ಕಾಂಗ್ರೆಸ್ಸಿಗರೆ ರಾಮಮಂದಿರ ನಿರ್ಮಾಣವಾದರೆ ನಿಮಗೇಕೆ ಹೊಟ್ಟೆಕಿಚ್ಚು?: ಪ್ರಲ್ಹಾದ್ ಜೋಶಿ
31 ವರ್ಷಗಳ ಹಿಂದಿನ ಪ್ರಕರಣವನ್ನು ಪುನಃ ಕೆದಕಿ ಶ್ರೀರಾಮ ಭಕ್ತರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ತನ್ನ ನೀಚತನ ತೋರಿಸುತ್ತಿದೆ. ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದರೆ ಕಾಂಗ್ರೆಸ್ಸಿಗರಿಗೆ ಏಕೆ ಹೊಟ್ಟೆಕಿಚ್ಚು? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ (ಜ.03): 31 ವರ್ಷಗಳ ಹಿಂದಿನ ಪ್ರಕರಣವನ್ನು ಪುನಃ ಕೆದಕಿ ಶ್ರೀರಾಮ ಭಕ್ತರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ತನ್ನ ನೀಚತನ ತೋರಿಸುತ್ತಿದೆ. ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದರೆ ಕಾಂಗ್ರೆಸ್ಸಿಗರಿಗೆ ಏಕೆ ಹೊಟ್ಟೆಕಿಚ್ಚು? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಶ್ರೀರಾಮ ಭಕ್ತನ ಬಂಧನ ಸರ್ಕಾರದ ಕುಹಕ, ನೀಚತನವಾಗಿದೆ. ಇದು ಕೇವಲ ಕೋರ್ಟ್ ವಾರಂಟ್ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದು ಕಡೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಪತ್ರ ಬರೆಯುತ್ತಾರೆ. ಕೆಜೆ ಹಳ್ಳಿ, ಡಿಜೆ ಹಳ್ಳಿ, ಪಿಎಫ್‌ಐ ಪ್ರಕರಣ ಹಿಂಪಡೆಯುತ್ತಾರೆ ಎಂದು ಟೀಕಿಸಿದರು.
ಮುಸಲ್ಮಾನರ ತುಷ್ಟೀಕರಣ: ರಾಜ್ಯದಲ್ಲಿರುವುದು ಐಎಸ್‌ಐಎಸ್ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿದುಕೊಂಡಿದ್ದಾರೆ ಎಂದು ಟೀಕಿಸಿದ ಅವರು, ಇದು ಮುಸಲ್ಮಾನರ ತುಷ್ಟೀಕರಣದ ಪರಾಕಾಷ್ಠೆ. ಮುಖ್ಯಮಂತ್ರಿಗಳು ಅನಗತ್ಯವಾಗಿ ಜನರಲ್ಲಿ ದ್ವೇಷ, ಅಸೂಯೆ ಹುಟ್ಟು ಹಾಕುತ್ತಿದ್ದಾರೆ. ಇದನ್ನೇ ಮುಂದುವರಿಸುತ್ತೇವೆ ಎನ್ನುವ ದಾಷ್ಟ್ಯ ತೋರಿಸುತ್ತಿದ್ದಾರೆ. ಇದು ಸಿದ್ದರಾಮಯ್ಯನವರ ಹಿಂದೂ ದ್ವೇಷದ, ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಿಂದ ಪಕ್ಷಾತೀತವಾಗಿ ರಾಮಮಂದಿರ ಲೋಕಾರ್ಪಣೆಯಾಗಲಿ: ಸಚಿವ ಮಂಕಾಳ ವೈದ್ಯ
ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಇಂತಹ ಹಲವು ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಈ ಪ್ರಕರಣ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇಂತಹ ಕೆಲವು ಪ್ರಕರಣಗಳು ನಮ್ಮ ಗಮನಕ್ಕೆ ಬಾರದೇ ಇರುವುದರಿಂದ ಅಂಥವುಗಳನ್ನು ಅದರಲ್ಲೂ ಶ್ರೀರಾಮ ಮಂದಿರ ನಿರ್ಮಾಣ ಕುರಿತು ನಡೆದ ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ಹುಡುಕಿ ಕೆದಕುವ ಮೂಲಕ ಜನರಲ್ಲಿ ದ್ವೇಷಭಾವನೆ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇಷ್ಟು ದಿನಗಳ ಕಾಲ ಬಿಟ್ಟು ಈಗ ಶ್ರೀರಾಮ ಮಂದಿರ ಉದ್ಘಾಟನೆ ಆಗುವ ವೇಳೆಯಲ್ಲಿ ಬಂಧಿಸುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.
