Asianet Suvarna News Asianet Suvarna News

ಸತ್ತ ಮೇಲೆ ನಮ್ಮ ಹೆಣಗಳು ಬಿಜೆಪಿಗೆ ಹೋಗಲ್ಲ: ಶಾಸಕ ರಾಜು ಕಾಗೆ

ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ರಮೇಶ ಜಾರಕಿಹೊಳಿ ಯಾವ ಉದ್ದೇಶಕ್ಕೆ ಭೇಟಿಯಾಗಿದ್ದರೋ ಎನ್ನುವುದು ಗೊತ್ತಿಲ್ಲ. ನಾವಂತೂ ಬದುಕಿರುವವರೆಗೆ ಬಿಜೆಪಿಗೆ ಹೋಗುವುದಿಲ್ಲ. ಸತ್ತ ಮೇಲೆ ನಮ್ಮ ಹೆಣಗಳು ಕೂಡ ಹೋಗುವುದಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. 

Will not go to BJP till alive Says Kagwad Mla Raju Kage gvd
Author
First Published Oct 21, 2023, 2:53 PM IST

ಬೆಳಗಾವಿ (ಅ.21): ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ರಮೇಶ ಜಾರಕಿಹೊಳಿ ಯಾವ ಉದ್ದೇಶಕ್ಕೆ ಭೇಟಿಯಾಗಿದ್ದರೋ ಎನ್ನುವುದು ಗೊತ್ತಿಲ್ಲ. ನಾವಂತೂ ಬದುಕಿರುವವರೆಗೆ ಬಿಜೆಪಿಗೆ ಹೋಗುವುದಿಲ್ಲ. ಸತ್ತ ಮೇಲೆ ನಮ್ಮ ಹೆಣಗಳು ಕೂಡ ಹೋಗುವುದಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ವಿಚಾರ ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ರಾಜಕೀಯದಲ್ಲಿ ಯಾರೂ ಶತ್ರು ಅಲ್ಲ. ಮಿತ್ರನೂ ಅಲ್ಲ ಎಂದರು.

ನಮ್ಮ ಮೈಸೂರು ಪ್ರವಾಸದ ವೇಳೆ ನಮ್ಮ ಜೊತೆಗೆ ಸಚಿವ ಸತೀಶ ಜಾರಕಿಹೊಳಿ ಇರಲಿಲ್ಲ. ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಅಲ್ಲದೇ, ನಮ್ಮನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಿದೆ. ಒಂದು ಮನೆ ಎಂದರೆ ಕೆಮ್ಮು, ನೆಗಡಿ ಸಹಜ. ಅದನ್ನೆಲ್ಲ ನಾವು ಸರಿ ಮಾಡಿಕೊಳ್ಳುತ್ತೇವೆ. ಜಿಲ್ಲಾ ಕಾಂಗ್ರೆಸ್‌ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯ, ಮುಸುಕಿನ ಗುದ್ದಾಟ ಇಲ್ಲ ಎಂದು ಸ್ಪಷ್ಟಪಡಿಸಿದರು.

ವೀರಶೈವರ ಒಟ್ಟಾಗಿಸಲು ಮಠ-ಮಾನ್ಯ ಮುಂದಾಗಲಿ: ಸಚಿವ ಎಂ.ಬಿ.ಪಾಟೀಲ್

ನಾನು ಹುಟ್ಟಿದಾಗಿನಿಂದ ಮೈಸೂರು ದಸರಾ ನೋಡಿರಲಿಲ್ಲ. ಹಾಗಾಗಿ, ನಾನು ಸೇರಿ ನಾಲ್ವರು ಶಾಸಕರು ಸೇರಿ ಮೈಸೂರು ಪ್ರವಾಸ ಮಾಡಿ ಬಂದಿದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದರು. ಡಿಸಿಎಂ ಶಿವಕುಮಾರ ಜಿಲ್ಲಾ ಪ್ರವಾಸದ ವೇಳೆ ನಾವು ಮೈಸೂರು ಪ್ರವಾಸದಲ್ಲಿದ್ದೆವು. ಹಾಗಾಗಿ, ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದರು. ನಾನು ಮುಖ್ಯಮಂತ್ರಿ ಜೊತೆಗೆ ಮುನಿಸಿಕೊಂಡಿಲ್ಲ. ಕಾಗವಾಡ ಕ್ಷೇತ್ರದ ಬಸವೇಶ್ವರ ಏತ ನೀರಾವರಿ ಯೋಜನೆಗೆ ಇನ್ನೂ ₹100 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದೇನೆ ಎಂದು ಹೇಳಿದರು.

ಸರ್ಕಾರದ ವಿರುದ್ಧ ಕಿಡಿಕಾರಿದ ಕಾಗೆ: ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರದ ನ್ಯೂನತೆಗಳು ಎದ್ದು ಕಾಣುತ್ತಿವೆ. ಎಲ್ಲ ಗೊತ್ತಿದ್ದರೂ ಪಕ್ಷದ ಶಾಸಕರು, ಮುಖಂಡರು ಮೌನವಾಗಿದ್ದಾರೆ. ನಾನು ಇದ್ದದ್ದನ್ನು ಇರುವ ಹಾಗೆ ಹೇಳಿದ್ದೇನೆ. ಇದರಲ್ಲಿ ಹೆದರುವಂತಹ ಮತ್ತು ಮುಜುಗರಕ್ಕೆ ಒಳಗಾಗುವಂತಹ ಸಂದರ್ಭವೇ ಬರುವುದಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಸರ್ಕಾರದ ಆಡಳಿತ ನ್ಯೂನತೆಗಳ ಕುರಿತಂತೆ ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಸರ್ಕಾರ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂಬುವುದೇ ನನ್ನ ಹೇಳಿಕೆಯ ಒಟ್ಟಾರೆ ಸಾರಾಂಶವಾಗಿದೆ ಎಂದರು.

ಸರ್ಕಾರ ಬಂದು ನಾಲ್ಕೈದು ತಿಂಗಳು ಗತಿಸುತ್ತಾ ಬಂದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶಾಸಕಾಂಗ ಮತ್ತು ಕಾರ್ಯಾಂಗ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಬೇಕೆಂದು ಒತ್ತಾಯಿಸಿದ್ದೇನೆ. ಇದು ಸಹಜವಾಗಿಯೇ ಸಾರ್ವಜನಿಕರ ದೃಷ್ಟಿಯಲ್ಲಿ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಮತ್ತೊಮ್ಮೆ ಅಸಮಾಧಾನ ಹೊರಹಾಕಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಲೂಟಿ ನಡೆಸುತ್ತಿದೆ: ಕೇಂದ್ರ ಸಚಿವ ಭಗವಂತ ಖೂಬಾ

ಈ ಭಾಗದ 22 ಗ್ರಾಮಗಳ ಮಹತ್ವಾಕಾಂಕ್ಷಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಭರವಸೆ ನೀಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು, ನೀರಾವರಿ ಸಚಿವರನ್ನು ಹಲವು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದರೂ ಇಲ್ಲಿಯವರೆಗೆ ಪ್ರಯೋಜನವಾಗಿಲ್ಲ. ಹೀಗಾದರೆ ಜನತೆಗೆ ಏನು ಉತ್ತರ ಕೊಡುವುದು ಎಂದು ಪ್ರಶ್ನಿಸಿದರು.

Follow Us:
Download App:
  • android
  • ios