ದಳಪತಿಗಳಿಗೆ ಮತ್ತೊಂದು ಆಘಾತ: ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ ಜೆಡಿಎಸ್ ನಾಯಕರು
* ದಳಪತಿಗಳಿಗೆ ಮತ್ತೊಂದು ಆಘಾತ
* ತುಮಕೂರು ಜಿಲ್ಲಾ ಜೆಡಿಎಸ್ ನಾಯಕರ ಚಿತ್ತ ಕಾಂಗ್ರೆಸ್‌ನತ್ತೆ
* ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ ಜೆಡಿಎಸ್ ನಾಯಕರು
ತುಮಕೂರು, (ಅ. 26): ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನವುದು ಮತ್ತೊಮ್ಮೆ ಸಾಬೀತಾಗಿದೆ. ಒಬ್ಬರಿಂದೊಬ್ಬರಂತೆ ಜೆಡಿಎಸ್ ಬಿಟ್ಟು ಹೋಗುತ್ತಿದ್ದಾರೆ.
ಹೌದು... ಗುಬ್ಬಿ (Gubbi) ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಹಾಗೂ ಜಿ.ಟಿ ದೇವೇಗೌಡ (GT Devegowda) ಈಗಾಗಲೇ ಜೆಡಿಎಸ್‌ನಿಂದ ದೂರವಾಗಿದ್ದು, ಕಾಂಗ್ರೆಸ್ (Congress) ಸೇರುವುದಾಗಿ ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮಾಜಿ ಸಚಿವ ಚೆನ್ನಿಗಪ್ಪ ಪುತ್ರರು ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ತುಮೂರು ಜಿಲ್ಲೆಯಲ್ಲಿ (Tumakuru District) ದಳಪತಿಗಳಿಗೆ ಮತ್ತೊಂದು ಆಘಾತವಾಗಿದೆ.
ಶೀಘ್ರ ಹಲವು ಬಿಜೆಪಿ-ಜೆಡಿಎಸ್ ಮುಖಂಡರು ಕಾಂಗ್ರೆಸ್ : ಅಸಮಾಧಾನವು ಬಹಿರಂಗ
ಇನ್ನು ಈ ಬಗ್ಗೆ ಕೊರಟಗೆರೆಯ ಬೈಚೇನಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಾತನಾಡಿದ ಚೆನ್ನಿಗಪ್ಪ ಪುತ್ರರಾದ ಅರುಣ್ ಕುಮಾರ್ ಮತ್ತು ವೇಣುಗೋಪಾಲ್ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇವೆ. ಕಾಂಗ್ರೆಸ್ ಪಕ್ಷ ಸೇರುವ ಜೊತೆಗೆ ಕೊರಟಗೆರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಚೆನ್ನಿಗಪ್ಪ ಪುತ್ರ ಡಿ. ಸಿ. ಗೌರಿಶಂಕರ್ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕರು. ಅವರ ಸಹೋದರರಾದ ಅರುಣ್ ಕುಮಾರ್ ಮತ್ತು ವೇಣುಗೋಪಾಲ್ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಹಲವಾರು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ. ಎಂಎಲ್‌ಸಿ, ಜೆಡಿಎಸ್ ನಾಯಕ ಬೆಮಲ್ ಕಾಂತರಾಜು, ಎಸ್. ಆರ್. ಶ್ರೀನಿವಾಸ್ ಸಹ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ.
ಬಿಜೆಪಿ ಮುಖಂಡ ಬಿ. ಎಸ್. ನಾಗರಾಜ್ ಜೆಡಿಎಸ್ ಪಕ್ಷ ಸೇರ್ಪಡೆ ಅಂಗವಾಗಿ ಗುಬ್ಬಿಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮಾವೇಶಕ್ಕೆ ಆಗಮಿಸಿದ್ದರೂ ಕ್ಷೇತ್ರದ ಶಾಸಕರೇ ಪಕ್ಷದ ಸಮಾವೇಶದಿಂದ ಎಸ್. ಆರ್. ಶ್ರೀನಿವಾಸ್ ದೂರವುಳಿದಿದ್ದರು. ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ್ ಮತ್ತು ಅವರ ಬೆಂಬಲಿಗರು ಸಮಾವೇಶಕ್ಕೆ ಆಗಮಿಸಲಿಲ್ಲ.