ಸೂರ್ಯಕಾಂತಿ ಇದ್ದಂತೆ: ಪೊಲೀಸ್ ಅಧಿಕಾರಿಗಳು ಸೂರ್ಯಕಾಂತಿ ಇದ್ದಂತೆ, ಸರ್ಕಾರ ಎನ್ನುವ ಸೂರ್ಯ ಎತ್ತ ಕಡೆ ತಿರುಗುತ್ತಾನೆಯೋ ಅತ್ತ ಕಡೆ ತಿರುಗುತ್ತಾರೆ. ಮುಖ್ಯಮಂತ್ರಿಗಳು ಹೇಳಿದಂತೆ ಹುಬ್ಬಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ಕೇಳುತ್ತಿದ್ದಾರೆ ಎಂದರೆ ಏನರ್ಥ? ಮೊದಲು ನಿಮ್ಮ ಸರ್ಕಾರದಲ್ಲಿರುವ ಕಳ್ಳರು, ದರೋಡೆಕೋರರನ್ನು ಬಂಧಿಸಿ. ಆಮೇಲೆ ಇಂತಹ ರಾಮ ಭಕ್ತರನ್ನು ಬಂಧಿಸುವ ಯೋಚನೆ ಮಾಡುವಿರಂತೆ ಎಂದು ಎಚ್ಚರಿಕೆ ನೀಡಿದರು. ಸಚಿವ ಎಂ.ಬಿ. ಪಾಟೀಲ ಅವರು ಮೊದಲು ತಮ್ಮ ಪಕ್ಷದ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿಕೊಳ್ಳಲಿ. ಕಾಂಗ್ರೆಸ್ಸಿಗರು ಶ್ರೀರಾಮನ ಬಗ್ಗೆ ಅವಹೇಳನ ಮಾಡದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ.
ಈ ಹಿಂದೆ ಕಾಂಗ್ರೆಸಿನವರು ಹುಚ್ಚುತನ ಮಾಡಿ ಈಗ ಒಳ್ಳೆಯವರಂತೆ ನಡೆದುಕೊಳ್ಳುತ್ತಿದ್ದಾರೆ. ಎಲ್ಲರ ಮುಂದೆ ನಾನು ಶ್ರೀರಾಮನ ಭಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಭಕ್ತರಾಗಿದ್ದರೆ ಅಯೋಧ್ಯೆಗೆ ಹೋಗಲಿ. ಈ ರೀತಿಯಾಗಿ ಶ್ರೀರಾಮ ಭಕ್ತರಿಗೆ ತೊಂದರೆ ನೀಡುವ ಕಾರ್ಯ ಮಾಡದಿರಲಿ. ಶ್ರೀರಾಮ ಭಕ್ತನ ಬಂಧನ ಖಂಡಿಸಿ ಬುಧವಾರದಿಂದ ಬಿಜೆಪಿಯ ವತಿಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಕಾಂಗ್ರೆಸಿನ ಕೆಲವು ಸಚಿವರು ಸಿದ್ದರಾಮಯ್ಯ ಅವರೇ ನಮಗೆ ರಾಮ ಇದ್ದಂತೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ರಾಮನಂತೆ ಎಂದರೆ ಏನು ಹೇಳುವುದು? ಅವರು ರಾಮನಂತಲ್ಲ ರಾವಣನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಎಸ್ವೈ, ಬಿವೈವಿ ಬಗ್ಗೆ ಯತ್ನಾಳ್ ಹಗುರ ಮಾತು ಸರಿಯಲ್ಲ: ಪ್ರಲ್ಹಾದ್ ಜೋಶಿ
ಪೂಜಾರಿ ಮೇಲೆ 15 ಪ್ರಕರಣ: ಈಗಾಗಲೇ ಪೊಲೀಸರು ಬಂಧಿಸಿರುವ ಶ್ರೀಕಾಂತ ಪೂಜಾರಿ ಅವರ ಮೇಲೆ ವಿವಿಧ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೋಶಿ, ಅವನ ಮೇಲೆ ಪ್ರಕರಣ ಎಷ್ಟಿವೆ ಎಂಬುದರ ಕುರಿತು ನಾನು ಇಲ್ಲಿ ಮಾತನಾಡುವುದಿಲ್ಲ. ಆದರೆ, ಅವನನ್ನು ಬಂಧಿಸಿರುವುದು ಶ್ರೀರಾಮ ಮಂದಿರ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂದರು.