Asianet Suvarna News Asianet Suvarna News

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ಯಾಕೆ? ಸ್ಪಷ್ಟ ಕಾರಣ ಕೊಟ್ಟ ಪ್ರಮೋದ್ ಮಧ್ವರಾಜ್

* ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಒಂದೇ ಗಂಟೆಲ್ಲಿ ಬಿಜೆಪಿ ಸೇರ್ಪಡೆ
* ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ಯಾಕೆ? 
* ಸ್ಪಷ್ಟ ಕಾರಣ ಕೊಟ್ಟ ಪ್ರಮೋದ್ ಮಧ್ವರಾಜ್

Udupi Congress Leader Pramod madhwaraj First Reacts On Joined BJP rbj
Author
Bengaluru, First Published May 10, 2022, 4:57 PM IST

ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಮೇ.10):
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜೀನಾಮೆ ನೀಡಿದ ಒಂದೇ ಗಂಟೆಯಲ್ಲೇ ಬಿಜೆಪಿ ಸೇರಿ ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ ಉಡುಪಿ ಕ್ಷೇತ್ರದಲ್ಲಿ ಹಾಲಿ ಶಾಸಕ ರಘುಪತಿ ಭಟ್ ಇದ್ದಾರೆ. ಇದೀಗ ಪ್ರಮೋದ್ ಮಧ್ವರಾಜ್ ಸೇರ್ಪಡೆಯಾಗಿದ್ದು, ಅವರಿಗೆ ಯಾವ ಕ್ಷೇತ್ರದ ಟಿಕೆಟ್ ಎನ್ನುವ ಚರ್ಚೆಗಳು ಶುರುವಾಗಿವೆ. 

ಇನ್ನು ಬಿಜೆಪಿ ಸೇರ್ಪಡೆಯ ನಂತರ ಇದೇ ಮೊದಲ ಬಾರಿಗೆ ಪಕ್ಷದ ಪಡಸಾಲೆಯೊಳಗೆ ಪ್ರಮೋದ್ ಕಾಣಿಸಿಕೊಂಡರು .ಉಡುಪಿಯಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ನಂತರ ಮಾಧ್ಯಮಗಳ ಜೊತೆ ಪ್ರಮೋದ್ ಮಧ್ವರಾಜ್ ಮಾತನಾಡಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಬಂದಿದ್ದೇನೆ. ಕೋವಿಡ್ ಕಾಲದಲ್ಲಿ ಅವರು, ನಿಭಾಯಿಸಿದ ಕಾರ್ಯವೈಕರಿ ಮೆಚ್ಚುಗೆಯಾಗಿ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸರಳ ಮತ್ತು ಜನಸಾಮಾನ್ಯರಿಗೆ ಹತ್ತಿರವಾದ ನಡೆ,  ಆಡಳಿತವನ್ನು ನೀಡುವ ಕಾರ್ಯವೈಖರಿ ಕೂಡಾ ನಾನು  ಬಿಜೆಪಿ ಸೇರಲು ಕಾರಣ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟ ಮಾಜಿ ಸಚಿವ ಒಂದೇ ಗಂಟೆಯಲ್ಲಿ ಬಿಜೆಪಿ ಸೇರ್ಪಡೆ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ವಿಶ್ವಾಸ ಇಟ್ಟು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿ.ಎಲ್ ಸಂತೋಷ್ ಅವರ ಮೇಲೆ ವಿಶ್ವಾಸವಿಟ್ಟು ನಾನು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಅಂತಲೂ ಹೇಳಿದರು.

