Asianet Suvarna News Asianet Suvarna News

ಬಿಜೆಪಿ-ಕಾಂಗ್ರೆಸ್‌ನಲ್ಲಿ ಈಗ ಟಿಪ್ಪು ಪ್ರತಿಮೆ ಫೈಟ್‌!

ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಅವರ 100 ಅಡಿ ಪ್ರತಿಮೆ ಸ್ಥಾಪಿಸುತ್ತೇವೆಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ನೀಡಿರುವ ಹೇಳಿಕೆ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

Tipu sultan statue fight now in BJP and Congress at karnataka gvd
Author
First Published Nov 13, 2022, 7:24 AM IST

ಬೆಂಗಳೂರು (ನ.13): ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಅವರ 100 ಅಡಿ ಪ್ರತಿಮೆ ಸ್ಥಾಪಿಸುತ್ತೇವೆಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ನೀಡಿರುವ ಹೇಳಿಕೆ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಟಿಪ್ಪು ಪ್ರತಿಮೆ ಘೋಷಣೆ ವಿರುದ್ಧ ಬಿಜೆಪಿ ತಿರುಗಿಬಿದ್ದಿದ್ದರೆ, ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್‌ ನಾಯಕರು ತನ್ವೀರ್‌ ಬೆನ್ನಿಗೆ ನಿಂತಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆಯ ನಡೆ ಇರಿಸಿದ್ದಾರೆ.

ಟಿಪ್ಪು ಪ್ರತಿಮೆ ಸ್ಥಾಪಿಸಿದರೆ ಜನರಿಂದ ತಕ್ಕ ಪಾಠ: ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ಸ್ಥಾಪನೆಗೆ ನಮ್ಮ ವಿರೋಧ ಇದೆ. ಟಿಪ್ಪು ಪ್ರತಿಮೆ ಸ್ಥಾಪನೆಗೆ ಬೆಂಬಲ ನೀಡುವವರನ್ನು ಮನೆಗೆ ಕಳುಹಿಸಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ಈ ಮೂಲಕ ಟಿಪ್ಪು ಪ್ರತಿಮೆ ನಿರ್ಮಿಸುವುದಾಗಿ ಹೇಳಿದ ಶಾಸಕ ತನ್ವೀರ್‌ ಸೇಠ್‌ಗೆ ಕೇಂದ್ರ ಸಚಿವ ತಿರುಗೇಟು ನೀಡಿದರು.

