Asianet Suvarna News Asianet Suvarna News

ಉಳ್ಳಾಲ 'ಹಿಂದೂ ಶಾಸಕ' ಅಭಿಯಾನ: ಫೀಲ್ಡಿಗಿಳಿದ VHPಗೆ ಖಾದರ್ ತಿರುಗೇಟು!

* ಮಂಗಳೂರಿನಲ್ಲಿ ಹಿಂದೂ ಶಾಸಕ ಅಭಿಯಾನ
* ಖಾದರ್ ಕ್ಷೇತ್ರದಲ್ಲಿ ಹಿಂದೂ ಶಾಸಕ ಅಭಿಯಾನ
 * ಫೀಲ್ಡಿಗಿಳಿದ VHPಗೆ ಖಾದರ್ ತಿರುಗೇಟು!

UT Khader Hits Back at VHP Over Hindu MLA For ullal campaign rbj
Author
Bengaluru, First Published Apr 22, 2022, 6:58 PM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು, (ಏ.22): ಚುನಾವಣೆ ಸಮೀಪಿಸುತ್ತಿರೋ ಹೊತ್ತಲ್ಲೇ ಕರಾವಳಿಯಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದೆ. ಆದರೆ ಈ ಬಾರಿ'ಹಿಂದೂ ಶಾಸಕ'ನ ಆಯ್ಕೆಗಾಗಿ ಹಿಂದೂ ಸಂಘಟನೆಗಳು ಅಭಿಯಾನ ಆರಂಭಿಸಿದ್ದು, ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕ್ಚೇತ್ರದಲ್ಲೇ ವಿಎಚ್ ಪಿ-ಬಜರಂಗದಳ ಫೀಲ್ಡಿಗಿಳಿದಿದೆ. 

'ಹಿಂದೂ ಶಾಸಕ' ಅಭಿಯಾನಕ್ಕೆ ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಕರೆ ನೀಡಿದ್ದು, ಮಾಜಿ ಸಚಿವ ಯು.ಟಿ.ಖಾದರ್ ಬದಲಾವಣೆಗೆ ವಿಎಚ್ ಪಿ ಅಭಿಯಾನ ನಡೆಸ್ತಿದೆ. 'ಉಳ್ಳಾಲದಲ್ಲಿ ಹಿಂದೂಗಳ ಪರ ಧ್ವನಿ ಎತ್ತಲು ಹಿಂದೂ ಶಾಸಕ ಇರಲಿ, ಮುಂದಿನ ಚುನಾವಣೆಯಲ್ಲಿ ಉಳ್ಳಾಲದಲ್ಲಿ ಹಿಂದೂ ಶಾಸಕನ ಗೆಲ್ಲಿಸಲು ವಿಎಚ್ ಪಿ ಈ ಅಭಿಯಾನ ನಡೆಸ್ತಿದೆ ಅಂತ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ. ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದಲ್ಲಿ ಹಿಂದೂ ಶಾಸಕ ಬರಲಿ. ಉಳ್ಳಾಲದಲ್ಲಿ ರಾಹುಲ್ ಗಾಂಧಿಯೇ ನಿಲ್ಲಲಿ, ಕಾಂಗ್ರೆಸ್ ಹಿಂದೂವನ್ನ ನಿಲ್ಲಿಸಿ ಗೆಲ್ಲಿಸಲಿ. ಉಳ್ಳಾಲದಲ್ಲಿ ಹಲವು ವರ್ಷಗಳಿಂದ ಒಂದೇ ಕುಟುಂಬದ ಮುಸ್ಲಿಂ ಶಾಸಕರಿದ್ದಾರೆ. ಉಳ್ಳಾಲ ಕಾಂಗ್ರೆಸ್ ನಲ್ಲಿ ಸಾಕಷ್ಟು ಹಿಂದೂಗಳಿದ್ದು, ಅವರಿಗೆ ಅವಕಾಶ ಕೊಡಿ. ಉಳ್ಳಾಲದಲ್ಲಿ 50% ಮುಸಲ್ಮಾನರಿದ್ದು, ಹಿಂದೂಗಳಿಗೆ ಬದುಕಲು ಕಷ್ಟ ಇದೆ ಅನ್ನೋ ಭಯ ಇದೆ. ಕಾಂಗ್ರೆಸ್ ಹಿಂದುವಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ರೂ ವಿಎಚ್ ಪಿ ಸ್ವಾಗತ ಅಂತ ಯು.ಟಿ.ಖಾದರ್ ತವರು ಕ್ಷೇತ್ರದಲ್ಲೇ ವಿಎಚ್ ಪಿ ಧರ್ಮ ದಂಗಲ್ ಕಿಡಿ ಹೊತ್ತಿಸಿದೆ. 