ಯಾವುದೇ ಬೇಡಿಕೆ ಇಟ್ಟಿಲ್ಲ
ನಾನಾಗಿ ಬಿಜೆಪಿಯ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ. ಭಾರತೀಯ ಜನತಾ ಪಕ್ಷ ಯಾವುದೇ ಭರವಸೆಗಳನ್ನು ಕೊಟ್ಟಿಲ್ಲ. ಒಬ್ಬ ಕಾರ್ಯಕರ್ತನಾಗಿ ನಾನು ಬಿಜೆಪಿಯಲ್ಲಿ ದುಡಿಯುತ್ತೇನೆ. 2023 ಚುನಾವಣೆಯಲ್ಲಿ 150ಸೀಟು ಗೆಲ್ಲಿಸಿಕೊಳ್ಳಲು ನಾನು ನನ್ನ ಅಳಿಲುಸೇವೆಯನ್ನು ಮಾಡುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಪಕ್ಷ ಎಲ್ಲಿ ಕೆಲಸ ಮಾಡಲು ಹೇಳುತ್ತದೆ ಅಲ್ಲಿ ಹೋಗಿ ಕೆಲಸ ಮಾಡುತ್ತೇನೆ. ವಿಶೇಷವಾಗಿ ಮೀನುಗಾರರು ಇರುವಂತಹ ಕ್ಷೇತ್ರದಲ್ಲಿ ಹೋಗಿ ಕೆಲಸ ಮಾಡುತ್ತೇನೆ. ಪಕ್ಷ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಅಳಿಲ ಸೇವೆ ಮಾಡಲು ಬದ್ಧನಾಗಿದ್ದೇನೆ ಎಂದರು.

ವೈರಲ್ ವಿಡಿಯೋಗಳಿಗೆ ಉತ್ತರ
ಕಾಂಗ್ರೆಸ್ ಹೊಗಳಿದ ಬಿಜೆಪಿ ಬೈದಿರುವ ಹಳೇ ವೀಡಿಯೋಗಳನ್ನು ವೈರಲ್ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ನಾನು 2018ರಲ್ಲಿ ಸಂದರ್ಶನದಲ್ಲಿ ಮಾತನಾಡಿದ ವಿಡಿಯೋ ಹರಿಯಬಿಡಲಾಗುತ್ತದೆ. ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ ಪಕ್ಷ ಕೂಡ ನನಗೆ ಹಲವಾರು ಕೊಡುಗೆಗಳನ್ನು ಕೊಟ್ಟಿದೆ. ಉಡುಪಿ ಜಿಲ್ಲೆಯ ಕಾಂಗ್ರೆಸ್ ನ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ನನಗೆ ಹಿತಕರವಾಗಿಲ್ಲ. ನನಗೆ ಉಸಿರುಕಟ್ಟುವ ವಾತಾವರಣ ಇದೆ. ಪಕ್ಷದ ವರಿಷ್ಠರಿಗೆ ಹಲವು ಬಾರಿ ಹೇಳಿದಾಗಲೂ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ಆದರೆ ಅದನ್ನು ಇನ್ನು ಸರಿಪಡಿಸದಿದ್ದಾಗ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ್ದೇನೆ. 2018 ರಲ್ಲಿ ಹೇಳಿದ ಮಾತಿಗೂ ನಾನು ಈಗ ತೆಗೆದುಕೊಂಡ ನಿರ್ಧಾರಕ್ಕೂ ಯಾವುದೇ ಸಂಬಂಧಗಳು ಇಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದರು.

 ವಿರೋಧ ಪಕ್ಷದಲ್ಲಿರುವಾಗ ಆಡಳಿತ ಪಕ್ಷವನ್ನು ಟೀಕೆ ಮಾಡುವುದು ನಮ್ಮ ಕರ್ತವ್ಯ. ಇಂದಿರಾ ಗಾಂಧಿ ವಿರುದ್ಧ ವೀರೇಂದ್ರ ಪಾಟೀಲ್ ಆರೋಪ ಮಾಡಿ, ನಿರಂತರವಾಗಿ ಟೀಕೆಗಳನ್ನು ಮಾಡಿದ್ದರು. ಎರಡೇ ವರ್ಷದಲ್ಲಿ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಪಕ್ಷವನ್ನು ಸೇರಿ ಅಲ್ಲಿ ಮಂತ್ರಿಯಾಗುತ್ತಾರೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡು ಆಡಳಿತ ಪಕ್ಷವನ್ನು ಮೆಚ್ಚಲು ಸಾಧ್ಯವೇ? ಅಂದಿನ ವಿಡಿಯೋಗಳನ್ನು ಇಂದು ಹರಿಯಬಿಡುವುದು ಎಷ್ಟು ಸಮಂಜಸ ಎಂದು ಅವರೇ ಚಿಂತನೆ ಮಾಡಲಿ ಎಂದರು.