ಈಗ ಟಿಪ್ಪು ಸುಲ್ತಾನ್‌ ಪ್ರತಿಮೆ ರಾಜಕೀಯ: ತನ್ವೀರ್‌ ಹೇಳಿಕೆಗೆ ಪರ-ವಿರೋಧ

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಟಿಪ್ಪು ಒಬ್ಬ ಮತಾಂಧ, ಹಿಂದೂ ವಿರೋಧಿ, ದೇಶ ದ್ರೋಹಿ ಹಾಗೂ ಕನ್ನಡ ವಿರೋಧಿ ಎಂಬುದು ನನ್ನ ವೈಯಕ್ತಿಕ ಹಾಗೂ ಪಕ್ಷದ ಸ್ಪಷ್ಟನಿಲುವಾಗಿದೆ. ಯಾವುದೇ ಪ್ರತಿಮೆ ಸ್ಥಾಪನೆಗೆ ಸರ್ಕಾರದ ಅನುಮತಿ ಬೇಕು. ಟಿಪ್ಪು ಪ್ರತಿಮೆ ನಿರ್ಮಿಸಿ ಪೂಜಿಸಿ, ಆರತಿ ಮಾಡುತ್ತಾರೆಯೇ ನೋಡೋಣ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ. ನಾವು ಯಾವಾಗ ಉತ್ತರ ನೀಡಬೇಕೋ ಆಗ ನೀಡುತ್ತೇವೆ. ತುಷ್ಟೀಕರಣದ ರಾಜಕಾರಣಕ್ಕಾಗಿ ಹೀಗೆಲ್ಲ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಟಿಪ್ಪು ಪ್ರತಿಮೆ ಮಾಡಿದರೆ ತಪ್ಪೇನು?: ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣಗೊಂಡ ಬೆನ್ನಲ್ಲೇ ಮಾಜಿ ಸಚಿವ ತನ್ವೀರ್‌ ಸೇಠ್‌ ಅವರು ‘ಟಿಪ್ಪು ಸುಲ್ತಾನ್‌ ಪ್ರತಿಮೆ’ ನಿರ್ಮಿಸುವುದಾಗಿ ನೀಡಿರುವ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಿಸುವುದಾಗಿ ತನ್ವೀರ್‌ ಸೇಠ್‌ ಹೇಳಿದ್ದರೆ ಮಾಡಲಿ ಬಿಡಿ. ಅದರಲ್ಲಿ ತಪ್ಪೇನು?’ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ಎಂ.ಬಿ. ಪಾಟೀಲ್‌, ‘ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಡಿದವರು. ಹೋರಾಟಗಾರರಿಗೆ ಎಲ್ಲರೂ ಗೌರವ ಕೊಡಬೇಕು. ಅವರ ಪ್ರತಿಮೆ ನಿರ್ಮಿಸಿದರೆ ಯಾರೂ ವಿರೋಧಿಸಬಾರದು’ ಎಂದು ಹೇಳಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ‘ಟಿಪ್ಪು ಸುಲ್ತಾನ್‌ ಪ್ರತಿಮೆ ವಿಚಾರವಾಗಿ ಮಾತು ಕೇಳು ಬಂದ ಕೂಡಲೇ ಬಿಜೆಪಿಯವರು ಮುಗಿಬಿದ್ದಿದ್ದಾರೆ, ಅವರು ಮುಗಿ ಬೀಳಲೇಬೇಕು. ಬಿಜೆಪಿಯವರು ಮೊದಲಿನಿಂದ ಟಿಪ್ಪು ಅವರನ್ನು ವಿರೋಧ ಮಾಡಿದ್ದಾರೆ. ಇನ್ನು ತನ್ವೀರ್‌ ಸೇಠ್‌ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಚರ್ಚೆ ಮಾಡಬೇಕು. ಮುಂದೆ ಸರ್ಕಾರ ಬಂದಾಗ ಮಾಡುವುದು ಎಂದರೆ, ಅದು ಮುಂದಿನ ತೀರ್ಮಾನ ಆಗುತ್ತದೆ. ಅವರ ಸಲಹೆಯನ್ನು ಅವರು ಹೇಳಿದ್ದಾರೆ. ಅದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.

ತನ್ವೀರ್‌ ಸೇಠ್‌ ಜತೆ ಚರ್ಚೆ: ತನ್ವೀರ್‌ ಸೇಠ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಈ ಬಗ್ಗೆ ತನ್ವೀರ್‌ ಸೇಠ್‌ ಜತೆ ಮಾತನಾಡುತ್ತೇನೆ’ ಎಂದಷ್ಟೇ ಹೇಳಿದರು. ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಿಸಿದರೆ ಕೆಡವುತ್ತೇವೆ ಎಂಬ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿಕೆಗೆ, ‘ಈ ವಿಚಾರವಾಗಿ ಮುಖ್ಯಮಂತ್ರಿಗಳು ಉತ್ತರಿಸಬೇಕು. ಬೊಮ್ಮಾಯಿ ಅವರು ನಾವು ಎಲ್ಲ ವರ್ಗದವರ ರಕ್ಷಣೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದು, ಇದು ಅವರ ಕರ್ತವ್ಯವಾಗಿದೆ’ ಎಂದರು.

ಯಾವ ಆಕಾರದಲ್ಲಿ ಟಿಪ್ಪು ಪ್ರತಿಮೆ ಮಾಡಬೇಕೆಂದು ನಿರ್ಧಾರವಾಗಿಲ್ಲ: ತನ್ವೀರ್ ಸೇಠ್

ತನ್ವೀರ್‌ ಸೇಠ್‌ ಏನು ಹೇಳಿದ್ದರು?: ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನೇ ರದ್ದು ಮಾಡಿದೆ. ಆದರೆ, 100 ಅಡಿ ಎತ್ತರದ ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಾಣ ಮಾಡುವುದು ಖಚಿತ. ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು. ಯಾರ ವಿರೋಧಕ್ಕೂ ನಾವು ಬಗ್ಗುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಹೇಳಿದ್ದರು.

Follow Us:
Download App:
  • android
  • ios