ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣದ ಮೇಲೆ ರಾಜಕೀಯ ಮಾಡುತ್ತಿರುವ ವಿರೋಧ ಪಕ್ಷಗಳಿಗೆ ‘ನನ್ನ ವಿರುದ್ಧ ಬೆಟ್ಟು ಮಾಡುತ್ತಿರುವುದಕ್ಕೇನಿದೆ’ ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಬೆಂಗಳೂರು (ಜೂ.07): ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣದ ಮೇಲೆ ರಾಜಕೀಯ ಮಾಡುತ್ತಿರುವ ವಿರೋಧ ಪಕ್ಷಗಳಿಗೆ ‘ನನ್ನ ವಿರುದ್ಧ ಬೆಟ್ಟು ಮಾಡುತ್ತಿರುವುದಕ್ಕೇನಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಸುದ್ದಿಗಾರರರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಎಸ್‌ಸಿಎ ಅವರು ಕಾರ್ಯಕ್ರಮ ಮಾಡಿದರು. ಬೆಂಗಳೂರು ನಗರದ ಸಚಿವನಾಗಿರುವ ತಮಗೆ ಕೆಲವು ಅಧಿಕಾರಿಗಳು ಪರಿಸ್ಥಿತಿ ಗಂಭೀರವಾಗುತ್ತಿದೆ. 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸುವಂತೆ ಕೇಳಿಕೊಂಡರು. ಹೀಗಾಗಿ. ಕ್ರೀಡಾಂಗಣಕ್ಕೆ ಹೋಗಿದ್ದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಹೋಗಿ ಆಟಗಾರರಿಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದೆ. ಪೊಲೀಸ್ ಅಧಿಕಾರಿಗಳು ಬಹಿರಂಗ ಮೆರವಣಿಗೆಗೆ ಅವಕಾಶ ಬೇಡ ಎನ್ನುತ್ತಿದ್ದಾರೆ ಎಂದು ಅವರಿಗೆ ಪರಿಸ್ಥಿತಿ ವಿವರಿಸಿದೆ. ಇದರಲ್ಲಿ ತಪ್ಪೇನಿದೆ? ಎಂದರು. ಬಿಜೆಪಿ, ಜೆಡಿಎಸ್‌ ಹೆಣದ ಮೇಲೆ ರಾಜಕೀಯ ಮಾಡುತ್ತಿವೆ. ಅಂತ ಹೀನ ರಾಜಕಾರಣ ಮಾಡುವುದಿಲ್ಲ. ನಮಗೆ ಪ್ರಾಮಾಣಿಕತೆ ಇದೆ. ಭಾವುಕನಾಗಿದ್ದಕ್ಕೆ ಕಣ್ಣಲ್ಲಿ ನೀರು ಬಂದಿತು. ಅದನ್ನು ಟೀಕೆ ಮಾಡಿದ್ದಾರೆ. ಬೇರೆಯವರು ಯಾವಾಗ ಕಣ್ಣೀರು ಹಾಕಿದ್ದಾರೆ, ಎಷ್ಟು ಕುಟುಂಬಗಳ ಕಣ್ಣೀರು ಹಾಕಿಸಿದ್ದಾರೆ, ಎಷ್ಟು ಕುಟುಂಬಗಳ ಕಣ್ಣೀರು ಒರೆಸಿದ್ದಾರೆ ಎಂದು ಅಧಿವೇಶನದಲ್ಲಿ ಚರ್ಚೆ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರು, ಡಿ.ಕೆ.ಶಿವಕುಮಾರ್‌ ಅವರನ್ನು ಯಾಕೆ ಗುರಿ ಮಾಡುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ನನ್ನನ್ನು ಕಂಡರೆ ಬಹಳ ಪ್ರೀತಿ. ನಮಗೂ ಅವರಿಗೂ ಬಹಳ ಲವ್ ಇದೆ. ಅದಕ್ಕೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ರಾಜೀನಾಮೆ ಕೊಡೋಣ. ಇನ್ನೂ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ಜಂಟಿ ಹೋರಾಟದೊಂದಿಗೆ ಇನ್ನೂ10 ಜನರನ್ನು ಸೇರಿಸಿಕೊಂಡು ಮಾಡಲಿ. ತೆರೆಮರೆಯಲ್ಲಿ ಹಿಂದೆ ಯಾರ್ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ದೇವರು ನಮಗೆ ಅಲ್ಪಸ್ವಲ್ಪ ಜ್ಞಾನ ಕೊಟ್ಟಿದ್ದಾನೆ ಎಂದರು.

ನಿಯಂತ್ರಿಸಲಾಗದ ಜನಸಂದಣಿಯಿಂದ ಘಟನೆ: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಜನಸಂದಣಿ ನಿಭಾಯಿಸಲು ಪೊಲೀಸರು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಎಷ್ಟು ಭದ್ರತೆ ಮಾಡಬೇಕೋ ಅಷ್ಟು ಮಾಡಿದ್ದರು. ಆದರೆ, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಿಯಂತ್ರಿಸಲಾಗದಷ್ಟು ಪ್ರಮಾಣದಲ್ಲಿ ಜನರು ಸೇರಿ, ಸ್ಟೇಡಿಯಂ ಗೇಟನ್ನು ಕಿತ್ತು ಬಿಸಾಕಿದ್ದರಿಂದ ಕಾಲ್ತುಳಿತದ ದುರ್ಘಟನೆ ಸಂಭವಿಸಿದೆ. ಇದರಿಂದ 11 ಮಂದಿ ಮೃತಪಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ದುರ್ಘಟನೆ ಸಂಭವಿಸಿದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ತೆರೆದ ವಾಹನದಲ್ಲಿ ಆರ್‌ಸಿಬಿ ತಂಡದ ಸದಸ್ಯರ ಮೆರವಣಿಗೆ ನಡೆಸಲು ಆಲೋಚಿಸಲಾಗಿತ್ತು.

ಆದರೆ, ಭಾರೀ ಜನಸ್ತೋಮ ಸೇರಿದ ಕಾರಣಕ್ಕೆ ಪೊಲೀಸರ ಸಲಹೆಯಂತೆ ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ರದ್ದುಪಡಿಸಿದೆವು. ವಿಧಾನಸೌಧದ ಮುಂಭಾಗದಲ್ಲೂ ಕೇವಲ 15 ನಿಮಿಷಗಳಲ್ಲಿ ತಂಡದ ಸದಸ್ಯರಿಗೆ ಸನ್ಮಾನ ಸಮಾರಂಭ ಮುಗಿಸಿದೆವು. ನಾವ್ಯಾರು ಭಾಷಣ ಕೂಡ ಮಾಡಲಿಲ್ಲ. ಪೊಲೀಸರು ಅಭಿಮಾನಿಗಳನ್ನು ನಿಭಾಯಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಎಷ್ಟು ಭದ್ರತೆ ಮಾಡಬೇಕೋ ಅಷ್ಟು ಮಾಡಿದ್ದಾರೆ. ಆದರೆ, ಚಿನ್ನಸ್ವಾಮಿ ಸ್ಟೇಡಿಯಂ ಬಳಿಕ ನಿಯಂತ್ರಿಸಲಾಗದಷ್ಟು ಜನರು ಸೇರಿ, ಗೇಟ್‌ನ್ನೂ ಕಿತ್ತು ಬಿಸಾಕಿ ನುಗ್ಗಿದ್ದರಿಂದ ದುರ್ಘಟನೆ ನಡೆದಿದೆ ಎಂದರು.