ಪಕ್ಷ ಟಿಕೆಟ್ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮಾಧುಸ್ವಾಮಿ
ಈ ದೇಶದಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಚಿಕ್ಕನಾಯಕನಹಳ್ಳಿ (ಫೆ.14): ಈ ದೇಶದಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ನವೋದಯ ಕಾಲೇಜಿನ ಆವರಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ನಡೆದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬ ಕಾರ್ಯಕರ್ತನೂ ಮನೆ ಮನೆಗೂ ಭೇಟಿ ಮಾಡಿ ಕೇಂದ್ರ ಸರ್ಕಾರದ ಸಾಧನೆಗಳನ್ನುತಿಳಿಸಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಬಯಸಿದರೆ ನಾನು ಕೂಡ ಆಕಾಂಕ್ಷಿಯಾಗಿರುತ್ತೇನೆ.
ರಾಜ್ಯ ಸರ್ಕಾರದ ಪುಗ್ಸಟ್ಟೆ ಯೋಜನೆಗಳಿಂದ ಸರ್ಕಾರವು ದಿವಾಳಿಯಂಚಿನಲ್ಲಿದೆ. ಈ ಯೋಜನೆಗಳಿಗೆ ಸುಮಾರು ಐವತ್ತೆರಡು ಸಾವಿರ ಕೋಟಿ ಹಣ ಬೇಕಾಗಿದ್ದು, ಶಾಸಕರ ಪ್ರದೇಶಾಭಿವೃದ್ಧಿಯ ಅನುದಾನವನ್ನು ಸಹ ಕಡಿತಗೊಳಿಸಲಾಗಿದ್ದು, ಕೃಷಿ ಚಟುವಟಿಕೆ, ಕೈಗಾರಿಕೆಗೆ ತೀವ್ರ ಹಿನ್ನಡೆಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಅಹಂಕಾರಕ್ಕೂ, ಸ್ವಾಭಿಮಾನಕ್ಕೂ ವ್ಯತ್ಯಾಸವಿದೆ. ನನ್ನ ಸ್ವಾಭಿಮಾನವನ್ನು ಅಹಂಕಾರವೆಂದು ಭಾವಿಸಿ ಅಪಪ್ರಚಾರ ಮಾಡಲಾಗಿದೆ. ಆದರೆ, ಅವುಗಳೆಲ್ಲವೂ ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ. ಚುನಾವಣೆಗಳನ್ನು ದುಡ್ಡಿನಲ್ಲಿ ಅಳೆಯಲು ಸಾಧ್ಯವಿಲ್ಲ.
ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ: ಸಚಿವ ಪ್ರಿಯಾಂಕ್ ಖರ್ಗೆ
ಪಕ್ಷ, ಜಾತಿ, ಭಾಷೆ, ಪ್ರಾಂತ್ಯಗಳ ಅನುಸಾರ ರಾಜ್ಯದಲ್ಲಿ ಮತ ಚಲಾವಣೆಯಾಗುತ್ತಿದೆ. ಪ್ರತಿ ಬೂತಿನಲ್ಲೂ ಕಳೆದ ಬಾರಿಗಿಂತ ಈ ಬಾರಿ ಕನಿಷ್ಠ ಶೇ. ಹತ್ತರಷ್ಟು ಹೆಚ್ಚು ಮತ ಬಿಜೆಪಿ ಗೆ ಬರಬೇಕೆಂದು ಕರೆ ನೀಡಿದರು. ಸರ್ಕಾರಗಳು ತಪ್ಪು ದಾರಿ ಹಿಡಿದಾಗ ನಾವು ಸುಮ್ಮನಿರುವುದು ಶೋಭೆಯಲ್ಲ, ಜನರಿಗೆ ಸರ್ಕಾರದ ಲೋಪದೋಷಗಳನ್ನು ಮನದಟ್ಟು ಮಾಡಬೇಕಿದೆ. ನಾನು ಸಹ ಲೋಕಸಭಾ ಸ್ಪರ್ಧೆಯ ಪ್ರಭಲ ಆಕಾಂಕ್ಷಿಯಾಗಿದ್ದು, ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಮಂಡಾಲಾಧ್ಯಕ್ಷ ಕೇಶವ್ ಮೂರ್ತಿ ಮತ್ತಿತರರು ಹಾಜರಿದ್ದರು.