ಬೆಂಗಳೂರು[ಡಿ.26]: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ತಮ್ಮ ಆತ್ಮಚರಿತ್ರೆ ಪುಸ್ತಕದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಾಂಗ್ರೆಸ್‌ ಸೇರಲು ಬಯಸಿದ್ದರು ಎಂದಿರುವುದನ್ನು ಶೈಕ್ಷಣಿಕ ದೃಷ್ಟಿಕೋನದಿಂದ ನೋಡಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ವಕ್ತಾರ ರಮೇಶ್‌ ಬಾಬು ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯ ಚಳವಳಿ ರೂಪಿಸಿದ ಕಾಂಗ್ರೆಸ್‌ ಪಕ್ಷ ಬಹಳಷ್ಟು ಪಕ್ಷಗಳಿಗೆ ಮೂಲ ಪಕ್ಷವಾಗಿದೆ. ಎಸ್‌.ಎಂ.ಕೃಷ್ಣ ಕೂಡ ಪಿಎಸ್‌ಪಿ ಪಕ್ಷದವರಾಗಿದ್ದು, ಮೂಲ ಕಾಂಗ್ರೆಸಿಗರು ಅಲ್ಲ ಎಂದು ಟ್ವೀಟರ್‌ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ ಸೇರಲು ಮುಂದಾಗಿದ್ದ ದೇವೇಗೌಡ!

ಆತ್ಮ ಚರಿತ್ರೆಗಳು ನಮಗೆ ಮಾಹಿತಿ ಜತೆಗೆ ದಾರಿದೀಪವಾಗಬೇಕು. ಸತ್ಯವನ್ನು ಮರೆಮಾಚುವ ಪುಸ್ತಕವಾಗಬಾರದು. ಎಸ್‌.ಎಂ.ಕೃಷ್ಣ ಮತ್ತು ದೇವೇಗೌಡ ಕುರಿತಾದ ಮಾಹಿತಿ ಸುದ್ದಿಯಾಗಿದೆ. 2004ರಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್‌ ಸೋಲಬೇಕಾಯಿತು. ಆಗ ಜೆಡಿಎಸ್‌ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಲು ದೇವೇಗೌಡರ ಮನೆ ಬಾಗಿಲಲ್ಲಿ ನಿಂತಿದ್ದರು. ಈ ಸತ್ಯ ಅವರ ಕೃತಿಯಲ್ಲಿ ದಾಖಲಾಗಲಿ ಎಂದಿದ್ದಾರೆ.