ಬೆಂಗಳೂರು (ನ.20):  ಸಂಪುಟ ವಿಸ್ತರಣೆ ಸರ್ಕಸ್‌ ಸದ್ಯಕ್ಕೆ ಮುಗಿಯುವುದೋ ಅಥವಾ ಸಂಕ್ರಾಂತಿಯವರೆಗೂ ಮುಂದುವರೆಯುವುದೋ ಎಂಬುದು ಈಗ ಕುತೂಹಲ ಮೂಡಿಸಿದೆ. ಏಕೆಂದರೆ, ನೂತನ ಉಸ್ತುವಾರಿ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಆಗಮಿಸಿದ ನಂತರವೇ ಇಂತಹದೊಂದು ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಬಿಜೆಪಿಯ ಒಂದು ಬಣ ಹೇಳಿದರೆ, ಮುಖ್ಯಮಂತ್ರಿಯವರ ಆಪ್ತ ಬಣ ಹೈಕಮಾಂಡ್‌ನ ಹಸಿರು ನಿಶಾನೆ 2-3 ದಿನದಲ್ಲೇ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದೆ.

"

ಹೀಗಾಗಿ ಸಂಪುಟ ಗೊಂದಲ ಮುಂದುವರೆದಿದೆ.

ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ರಾಜ್ಯ ಬಿಜೆಪಿ ನೂತನ ಉಸ್ತುವಾರಿ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಆಗಮಿಸಿ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸುವರು. ಬಳಿಕವೇ ಸಂಪುಟ ಕಸರತ್ತಿಗೆ ಚಾಲನೆ ಸಿಗುತ್ತದೆ. ಇಂತಹ ಸಾಧ್ಯತೆಯೇ ಹೆಚ್ಚು ಎಂದು ಪಕ್ಷದ ಹಿರಿಯ ನಾಯಕರು ತಿಳಿಸುತ್ತಾರೆ. ಆದರೆ, ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಬಳಗ ಮಾತ್ರ ಸಂಪುಟ ಕಸರತ್ತಿಗೆ ಪಕ್ಷದ ವರಿಷ್ಠರು ಹೆಚ್ಚು ವಿಳಂಬ ಮಾಡದೆ ಹಸಿರು ನಿಶಾನೆ ತೋರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದೆ.

ಸಂಪುಟ ಕಸರತ್ತು: ಬೆಳಗಾವಿಯ ಇಬ್ಬರು ಸಚಿವರಿಗೆ ಗೇಟ್ ಪಾಸ್...? ..

ಹೈಕಮಾಂಡ್‌ ಆಹ್ವಾನ ಇಲ್ಲದಿದ್ದರೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನದ ಆಕಾಂಕ್ಷಿಗಳ ವಿವರವನ್ನು ನೀಡಿದ್ದಾರೆ. ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ವಿವರಿಸಿದ ಬಳಿಕ ಅದಷ್ಟುಬೇಗ ಸಚಿವ ಸಂಪುಟ ಪುನಾರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೈಕಮಾಂಡ್‌ 3-4 ದಿನದಲ್ಲಿ ತಿಳಿಸುವ ಬಗ್ಗೆ ಹೇಳಿದೆ. ಮೂಲಗಳ ಪ್ರಕಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಶೀಘ್ರದಲ್ಲೇ ರಾಜ್ಯಕ್ಕೆ ಆಗಮಿಸಿ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆ ಹಾಗೂ ರಾಜಕೀಯ ಸ್ಥಿತ್ಯಂತರಗಳ ಕುರಿತು ಅವಲೋಕನ ನಡೆಸಲಿದ್ದಾರೆ. ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಅವರು ಸವಿಸ್ತಾರವಾದ ವರದಿಯನ್ನು ಸಿದ್ಧಪಡಿಸಲಿದ್ದಾರೆ.

ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಹೈಕಮಾಂಡ್‌ಗೆ ಮನದಟ್ಟು ಮಾಡಿರುವ ಕಾರಣ ಶೀಘ್ರದಲ್ಲಿಯೇ ಅನುಮತಿ ನೀಡುವ ಸಾಧ್ಯತೆಯೂ ಇದೆ. ಒಂದು ವೇಳೆ ಶೀಘ್ರದಲ್ಲಿಯೇ ಹೈಕಮಾಂಡ್‌ ಯಾವುದೇ ತೀರ್ಮಾನ ಪ್ರಕಟಿಸದಿದ್ದರೆ ಸಚಿವ ಸಂಪುಟ ವಿಸ್ತರಣೆ ಸರ್ಕಸ್‌ ಮತ್ತಷ್ಟುಕಾಲ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಬೈಠಕ್‌ ನಡೆಯಲಿದೆ. ಅಲ್ಲಿ ರಾಜ್ಯ ರಾಜಕೀಯ ಕುರಿತು ಚರ್ಚಿಸಲಾಗುತ್ತದೆ. ಚರ್ಚೆ ವೇಳೆ ವ್ಯಕ್ತವಾದ ಅಭಿಪ್ರಾಯಗಳನ್ನು ಅರುಣ್‌ ಸಿಂಗ್‌ ಅವರು ಹೈಕಮಾಂಡ್‌ ಮುಂದೆ ಇಡಲಿದ್ದಾರೆ. ಅದೆಲ್ಲವನ್ನೂ ಗಮನಿಸಿದ ಬಳಿಕವಷ್ಟೇ ವರಿಷ್ಠರು ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಸಂಪುಟ ಪುನಾರಚನೆ ಮಾಡಬೇಕೋ ಎಂಬುದನ್ನು ನಿರ್ಧರಿಸಲಿದ್ದಾರೆ. ಈ ಎಲ್ಲಾ ಪ್ರಕ್ರಿಯೆ ಮುಗಿಯುವ ವೇಳೆಗೆ ಸಂಕ್ರಾಂತಿ ಹಬ್ಬ ಸಮೀಪಿಸಲಿದೆ. ಹೀಗಾಗಿ ಸಂಕ್ರಾಂತಿ ಹಬ್ಬದ ಬಳಿಕವೇ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಒಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ ವಾಪಸಾಗಿದ್ದರೂ ಸಂಪುಟ ಕಸರತ್ತಿನ ಬಗ್ಗೆ ಸ್ಪಷ್ಟಚಿತ್ರಣ ಮಾತ್ರ ಹೊರಬೀಳುತ್ತಿಲ್ಲ.