ವಿಜಯಪುರ, (ಆ.08): ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ. ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಚಾಲೆಂಜ್ ಮಾಡಿದ್ದಾರೆ.

ಮನೆಯಲ್ಲಿ ಮಾತ್ರ ಆಚರಣೆ ಮಾಡಬಹುದು, ಸಾರ್ವಜನಿಕ‌ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡಿಲ್ಲ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ  ಹೇಳಿದ್ದಾರೆ. 

ರಸ್ತೆಯಲ್ಲಿ ಗಣೇಶ ಮೂರ್ತಿ ಇಡುವುದಕ್ಕೆ ಬ್ರೇಕ್..!

ಈ ಬಗ್ಗೆ  ಪ್ರಮೋದ್​ ಮುತಾಲಿಕ್​  ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಬಾರ್, ಮಾಲ್​ಗಳನ್ನು ತೆರೆಯಲು ಅವಕಾಶ ಕೊಡುತ್ತಾರೆ. ಗಣಪತಿಗೆ ಏಕೆ ಅವಕಾಶ ಇಲ್ಲ? ನಾವು ಒಂದೇ ಒಂದು ಕೊರೋನಾ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಗಣೇಶ ಚತುರ್ಥಿ ಆಚರಿಸುತ್ತೇವೆ ಎಂದರು.

ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ ಎನ್ನುವ ಮೂಲಕ ಸರ್ಕಾರದ ಆದೇಶಕ್ಕೆ ಸೆಡ್ಡುಹೊಡೆದ ಪ್ರಮೋದ್​ ಮುತಾಲಿಕ್​, ಕರೊನಾ ನಿರ್ವಹಣೆ ವಿಚಾರದಲ್ಲಿ ನೂರಕ್ಕೆ ನೂರರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಜನರ ಸಾವು-ನೋವಿನಲ್ಲೂ ದುಡ್ಡು ಹೊಡೆಯಲಾಗುತ್ತಿದೆ. ವಿರೋಧ ಪಕ್ಷದವರು ಆರೋಪಿಸಿದ್ದು ಸರಿಯಾಗಿದೆ, ಸರ್ಕಾರ ಅವರಿಗೆ ಸಮರ್ಪಕ ದಾಖಲೆ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೊರೊನಾ‌ ಕೇಸ್ ಮಾರ್ಚ್ ತಿಂಗಳಿನಿಂದ ಕಡಿಮೆಯಾಗುತ್ತಿಲ್ಲ.‌ ದಿನದಿಂದ ದಿನಕ್ಕೆ‌ ಕೇಸ್ ಹೆಚ್ಚಾಗುತ್ತಲೇ ಇದೆ. ರಾಜಧಾನಿ‌ ಬೆಂಗಳೂರಿನಲ್ಲಿ ಕೊರೊನಾ ಕೇಸ್ ಎರಡು ಸಾವಿರ ಆಸುಪಾಸಿನಲ್ಲಿ ದಿನನಿತ್ಯ ದಾಖಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಗಣೇಶ ಹಬ್ಬ ಬರುತ್ತಿದೆ. ಮೊದಲೇ ಸಾರ್ವಜನಿಕ ಪ್ರತಿಷ್ಟಾಪನೆಗೆ ಹೆಚ್ಚು ಆದ್ಯತೆ ಇರುವ ಗಣೇಶ ಹಬ್ಬಕ್ಕೆ ಸರ್ಕಾರ ಸಾಕಷ್ಟು ಮಾರ್ಗಸೂಚಿಗಳನ್ನು ನೀಡಿದೆ. ಮನೆಯಲ್ಲಿ ಮಾತ್ರ ಆಚರಣೆ ಮಾಡಬಹುದು, ಸಾರ್ವಜನಿಕ‌ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡಿಲ್ಲ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಕಳೆದ ತಿಂಗಳು ಹೇಳಿದ್ದರು