ಚೆನ್ನೈ, (ಡಿ.19): ಪಡಿತರ ಕಾರ್ಡ್  ಹೊಂದಿರುವ 2.06 ಕೋಟಿಗೂ ಹೆಚ್ಚು ಜನರಿಗೆ 2500 ರೂ, ಅಕ್ಕಿ, ಒಣ ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಕಬ್ಬು ಮತ್ತು ಹೊಸ ಬಟ್ಟೆಗಳ ಉಡುಗೊರೆ ನೀಡುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಅಂದಹಾಗೆ ಇಂಥದ್ದೊಂದು ಬಂಪರ್ ಉಡುಗೊರೆ ಘೋಷಣೆ ಮಾಡಿದ್ದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ. ತಮ್ಮ ಕ್ಷೇತ್ರವಾದ ಸೇಲಮ್ ಜಿಲ್ಲೆಯ ಎಡಪ್ಪಾಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.

 ತಮಿಳುನಾಡಿನಲ್ಲಿ ಅಧಿಕಾರ ಹೊಂದಿರುವ ಪಕ್ಷಗಳು ಪೊಂಗಲ್​ ಹಬ್ಬಕ್ಕೆ ಉಡುಗೊರೆ ನೀಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಇಂದಿನ ಕೊಡುಗೆ ನೀಡುವ ಮೂಲಕ ಕೆ. ಪಳನಿಸ್ವಾಮಿ ಇದನ್ನು ಮುಂದುವರಿಸಿದಂತಾಗಿದೆ.

ಇನ್ನು ಕೆಲವರು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಇವೆಲ್ಲ ಭರವಸೆಯನ್ನು ನೀಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ತಮಿಳುನಾಡಿನಲ್ಲಿ ಪೊಂಗಲ್ ಎಂದರೆ ಹಬ್ಬದ ಪ್ರಯುಕ್ತ 2021ರ ಜ. 4ರಿಂದಲೇ ಈ ನಗದು ಕೊಡುವ ಯೋಜನೆ ಜಾರಿಗೆ ಬರಲಿದ್ದು, ಪಡಿತರ ಚೀಟಿ ಅಕ್ಕಿ ಪಡೆಯಲು ಅರ್ಹರಿರುವ ಎಲ್ಲ ಸಾರ್ವಜನಿಕರೂ ಈ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಇದರಿಂದ ಪಡಿತರ ಚೀಟಿ ಹೊಂದಿರುವ, ರಾಜ್ಯದ 2.6 ಕೋಟಿ ಮಂದಿಗೆ ತಲಾ 2,500 ರೂ. ಸಿಗಲಿದೆ ಎಂದಿದ್ದಾರೆ.

ತಮಿಳರಿಗೆ ಜ. 14ರ ಪೊಂಗಲ್ ಹಬ್ಬ ಅತಿ ಪ್ರಮುಖವಾದುದು. ಕಳೆದ ವರ್ಷ ಈ ಹಬ್ಬದಂದು 1 ಸಾವಿರ ರೂ. ನಗದು ನೀಡಲಾಗಿತ್ತು. ಈ ಸಲ ಒಂದೂವರೆ ಸಾವಿರ ರೂ. ಹೆಚ್ಚಿಸಲಾಗಿದ್ದು, ಒಟ್ಟು 2,500 ರೂ. ನೀಡಲಿದ್ದೇವೆ. ಜತೆಗೆ ಒಂದು ಕೆ.ಜಿ. ಅಕ್ಕಿ, ಸಕ್ಕರೆ ಹಾಗೂ ಒಂದಿಡೀ ಕಬ್ಬನ್ನು ಕೂಡ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.