MLC Elections: ಬೆಳಗಾವಿ ಭಿನ್ನಮತ ಶಮನಕ್ಕೆ ಪ್ರಹ್ಲಾದ್ ಜೋಶಿ ಸಭೆ!
• ಭಿನ್ನಮತ ಇಲ್ಲ ಬಿಜೆಪಿ ಗೆಲ್ಲಿಸೋದೊಂದೇ ನಮ್ಮ ಮತ - ಪ್ರಹ್ಲಾದ್ ಜೋಶಿ
• ಭಿನ್ನಾಭಿಪ್ರಾಯ ಹೆಚ್ಚು ಕಮ್ಮಿ ಎಂಡ್ ಎಂದ ಬಾಲಚಂದ್ರ ಜಾರಕಿಹೊಳಿ
• ಹಿಂದೆ ಏನೇ ಆಗಿರಬಹದು ಈಗ ಒಂದಾಗಿದ್ದೇವೆ ಎಂದ ಲಕ್ಷ್ಮಣ್ ಸವದಿ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಮೇ.22): ಜೂನ್ 13ರಂದು ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ವಾಯುವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಹಾಗೂ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿಗೆ ಬೆಳಗಾವಿ ಬಿಜೆಪಿ ಭಿನ್ನಮತ ಬಗ್ಗೆಯೇ ಟೇನ್ಷನ್ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೆಹಲಿಯಿಂದ ನೇರವಾಗಿ ಬೆಳಗಾವಿಗೆ ಆಗಮಿಸಿ ಬೆಳಗಾವಿ ಜಿಲ್ಲೆಯ ಮಾಜಿ ಹಾಲಿ ಸಂಸದರು, ಶಾಸಕರು, ಎಂಎಲ್‌ಸಿಗಳು, ಪ್ರಮುಖ ನಾಯಕರ ಸಭೆ ನಡೆಯಿತು.
ಸಭೆಯಲ್ಲಿ ಸಚಿವ ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಲಕ್ಷ್ಮಣ್ ಸವದಿ, ಬಾಲಚಂದ್ರ ಜಾರಕಿಹೊಳಿ,ಮಹಾಂತೇಶ ದೊಡಗೌಡರ, ಆನಂದ ಮಾಮನಿ, ಅನಿಲ್ ಬೆನಕೆ ಸೇರಿ ಬೆಳಗಾವಿ ಜಿಲ್ಲೆಯ 13 ಶಾಸಕರ ಪೈಕಿ 9 ಶಾಸಕರು ಹಾಜರಾಗಿದ್ದರು. ರಮೇಶ್ ಜಾರಕಿಹೊಳಿ, ದುರ್ಯೋಧನ ಐಹೊಳೆ, ಪಿ.ರಾಜೀವ್ ಅಭಯ್ ಪಾಟೀಲ್ ಗೈರಾಗಿದ್ದರು. ದೆಹಲಿ ಪ್ರವಾಸದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೈರಾಗಿದ್ದರೆ, ಚಿಕ್ಕೋಡಿ ವಿಭಾಗದ ಸಭೆಯಲ್ಲಿ ಹಾಜರಾಗೋದಾಗಿ ತಿಳಿಸಿದ್ದ ದುರ್ಯೋಧನ ಐಹೊಳೆ, ಪಿ.ರಾಜೀವ್ ಪೈಕಿ ಪಿ.ರಾಜೀವ್ ಮಾತ್ರ ಹಾಜರಾಗಿದ್ದರು.
