ಬೆಂಗಳೂರು [ಡಿ.19]:  ‘ಯಾರು ಎಲ್ಲಿಗೆ ಬೇಕಾದರೂ ಹೋಗಲಿ. ನನಗೆ ಅದನ್ನು ಕಟ್ಟಿಕೊಂಡು ಏನು ಆಗಬೇಕು? ಹೋಗುವ ವರನ್ನು ಕಟ್ಟಿಹಾಕಲು ಸಾಧ್ಯವೇ’ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರು ಪಕ್ಷ ತೊರೆಯುವವರನ್ನು ಉದ್ದೇಶಿಸಿ ತೀಕ್ಷ್ಣವಾಗಿ ಹೇಳಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಚುನಾವಣೆಯಲ್ಲಿ ಸೋಲು- ಗೆಲುವು ಸಹಜ. ಸೋಲು ಆಗಿದೆ ಎಂದ ಮಾತ್ರಕ್ಕೆ  ಜೆಡಿಎಸ್ ಪಕ್ಷವೇ ಮುಳಗಿಹೋಗಲಿದೆ ಎಂದರ್ಥವಲ್ಲಎಂದು ಹೇಳಿದರು. 

ಪಕ್ಷದ ಮುಖಂಡ ಮಧು ಬಂಗಾರಪ್ಪ ಪಕ್ಷ  ತೊರೆಯಲು ಮುಂದಾಗಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಧು ಬಂಗಾರಪ್ಪ ಅವರ ಮನೆಯಲ್ಲಿ ಸಮಸ್ಯೆ ಇದೆ. ಆದರೆ, ಅವರು ಕಾಂಗ್ರೆಸ್ ಸೇರುವುದು ಗೊತ್ತಿಲ್ಲ. ಯಾರು ಎಲ್ಲಿಗೆ ಬೇಕಾದರೂ ಹೋಗಲಿ. ನನಗೆ ಅದನ್ನು ಕಟ್ಟಿಕೊಂಡು ಏನು ಆಗಬೇಕು? ಜೆಡಿಎಸ್ ಬಿಟ್ಟು ಹೋಗುವವರನ್ನು ಹಿಡಿದಿಟ್ಟುಕೊಂಡು ಇರುವುದಕ್ಕೆ ಆಗುವುದಿಲ್ಲ. ಆದರೂ, ಮುಖಂಡರು ಹಾಗೂ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು. 

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮಾತ್ರವಲ್ಲ, ಈ ಹಿಂದೆ ಕಾಂಗ್ರೆಸ್ ಕೂಡ ಸೋತಿದೆ. ಒಂದು ಚುನಾವಣೆ ಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಮಾತ್ರಕ್ಕೆ ಮುಂದೆಯೂ ಜಯ ಗಳಿಸುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಬಿಜೆಪಿ ಈಗ ಅರಳಿದೆ. ಮುಂದೆ ಹಾಗೆಯೇ ಮುದುಡಿ ಹೋಗಲಿದೆ ಎಂದು ತೀಕ್ಷ್ಣವಾಗಿ ತಿಳಿಸಿದರು. 

ಬಿಜೆಪಿ, ಅನರ್ಹರ ವಿರುದ್ಧ ಆರೋಪಗಳ ಪಟ್ಟಿ ರಿಲೀಸ್ ಮಾಡಿದ HDK: ಪಟ್ಟಿಯಲ್ಲೇನಿದೆ.?...

ನನ್ನ ಷಷ್ಠಿ ಪೂಜೆಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೊರತುಪಡಿಸಿ ಇನ್ನುಳಿದ ಎಲ್ಲಾ ನಾಯಕರು ಬಂದು ಊಟ ಮಾಡಿಕೊಂಡು ಹೋಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿಯುತ್ತೇನೆ. ಆದರೆ, ಡ್ಯಾಮೇಜ್ ಮಾಡಬೇಡಿ. ನಾಯಕರೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಇದೇ ವೇಳೆ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು. 

ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವವರು ಆಸ್ಪತ್ರೆಗೆ ಹೋಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನೀವೇ ನನ್ನ ಗುರು ಎಂದು ಹೇಳಿದ್ದಾರೆ. ಆ ಗುರುಗಳಿಗೆ ಅವರೇ ಟೋಪಿ ಹಾಕಿ ಹೋಗಿದ್ದಾರೆ ಎಂದು ನೂತನ ಶಾಸಕರಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಹಿಂದಿನ ಮೈತ್ರಿ ಸರ್ಕಾರ ಅಸಹ್ಯ ಸರ್ಕಾರ ಎಂಬ ಹೇಳಿಕೆ ನೀಡಿದ್ದಾರೆ. ಹೌದು, ಅಸಹ್ಯ ಸರ್ಕಾರವಾಗಿರಬಹುದು. ರೈತರ ಸಾಲಮನ್ನಾ ಮಾಡಿದ್ದು ಅಸಹ್ಯದ ಕೆಲಸವೇ? ಈಗ ಪವಿತ್ರ ಸರ್ಕಾರ ಬಂದಿದೆ. ನೋಡೋಣ ರಾಜ್ಯವನ್ನು ಎಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಲಿದೆ ಎಂದು ಕಿಡಿಕಾರಿದರು.