ಸುಳ್ಳಿನ ಬಜಾರಲ್ಲಿ ಖಂಡ್ರೆ ದೋಖಾ ಅಂಗಡಿ ತೆಗೆದಾರ: ಕೇಂದ್ರ ಸಚಿವ ಭಗವಂತ ಖೂಬಾ
7 ವರ್ಷಗಳ ಹಿಂದೆ ಈಶ್ವರ ಖಂಡ್ರೆ ಮಂತ್ರಿಯಾಗಿದ್ದ ಸಂದರ್ಭ ಔರಾದ್ ತಾಲೂಕಿನ ಹೆಡಗಾಪೂರದಲ್ಲಿ ಕೇಂದ್ರ ಸರ್ಕಾರದಿಂದ ಬಿಎಸ್‌ಎಫ್ ತರಬೇತಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರದಿಂದ 250 ಎಕರೆ ಪ್ರದೇಶವನ್ನು ಕೊಡಿಸಲಾಗದೇ ಇರುವದು ಇವರ ಯೋಗ್ಯತೆನಾ ಎಂದು ಪ್ರಶ್ನಿಸಿದ ಖೂಬಾ
ಬೀದರ್(ಜು.11): ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸುಳ್ಳಿನ ಬಜಾರಾದಾಗ ದೋಖಾ ಅಂಗಡಿ ತೆಗೆದು ಕುಂತಾರ ಎಂದು ಕೇಂದ್ರದ ಸಚಿವ ಭಗವಂತ ಖೂಬಾ ವ್ಯಂಗ್ಯವಾಡಿದರು.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕೇಂದ್ರ ಸಚಿವ ಭಗವಂತ ಖೂಬಾ ಅವರ ವಿರುದ್ಧ ಆರೋಪಗಳ ಸುರಿಮಳೆಗೈದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಜೆಟ್‌ನಲ್ಲಿ ಬೀದರ್ ಜಿಲ್ಲೆಗೆ ಏನೂ ಕೊಡುಗೆ ಕೊಡಲಾಗಿಲ್ಲ ಎಂಬ ಹತಾಶೆಯಿಂದಾಗಿ ಹಾಗೂ ಮುಖ್ಯಮಂತ್ರಿಗಳು ಇವರ ಬೇಡಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಹೀಗಾಗಿ ಅದನ್ನು ಜನರ ಮನದಿಂದ ಮುಚ್ಚಿಡಲು ನಮ್ಮ ಕೇಂದ್ರ ಸರ್ಕಾರ ಹಾಗೂ ನನ್ನ ಕುರಿತು ಹಗುರವಾದ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿದರು.
ಗೋ ಹತ್ಯೆ ನಿಷೇಧ ಕಾನೂನು ರಕ್ಷಣೆಗೆ ಬದ್ಧ, ನನ್ನ ಮೇಲೆ ಪೊಲೀಸ್ ಕೇಸ್ ಹಾಕಿದ್ರೂ ಹೆದರಲ್ಲ: ಶಾಸಕ ಸಲಗರ
ನೇರವಾಗಿ ನನ್ನನ್ನು ಕುರಿತು ಅನಕ್ಷರಸ್ಥ, ನೈತಿಕತೆ ಇದೆಯಾ ಎಂದು ಖಂಡ್ರೆ ಹಗುರವಾಗಿ ಮಾತನಾಡಿದ್ದಾರೆ. ಅವರಲ್ಲಿ ನೈತಿಕತೆ ಇದ್ದಿದ್ದರೆ ಚುನಾವಣಾ ಪೂರ್ವದಲ್ಲಿ ಭಾಲ್ಕಿ ತಾಲೂಕಿನ ಮತದಾರರಿಗೆ ಸೀರೆ ಹಂಚುವ ಅವಶ್ಯಕತೆ ಇತ್ತಾ ಎಂದು ಖೂಬಾ ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿಗಳು ತನ್ನಷ್ಟಕ್ಕೆ ತಾನು ಬರ್ತಾವೆ ಎಂದು ಸಹಜವಾಗಿ ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರು ತಾವು ಮಾಡಿದಂಥ ಅಭಿವೃದ್ಧಿ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಬಳಿ ಹೋಗಿ ಶಿರಶಾಸನ ಹಾಕ್ತೀರಾ?, ಬೀದರ್ ಕಮಲನಗರ ರಸ್ತೆಯ ಕುರಿತು ಪದೇ ಪದೇ ಉಲ್ಲೇಖ ಮಾಡುತ್ತಿರುವ ಖಂಡ್ರೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಅವರು ಮಂತ್ರಿ ಇದ್ದಾಗಲೇ ಕೇಂದ್ರ ಸರ್ಕಾರ ಈ ಭಾಲ್ಕಿ ಕಮಲನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅನುದಾನ ನೀಡಿದ್ದು ಅವರೇ ಟೆಂಡರ್ ಕರೆದು ನಿರ್ವಹಣೆ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯ ಸರ್ಕಾರದ ಅಧೀನದಲ್ಲಿರುವ ಇಲಾಖೆ ಎಂಬುವುದರ ಅರಿವಿಲ್ಲವೆ ಎಂದು ಪ್ರಶ್ನಿಸಿದರು.