Karnataka Politics: ಬೆಂಕಿ ಹಚ್ಚೋ ಕೆಲಸದಿಂದ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್: ಕಡಾಡಿ
ಬೆಳಗಾವಿ ನಗರ, ಗ್ರಾಮಾಂತರ ಭಾಗದ ಬಹುತೇಕ ಶಾಸಕರು ಹಾಜರಾಗಿದ್ರು. ಸಭೆಯಲ್ಲಿ ಭಿನ್ನಮತ ಬದಿಗೊತ್ತಿ ಚುನಾವಣೆ ಗೆಲ್ಲಲು ಎಲ್ಲರೂ ಒಗ್ಗೂಡಿ ಎಂಬ ಸಂದೇಶವನ್ನು ಜಿಲ್ಲೆಯ ಬಿಜೆಪಿ ನಾಯಕರಿಗೆ ಪ್ರಹ್ಲಾದ್ ಜೋಶಿ ನೀಡಿದರು. ಇನ್ನೇನು ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಬರಲಿದ್ದು ವಿಧಾನ ಪರಿಷತ್ ಚುನಾವಣೆ ಬಹುಮಹತ್ವ ಪಡೆಯಲಿದ್ದು ಶತಾಯ ಗತಾಯ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲೇಬೇಕು. ಏನೇ ಭಿನ್ನಮತ ಇದ್ದರೂ ಅದನ್ನ ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸಿ ಎಂದು ಕರೆಕೊಟ್ಟರು. ಅಷ್ಟೇ ಅಲ್ಲದೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ಬರುವಂತೆ ನೋಡಿಕೊಳ್ಳಬೇಕು. ಹೈಕಮಾಂಡ್ ನಾಯಕರು ಎಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಸಲಹೆ ನೀಡಿದರು.
ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತವೇ ಇಲ್ಲ: ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,'ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತವೇ ಇಲ್ಲ. ಎಲ್ಲಾ ಒಂದೇ ಮತ, ಬಿಜೆಪಿ ಗೆಲ್ಲಿಸೋದು. ಯಾರಿಗೆ ಏನ್ ಸೂಚನೆ ಕೊಡಬೇಕು ಕೊಟ್ಟಿದ್ದೇನೆ. ನಾನು ಭಿನ್ನಮತ ಶಮನಕ್ಕೆ ಬಂದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಭಿನ್ನಮತ ಇಲ್ಲ' ಎಂದರು. ಇನ್ನು ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಮುಖ್ಯಮಂತ್ರಿ, ಕೇಂದ್ರ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ' ಎಂದರು. 'ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದ ಗೆಲುವು ಸಾಧಿಸುತ್ತೆ.
ಶೈಕ್ಷಣಿಕ ಕ್ಷೇತ್ರಕ್ಕೆ ಬಿಜೆಪಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಭಾರತದಲ್ಲಿ ಪ್ರಥಮ ಭಾರಿಗೆ ಸ್ಥಳೀಯ ಭಾಷೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಪ್ರಾರಂಭ ಮಾಡಿದೆ. ಹಿಂದಿ ಸಂಪರ್ಕ ಭಾಷೆ ಅಂತ ಹೇಳಿದಾಗಿ ವಿವಾದ ಮಾಡಿದ್ರು. ಪ್ರಧಾನಿ ಸಹ ಸ್ಥಳೀಯ ಭಾಷೆಗಳು ಆತ್ಮ ಎಂದು ಹೇಳಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಈ ವರ್ಷ ಅತಿ ಹೆಚ್ಚು ಬಜೆಟ್ ನಲ್ಲಿ ಹಣ ನೀಡಲಾಗಿದೆ. ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಎಲ್ಲಾ ಶಾಸಕರು, ಸಂಸದರ ಜತೆಗೆ ಚರ್ಚಿಸಿ ಚುನಾವಣೆ ಗೆಲ್ಲಲ್ಲು ಸ್ಟ್ಯಾಟರ್ಜಿ ಮಾಡಿದ್ದೇವೆ ಎಲ್ಲರೂ ಕೆಲಸ ಆರಂಭ ಮಾಡಲಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರು, ಪಕ್ಷದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಶಾಸಕರಿಗೆ ಹೆಚ್ಚಿನ ಲೀಡ್ ಕೊಡಿಸುವ ಜವಾಬ್ದಾರಿ ನೀಡಲಾಗಿದೆ' ಎಂದರು.
ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಬೆಳಗಾವಿ ಸಭೆ ಮುಗಿಸಿ ಚಿಕ್ಕೋಡಿಗೆ ತೆರಳಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಿಕ್ಕೋಡಿಯಲ್ಲಿ ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, 'ಬೆಳಗಾವಿಗೆ ಬಂದಿರೋದು ಭಿನ್ನಮತ ಶಮನ ಮಾಡಲು ಅಲ್ಲ. ಕೆಲವು ಮಾಧ್ಯಮದವರು ನೀವು ಭಿನ್ನಮತ ಅಂತ ಬರೆದಿದ್ದಿರಿ. ನಾವು ಪ್ರಚಾರಕ್ಕೆ ಬಂದಿದ್ದೆವೆ,ಪ್ರಚಾರದ ಯೋಜನೆಗೆ ಬಂದಿದ್ದೆವೆ. ಜಾರಕಿಹೊಳಿ ಆದಿಯಾಗಿ ಎಲ್ಲರೂ ಇವತ್ತು ಸಭೆಯಲ್ಲಿ ಭಾಗವಹಿಸಿದ್ದೆವೆ' ಎಂದರು.ಇನ್ನು ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿ 'ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆ ಇಲ್ಲ. ಮಾಧ್ಯಮಗಳು ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಎಂದು ಹೇಳ್ತಿವೆ' ಎಂದರು.
ರವಿಕುಮಾರ್ ಸರ್ ನಂದ ಹಾಜರಿ ಐತಿ ನೋಡ್ರಿ ಎಂದ ಬಾಲಚಂದ್ರ: ಬೆಳಗಾವಿ ಬಿಜೆಪಿ ಸಭೆಗೆ ಆಗಮಿಸಿದ್ದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಬಿಜೆಪಿ ಭಿನ್ನಮತ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಹಿನ್ನೆಲೆ ಖಾಸಗಿ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ, 'ರವಿಕುಮಾರ್ ಸರ್ ನಮ್ಮದ ಹಾಜರಿ ಐತಿ ನೋಡ್ರಿ' ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ಗೆ ಹೇಳಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, 'ಎಲ್ಲಾ ವಿಷಯ ಪ್ರಹ್ಲಾದ್ ಜೋಶಿಯವರು ಚರ್ಚೆ ಮಾಡಿದ್ದಾರೆ. ಕೆಲವು ವಿಚಾರ ಹೊರಗಡೆ ಹೇಳಲು ಆಗಲ್ಲ. ಆದ್ರೇ ನಮ್ಮಲ್ಲಿ ಇದ್ದ ಭಿನ್ನಾಭಿಪ್ರಾಯ ಹೆಚ್ಚು ಕಮ್ಮಿ ಎಂಡ್ ಆಗಿದೆ. ಈ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ.
ಮುಂದಿನ ದಿನಗಳಲ್ಲಿ ಬಿಜೆಪಿಗೆ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಒಳ್ಳೆಯದಾಗುತ್ತೆ. ಈ ಚುನಾವಣೆಯಲ್ಲಿ ಬಿಜೆಪಿ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಸೋಲುವ ಪ್ರಶ್ನೆ ಇಲ್ಲ, ಯಾರ ಮೇಲೆ ಆಪಾದನೆ ಬರುವುದಿಲ್ಲ' ಎಂದರು ಇನ್ನು ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ಮುಖ್ಯಮಂತ್ರಿ, ಹೈಕಮಾಂಡ್ ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತಾರೆ. ಚುನಾವಣೆ ಬಂದಿರುವ ಕಾರಣಕ್ಕೆ ಮುಂದೆ ಹಾಕಿರಬಹುದು. ಬೆಳಗಾವಿ ಜಿಲ್ಲೆಗೆ, ರಮೇಶ್ ಜಾರಕಿಹೊಳಿಗೆ ಒಳ್ಳೆಯದಾಗುತ್ತೆ ಅಂತಾ ಆಸೆ ಇಟ್ಟುಕೊಂಡಿದ್ದೇವೆ'. ಎಂದರು. ಇನ್ನು ಲಖನ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗ್ತಾರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಬಿಜೆಪಿ ಅಭ್ಯರ್ಥಿಗೆ ಸಪೋರ್ಟ್ ಮಾಡ್ತೇವಿ ಅಂತಾ ಹೇಳಿದ್ದಾರೆ ಎಂದರು. ಇದೇ ವೇಳೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನಾನು ಲಖನ್ ಜಾರಕಿಹೊಳಿ ಜೊತೆ ಮಾತನಾಡಲು ಬಂದಿರುವೆ ಎಂದರು.