ಸಮಯ ಸಂದರ್ಭ ನೋಡಿ ಕಾರ್ಯಕರ್ತರ ಸೇರ್ಪಡೆ
ನಾನು ಬಿಜೆಪಿಗೆ ಸೇರಿದ್ದೇನೆ. ನನ್ನ ಹಲವಾರು ಬೆಂಬಲಿಗರು ಬಿಜೆಪಿ ಸೇರಲು ಆಸಕ್ತರಾಗಿದ್ದಾರೆ. ಬೂತ್, ಗ್ರಾಮೀಣ ಮಟ್ಟದಲ್ಲಿ ಬಿಜೆಪಿಗೆ ಶಕ್ತಿ ತುಂಬಿದ ಕಾರ್ಯಕರ್ತರಿದ್ದಾರೆ. ಬಿಜೆಪಿ ಕಾರ್ಯಕರ್ತರ ಮನಸ್ಸನ್ನು ಒಲಿಸಿ, ಓಲೈಸಿ ಅವರ ಒಪ್ಪಿಗೆಯನ್ನು ಪಡೆದು ಬಿಜೆಪಿಗೆ ಸೇರ್ಪಡೆ ಕೆಲಸ ಆಗುತ್ತದೆ.ನಾನು ಎಂಎಲ್ಎ ಆಗಿ ಯಾರ ಮೇಲೆ ಕೇಸು ಹಾಕಿಸಿದ್ದೇನೆ ನೆನಪಿಲ್ಲ. ಕೇಸು ಹಾಕುವುದು ನನ್ನ ಕೆಲಸ ಅಲ್ಲ ಎಂದು ತಿಳಿಸಿದರು.

ಡೆಲ್ಲಿ ರಾಜಕೀಯ ಮಾಡಲು ಬಂದಿಲ್ಲ ಹಳ್ಳಿ ರಾಜಕೀಯ ಮಾಡುತ್ತೇನೆ
ನಾನು ರಾಜ್ಯ ಅಥವಾ ಕೇಂದ್ರದಲ್ಲಿ ಕೆಲಸ ಮಾಡಲು ಬಿಜೆಪಿ ಸೇರಿಲ್ಲ. ನಾನು ಹಳ್ಳಿಯಲ್ಲಿ ಕೆಲಸ ಮಾಡಲು ಹೊರಟಿದ್ದೇನೆ. ರಾಷ್ಟ್ರ ರಾಜಕಾರಣವಲ್ಲ ರಾಜ್ಯ ರಾಜಕಾರಣವೂ ಅಲ್ಲ ನನಗೆ ಹಳ್ಳಿಯ ರಾಜಕಾರಣ ಬೇಕು. ಅದರ ಮೇಲೆ ನನಗೆ ಆಸಕ್ತಿ ಜಾಸ್ತಿ. ಚುನಾವಣೆ ಬಂದಾಗ ಸ್ಪರ್ಧೆಯ ವಿಚಾರ ಚರ್ಚಿಸೋಣ. ಶಾಸಕ ರಘುಪತಿ ಭಟ್ ಅವರ ಒಪ್ಪಿಗೆ ಇಲ್ಲದಿದ್ದರೆ ನನಗೆ ಬಿಜೆಪಿಗೆ ಸೇರಲು ಆಗುತ್ತಿರಲಿಲ್ಲ. ಒಂದು ಪಕ್ಷವನ್ನು ಬಿಟ್ಟು ಬಂದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ದುಃಖ ಆಗುತ್ತದೆ. ನನ್ನನ್ನ ಬಯ್ಯುವ ಮತ್ತು ಹೊಗಳುವ ಹಕ್ಕು ಎಲ್ಲರಿಗೂ ಇದೆ. ಹೊಗಳಿದಾಗ ನಾನು ಹಿಗ್ಗುವುದಿಲ್ಲ ತೆಗಳಿದಾಗ ಕುಗ್ಗುವುದಿಲ್ಲ ಎಂದರು

Follow Us:
Download App:
  • android
  • ios