7 ವರ್ಷಗಳ ಹಿಂದೆ ಈಶ್ವರ ಖಂಡ್ರೆ ಮಂತ್ರಿಯಾಗಿದ್ದ ಸಂದರ್ಭ ಔರಾದ್ ತಾಲೂಕಿನ ಹೆಡಗಾಪೂರದಲ್ಲಿ ಕೇಂದ್ರ ಸರ್ಕಾರದಿಂದ ಬಿಎಸ್‌ಎಫ್ ತರಬೇತಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರದಿಂದ 250 ಎಕರೆ ಪ್ರದೇಶವನ್ನು ಕೊಡಿಸಲಾಗದೇ ಇರುವದು ಇವರ ಯೋಗ್ಯತೆನಾ ಎಂದು ಖೂಬಾ ಪ್ರಶ್ನಿಸಿದರು.
ಬಾಕಿ ಕೊಡದಿರುವ ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡಿ: ಸಚಿವ ಈಶ್ವರ ಖಂಡ್ರೆ
ಇನ್ನು ಸಿಪೆಟ್ ಕೇಂದ್ರದ ಬಗ್ಗೆ ಮಾತೆತ್ತಿದ್ದೀರಿ, 4 ಬಾರಿ ಶಾಸಕರಾಗಿದ್ದೀರಿ, 2 ಬಾರಿ ಸಚಿವರಾಗಿದ್ದೀರಿ ನಿಮಗೆ ಅರಿವಿರಬೇಕು. ಬೀದರ್ ವಿವಿಯ ಹಾಲಹಳ್ಳಿ ಕೇಂದ್ರದಲ್ಲಿ ಬರುವ ಆಗಷ್ಟ್, ಸೆಪ್ಟೆಂಬರ್‌ನಲ್ಲಿ ಸಿಪೆಟ್ ತರಬೇತಿ ಆರಂಭ ಮಾಡುತ್ತದೆ. ಔರಾದ್ ತಾಲೂಕಿನ ಬಲ್ಲೂರ್ ಬಳಿ 10ಎಕರೆ ಜಮೀನು ಮಂಜೂರಾಗಿದ್ದು ಕೇಂದ್ರದಿಂದ 50ಕೋಟಿ ರು. ಬಿಡುಗಡೆ ಮಾಡಿದ್ದೇವೆ. ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ 50 ಕೋಟಿ ಮೀಸಲಿಟ್ಟಿದ್ದಾರೆ. ಅದನ್ನು ನಿಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಿಸಿ ನಿಮ್ಮ ಕಾಳಜಿ ತೋರಿಸಿರಿ ಎಂದು ಕೇಂದ್ರ ಸಚಿವ ಖೂಬಾ ಸವಾಲೆಸೆದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕುಂಬಾರ, ಜಿಲ್ಲಾ ಮಾಧ್ಯಮ ಸಂಚಾಲಕ ಬಸವರಾಜ ಜೋಜನಾ, ಶ್ರೀನಿವಾಸ ಚೌಧರಿ ಹಾಗೂ ರಾಜಶೇಖ ನಾಗಮೂರ್ತಿ ಇದ್ದರು.