ಆಂಜನೇಯನ ಜನ್ಮ ಸ್ಥಳದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡ್ಬೇಡಿ, ಕಂಗ್ರೆಸ್ ಮುಖಂಡ ಮನವಿ

ಇನ್ನು 1978ರಿಂದ ಅತೀ ಹೆಚ್ಚಿನ ಅವಧಿಗೆ ಮುಸ್ಲಿಂ ಶಾಸಕರೇ ಆಯ್ಕೆಯಾದ ಕ್ಷೇತ್ರ ಉಳ್ಳಾಲವಾಗಿದ್ದು, ಸದ್ಯ ಮಂಗಳೂರು ವಿಧಾನಸಭಾ ಕ್ಷೇತ್ರವಾಗಿ ಬದಲಾಗಿದೆ. 1978ರಲ್ಲಿ ಯು.ಟಿ.ಖಾದರ್ ತಂದೆ ಯು.ಟಿ.ಫರೀದ್ ಶಾಸಕರಾಗಿ ಆಯ್ಕೆಯಾದ್ರೆ 1983 ಸಿಪಿಐಎಂ ರಾಮಚಂದ್ರ ರಾವ್, 85-89 ಕಾಂಗ್ರೆಸ್ ನಿಂದ ಬಿ.ಎಂ ಇದ್ದಿನಬ್ಬ ಆಯ್ಕೆಯಾಗಿದ್ದರು. 1994-99ರವರೆಗೆ ಬಿಜೆಪಿಯ ಏಕೈಕ ಅಭ್ಯರ್ಥಿ ಜಯರಾಮ್ ಶೆಟ್ಟಿ ಶಾಸಕರಾಗಿದ್ದರು.1999 ರಿಂದ 2004 ರವರೆಗೆ ಮತ್ತೆ ಯು.ಟಿ.ಫರೀದ್ ಶಾಸಕರಾಗಿದ್ದು, 2007ರಿಂದ ಈವರೆಗೆ ಯು.ಟಿ.ಖಾದರ್ ಶಾಸಕರಾಗಿ ಅಧಿಕಾರದಲ್ಲಿದ್ದಾರೆ. 1999ರಿಂದ ಉಳ್ಳಾಲದ ಶಾಸಕ ಸ್ಥಾನ ಖಾದರ್ ಕುಟುಂಬದ ಕೈ ತಪ್ಪಿಲ್ಲ ಎನ್ನುವುದು ವಿಶೇಷ.

'ಕೋಮುವಾದಿಗಳಿಗೆ ಉಳ್ಳಾಲದ ಮಣ್ಣಿನಲ್ಲಿ ಅವಕಾಶ ಕೊಡಲ್ಲ'
ಖಾದರ್ ಕ್ಷೇತ್ರದಲ್ಲಿ ಹಿಂದೂ ಶಾಸಕ'ನ ಆಯ್ಕೆಗಾಗಿ ಹಿಂದೂ ಸಂಘಟನೆಗಳ ಅಭಿಯಾನ ವಿಚಾರ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದು, ಕೋಮುವಾದಿಗಳಿಗೆ ಉಳ್ಳಾಲದ ಮಣ್ಣಿನಲ್ಲಿ ಅವಕಾಶ ಕೊಡಲ್ಲ. ಉಳ್ಳಾಲದ ಶಾಸಕ ಯಾರಾಗಬೇಕು ಅಂತ ಸರ್ವ ಧರ್ಮದ ಮತದಾರರು ತೀರ್ಮಾನಿಸ್ತಾರೆ. ಹೊರಗಿನವರು ಬಂದು ಮಾತನಾಡಿದ್ರೆ ಏನೂ ಪ್ರಯೋಜನ ಇಲ್ಲ ಎಂದು ತಿರುಗೇಟು ನೀಡಿದರು.

