ಮಂಗಳೂರು[ಫೆ.25]: ‘ಕಾಂಗ್ರೆಸ್‌ಗೆ ಅಧ್ಯಕ್ಷರೇ ಇಲ್ಲ. ಪಕ್ಷವನ್ನೇ ನಡೆಸಲು ಸಾಧ್ಯವಾಗದವರು ದೇಶವನ್ನಾದರೂ ಹೇಗೆ ನಡೆಸ್ತಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಲೇವಡಿ ಮಾಡಿದ್ದಾರೆ.

ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಸೋಮವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೆಪಿಸಿಸಿಗೆ ಅಧ್ಯಕ್ಷರೇ ಇಲ್ಲದ ಪರಿಸ್ಥಿತಿ ಇದೆ. ವಿಧಾನಸಭಾ ಉಪಚುನಾವಣೆಯ ಸೋಲಿನ ನಂತರ ಕೆಪಿಸಿಸಿ ಅಧ್ಯಕ್ಷರು ರಾಜಿನಾಮೆ ನೀಡಿದ್ದರು. ಕಾಂಗ್ರೆಸ್‌ ಮುಖ್ಯಸ್ಥರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಎಐಸಿಸಿಯಲ್ಲೂ ಉಸ್ತುವಾರಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಇದ್ದಾರೆ. ಅಧ್ಯಕ್ಷರನ್ನೇ ನೇಮಕ ಮಾಡಲಾಗದವರು ದೇಶ ಹೇಗೆ ನಡೆಸಬಲ್ಲರು. ಹಾಗಾಗಿಯೇ 135 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ಗೆ ಸಂಸತ್ತಿನಲ್ಲಿ ಪ್ರತಿಪಕ್ಷವಾಗಲೂ ಸಾಧ್ಯವಿಲ್ಲ ಎಂಬ ಕರುಣಾಜನಕ ಸ್ಥಿತಿ ತಲುಪಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯ 37 ಸಾಂಸ್ಥಿಕ ಜಿಲ್ಲೆಗಳಲ್ಲಿ ಈಗಾಗಲೇ 35 ಸಾಂಸ್ಥಿಕ ಜಿಲ್ಲೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಎರಡು ಜಿಲ್ಲೆಗಳ ಆಯ್ಕೆ ಇನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ ನಳಿನ್‌ ಕುಮಾರ್‌, ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವುದರಿಂದ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ಅಧಿಕಾರದ ಹಸಿವು, ಕುಟುಂಬ ರಾಜಕೀಯ, ಭ್ರಷ್ಟಾಚಾರದಿಂದ ದೇಶದಲ್ಲಿ ಕಾಂಗ್ರೆಸ್‌ ಪತನಕ್ಕೆ ಕಾರಣವಾಯಿತು. ಆದ್ದರಿಂದ ಬಿಜೆಪಿ ನಾಯಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಾಗ ಜಾಗರೂಕರಾಗಿರಬೇಕು ಮತ್ತು ಅಹಂ ಹೊಂದಿರಬಾರದು ಎಂದು ಕಿವಿಮಾತು ಹೇಳಿದರು. ದಕ್ಷಿಣ ಕನ್ನಡದಲ್ಲಿ ಪ್ರಸ್ತುತ ಬಿಜೆಪಿ 7 ಶಾಸಕರನ್ನು ಹೊಂದಿದೆ. ಮುಂದಿನ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರವನ್ನು ಕೂಡ ವಶಕ್ಕೆ ಪಡೆಯಬೇಕಾಗಿದೆ ಎಂದರು.

ಗಲಭೆಗೆ ಕಾಂಗ್ರೆಸ್‌ ಕಾರಣ:

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಕಾಂಗ್ರೆಸ್‌ ನೇರ ಕಾರಣ ಎಂದು ಪುನರುಚ್ಚರಿಸಿದ ಅವರು, ಕೇರಳದಿಂದ ಮಂಗಳೂರಿಗೆ ದುಷ್ಕರ್ಮಿಗಳನ್ನು ಕರೆತಂದವರು ಅವರೇ, ಈ ಮೂಲಕ ಮಂಗಳೂರಿನಲ್ಲಿ ಗಲಭೆಗೆ ಕಾರಣರಾಗಿದ್ದರು ಎಂದು ಆರೋಪಿಸಿದರು.

ರಾಷ್ಟ್ರ ವಿರೋಧಿಗಳ ಜೈಲಿಗೆ ಕಳಿಸ್ತೇವೆ:

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಸಹಿಸುವುದಿಲ್ಲ. ರಾಷ್ಟ್ರ ವಿರೋಧಿ ಘೋಷಣೆಗಳನ್ನು ಎತ್ತುವ ಮತ್ತು ಅಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಎಲ್ಲರನ್ನು ಜೈಲಿಗೆ ಕಳುಹಿಸಲಾಗುತ್ತದೆ. ನಮಗೆ ಯಾವಾಗಲೂ ರಾಷ್ಟ್ರವೇ ಮೊದಲು ಎಂದು ಹೇಳಿದರು.

ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಅವರು ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದರು. ನಿರ್ಗಮನ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತನ್ನೊಂದಿಗೆ ಸಹಕರಿಸಿದ ಪದಾಧಿಕಾರಿಗಳನ್ನು ಗೌರವಿಸಿದರು.

ಶಾಸಕರಾದ ಎಸ್‌.ಅಂಗಾರ, ಉಮಾನಾಥ ಕೋಟ್ಯಾನ್‌, ವೇದವ್ಯಾಸ ಕಾಮತ್‌, ಹರೀಶ್‌ ಪೂಂಜ, ಭರತ್‌ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಕ್ಷೇತ್ರ ಸಮಿತಿ ನೂತನ ಅಧ್ಯಕ್ಷರಾದ ಸುನಿಲ್‌ ಆಳ್ವ, ತಿಲಕ್‌ರಾಜ್‌, ವಿಜಯಕುಮಾರ್‌ ಶೆಟ್ಟಿ, ಚಂದ್ರಹಾಸ್‌ ಪಂಡಿತ್‌ಹೌಸ್‌, ದೇವಪ್ಪ ಪೂಜಾರಿ, ಜಗನ್ನಿವಾಸ್‌ ರಾವ್‌, ರಾಧಾಕೃಷ್ಣ ಸಾಜ, ಹರೀಶ್‌ ಕಂಜಿಪಿಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿಕಣ್ಣೂರು ಮತ್ತಿತರರಿದ್ದರು.