿಟ್ಟು ತಂದೆಯಿಂದ ದೂರ ಹೋಗುವಂತೆ ಮಾಡಬಾರದು. ತಂದೆ ತಾಯಿ ನಮ್ಮ ಮೇಲಿಟ್ಟಿರುವ ವಿಶ್ವಾಸ, ನಂಬಿಕೆ ಕಳೆದುಕೊಳ್ಳಬಾರದು. ಮಕ್ಕಳಾಗಿ ನಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.

ನಟ ಗೋಲ್ಡನ್‌ ಸ್ಟಾರ್‌ ಗಣೇಶ್ ಮಾತನಾಡಿ, ಮಕ್ಕಳು ಚಿಕ್ಕವರಿರುವಾಗ ತಂದೆ ಹೀರೋ ರೀತಿ ಕಾಣುತ್ತಾನೆ. ಆದರೆ, ಹದಿ ವಯಸ್ಸಿನಲ್ಲಿ ತಂದೆಗಿಂತ ನನಗೆ ಹೆಚ್ಚಿನ ವಿಷಯ ಗೊತ್ತು ಎನಿಸುತ್ತದೆ. ಆದರೆ 40 ವರ್ಷದ ಬಳಿಕ ತಂದೆ ಹೇಳಿದ್ದು ಸತ್ಯ ಎನಿಸುತ್ತದೆ. ತನಗಿಂತ ಎತ್ತರವಾಗಿ ಮಕ್ಕಳು ಬೆಳೆಯುವುದನ್ನು ನೋಡಬೇಕು ಎಂದು ತಂದೆ ಬಯಸುತ್ತಾರೆ ಎಂಬುದನ್ನು ಮರೆಯಬಾರದು ಎಂದರು.

ಪ್ರಾಸ್ತಾವಿಕ ಮಾತನಾಡಿದ ಡಾ.ವಿ.ನಾಗೇಂದ್ರಪ್ರಸಾದ್, ಅಪ್ಪ ಎನ್ನುವುದು ಅಪ್ಯಾಯಮಾನವಾದ ಪದ. ಅದೇ ತಂದೆ ಎನ್ನುವ ಪದ ಗ್ರಾಂಥಿಕವಾದುದು. ಕನ್ನಡದಲ್ಲಿ ಯಾವ ಶಬ್ದವನ್ನು ಎಲ್ಲಿ ಬಳಸಬೇಕೊ ಅಲ್ಲಿ ಬಳಸಿದರೆ ಮಾತ್ರ ತಕ್ಕ ಅರ್ಥ ಬರುತ್ತದೆ. ಇದು ಕನ್ನಡದ ಶಕ್ತಿ ಎಂದರು. ಗಾಯಕ ರಾಜೇಶ್ ಕೃಷ್ಣನ್, ನಟ ಪ್ರಜ್ವಲ್ ದೇವರಾಜ್ ಕೂಡ ಮಾತನಾಡಿದರು.