ಎಲ್ಲಾ ಜಾತಿ-ಧರ್ಮದ ಜೊತೆ ಇದ್ದುಕೊಂಡೇ ನಾನು ರಾಜಕೀಯ ಮಾಡಿದ್ದೇನೆ. ತಂದೆ ಶಾಸಕರಾಗಿದ್ದರೂ ನಾನು ಜನಾರ್ದನ ಪೂಜಾರಿ ತತ್ವ ಆದರ್ಶದಿಂದ ಬೆಳೆದವನು. ನನ್ನ ಮನೆ, ಕಚೇರಿಗೆ ಬಂದವರಿಗೆ ಯಾವ ಜಾತಿ-ಧರ್ಮ ಅಂತ ಕೇಳಿದವನಲ್ಲ. ಕ್ಷೇತ್ರವ್ಯಾಪ್ತಿಯ ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ರಸ್ತೆ ಮತ್ತು ಮೂಲಭೂತ ಸೌಕರ್ಯ ಮಾಡಿದ್ದೇನೆ. ಪಕ್ಷದ ಎಲ್ಲಾ ಧರ್ಮದ ಕಾರ್ಯಕರ್ತರು, ಮುಖಂಡರು, ಮತದಾರರು ಸೌಹಾರ್ದತೆಯಿಂದ ಇದ್ದಾರೆ. ಕೋಮುವಾದಿಗಳಿಗೆ ಉಳ್ಳಾಲದ ಮಣ್ಣಿನಲ್ಲಿ ಅವಕಾಶ ಕೊಡಲ್ಲ ಎಂದರು. 

ಚುನಾವಣೆ ಬಂದಾಗ ಒಂದೊಂದು ಅಭಿಯಾನ, ವಿಚಾರ ತರ್ತಾರೆ. ಹಿಂದೆಯೂ ಆಂತರಿಕವಾಗಿ ಮಾಡಿದ್ದರು, ಈ ಬಾರಿ ಬಹಿರಂಗವಾಗಿ ಮಾಡಿದ್ದಾರೆ. ನನ್ನ ಕ್ಷೇತ್ರ ಸೌಹಾರ್ದತೆಯ ಸರ್ವಧರ್ಮೀಯರು ಪ್ರೀತಿಸೋ ಕ್ಷೇತ್ರ. ಅಲ್ಲಿ ಎಲ್ಲ ಜಾತಿ-ಧರ್ಮವನ್ನ ಪ್ರೀತಿಸೋರನ್ನ ಶಾಸಕರನ್ನಾಗಿ ಜನ ಗೆಲ್ಲಿಸ್ತಾರೆ. ರಾಜಕೀಯಕ್ಕೋಸ್ಕರ ಜನರನ್ನು ವಿಭಾಗ ಮಾಡಲು ಹೋಗಬೇಡಿ. ಜನರ ಸೌಹಾರ್ದತೆ ಹಾಳು ಮಾಡೋದು ದೇಶದ್ರೋಹಿಗಳ ಕೆಲಸ. ಕಾಂಗ್ರೆಸ್ ಮುಂದೆ ನನ್ನನ್ನೇ ನಿಲ್ಲಿಸುತ್ತದೆ ಅಂತ ಹೇಳಲು ಆಗಲ್ಲ‌. ಕಾಂಗ್ರೆಸ್ ಅಲ್ಲಿ ಯಾರಿಗೂ ಮುಂದೆ ಟಿಕೆಟ್ ಕೊಡಬಹುದು. ಮಹಿಳೆಯರು ಅಥವಾ ಯಾರಿಗೂ ಪಕ್ಷ ಮುಂದೆ ಟಿಕೆಟ್ ಕೊಡಬಹುದು. ಆದರೆ ಕಾಂಗ್ರೆಸ್ ಯಾರನ್ನ ನಿಲ್ಲಿಸಿದ್ರೂ ಆ ಕ್ಷೇತ್ರದ ಜನ ಗೆಲ್ಲಿಸ್ತಾರೆ‌ ಎಂದು ಹೇಳಿದರು.

ಪಕ್ಷ ಮುಂದೆ ಅಲ್ಲಿ ಬದಲಾಯಿಸಲೂ ಬಹುದು, ಏನೇ ಮಾಡಿದ್ರೂ ಸಂತೋಷ. ವಿಎಚ್ ಪಿ ಒಂದು ಬಿಜೆಪಿಯ ಅಂಗಸಂಸ್ಥೆ. ಅದರಲ್ಲಿ 80% ಹಿಂದೂ ಸಹೋದರರು ಇಲ್ಲ, ಕೇವಲ 20% ಇದಾರೆ. ಉಳಿದ ಎಲ್ಲರೂ ಪ್ರೀತಿ ವಿಶ್ವಾಸದಿಂದ ಜೊತೆ ಇದ್ದಾರೆ. ರಾಜಕೀಯಕ್ಕಾಗಿ ಇಬ್ಭಾಗ ಮಾಡಬೇಡಿ, ಅಲ್ಲಿ ರಕ್ತ ಚೆಲ್ಲಬೇಡಿ. ಜನರ ಶಾಂತಿ ನೆಮ್ಮದಿಗಾಗಿ ಬೇಕಾದ್ರೆ ನಾನು ದೂರ ನಿಲ್ಲಲು ಸಿದ್ದ ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios