ಧರ್ಮ ರಾಜಕಾರಣ, ಸಿದ್ದರಾಮಯ್ಯ ಪ್ರಾಯಶ್ಚಿತ ಮಾಡಿಕೊಳ್ಳಲಿ: ಪ್ರಹ್ಲಾದ್ ಜೋಶಿ
ಸಿದ್ದರಾಮಯ್ಯ ಅವರಿಗೆ ಈಗ ದೇವರು ಹಾಗೂ ಹಿಂದೂ ಧರ್ಮದ ಮಹತ್ವ ಗೊತ್ತಾಗ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಧರ್ಮ ರಾಜಕಾರಣ ಮಾಡಲ್ಲ ಎಂದು ಈಗ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಬೆಂಗಳೂರು (ಆ.20): ಲಿಂಗಾಯತ ವೀರಶೈವ ಧರ್ಮರಾಜಕಾರಣಕ್ಕೆ ಕೈ ಹಾಕಿದ್ದ ಸಿದ್ದರಾಮಯ್ಯ ಅವರು ಪ್ರಶ್ಚಾತಾಪ ಪಟ್ಟರೆ ಸಾಲದು ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿದ್ದರಾಮಯ್ಯ ಅವರಿಗೆ ಈಗ ದೇವರು ಹಾಗೂ ಹಿಂದೂ ಧರ್ಮದ ಮಹತ್ವ ಗೊತ್ತಾಗ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಧರ್ಮ ರಾಜಕಾರಣ ಮಾಡಲ್ಲ ಎಂದು ಈಗ ಹೇಳಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಹಿಂದುತ್ವ, ಹಿಂದೂ ಧರ್ಮದ ಆಚರಣೆಗಳು ಎಂದರೆ ಕಾಂಗ್ರೆಸ್ ಮೊದಲೆಲ್ಲಾ ಅಸೆಡ್ಡೆ ತೋರಿಸುತಿತ್ತು. ಆದ್ರೆ, ಹಿಂದುತ್ವ ಸಿದ್ದಾಂತದಲ್ಲಿ ನಂಬಿಕೆಯಿಟ್ಟು ಮುನ್ನೆಡೆದ ಬಿಜೆಪಿ ಪಕ್ಷದ ಬೆಳವಣಿಗೆಯನ್ನ ನೋಡಿ ಈಗ ಕಾಂಗ್ರೆಸ್ ಗೆ ಭಯ ಶುರುವಾಗಿದೆ. ಬಿಜೆಪಿ ಅಂದ್ರೆ ಸಿದ್ದರಾಮಯ್ಯ ಅವರಿಗೆ ಈಗ ಭಯ. ಹೀಗಾಗಿಯೇ ಸಿದ್ದರಾಮಯ್ಯ ಅವರು ಮಠ, ಮಾನ್ಯಗಳಿಗೆ, ದೇವಸ್ಥಾನಗಳಿಗೆ ತೆರಳ್ತಿದ್ದಾರೆ. ಸಿದ್ದರಾಮಯ್ಯ ಈ ಮೊದಲು ತಮ್ಮನ್ನ ತಾವು ಸಮಾಜವಾದಿ ಎಂದು ಹೇಳಿಕೊಳ್ಳುತ್ತಿದ್ದರು. ಆದ್ರೆ ಈಗ ದೇವರಲ್ಲಿ ಅವರಿಗೆ ನಂಬಿಕೆ ಬಂದಿದೆ. ಧರ್ಮ ರಾಜಕಾರಣದಲ್ಲಿ ಕೈ ಹಾಕಲ್ಲ ಎನ್ನುತ್ತಿದ್ದಾರೆ.
ಲಿಂಗಾಯತ ವೀರಶೈವ ಧರ್ಮ ರಾಜಕಾರಣ ನಡೆಸಿದ್ದ ಸಿದ್ದರಾಮಯ್ಯ ಅವರು ಕ್ಷಮೆ ಕೇಳಿ ಪಶ್ಚಾತಾಪ ಪಟ್ಟರೆ ಸಾಲದು. ಅದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹಿಂದೂ ಮುಸ್ಲಿಂರಲ್ಲಿ ಒಡಕು ತರುವ ಕೆಲಸವನ್ನ ಸಿದ್ದರಾಮಯ್ಯ ಅವರು ಮಾಡುತ್ತಿದ್ದರು. ಮುಸ್ಲಿಂ ಓಲೈಕೆ ರಾಜಕಾರಣ, ತುಷ್ಟಿಕರಣದ ರಾಜಕಾರಣವನ್ನ ಸಿದ್ದರಾಮಯ್ಯ ಅವರು ಬಿಡಬೇಕು ಎಂದು ಜೋಶಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.
ಸಿದ್ದು ಮೇಲೆ ಮೊಟ್ಟೆಎಸೆದಿದ್ದು ತಪ್ಪು:
ಕೊಡಗಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆಎಸೆದ ಘಟನೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಂಡಿಸಿದ್ದಾರೆ. ಸಿದ್ದರಾಮಯ್ಯ ಆಗಲಿ ಅಥವಾ ಇನ್ನಾರಿಗಾಗಲಿ ಮೊಟ್ಟೆಎಸೆಯುವುದು ತಪ್ಪು, ಅದೇ ರೀತಿ ಸಿದ್ದರಾಮಯ್ಯ ಸಾವರ್ಕರ್ ಕುರಿತು ಮಾತನಾಡಿದ್ದೂ ತಪ್ಪು ಎಂದಿದ್ದಾರೆ.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: 10 ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೊಟ್ಟೆಎಸೆದಿರುವುದು ಯಾವ ರೀತಿಯಲ್ಲಿಯೂ ಸಮರ್ಥನೀಯವಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದರೆ ಯಾರೂ ಲಕ್ಷ್ಮಣ ರೇಖೆ ಮೀರಬಾರದು. ಕಪ್ಪು ಧ್ವಜ ಪ್ರದರ್ಶನ ಮಾಡುವವರ ಪರ ನಾನಿಲ್ಲ ಎಂದರು
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದನ್ನು ಖಂಡಿಸುತ್ತೇನೆ: ಸಚಿವ ಸುಧಾಕರ್
ಸಿದ್ದರಾಮಯ್ಯನವರು ಸಾವರ್ಕರ್ ಬಗ್ಗೆ ಹೇಳಿದ್ದನ್ನು ಇಲ್ಲಿ ಗಮನಿಸಬೇಕು. ಸಾವರ್ಕರ್ ಬಗ್ಗೆ ನಿಮಗೆ ಗೌರವ ಇರದೇ ಇದ್ದರೂ ಬೇರೆಯವರಿಗೆ ವಿಶ್ವಾಸ, ಶ್ರದ್ಧೆ ಇದೆ. ಅವರಿಗೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿದ್ದೀರಿ. ಸ್ವತಃ ಇಂದಿರಾ ಗಾಂಧಿ ಅವರೇ ಸಾವರ್ಕರ್‌ಗೆ ಪತ್ರ ಬರೆದು ‘ಭಾರತದ ಸುಪುತ್ರ’ ಎಂದು ಹೊಗಳಿದ್ದರು. ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ದೊಡ್ಡದಿದೆ ಅಂದಿದ್ದರು. ಗಾಂಧೀಜಿ ಸಾವರ್ಕರ್ ಹೋರಾಟ ನೆನಪಿಸಿದ್ದನ್ನು ಸಿದ್ದರಾಮಯ್ಯ ಅರಿಯಬೇಕು ಎಂದು ಜೋಶಿ ಹೇಳಿದರು.