ಡೆಹ್ರಾಡೂನ್, (ನ.13)​: ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಪಕ್ಷದ ಮೌಲ್ಯವನ್ನು ಕಡಿಮೆ ಮಾಡುತ್ತಿದ್ದಾರೆ. ಇದರ ಬಗ್ಗೆ ನೀವು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ ಮಾಜಿ ಶಾಸಕನನ್ನು ಉತ್ತರಾಖಂಡ ಬಿಜೆಪಿ ಪಕ್ಷದಿಂದ ವಜಾಗೊಳಿಸಲಾಗಿದೆ.

ರಾಜ್ಯದ ಮಾಜಿ ಸಚಿವ, ಹಾಲಿ ಶಾಸಕ ಲಖಿ ರಾಮ್​ ಜೋಶಿ ಅವರು ನವೆಂಬರ್​ 11ರಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್​ ಅವರು ಕಪ್ಪು ಹಣ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಅವರ ಮೇಲೆ ಸಿಬಿಐ ತನಿಖೆಗೆ ಹೈ ಕೋರ್ಟ್​ ಆದೇಶಿಸಿದೆ. ಇದರಿಂದಾಗಿ ರಾಜ್ಯದ ಜನರು ಪಕ್ಷದ ಮೇಲಿದ್ದ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯಡಿಯೂರಪ್ಪ-ಕುಮಾರಸ್ವಾಮಿ ದಿಢೀರ್ ಭೇಟಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ

ಇದನ್ನ ಗಂಭೀರವಾಗಿ ಪರಿಗಣಿಸಿದ ಉತ್ತರಾಖಂಡ ರಾಜ್ಯ ಬಿಜೆಪಿ ಅಧ್ಯಕ್ಷ ಬನ್ಸಿಧರ್​ ಭಗತ್​ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲಖಿ ರಾಮ್​ ಜೋಶಿ ಅವರನ್ನ ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಇದು  ರಾಜ್ಯದ ಆಂತರಿಕ ವಿಚಾರವಾಗಿದ್ದು, ಈ ಕುರಿತಾಗಿ ರಾಮ್​ ಜೋಶಿ ಅವರು ಮೊದಲು ರಾಜ್ಯದ ನಾಯಕರ ಜತೆ ಚರ್ಚಿಸಬೇಕಿತ್ತು. ಅದರ ಬದಲಾಗಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಿದ್ದೇವೆ ಎಂದು ಬನ್ಸಿಧರ್​ ಭಗತ್​ ಸ್ಪಷ್ಟಪಡಿಸಿದ್ದಾರೆ.