'ಹಿಂದೆ ನಮ್ಮ ನಡುವೆ ಏನೇ ಆಗಿರಬಹುದು ಈಗ ಒಂದಾಗಿದ್ದೇವೆ': ಬೆಳಗಾವಿ ಬಿಜೆಪಿ ಭಿನ್ನಮತ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, 'ಹಿಂದೆ ನಮ್ಮ ನಡುವೆ ಏನೇ ಆಗಿರಬಹುದು, ಆದರೀಗ ಒಂದಾಗಿದ್ದೇವೆ. ವಾಯವ್ಯ ಪದವೀಧರ- ಶಿಕ್ಷಕ ಕ್ಷೇತ್ರದದ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗಲಿದೆ.ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ.ಹಿಂದೆ ಆಗಿರುವ ಘಟನೆಗಳ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಹಿಂದೆ ಆಗಿರುವುದು ಪುನರಾವರ್ತನೆ ಆಗಬಾರದು, ಇಬ್ಬರೂ ಅಭ್ಯರ್ಥಿಗಳು ಗೆಲ್ಲಬೇಕು. ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸುವ ನಿರ್ಣಯವನ್ನು ಇಂದಿನ ಸಭೆಯಲ್ಲಿ ತೆಗೆದುಕೊಂಡಿದ್ದೇವೆ. ಅದನ್ನು ಎಲ್ಲರೂ ಸೇರಿ ಇಂಪ್ಲಿಮೇಂಟ್ ಮಾಡುತ್ತೇವೆ, ಯಾವುದೇ ತೊಂದರೆಯಿಲ್ಲ' ಎಂದರು. ಇನ್ನು ವಿಧಾನಸಭೆ ಚುನಾವಣೆ ವೇಳೆ ತಾವು ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ್ ಸವದಿ, ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುವೆ ಪಕ್ಷಕ್ಕೆ ಮುಜುಗರ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು' ಎಂದರು.
Belagavi: ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಿಗೆ 'ಭಿನ್ನಮತ' ಟೆನ್ಷನ್?
ಬ್ಯಾನರ್‌ನಲ್ಲಿ ರಮೇಶ್ ಜಾರಕಿಹೊಳಿ ಫೋಟೋ ಮಾಯ: ಇನ್ನು ಚಿಕ್ಕೋಡಿಯಲ್ಲಿ ನಡೆದ ಪ್ರಹ್ಲಾದ್ ಜೋಶಿ ನೇತೃತ್ವದ ಬಿಜೆಪಿ ಸಭೆಯಲ್ಲಿ ಹಾಕಿದ ಬ್ಯಾನರ್‌ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾವಚಿತ್ರವೇ ಮಾಯವಾಗಿತ್ತು. ಚಿಕ್ಕೋಡಿ ವಿಭಾಗೀಯ ಮಟ್ಟದ ಸಭೆ ಹಿನ್ನೆಲೆ ರಮೇಶ್ ಜಾರಕಿಹೊಳಿ ಭಾವಚಿತ್ರ ಹಾಕಿಲ್ಲ ಎಂದು ಕೆಲವರು ಸ್ಪಷ್ಟಪಡಿಸಿದರು. ಒಟ್ಟಾರೆಯಾಗಿ ಬೆಳಗಾವಿ ಭಿನ್ನಮತ ಶಮನಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಹ್ಲಾದ್ ಜೋಶಿ ಸಭೆ ನಡೆಸಿ ತೆರಳಿದ್ದು ಮುನಿಸು ಮರೆತು ಎಲ್ಲ ನಾಯಕರು ಒಂದಾಗುತ್ತಾರಾ? ಎಲ್ಲರೂ ಒಗ್ಗೂಡಿ ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ತರ್ತೀವಿ ಎಂಬ ವಿಶ್ವಾಸ ನಿಜವಾಗುತ್ತಾ ಕಾದು ನೋಡಬೇಕು.